ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ ಬಲಿಯಾಗದೆ; ರಾಹುಲ್ ಗಾಂಧಿಯ ಜನಪರ ನಿಲುವನ್ನು, ಸಾಂವಿಧಾನಿಕ ಶಿಸ್ತನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.
ಕಾಂಗ್ರೆಸ್ ಮುಖಂಡ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎತ್ತಿರುವ ‘ಮತ ಕಳವು’ ಪ್ರಕರಣ ದೇಶದಲ್ಲಿ ಸಂಚಲನ ಉಂಟು ಮಾಡಿದೆ. ಅವರು ಮಾಡಿರುವ ಗಂಭೀರ ಆರೋಪಕ್ಕೆ ಉತ್ತರಿಸಬೇಕಾದ ಚುನಾವಣಾ ಆಯೋಗ, ಪ್ರಶ್ನಿಸಿದವರಿಗೇ ನೋಟಿಸ್ ನೀಡಿದೆ. ದಾಖಲೆಗಳನ್ನು ಕೇಳಿದೆ. ಆಯೋಗದ ಈ ಕ್ರಮ ನಿರೀಕ್ಷಿತವೇ ಆಗಿದೆ.
ಮತ ಕಳ್ಳತನದ ವಿರುದ್ಧ ಹೋರಾಟ ತೀವ್ರಗೊಳಿಸಿರುವ ಕಾಂಗ್ರೆಸ್ ಬೆಂಬಲಕ್ಕೆ ‘ಇಂಡಿಯಾ’ ಒಕ್ಕೂಟ ನಿಂತಿದೆ. ನಿನ್ನೆ ದೆಹಲಿಯಲ್ಲಿ ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇಂಡಿಯಾ ಒಕ್ಕೂಟದ ಸಂಸದರು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಆಯೋಗದ ಜವಾಬ್ದಾರಿಯನ್ನು ಮತ್ತೆ ಮತ್ತೆ ನೆನಪಿಸುತ್ತಿದ್ದಾರೆ. ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದು ಕೂಡ ನಿರೀಕ್ಷಿತವೇ ಆಗಿದೆ.
ಏನತ್ಮಧ್ಯೆ ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಡಿಯಲ್ಲಿ ಚುನಾವಣಾ ಆಯೋಗವು ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿದೆ. ಅಷ್ಟೇ ಅಲ್ಲ, ಈ ಕ್ರಮವನ್ನು ಸಮರ್ಥಿಸಿಕೊಂಡಿದೆ. ಕೈಬಿಡಲಾದ ಮತದಾರರ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಕಾನೂನುಬದ್ಧ ಒಡಂಬಡಿಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬೆಳವಣಿಗೆ ಕೂಡ ನಿರೀಕ್ಷಿತವೇ ಆಗಿದೆ.
ಇದನ್ನು ಓದಿದ್ದೀರಾ?: ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ
ಕೇಂದ್ರ ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆ ಎನ್ನುವುದನ್ನು ಮರೆತು, ಆಳುವ ಪಕ್ಷದ ಕೈಗೊಂಬೆಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಸಂವಿಧಾನಕ್ಕೆ ಬಗೆವ ಅಪಚಾರ ಎಂದರೂ ಕೇಳಿಸಿಕೊಳ್ಳಲಾರದಷ್ಟು ಕಿವುಡಾಗಿದೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನಾಭಿಪ್ರಾಯ ರೂಪಿಸುತ್ತಿರುವ, ಜನಜಾಗೃತಿಗಾಗಿ ಪ್ರತಿಭಟನೆ ಹಮ್ಮಿಕೊಂಡು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿರುವ ಈ ಸಂದರ್ಭದಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ಭಾಗವಾಗಿದ್ದ ಸಚಿವ ಕೆ.ಎನ್. ರಾಜಣ್ಣ ಮತ ಕಳ್ಳತನದ ಬಗ್ಗೆ ಅಪಸ್ವರವೆತ್ತಿದ್ದರು. ‘ಮತ ಕಳವು ನಡೆಯಲು ನಮ್ಮ ಲೋಪವೇ ಕಾರಣ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ನಮ್ಮಿಂದ ಅಕ್ರಮಗಳನ್ನು ತಡೆಯಲು ಸಾಧ್ಯವಾಗಲಿಲ್ಲ’ ಎಂಬ ಉಡಾಫೆಯ ಮಾತುಗಳನ್ನಾಡಿದ್ದರು.
