ಸಣ್ಣ ಹಣಕಾಸು ಬ್ಯಾಂಕಿನ ಶಾಖೆಯೊಂದರಿಂದ ಖದೀಮರು 14 ಕೋಟಿ ರೂ. ಮೌಲ್ಯದ ಚಿನ್ನ, 5 ಲಕ್ಷ ರೂ. ನಗದು ದೋಚಿದ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಹೆಲ್ಮೆಟ್ ಧರಿಸಿದ ಐವರು ದರೋಡೆಕೋರರು 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ದರೋಡೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಖಿಟೋಲಾ ಪ್ರದೇಶದ ಶಾಖೆಗೆ ಈ ಕಳ್ಳರು ದಾಳಿ ಮಾಡಿದ ವೇಳೆ ಭದ್ರತಾ ಸಿಬ್ಬಂದಿಯೇ ಬ್ಯಾಂಕ್‌ನಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಸೆಹೋರ್ ತಹಸಿಲ್‌ನಲ್ಲಿರುವ ಬ್ಯಾಂಕಿನ ಶಾಖೆಯಿಂದ ದರೋಡೆಕೋರರು ಲಾಕರ್‌ನಲ್ಲಿ ಇರಿಸಲಾಗಿದ್ದ 14.875 ಕೆಜಿ ಚಿನ್ನ ಮತ್ತು 5 ಲಕ್ಷ ರೂ. ನಗದನ್ನು ದೋಚಿದ್ದಾರೆ ಎಂದು ಜಬಲ್ಪುರ ಗ್ರಾಮೀಣ ಪ್ರದೇಶದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸೂರ್ಯಕಾಂತ್ ಶರ್ಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹೆಚ್ಚಾದ ದರೋಡೆ ಪ್ರಕರಣ; ಪೊಲೀಸ್ ವ್ಯವಸ್ಥೆ ಬಗ್ಗೆ ಅಪರಾಧ ತಜ್ಞರ ಕಳವಳ
ಇನ್ನು ಈ ಬಗ್ಗೆ ಅಧಿಕ ಮಾಹಿತಿ ನೀಡಿರುವ ಜಬಲ್ಪುರ ರೇಂಜ್ ಡೆಪ್ಯೂಟಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಅತುಲ್ ಸಿಂಗ್, ಹೆಲ್ಮೆಟ್ ಧರಿಸಿದ ದರೋಡೆಕೋರರು ಎರಡು ಮೋಟಾರ್ ಸೈಕಲ್‌ಗಳಲ್ಲಿ ಬಂದು ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶಾಖೆಗೆ ನುಗ್ಗಿದ್ದಾರೆ. ಬ್ಯಾಂಕ್ ಶಾಖೆಯಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಘಟನೆ ನಡೆದ ಸಮಯದಲ್ಲಿ ಆರು ಸಿಬ್ಬಂದಿ ಇದ್ದರು” ಎಂದು ಹೇಳಿದ್ದಾರೆ.
“ದರೋಡೆಕೋರರು ಸೋಮವಾರ ಬೆಳಿಗ್ಗೆ 8.50ಕ್ಕೆ ಶಾಖೆಗೆ ಪ್ರವೇಶಿಸಿ 9.08ಕ್ಕೆ ಹೊರಬಂದರು. ಮೋಟಾರ್ ಸೈಕಲ್‌ಗಳಲ್ಲಿ ಪರಾರಿಯಾಗಿದ್ದಾರೆ. ನಾವು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದೇವೆ. ದರೋಡೆಕೋರರ ಕೈಯಲ್ಲಿ ಶಸ್ತ್ರಾಸ್ತ್ರಗಳಿಲ್ಲ. ದರೋಡೆಕೋರರಲ್ಲಿ ಒಬ್ಬನ ಬೆಲ್ಟ್ ಅಡಿಯಲ್ಲಿ ಬಂದೂಕು ಕಂಡುಬಂದಿದೆ” ಎಂದು ಮಾಹಿತಿ ನೀಡಿದ್ದಾರೆ.
ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಘಟನೆಯ 45 ನಿಮಿಷಗಳ ನಂತರ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ನಮಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದ್ದರೆ, ದರೋಡೆಕೋರರು ಸಿಕ್ಕಿಬೀಳುತ್ತಿದ್ದರು. ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
