ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

Date:

Advertisements

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು ತಿರಸ್ಕರಿಸುತ್ತಾ ಅವೆಲ್ಲವು ಶರಣ ಧರ್ಮದ ಸುಧಾರಿತ ವಿಚಾರಗಳಿಗೆ ಶರಣಾಗತಿಯಾದವು ಎನ್ನುತ್ತಾರೆ ಬಸವಣ್ಣನವರು. ಸನಾತನ ಧರ್ಮದ ಈ ಷಡ್ದರ್ಶನ ಎಂದರೆ ಏನು ಎನ್ನುವುದನ್ನು ಸಂಕ್ಷಿಪ್ತವಾಗಿ ನಾವು ಮೊದಲು ತಿಳಿದುಕೊಳ್ಳಬೇಕು. ಷಡ್ದರ್ಶನ ಎಂದರೆ ಸನಾತನ ಬ್ರಾಹ್ಮಣ ಧರ್ಮದ ತತ್ವಶಾಸ್ತ್ರದ ಆರು ವಿಭಿನ್ನ ದರ್ಶನಗಳು ಅಥವಾ ಚಿಂತನಾ ಕ್ರಮಗಳು…

ಬಸವಾದಿ ಶರಣರು ಪ್ರತಿಪಾದಿಸಿದ ತತ್ವ ಸಿದ್ದಾಂತಗಳನ್ನು ಸನಾತನ ಬ್ರಾಹ್ಮಣ ಧರ್ಮದ ಸುಧಾರಣಾವಾದಿ ಪ್ರಯತ್ನಗಳು ಎಂದು ಇತ್ತೀಚೆಗೆ ಸನಾತನಿಗಳ ಪಳೆಯುಳಿಕೆಗಳು ಪ್ರಲಾಪಿಸುತ್ತಿವೆ. ಹಾಗೆ ವಾದಿಸಬೇಕಾದರೆ ಮೊದಲು ಸನಾತನ ಬ್ರಾಹ್ಮಣ ಧರ್ಮದ ಮೂಲಭೂತ ಸಿದ್ಧಾಂತಗಳನ್ನು ಶರಣರು ಒಪ್ಪಿಕೊಳ್ಳಬೇಕಾಗುತ್ತದೆ. ಶರಣರು ಹಾಗೆ ಒಪ್ಪಿಕೊಂಡು ಅವುಗಳಲ್ಲಿ ಆಗಬೇಕಾದ ಸೂಕ್ತ ಸುಧಾರಣೆಗಳನ್ನು ಪ್ರತಿಪಾದಿಸಬೇಕಾಗುತ್ತದೆ. ಸನಾತನ ಬ್ರಾಹ್ಮಣ ಧರ್ಮದ ಸಿದ್ಧಾಂತಗಳ ಮೂಲಭೂತ ಅಂಶಗಳೆಂದರೆ ಚಾತುರ್ವರ್ಣದ ಪರಿಪಾಲನೆ, ಜಾತಿ ವ್ಯವಸ್ಥೆ ಹಾಗೂ ಕರ್ಮ ಸಿದ್ಧಾಂತ. ಶರಣರು ಸನಾತನ ಬ್ರಾಹ್ಮಣ ಧರ್ಮದ ಈ ಮೇಲಿನ ಮೂಲಭೂತ ಅಂಶಗಳನ್ನು ನೇರವಾಗಿ ತಿರಸ್ಕರಿಸಿದ್ದಾರೆ.