ಸಚಿವ ರಾಜಣ್ಣರ ಈ ಹೇಳಿಕೆ ಆರು ತಿಂಗಳ ಕಾಲ ಅಪಾರ ಶ್ರದ್ಧೆ, ಶ್ರಮ, ಬುದ್ಧಿ ಬಸಿದಿಟ್ಟು ತಯಾರಿಸಿರುವ ವರದಿಯನ್ನು, ದೇಶದ ಮುಂದಿಟ್ಟಿರುವ ರಾಹುಲ್ ಗಾಂಧಿಯವರ ಅಸಲಿ ಸಾಕ್ಷಿಯನ್ನು ಅನುಮಾನದಿಂದ ನೋಡುವಂತೆ ಮಾಡಿತ್ತು. ಇದು ರಾಹುಲ್ ಗಾಂಧಿಯವರ ಪ್ರತಿಯೊಂದು ನಡೆಯನ್ನು ಲೇವಡಿ ಮಾಡುವ, ಅದನ್ನೇ ದೇಶಕ್ಕೆ ಹಂಚಿ ಅವರನ್ನು ‘ಪಪ್ಪು’ ಮಾಡುವ ಬಿಜೆಪಿಗಳ ಕೈಗೆ ಕಾಂಗ್ರೆಸ್ಸಿಗರೇ ಕೋಲು ಕೊಟ್ಟು ಬಡಿಸಿದಂತಿತ್ತು.
ಆ ಕಾರಣಕ್ಕಾಗಿಯೇ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಆ ತಕ್ಷಣವೇ ಕೆ.ಎನ್. ರಾಜಣ್ಣರನ್ನು ಸಚಿವ ಸಂಪುಟದಿಂದ ವಜಾ ಮಾಡಲು ಆದೇಶಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಮಜಾಯಿಷಿಗೂ ಸಮಯ ಕೊಡದಂತೆ, ರಾಜೀನಾಮೆ ಪತ್ರ ಪಡೆದರೂ ಸಮಾಧಾನವಾಗದಂತೆ, ಕಾಂಗ್ರೆಸ್ ಹೈಕಮಾಂಡ್ ಕಠಿಣ ನಿಲುವು ತಾಳಿದೆ.
ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷಕ್ಕೆ ಎದುರಾದ ಈ ಆಘಾತದಿಂದ, ಸಚಿವರು ಮತ್ತು ಶಾಸಕರು ಬೆಚ್ಚಿಬಿದ್ದಿದ್ದಾರೆ. ಆದರೆ, ರಾಜಣ್ಣರ ವಜಾವನ್ನು ಅಸ್ತ್ರದಂತೆ ಬಳಸಿಕೊಳ್ಳಲು ಹವಣಿಸುತ್ತಿರುವ ವಿರೋಧ ಪಕ್ಷಗಳು, ರಾಜಣ್ಣರನ್ನು ಅನಗತ್ಯವಾಗಿ ಹೊಗಳುತ್ತಿವೆ. ಅವರು ಹಿಂದುಳಿದ ವಾಲ್ಮೀಕಿ ಜನಾಂಗಕ್ಕೆ ಸೇರಿದವರೆಂದೂ, ಸತ್ಯ ಹೇಳಿ ಸಚಿವ ಸ್ಥಾನ ಕಳೆದುಕೊಂಡರೆಂದೂ, ಅದು ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಬಗೆದ ಅಪಚಾರವೆಂದೂ ಕನಿಕರ ತೋರಿಸುವ ನೆಪದಲ್ಲಿ ಕಾಂಗ್ರೆಸ್ಸನ್ನು ಹಣಿಯುತ್ತಿವೆ. ಆದರೆ ಅದೇ ಕೆಲಸವನ್ನು, ಮೋದಿ ಮತ್ತು ಶಾ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಮಾಡಿದಾಗ, ಉಸಿರೆತ್ತದೆ ಬಾಯಿ ಮುಚ್ಚಿಕೊಂಡಿದ್ದರು. ಇದನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕಿದೆ.
