ಗುಬ್ಬಿ ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯ ನಾಲ್ಕನೇ ಕ್ರಾಸ್ ನಲ್ಲಿ ತಡರಾತ್ರಿ ಮುಸುಕುಧಾರಿ ಕಳ್ಳರು ಎರಡು ಬೈಕ್ ನಲ್ಲಿ ಸಂಚಾರ ಮಾಡಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪರಿಣಾಮ ಸ್ಥಳೀಯ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ.
ತಡರಾತ್ರಿ 1.30 ರ ಸಮಯದಲ್ಲಿ ಎರಡು ಬೈಕ್ ನಲ್ಲಿ ನಾಲ್ಕು ಮಂದಿ ಒಂದೇ ರಸ್ತೆಯಲ್ಲಿ ಎರಡು ಬಾರಿ ಓಡಾಡಿದ್ದಾರೆ. ಅವರ ಬಳಿ ಮಾರಕಾಸ್ತ್ರಗಳು ಕೂಡ ಇದ್ದು, ಮೊದಲು ಚಲಿಸುವ ಬೈಕ್ ಹೆಡ್ ಲೈಟ್ ಆಫ್ ಮಾಡಲಾಗಿದೆ. ಮತ್ತೊಂದು ಬೈಕ್ ಮಾತ್ರ ಲೈಟ್ ಹಾಕಿದೆ. ಕಳ್ಳರ ಚಲನವಲನ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ಲಕ್ಷಣಗಳು ಕಾಣುತ್ತಿವೆ. ಎಂಬ ಚರ್ಚೆ ಆರಂಭವಾಗಿದೆ. ಬಡಾವಣೆಯ ನಿವಾಸಿಗಳು ಸಹ ತಮ್ಮ ಮನೆಗಳ ಕಾಪಾಡುವ ಕೆಲಸ ಮಾಡಿಕೊಳ್ಳಬೇಕಿದೆ. ಅಗತ್ಯ ಮುನ್ನೆಚ್ಚರಿಕೆ ವಹಿಸಿ ಕಳ್ಳತನ ಅವಕಾಶ ಮಾಡಿಕೊಡದಂತೆ ಕ್ರಮ ವಹಿಸಬೇಕಿದೆ.

ಹಾಡು ಹಗಲೇ ಮಾರುತಿನಗರ ಬಡಾವಣೆಯಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದ್ದು ಜನರ ಮನಸ್ಸಿನಲ್ಲಿ ಹಸಿಯಾಗಿರುವಾಗಲೇ ಪಕ್ಕದ ರಸ್ತೆಯಲ್ಲಿ ರಾತ್ರಿ ಕಳ್ಳರ ಸಂಚಾರ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಬೈಕ್ ಗಳು ಒಂದೇ ರಸ್ತೆಯಲ್ಲಿ ಆರಾಮಾಗಿ ಓಡಾಟ ಮಾಡಿದೆ. ಪೊಲೀಸರ ರಾತ್ರಿ ಪಾಳಿ ಇಲ್ಲದಿರುವುದು ಕಳ್ಳರಿಗೆ ಅನುಕೂಲವಾಗಿದೆ. ಸಾರ್ವಜನಿಕರ ಕುಂದುಕೊರತೆ ಕೇಳಲು ಸಭೆಯನ್ನು ಪೊಲೀಸ್ ಇಲಾಖೆ ಮಾಡಿಲ್ಲ. ಸಭೆ ನಡೆಸಿದರೆ ನಾಗರೀಕರು ಸಾಕಷ್ಟು ಸಲಹೆ ಸೂಚನೆ ನೀಡುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಚರ್ಚೆ ನಡೆದಿದೆ.