ಕರ್ಮ ಸಿದ್ಧಾಂತದನ್ವಯ ಕರ್ಮಕ್ಕನುಗುಣವಾಗಿ ಸ್ವರ್ಗ, ನರಕ ಹಾಗೂ ಪುನರ್ಜನ್ಮ ಸನಾತನ ಬ್ರಾಹ್ಮಣ ಧರ್ಮದ ನಂಬಿಕೆ. ಈ ನಂಬಿಕೆಯೇ ಆ ಧರ್ಮದ ಮೂಲಭೂತ ಸಿದ್ಧಾಂತ. ಇದನ್ನು ಶರಣರು ಸ್ಪಷ್ಟವಾಗಿ ತಿರಸ್ಕರಿಸುತ್ತಾರೆ. “ಕಾಯ ಮಣ್ಣಾದ ಬಳಿಕ, ವಾಯು ನಿರಾಕಾರವಾದ ಬಳಿಕ, ಲೇಪವೆ, ಕರ್ಮವೆ, ಕೂಡಲಸಂಗಮದೇವಾ?” ಎಂದು ಬಸವಣ್ಣನವರು ಗಂಭೀರವಾಗಿ ಪ್ರಶ್ನಿಸುತ್ತಾರೆ. ಪುನರ್ಜನ್ಮವನ್ನು ಸಾರಾಸಗಟಾಗಿ ನಿರಾಕರಿಸುತ್ತಾರೆ. ಶರಣ ಧರ್ಮದ ಈ ಸಿದ್ಧಾಂತವನ್ನು ಇಲ್ಲಿಯವರೆಗೆ ಯಾವ ಸನಾತನಿಗಳಿಗೂ ತಾರ್ಕಿಕವಾಗಿ ಎದುರಿಸಲು ಆಗಿಲ್ಲ. ಬದಲಾಗಿ ಕೆಲವು ಪ್ರಕ್ಷುಬ್ಧ, ಖೊಟ್ಟಿ ವಚನಗಳ ಆಧಾರದಲ್ಲಿ ಹಾಗೂ ಶರಣ ಧರ್ಮದ ಸಿದ್ಧಾಂತಗಳು ಪೂರ್ಣಪ್ರಮಾಣದಲ್ಲಿ ರೂಪುಗೊಳ್ಳುವ ಮೊದಲಿನ ಶೈವ ಸಿದ್ಧಾಂತದ ಪ್ರಭಾವದಲ್ಲಿ ಶರಣರು ಬರೆದ ವಚನಗಳನ್ನು ಮುಂದಿಟ್ಟುಕೊಂಡು ಶರಣ ಧರ್ಮವು ಕರ್ಮ ಸಿದ್ಧಾಂತ ಒಪ್ಪಿಕೊಂಡಿದೆ ಎಂದು ವಾದಿಸುತ್ತಾರೆ.

Advertisements
ಬಸವಣ್ಣ ೧

ಶರಣ ಧರ್ಮವು ಸನಾತನ ಬ್ರಾಹ್ಮಣ ಧರ್ಮದ ಪ್ರತಿಯೊಂದು ನಂಬಿಕೆಗಳನ್ನು ಅಲ್ಲಗಳೆಯುತ್ತದೆ. ಆದಾಗ್ಯೂ ಕೆಲವು ನಂಬಿಕೆಗಳಲ್ಲಿ ಸಾಮ್ಯತೆಗಳು ಕಂಡುಬರಬಹುದು, ಹಾಗೆಂದು ಶರಣ ಧರ್ಮವು ಸನಾತನ ಬ್ರಾಹ್ಮಣ ಧರ್ಮದ ಟಿಸಿಲು ಎಂದು ವಾದಿಸುವುದು ಸನಾತನಿಗಳ ಮೂರ್ಖತನ ಮಾತ್ರವಲ್ಲದೆ ಅದೊಂದು ಪೂರ್ವಾಗ್ರಹಪೀಡಿತ ವಾದ. ಗೌತಮ ಬುದ್ದ ಪ್ರತಿಪಾದಿಸಿದ ಸಿದ್ಧಾಂತಗಳು ಸಹ ಸನಾತನ ಬ್ರಾಹ್ಮಣ ಧರ್ಮದ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೂ ಬುದ್ದನನ್ನು ಉಪನಿಷತ್ತುಗಳ ಋಷಿ ಎಂದು ಹಾಗೂ ವಿಷ್ಣುವಿನ ಒಂಬತ್ತನೇ ಅವತಾರವೆಂದು ಬಿಂಬಿಸುವುದು ಸನಾತನಿಗಳ ಬೌದ್ದಿಕ ದಾರಿದ್ರ್ಯವನ್ನು ತೋರಿಸುತ್ತದೆ. ಜಗತ್ತಿನ ಎಲ್ಲಾ ಧರ್ಮಗಳ ನಂಬಿಕೆಗಳಲ್ಲಿ ಹವಲವು ಸಾಮ್ಯತೆಗಳಿರುತ್ತವೆ ಎಂದ ಮಾತ್ರಕ್ಕೆ ಆ ಎಲ್ಲಾ ಧರ್ಮಗಳು ಒಂದೇ ಎನ್ನುವುದಾಗಲಿ ಅಥವಾ ಅವು ಒಂದು ಮತ್ತೊಂದರ ಟಿಸಿಲು ಎಂದಾಗಲಿ ಅಥವಾ ಜಗತ್ತಿನಲ್ಲಿ ತಮ್ಮತಮ್ಮ ಧರ್ಮಗಳೇ ಪ್ರಾಚೀನ ಹಾಗೂ ಶ್ರೇಷ್ಠ ಎಂದು ಹೇಳಲಾಗದು. ಜಗತ್ತಿನಲ್ಲಿ ಯಹೂದ್ಯರ ಸಿದ್ಧಾಂತಗಳ ವಿರುದ್ಧ ಕ್ರೈಸ್ತ, ಕ್ರೈಸ್ತ ಧರ್ಮದ ಕರ್ಮಠತನ ಹಾಗೂ ವಜೀರರ ಶೋಷಣೆಯ ವಿರುದ್ಧ ಇಸ್ಲಾಮ್, ಅದೇ ರೀತಿ ಭಾರತದಲ್ಲಿ ಸನಾತನ ಬ್ರಾಹ್ಮಣ ಧರ್ಮದ ವಿರುದ್ಧ ಬೌದ್ದ, ಜೈನ, ಲಿಂಗಾಯತ, ಸಿಖ್ ಹಾಗೂ ಇನ್ನೂ ಅನೇಕ ಧಾರ್ಮಿಕ ನಂಬಿಕೆಗಳು ಹುಟ್ಟಿಕೊಂಡಿವೆ. ಅವೆಲ್ಲವೂ ಇಂದು ತಮ್ಮದೆಯಾದ ಸ್ವತಂತ್ರ ಅಸ್ತಿತ್ವದೂಂದಿಗೆ ಪ್ರತ್ಯೇಕ ಧರ್ಮದ ಸ್ವರೂಪವನ್ನು ಹೊಂದಿವೆ. ಪ್ರತಿಯೊಂದು ಧರ್ಮಗಳು ಹಿಂದಿನ ಧರ್ಮದ ಪ್ರಮಾದಗಳಿಗೆ ಪ್ರತಿರೋಧವಾಗಿ ಜನ್ಮತಳೆದಿವೆ.

