ಬಂಡೀಪುರ ಅರಣ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ಆನೆದ ದಾಳಿಗೆ ತುತ್ತಾಗಿ, ಬದುಕಿ ಬಂದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಬಂಧಿಸಿದೆ. ಮಾತ್ರವಲ್ಲದೆ, 25,000 ರೂ. ಭಾರೀ ದಂಡ ವಿಧಿಸಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಕೆಕ್ಕನಹಳ್ಳಿ ಪ್ರದೇಶದಲ್ಲಿ ಘಟನೆ ನಡೆದಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿರುವ ಈ ಗ್ರಾಮದ ಬಳಿಯ ರಸ್ತೆಯಲ್ಲಿ ಕಾಡಾನೆ ವಾಹನಗಳಲ್ಲಿ ನಡ್ಡಗಟ್ಟಿ, ತರಕಾರಿ ತಿನ್ನುತ್ತಿತ್ತು. ಈ ವೇಳೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಸವರಾಜು ಎಂಬಾತ ಆನೆಯ ಬಳಿಹೋಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಆತನ ಮೇಲೆ ಆನೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.
ಆದಾಗ್ಯೂ, ಆತ ರಸ್ತೆಯಲ್ಲಿ ಬಿದ್ದ ಕಾರಣ, ಆತನ ಕೈ-ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ. ಆತನನ್ನು ಇತರ ಪ್ರಯಾಣಿಕರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ, 25,000 ರೂ. ದಂಡ ವಿಧಿಸಿದ್ದಾರೆ. ಜೊತೆಗೆ, ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ.
ಕಾಡಾನೆ ಜೊತೆಗೆ ಉದ್ಧಟತನ ಪ್ರದರ್ಶಿಸಿದ್ದ ಆರೋಪಿ 50 ವರ್ಷದ ಆರ್.ಬಸವರಾಜ್‌ನನ್ನು ನಂಜನಗೂಡಿನ ನಿವಾಸದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ತಿಳುವಳಿಕೆ ಕೊರತೆಯಿಂದ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ
“ಬಂಡೀಪುರದ ಬಂಕಾಪುರ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಅಲ್ಲಿಂದ ಹಿಂದಿರುವುವಾಗ, ಆನೆ ಕಂಡು ಮೋಜು ಮಸ್ತಿಗಾಗಿ ಸೆಲ್ಫಿ ತೆಗೆದುಕೊಳ್ಳಲು, ಆನೆಯ ಬಳಿಗೆ ಹೋದಾಗ ಆನೆ ದಾಳಿ ಮಾಡಿತು. ತಪ್ಪಿಸಿಕೊಂಡು ಬಂದಾಗ, ಬದುಕಿದ್ದೇ ಹೆಚ್ಚು ಅನಿಸಿದೆ. ಇಂತಹ ದುಸ್ಸಾಹಸವನ್ನು ಯಾರೂ ಮಾಡಬೇಡಿ. ಅರಣ್ಯದೊಳಗಿನ ರಸ್ತೆಯಲ್ಲಿ ವಾಹನ ನಿಲ್ಲಿಸಬೇಡಿ. ಪ್ರಾಣಿಗಳಿಗೆ ಆಹಾರ ನೀಡುವ ದುಸ್ಸಾಹಸಕ್ಕೆ ಮುಂದಾಗಬೇಡಿ” ಎಂದು ಬಸವರಾಜು ತನ್ನ ತಪ್ಪೊಪ್ಪಿಗೆ ಪತ್ರದಲ್ಲಿ ಬರೆದಿದ್ದಾರೆ.
ಘಟನೆ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು, “ಅರಣ್ಯದೊಳಗೆ ಹಾದುಹೋಗಿರುವ ರಸ್ತೆಯಗಳಲ್ಲಿ ಅರಣ್ಯ ಇಲಾಖೆಯ ಗಸ್ತು ವಾಹನಗಳನ್ನು ನಿಯೋಜಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದ್ದಾರೆ.