21 ಲಕ್ಷಕ್ಕೂ ಹೆಚ್ಚು ವೃದ್ಧರು ಮತ್ತು ಅಂಗವಿಕಲರಿಗೆ ಪಡಿತರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸಲು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮುಂದಾಗಿದ್ದಾರೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಮುಖ್ಯಮಂತ್ರಿಗಳ ಥಾಯುಮನವರ್ ಯೋಜನೆಯನ್ನು ಸ್ಟಾಲಿನ್ ಚೆನ್ನೈನಲ್ಲಿ ಉದ್ಘಾಟಿಸಲಿದ್ದಾರೆ.
ಈ ಯೋಜನೆಯಡಿಯಲ್ಲಿ ಅಕ್ಕಿ ಮತ್ತು ಸಕ್ಕರೆ ಸೇರಿದಂತೆ ಪಡಿತರ ಸಾಮಗ್ರಿಗಳನ್ನು ಉದ್ದೇಶಿತ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪಡಿತರ ಚೀಟಿ ಹೊಂದಿರುವ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಈ ಯೋಜನೆಯ ಫಲಾನುಭವಿಗಳು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | 2024-25ನೇ ಸಾಲಿನ ಹೊಸ ಯೋಜನೆಗಳ ಪೂರ್ಣ ವಿವರ ಇಲ್ಲಿದೆ…
ಸುಮಾರು 20.42 ಲಕ್ಷ ಹಿರಿಯ ನಾಗರಿಕರು ಮತ್ತು 1.27 ಲಕ್ಷಕ್ಕೂ ಹೆಚ್ಚು ಅಂಗವಿಕಲರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರತಿ ಎರಡನೇ ಶನಿವಾರ ಮತ್ತು ಭಾನುವಾರ ಪಡಿತರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ಜನಪರ ಕ್ರಮದಿಂದ ಸರ್ಕಾರಕ್ಕೆ 30.16 ಕೋಟಿ ರೂ.ಗಳ ಹೊರೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಕರ್ನಾಟಕ, ಆಂಧ್ರ ಪ್ರದೇಶ ಸೇರಿ ಕೆಲವು ರಾಜ್ಯಗಳಲ್ಲಿ ಈ ರೀತಿಯ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿಯೂ ಈ ಸಂಬಂಧ ಅನ್ನ ಸುವಿಧ ಎಂಬ ಯೋಜನೆಯಿದೆ. ಆದರೆ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ. 80 ವರ್ಷ ದಾಟಿದ ವೃದ್ಧರಿಗೆ ಅನ್ನ ಸುವಿಧ ಯೋಜನೆ ಮೂಲಕ ಮನೆ ಬಾಗಿಲಿಗೆ ಪಡಿತರ ತಲುಪಿಸುವ ವ್ಯವಸ್ಥೆಯಿದಾಗಿದ್ದು, ಇದಕ್ಕಾಗಿ ಆಪ್ ಬಿಡುಗಡೆಯಾಗಲಿದೆ.