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು ತಿರಸ್ಕರಿಸುತ್ತಾ ಅವೆಲ್ಲವು ಶರಣ ಧರ್ಮದ ಸುಧಾರಿತ ವಿಚಾರಗಳಿಗೆ ಶರಣಾಗತಿಯಾದವು ಎನ್ನುತ್ತಾರೆ ಬಸವಣ್ಣನವರು. ಸನಾತನ ಧರ್ಮದ ಈ ಷಡ್ದರ್ಶನ ಎಂದರೆ ಏನು ಎನ್ನುವುದನ್ನು ಸಂಕ್ಷಿಪ್ತವಾಗಿ ನಾವು ಮೊದಲು ತಿಳಿದುಕೊಳ್ಳಬೇಕು. ಷಡ್ದರ್ಶನ ಎಂದರೆ ಸನಾತನ ಬ್ರಾಹ್ಮಣ ಧರ್ಮದ ತತ್ವಶಾಸ್ತ್ರದ ಆರು ವಿಭಿನ್ನ ದರ್ಶನಗಳು ಅಥವಾ ಚಿಂತನಾ ಕ್ರಮಗಳು. ಇವುಗಳಲ್ಲಿ ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸೆ ಮತ್ತು ವೇದಾಂತ ಸೇರಿವೆ. ಇವೆಲ್ಲವು ಮನುಷ್ಯನ ಜೀವನದ ಅರಿವು, ಮೋಕ್ಷ ಮಾರ್ಗ ಮತ್ತು ಪ್ರಪಂಚದ ಸ್ವರೂಪದ ಬಗ್ಗೆ ವಿಭಿನ್ನ ದೃಷ್ಟಿಕೋನ ವಿವರಿಸುತ್ತವೆ. ಇವುಗಳಲ್ಲಿ ಮೊದಲಿನ ಸಾಂಖ್ಯ ದರ್ಶನವು ಸೃಷ್ಟಿಯ ಮೂಲಭೂತ ಅಂಶಗಳಾದ ಪುರುಷ ಮತ್ತು ಪ್ರಕೃತಿಯ ಬಗ್ಗೆ ವಿವರಿಸಿದರೆ ಎರಡನೆಯ ಯೋಗ ದರ್ಶನವು ಧ್ಯಾನ, ಶಾರೀರಿಕ ಮತ್ತು ಮಾನಸಿಕ ನಿಯಂತ್ರಣದ ಮೂಲಕ ಆಂತರಿಕ ಶಾಂತಿಯನ್ನು ಪಡೆಯುವ ಸಾಧನಾ ಮಾರ್ಗವನ್ನು ತಿಳಿಸುತ್ತದೆ. ಮೂರನೆಯದು ನ್ಯಾಯ ದರ್ಶನ, ಇದು ಸಾಧಕನೊಬ್ಬ ಜ್ಞಾನವನ್ನು ಹೊಂದಲು ತರ್ಕ, ವಿಶ್ಲೇಷಣೆ ಮತ್ತು ತಾರ್ಕಿಕ ಚಿಂತನೆಗೆ ತೊಡಗಲು ಬೇಕಾಗುವ ವಿಧಾನಗಳನ್ನು ವಿವರಿಸುತ್ತದೆ.
ನಾಲ್ಕನೆಯ ವೈಶೇಷಿಕ ದರ್ಶನವು ಬ್ರಹ್ಮಾಂಡದ ಸೂಕ್ಷ್ಮ ಕಣಗಳ ರಚನೆಯ ವಿವರಣೆ ಮತ್ತು ಜಗತ್ತಿನ ವಿಭಿನ್ನ ಘಟಕಗಳ ವಿಂಗಡನೆ ಮಾಡುತ್ತದೆ.