75ರ ಹರೆಯದ ಕೆ.ಎನ್. ರಾಜಣ್ಣ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅನಿಸಿದ್ದನ್ನು ಆಡುವ ದಾಢಸಿ ಸ್ವಭಾವದವರು. ಎಲ್ಲಾ ಪಕ್ಷಗಳಲ್ಲಿರುವಂತೆ ಕಾಂಗ್ರೆಸ್ ಪಕ್ಷದಲ್ಲೂ ಗುಂಪುಗಾರಿಕೆ ಇದೆ. ಅಧಿಕಾರಕ್ಕಾಗಿ ಹಪಾಹಪಿ ಇದೆ. ರಾಜಕೀಯ ಚದುರಂಗದಾಟದಲ್ಲಿ ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ವ್ಯಕ್ತಿನಿಷ್ಠೆ ಪ್ರದರ್ಶಿಸಲು ಹೋಗಿ ಪಕ್ಷಕ್ಕೆ ಧಕ್ಕೆ ತಂದಿದ್ದಾರೆ. ಮಂತ್ರಿಯಾದ ದಿನದಿಂದ ಇಲ್ಲಿಯವರೆಗೆ, ಸಡಿಲ ಮಾತುಗಳ ಮೂಲಕ ಪಕ್ಷವನ್ನು, ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಇದನ್ನೂ ಓದಿರಿ: ಪಾಠ ಕಲಿಯದ ಪ್ರಜ್ವಲ್, ಕಲಿಸಿದ್ದು ಯಾರಿಗೆ?
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆ ಸಂದರ್ಭದಲ್ಲಿ ಎಐಸಿಸಿ ವರಿಷ್ಠರು ಕೆಲವು ನಿಬಂಧನೆಗಳನ್ನು ಹಾಕಿದ್ದರು. ಇಂತಹ ನಿಬಂಧನೆಗಳನ್ನು ರಾಜಣ್ಣ ಉಲ್ಲಂಘಿಸಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಬೇಡಿಕೆ ಇಟ್ಟಿದ್ದು; ತುಮಕೂರು ಲೋಕಸಭೆಗೆ ಮುದ್ದಹನುಮೇಗೌಡರನ್ನು ಅಭ್ಯರ್ಥಿ ಮಾಡಿ, ಸೋಲಿಸಿದ್ದು; ಸೆಪ್ಟೆಂಬರ್‍ನಲ್ಲಿ ಕ್ರಾಂತಿಯಾಗಲಿದೆ ಎಂಬ ಬಾಂಬ್ ಸಿಡಿಸಿದ್ದು; ತಮ್ಮ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸ್ವಪಕ್ಷದವರ ಮೇಲೆ ಸದನದಲ್ಲಿಯೇ ಆರೋಪಿಸಿದ್ದು; ಶಾಸಕರ ಅಹವಾಲು ಕೇಳಲು ಬಂದಿದ್ದ ಉಸ್ತುವಾರಿ ಸುರ್ಜೆವಾಲಾರಿಗೆ ಅಧಿಕಾರಿಗಳ ಸಭೆ ಮಾಡಲು ನೀವು ಯಾರು ಎಂದದ್ದು; ಕೆಪಿಸಿಸಿ ಅಧ್ಯಕ್ಷರಾಗಲು ಸಿದ್ಧ ಎಂದು ಹೇಳಿದ್ದು; ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದದ್ದು- ಅನಗತ್ಯ ಮಾತುಗಳನ್ನು ಆಡಿದ್ದಾರೆ. ಅಂತಹ ಮಾತುಗಳು ಮಾಧ್ಯಮಗಳಲ್ಲಿ ವಿವಾದದ ರೂಪ ತಾಳುತ್ತಿದ್ದಂತೆ, ಹೈಕಮಾಂಡಿಗೆ ದೂರು ಸಲ್ಲಿಕೆಯಾಗುತ್ತಿದ್ದಂತೆ, ಎಚ್ಚೆತ್ತುಕೊಳ್ಳಬೇಕಾದ ರಾಜಣ್ಣನವರು, ಉತ್ತೇಜಿತರಾಗಿ ಒಂಟಿ ಸಲಗದಂತೆ ವರ್ತಿಸಿದ್ದಾರೆ.