ಸನಾತನ 1

ಐದನೇ ದರ್ಶನವಾಗಿರುವ ಮೀಮಾಂಸೆಯು ವೇದಗಳಲ್ಲಿನ ಕರ್ಮಕಾಂಡದ ವಿಧಿಗಳು ಮತ್ತು ಅವುಗಳ ಆಚರಣಾ ವಿಧಾನಗಳನ್ನು ವಿವರಿಸುತ್ತದೆ. ಇನ್ನು ಕೊನೆಯದಾದ ವೇದಾಂತ ದರ್ಶನವು ಉಪನಿಷತ್ತುಗಳ ತತ್ವಗಳಾಗಿರುವ ಆತ್ಮ ಮತ್ತು ಪರಮಾತ್ಮನ (ಬ್ರಹ್ಮ) ಒಂದುಗೂಡುವಿಕೆಯನ್ನು ವಿವರಿಸುತ್ತದೆ. ಒಟ್ಟಾರೆ ಈ ಆರೂ ದರ್ಶನಗಳ ಮುಖ್ಯ ಭೋದನೆ ಎಂದರೆ ಮನುಷ್ಯನ ಬದುಕಿನ ಮೂಲ ಉದ್ದೇಶ ತಿಳಿಯುವುದು ಮತ್ತು ಆತನ ಅಸ್ತಿತ್ವದ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸುವುದಾಗಿ. ಸನಾತನ ಬ್ರಾಹ್ಮಣ ಧರ್ಮದ ಅಂತಿಮ ಗುರಿ ಆತ್ಮೋನ್ನತಿಯೆ ಹೊರತು ಸಮಾಜೋನ್ನತಿಯಲ್ಲ. ಹಾಗಾಗಿ ಈ ಷಡ್ದರ್ಶನಗಳು ಮನುಷ್ಯನಿಗೆ ಅಂತಿಮ ಮೋಕ್ಷ ಅಥವಾ ಮುಕ್ತಿಯನ್ನು ಹೊಂದಲು ಅಗತ್ಯವಾಗಿರುವ ಬೇರೆಬೇರೆ ಹಾದಿಗಳನ್ನು ತೆರೆದಿಟ್ಟು, ಆ ಮೂಲಕ ಆತ ಜ್ಞಾನ, ಶಾಂತಿ ಮತ್ತು ಆನಂದವನ್ನು ಪಡೆಯುತ್ತಾನೆ ಎಂಬುದು ಸನಾತನಿಗಳ ಅಚಲ ನಂಬಿಕೆ. ಇವುಗಳಲ್ಲಿ ಮೀಮಾಂಸ ದರ್ಶನವು ವಿಚಿತ್ರವಾದ ದರ್ಶನವಾಗಿದ್ದು ಅದು ಅತಿರೇಕದ ವೇದ ನಿಷ್ಠೆ, ಪ್ರಖರ ವೈಚಾರಿಕತೆ, ಮತಾಚಾರದಲ್ಲಿ ಅತಿಶ್ರದ್ಧೆ, ಲೌಕಿಕ ಜೀವನದಲ್ಲಿ ಗೌರವ, ಈ ವಿಚಿತ್ರಗಳ ಮಿಶ್ರಣವಾಗಿದೆ. ಅತಿರೇಕದ ವೇದನಿಷ್ಠೆ ಹಾಗೂ ಪ್ರಖರ ವೈಚಾರಿಕತೆ ಒಂದಕ್ಕೂಂದು ತದ್ವಿರುದ್ಧವಾಗಿದೆ. ಮೀಮಾಂಸವೆಂದರೆ ಆಳವಾದ ವಿಚಾರ, ಅಥವಾ ವಿಮರ್ಶೆ. ಇದರ ಅರ್ಥಕ್ಕೆ ಅನರ್ಥ ಎಂಬಂತೆ ಅದು ಪೂಜಿತ ವಿಚಾರ ಎಂಬ ಅರ್ಥವನ್ನು ಹೊಂದಿದೆ. ವೇದ ಮತ್ತು ವೈದಿಕ ಧರ್ಮದ ವ್ಯಾಖ್ಯಾನವೇ ಮೀಮಾಂಸೆ. ಇದು ವೇದ ವ್ಯಾಖ್ಯಾನದ ನಿಯಮಗಳು ಹಾಗೂ ಯಜ್ಞಯಾಗಳಂತಹ ಕರ್ಮಕಾಂಡಗಳನ್ನು ವಿವರಿಸುತ್ತದೆ.

ಬಸವಾದಿ ಶರಣರು ಸುಖಾಸುಮ್ಮನೆ ಸನಾತನ ಬ್ರಾಹ್ಮಣ ಧರ್ಮವನ್ನು ವಿರೋಧಿಸುವುದಾಗಲಿ, ಧಿಕ್ಕರಿಸುವ ಅಥವಾ ತಿರಸ್ಕರಿಸುವ ನಿರ್ಧಾರಕ್ಕೆ ಬಂದಿಲ್ಲ. ಬದಲಾಗಿ ಆ ಧರ್ಮದ ತತ್ವ ಸಿದ್ಧಾಂತಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದರಲ್ಲಿರುವ ಎಲ್ಲಾ ಜೀವವಿರೋಧಿ ನಿಲುವುಗಳನ್ನು, ಅವೈಜ್ಞಾನಿಕ ಆಚರಣೆಗಳನ್ನು ತಾರ್ಕಿಕವಾಗಿ ವಿಮರ್ಶಿಸಿದ್ದಾರೆ. ಸನಾತನ ಬ್ರಾಹ್ಮಣ ಧರ್ಮದ ವೇದಪ್ರಾಮಣ್ಯ, ಬ್ರಾಹ್ಮಣ ಶ್ರೇಷ್ಠತೆ, ಗ್ರಹಾಗ್ನಿಪಾಲನೆ, ಸಂಧ್ಯಾವಂದನೆ, ಪಿತೃ ತರ್ಪಣ, ಗಾಯತ್ರಿ ಜಪ, ಗೋತ್ರ ಪ್ರವರಗಳ ಪುನರುಚ್ಚರಣೆಯಂತಹ ಆಚರಣೆ ಹಾಗೂ ಎಲ್ಲಾ ನಂಬಿಕೆಗಳನ್ನು ಶರಣರು ಮಾನ್ಯ ಮಾಡುವುದಿಲ್ಲ. ಹಾಗಿದ್ದ ಮೇಲೆ ಲಿಂಗಾಯತವು ಸನಾತನ ಬ್ರಾಹ್ಮಣ ಧರ್ಮದ ಭಾಗವಾಗುವುದಾದರೂ ಹೇಗೆ? ಸಂವಿಧಾನ ಮಾನ್ಯತೆ ಕೊಡದೆ ಹೋದರೆ ಲಿಂಗಾಯತರು ಹಿಂದೂಗಳಾಗಿ ಉಳಿಯುತ್ತಾರೆನ್ನುವುದು ಸನಾತನಿಗಳ ಭ್ರಮೆ ಮಾತ್ರ. ಸಂವಿಧಾನ ಮಾನ್ಯತೆ ಸಿಗುವ ತನಕ ಸಿಖರು, ಬೌದ್ದರು, ಹಾಗೂ ಜೈನರು ತಮ್ಮ ಧರ್ಮದ ನಂಬಿಕೆ ಹಾಗೂ ಆಚರಣೆಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಹಾಗೆಯೇ ಲಿಂಗಾಯತರೂ ಕೂಡ. ಲಿಂಗಾಯತವನ್ನು ತಮ್ಮ ಧರ್ಮದ ಭಾಗವಾಗಿಸಿಕೊಳ್ಳುವ ದುಸ್ಸಾಹಸವನ್ನು ಸನಾತನಿಗಳು ಹೆಚ್ಚಿಸಿದಷ್ಟೂ ಅದು ಅವರಿಗೆ ಅಧಿಕ ಹಾನಿಯನ್ನು ಮಾಡಬಲ್ಲುದು. ಶರಣ ದರ್ಶನವು ಸನಾತನ ವೈದಿಕ ದರ್ಶನವನ್ನು ಹೇಗೆ ತಿರಸ್ಕರಿಸಿದೆ ಎನ್ನಲು ಬಸವಣ್ಣನವರ ಕೆಳಗಿನ ವಚನ ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ:

“ಆಚಾರ ಶಿವಾಚಾರವೆಂದರಿಯದ ಕಾರಣ,
ಷಡುದರುಶನಂಗಳೆಲ್ಲಾ ತಮತಮಗೆ
ಶರಣೆನುತ್ತಿದ್ದುವು. ಮಹತ್ವದ ಸಮಯಾದಿ
ಶೈವಂಗಳೆಂಬುವೆಲ್ಲಾ ಶರಣು ಶರಣೆನುತ್ತಿದ್ದುವು,
ನಮ್ಮ ಕೂಡಲಸಂಗನ ಶರಣರು ಮಾಡಿದ
ವಿನಿಯೋಗ ಬಹಿರಂಗದಲ್ಲಿ ವರ್ತಿಸುವವರಿಗೆ ಎಲ್ಲಿಯದೊ?”