ಇದು ಸಹಜವಾಗಿಯೇ ಸರ್ಕಾರ ಮತ್ತು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿರುವ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ. ಸಾಲದು ಎಂದು, ಇಡೀ ದೇಶವೇ ರಾಹುಲ್ ಗಾಂಧಿಯತ್ತ ನೋಡುತ್ತಿರುವಾಗ, ಪಕ್ಷದ ಸಚಿವರೇ ಪಕ್ಷದ ನಾಯಕರ ನಿಲುವನ್ನು ನಿರಾಕರಿಸುವುದು- ದೇಶದ ಜನತೆಗೆ ಬೇರೆಯದೇ ಸಂದೇಶ ರವಾನಿಸುತ್ತದೆ. ಉತ್ತರಿಸುವುದು ಕಷ್ಟವಾಗುತ್ತದೆ, ಭಾರೀ ಮುಜುಗರಕ್ಕೀಡು ಮಾಡುತ್ತದೆ. ಹಾಗಾಗಿ ಸಚಿವ ಸ್ಥಾನದಿಂದ ರಾಜಣ್ಣರನ್ನು ವಜಾಗೊಳಿಸುವುದು ಅನಿವಾರ್ಯವಾಗಿದೆ.
ಇದನ್ನೂ ಓದಿರಿ: ಗಾಜಾದ ಮಾನವೀಯ ದುರಂತಕ್ಕೆ ಜಗತ್ತಿನ ನಿರ್ಲಜ್ಜ ಕುರುಡು-ಮೌನ
ರಾಜಣ್ಣರನ್ನು ಸಂಪುಟದಿಂದ ವಜಾ ಮಾಡುವ ಮೂಲಕ ಕಾಂಗ್ರೆಸ್ಸಿನ ಉಢಾಳ ಶಾಸಕರಿಗೆ, ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಇದು ಕೈಗೊಳ್ಳಲೇಬೇಕಿದ್ದ ಶಿಸ್ತು ಕ್ರಮವಾಗಿದೆ. ಆದರೆ ಬಲಿಯಾಗುವುದು ಯಾವಾಗಲೂ ದುರ್ಬಲವರ್ಗದವರು, ಹಿಂದುಳಿದ ನಾಯಕರು ಎನ್ನುವುದು ಕೊಂಚ ಬೇಸರದ ಸಂಗತಿ. ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ ಬಲಿಯಾಗದೆ; ರಾಹುಲ್ ಗಾಂಧಿಯ ಜನಪರ ನಿಲುವನ್ನು, ಸಾಂವಿಧಾನಿಕ ಶಿಸ್ತನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಸರ್ಕಾರಿ ಏಜೆನ್ಸಿಗಳನ್ನು, ಸ್ವಾಯತ್ತ ಸಂಸ್ಥೆಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡಿರುವ ಬಿಜೆಪಿಯ ಎದುರು ಉಳಿಯುವುದು ಕಷ್ಟವಿದೆ.

ಸರಿಯಾದ ವಿಮರ್ಶೆ ,ವಿಷಯದ ಆಳವಾದ ಅದ್ಯಯನದಿಂದ ಮಾತ್ರ ಬರಲು ಸಾದ್ಯ.ಬಸು ಅವರಿಂದ ಇಂತಹ ವಿಮರ್ಶೆ ಹೆಚ್ಚು ಬರಲಿ.