ಭಾವಾರ್ಥ

ಶರಣರು ಪ್ರತಿಪಾದಿಸಿದ ಶಿವಾಚಾರವೆ ಶ್ರೇಷ್ಠ ಆಚಾರ. ಲಿಂಗಾಯತ ಧರ್ಮದಲ್ಲಿ ಐದು ಆಚಾರಗಳಿದ್ದು ಅವು ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಹಾಗೂ ಭೃತ್ಯಾಚಾರಗಳೆಂಬ ಪಂಚಾಚಾರಗಳು. ಅದರಲ್ಲಿ ಶಿವಾಚಾರವೆಂದರೆ ಶಿವಭಕ್ತರಲ್ಲಿ ಜಾತಿಭೇದವನ್ನು ಅರಸದಿರುವುದು. ಇದನ್ನು ನಾವು ಆಧುನಿಕ ಸಂವಿಧಾನದ ಜಾತ್ಯತೀತ ತತ್ವಕ್ಕೆ ಸಮೀಕರಿಸಿಬಹುದಾಗಿದೆ. ಪಂಚಾಚಾರಗಳು ಲಿಂಗಾಯತ ಧರ್ಮಿಯರಿಗೆ ಐದು ಆಚಾರಗಳನ್ನು ಶಾಸನವಾಗಿ ವಿಧಿಸುತ್ತದೆ. ಲಿಂಗಾಚಾರವು ಇಷ್ಟಲಿಂಗ ನಿಷ್ಟೆ ಹಾಗೂ ಏಕದೇವೋಪಾಸನೆಯನ್ನು, ಸದಾಚಾರವು ವ್ಯಕ್ತಿಯ ಸನ್ನಡತೆಯನ್ನು(ಕಳಬೇಡ, ಕೊಲಬೇಡ ಎನ್ನುವ ಬಸವಣ್ಣನವರ ವಚನದಲ್ಲಿನ ಸಪ್ತ ಗುಣಗಳು), ಶಿವಾಚಾರವು ಪೂರ್ವದ ಜಾತಿಗಳು ಅಳಿದು ಲಿಂಗಧಾರಿಗಳಾದವರ ನಡುವೆ ಭೇದವನ್ನೆಣಿಸದಿರುವಿಕೆ ಅಥವಾ ಜಾತ್ಯಾತೀತತೆ, ಈ ಎಲ್ಲಾ ಆಚಾರಗಳು, ಸಿದ್ಧಾಂತಗಳು ಹಾಗೂ ಒಟ್ಟಾರೆ ಲಿಂಗಾಯತ ಧರ್ಮಕ್ಕೆ ಅಪಾಯ ಬಂದಾಗ ಅದರ ನಿವಾರಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡುವುದು ಗಣಾಚಾರ ಹಾಗೂ ಸಮಾಜಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ ಶರಣರಿಗೆ (ಗುರು, ಲಿಂಗ, ಜಂಗಮ) ಶರಣಾಗಿ ಬದುಕುವ ದಾಸೋಹಂ ಭಾವವೇ ಭೃತ್ಯಾಚಾರವನ್ನಿಸಿದೆ. ಇಲ್ಲಿ ಶಿವ ಎಂದರೆ ಸನಾತನಿಗಳು ಕಲ್ಪಿಸಿದ ಪುರಾಣದ ಶಿವ ಎನ್ನುವ ತಪ್ಪು ವ್ಯಾಖ್ಯಾನಕ್ಕೆ ಅವಕಾಶವಿಲ್ಲ. ಶರಣರ ಶಿವ ಸೃಷ್ಟಿಯ ಮೂಲವಸ್ತು, ಅಥವಾ ಚೈತನಾತ್ಮಕ ಶಕ್ತಿ ಅಥವಾ ಇನ್ನೂ ಸ್ಪಷ್ಟವಾಗಿ ನಿರಾಕಾರ, ನಿರ್ಗುಣ ಶಿವ.

ಇದನ್ನೂ ಓದಿ ವಚನಯಾನ | ಸಾಮಾಜಿಕ ಕಾಳಜಿಯಿಲ್ಲದ ವಿದ್ಯೆ ನಿರರ್ಥಕ

ಹೀಗೆ ಶಿವಾಚಾರವೆಂಬ ಪರತತ್ವದ ಆಚಾರವನ್ನಿರಿಯದ ಸನಾತನಿಗಳ ಷಡ್ದರ್ಶನಗಳು ಸ್ವಯಂಪ್ರೇರಿತವಾಗಿ ಶರಣ ಧರ್ಮದ ಸಿದ್ಧಾಂತಗಳಿಗೆ ಶರಣಾದವು ಎನ್ನುತ್ತಾರೆ ಬಸವಣ್ಣ. ಇನ್ನು ಅನೇಕ ಬಗೆಯ ಶೈವ ಪ್ರಭೇದಗಳೂ ಸಹ ಶರಣ ಧರ್ಮಕ್ಕೆ ಶರಣಾಗತವಾದವು. ನಿರಾಕಾರ, ನಿರ್ಗುಣನಾದ ಕೂಡಲಸಂಗಮದೇವನೆಂಬ ಸಮಾಜಕ್ಕೆ ಶರಣರು ಸಲ್ಲಿಸುವ ಸೇವೆಯ ಎದುರಿಗೆ ಡಂಬಾಚಾರದ ಎಲ್ಲಾ ಸನಾತನ ಭಕ್ತಿ ದರ್ಶನಗಳು ಸಮನಾಗಲಾರವು ಎನ್ನುವುದೆ ವಚನದ ಭಾವ. ಮೇಲಿನ ವಚನವು ಅತ್ಯಂತ ಸ್ಪಷ್ಟತೆಯಿಂದ ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನಗಳು ಶರಣ ಧರ್ಮಕ್ಕೆ ಸೋತು ತಲೆಬಾಗಿವೆ ಎನ್ನುವ ಸಂದೇಶವನ್ನು ನಿರ್ಭಿಡೆಯಿಂದ ಸಾರುತ್ತದೆ. ಎಲ್ಲಾ ಬಗೆಯ ಆಗಮಿಕ ಶೈವ ಪ್ರಭೇದಗಳು ಪುರಾಣದ ಶಿವನ ಭಜನೆ ಮಾಡುತ್ತವೆ. ಸಮಾಜವನ್ನೇ ದೈವವೆಂದು ಬಗೆಯುವ ಶರಣ ಧರ್ಮವೆ ನಿಜವಾದ ಧರ್ಮ. ಶರಣರು ಮಾಡಿದ ವಿನಿಯೋಗ ಎಂದರೆ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ ಭಕ್ತಿ ಎಂದರ್ಥ. ಬಸವಣ್ಣನವರು ಇಲ್ಲಿ ವಿನಿಯೋಗ ಎನ್ನುವ ಪದವನ್ನು ಮಾರ್ಮಿಕವಾಗಿ ಬಳಸಿದ್ದಾರೆ. ಶರಣರ ಭಕ್ತಿಯು ನಿಜವಾದ ಭಕ್ತಿಮಾರ್ಗವಾಗಿದ್ದು ಅದು ಸನಾತನಿಗಳ ಷಡುದರ್ಶನದಂತೆ ತೋರಿಕೆಯ ಅಥವಾ ಬಹಿರಂಗದ ಭಕ್ತಿಯಲ್ಲ. ಅದಕ್ಕೆಂದೇ ಶರಣರು ಅದನ್ನು “ಭಕ್ತಿ ಎಂಬುದು ತೋರುಂಬ ಲಾಭ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಟಿಪ್ಪಣಿ

ಸನಾತನ ಬ್ರಾಹ್ಮಣ ಧರ್ಮ ಹಾಗೂ ಶರಣ ಧರ್ಮಗಳ ನಡುವೆ ಬಹುದೊಡ್ಡ ಕಂದಕವಿದೆ. ಸನಾತನಿಗಳು ಆ ಕಂದಕವನ್ನು ಮೇಲ್ನೋಟಕ್ಕೆ ಮುಚ್ಚಿ ಇಡೀ ಅವೈದಿಕ ಶರಣ ಸಿದ್ಧಾಂತವನ್ನು ಆಪೋಶನ ಕೊಳ್ಳುವ ಅಥವಾ ಅದನ್ನು ವೈದಿಕತೆಯ ಚೌಕಟ್ಟಿಗೆ ಸಿಲುಕಿಸುವ ಹುನ್ನಾರ ಮಾಡುತ್ತಿರುವುದು ಎಲ್ಲರಿಗೆ ತಿಳಿದ ವಿಚಾರ. ಶರಣರು ಭಕ್ತಿಯು ಸನಾತನಿಗಳ ಭಕ್ತಿಯಂತೆ ಅಂಧ ಭಕ್ತಿಯಲ್ಲ. ಅದು ಮೈತುಂಬಾ ಕಣ್ಣಾಗಿ ಸಮಾಜವನ್ನು ಎಚ್ಚರಿವುದು. ತಾನು ಸ್ವತಃ ಮೊದಲು ಅರಿವುಗೊಳ್ಳುವುದು ಹಾಗೂ ನಂತರ ಸಮಾಜವನ್ನು ಅರಿವು ಗೊಳಿಸುವುದು ಶರಣ ಧರ್ಮದ ಪ್ರಧಾನ ಲಕ್ಷಣವಾಗಿದೆ. ನಾಯಿಯನ್ನು ನಾರಾಯಣ ಎಂತಲು, ಹಂದಿಯನ್ನು ವರಹವೆಂತಲು ಪೂಜಿಸುವ ಸನಾತನಿಗಳು ಮನುಷ್ಯರನ್ನು ಮನುಷ್ಯರಂತೆ ಕಾಣಲಿಲ್ಲ.

ಆ ಕಾರಣದಿಂದ ಭಾರತೀಯ ಸಮಾಜ ಸಂಪೂರ್ಣವಾಗಿ ವಿಘಟನೆಗೆ ಒಳಗಾಯಿತು. ಚಾರ್ವಾಕ, ಲೋಕಾಯತ, ಬೌದ್ದ/ಶ್ರಮಣ, ಜೈನ, ಆರೂಢ, ಅಜೀವಕ, ಅಚಲ, ಅವಧೂತ, ಸಿದ್ಧ, ನಾಥ, ಲಿಂಗಾಯತ, ಸಿಖ್ ಮುಂತಾದ ದರ್ಶನಗಳ ಉದಯಕ್ಕೆ ಸನಾತನ ಬ್ರಾಹ್ಮಣ ಧರ್ಮದ arrogance ಮತ್ತು ಜೀವವಿರೋಧಿ ಶೋಷಕ ಪ್ರವರ್ತಿಯೇ ನೇರವಾಗಿ ಕಾರಣವಾಗಿದೆ. ಎಲ್ಲರನ್ನು ಹತ್ತಿಕ್ಕಿ ತಾವು ಮಾತ್ರ ಭದ್ರವಾಗಿ ಬದುಕಬೇಕೆಂಬ ದುರಾಸೆಯಿಂದ ಎಲ್ಲಾ ಬಗೆಯ ಅಪರಾಧಗಳನ್ನು ಮಾಡಿದ ಸನಾತನಿಗಳು ಈಗ ಅತ್ಯಂತ ಹೆಚ್ಚು ಅಭದ್ರತೆಗೆ ಒಳಗಾಗಿದ್ದು ಸಮಕಾಲೀನ ದುರಂತ. ಪ್ರಸ್ತುತ ರಾಷ್ಟ್ರೀಯವಾದದ ಮುಖವಾಡದ ಸಂಘಟನೆ ಹಾಗೂ ರಾಜಕೀಯ ವೇದಿಕೆಯನ್ನು ಹುಟ್ಟುಹಾಕುವ ಮೂಲಕ ತಮ್ಮ ಬದುಕಿನ ಅಭದ್ರತೆಯನ್ನು ನೀಗಿಸಿಕೊಳ್ಳಲು ಸನಾತನಿಗಳು ಮಾಡುತ್ತಿರುವ ಹತಾಶ ಯತ್ನವು ಅವರಿಗೆ ತಾತ್ಕಾಲಿಕ ನೆಮ್ಮದಿ ನೀಡಬಲ್ಲುದೆ ಹೊರತು ಶಾಶ್ವತ ಸುಖವನ್ನು ನೀಡಲಾರದು.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

ದಿಲ್ಲಿ ಮಾತು | ಅಜ್ಞಾನಿಗಳ ನಾಡಿನಲ್ಲಿ ʼಡಾಯನ್‌ʼ ಎಂಬ ಕ್ರೂರ ಪದ್ಧತಿ  

ಮಹಿಳೆಯರನ್ನು ಮಾಟಗಾತಿ, ಡಾಕಿನಿ ಎಂದು ಅಂಧವಿಶ್ವಾಸದಿಂದ ಬಿಂಬಿಸಿ ಆ ಮಹಿಳೆಗೆ ಹಿಂಸೆ ನೀಡುವ,...

Download Eedina App Android / iOS

X