ವಿಧಾನಸಭೆಯ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪದ ವೇಳೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವಿನ ತನಿಖೆಗಳ ಪ್ರಕರಣ ಬಗ್ಗೆ ಚರ್ಚೆ ನಡೆಯಿತು.
ಶೂನ್ಯವೇಳೆ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್, “ಧರ್ಮಸ್ಥಳ ಅಸಹಜ ಸಾವಿನ ತನಿಖೆ ನಡೆಸಲು ಎಸ್‌ಐಟಿ ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಹಿಂದೂ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಸಹಿಸುವುದಿಲ್ಲ” ಎಂದು ಹೇಳಿದರು.
“ತನಿಖೆಯ ನೆಪದಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನ ಕಾರ್ಯ ನಡೆಯುತ್ತಿದೆ. ಇಡೀ ಧರ್ಮಸ್ಥಳವನ್ನು ಗುರಿ ಮಾಡಲಾಗಿದೆ. ಆರಂಭದಲ್ಲಿ ಅನಾಮಿಕ ವ್ಯಕ್ತಿ ಹೇಳಿದಂತೆ ಈಗ 15 ಗುಂಡಿ ತೋಡಿಸಲಾಗಿದೆ. ಯಾವುದೇ ಗುಂಡಿಯಲ್ಲಿ ಏನೂ ಸಿಕ್ಕಿಲ್ಲ ಎನ್ನುವ ವರದಿಗಳಿವೆ. ಎಲ್ಲ ಊಹಾಪೋಹಗಳಿಗೆ ಗೃಹ ಸಚಿವರು ತೆರೆ ಎಳೆಯಬೇಕು” ಎಂದು ಆಗ್ರಹಿಸಿದರು.
“ಯಾರೋ ಬಂದು ಹೇಳುತ್ತಾರೆ ಎಂದು ಗುಂಡಿಗಳನ್ನು ತೋಡಲು ಆಗುವುದಿಲ್ಲ. ಎಸ್‌ಐಟಿ ತನಿಖೆ ಎಲ್ಲಿಯವರೆಗೂ ಬಂದಿದೆ ಎಂಬುದನ್ನು ಗೃಹ ಸಚಿವರು ಸದನಕ್ಕೆ ಉತ್ತರಿಸಬೇಕು. ಹೀಗೆ ದಿನ ಧರ್ಮಸ್ಥಳದಲ್ಲಿ ಇನ್ನೊಬ್ಬರು ಬಂದು ಗುಂಡಿ ಅಗೆಯಲು ಹೇಳುತ್ತಾರೆ. ಆಗಲೂ ಗುಂಡಿ ಅಗೆಯಲು ಆಗುತ್ತದಾ? ಈವರೆಗೂ ಎಸ್‌ಐಟಿ ತನಿಖೆಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಮಧ್ಯಂತರ ವರದಿಯನ್ನು ತಿಳಿಸಬೇಕು” ಎಂದು ಒತ್ತಾಯಿಸಿದರು.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, “ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ವ್ಯಕ್ತಿ ಅಸಹಜ ಸಾವುಗಳ ಶವಗಳನ್ನು ಹೂತಿರುವುದಾಗಿ ಮುಂದೆ ಬಂದು ದೂರು ನೀಡಿದ್ದಾನೆ. ಅಲ್ಲಿನ ಜನ ಸಮುದಾಯದ ಆಗ್ರಹವೂ ತನಿಖೆಯಾಗಲಿ ಎಂಬುದು ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಎಸ್‌ಐಟಿ ಮಾಡಿದ್ದೇವೆ. ತನಿಖೆ ನಡೆಯುತ್ತಿದೆ. ವರದಿ ಸಲ್ಲಿಸಿದ ಬಳಿಕ ತಿಳಿಸುತ್ತೇವೆ. ಮಧ್ಯಂತರ ವರದಿ ಕೊಡಲು ಸಾಧ್ಯವಿಲ್ಲ” ಎಂದು ಹೇಳಿದರು.
ಗೃಹ ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಸದಸ್ಯ ಸುರೇಶ್ ಕುಮಾರ್, “ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ಹಿಂದೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ, ದಕ್ಷಿಣ ಕನ್ನಡ ಪೊಲೀಸರು ಸಮರ್ಥರಿದ್ದಾರೆ. ಆದರೆ ಎಡಪಂಥೀಯ ವಿಚಾರಧಾರೆಯ ಜನರ ಆಗ್ರಹದ ಮೇಲೆ ಎಸ್‌ಐಟಿ ರಚಿಸಿದ್ದಾರೆ” ಎಂದು ತಿಳಿಸಿದರು.
ಸುರೇಶ್ ಕುಮಾರ್ ಮಾತಿಗೆ ಮಧ್ಯ ಪ್ರವೇಶಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, “ಗೃಹ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸತ್ಯ ಹೊರಬರಬೇಕು ಎಂಬುದು ನಮ್ಮ ನಿಲುವು. ಇದರಾಚೆಗೆ ನಮಗೆ ಯಾವುದೇ ಸಂಗತಿಗಳು ಗೊತ್ತಿಲ್ಲ. ತನಿಖೆ ನಡೆದು ಸತ್ಯ ಬರಲಿ ಎಂದು ಹೇಳಿದ್ದೇನೆ” ಎಂದರು.
ಮಾಜಿ ಸಚಿವ ಆರಗ ಜ್ಞಾನೇಂದ್ರ ಎದ್ದು ನಿಂತು, “ಅನಾಮಿಕ ವ್ಯಕ್ತಿಗೆ ತಲೆ ಬುರುಡೆ ಎಲ್ಲಿ ಸಿಕ್ಕಿದೆ? ಧರ್ಮಸ್ಥಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಅನಾಮಿಕರು ಹೇಳಿದ ತಕ್ಷಣ ಹೀಗೆ ಗುಂಡಿಗಳನ್ನು ಅಗೆಯಲು ಆಗುತ್ತದಾ” ಎಂದು ಪ್ರಶ್ನಿಸಿದರು.
ಗೃಹ ಸಚಿವರು ಉತ್ತರಿಸಿ, “ಎಸ್‌ಐಟಿ ಅವರು ನೂರಾರು ಗುಂಡಿಗಳನ್ನು ಅಗೆಯುವುದಿಲ್ಲ. ಒಂದು ಹಂತದವರೆಗೂ ಅಗೆದು ವರದಿ ನೀಡುತ್ತಾರೆ. ತನಿಖೆ ಪೂರ್ಣವಾಗದೇ ಉತ್ತರಿಸಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಸಭಾಧ್ಯಕ್ಷ ಯು ಟಿ ಖಾದರ್ ಅವರು ಮಧ್ಯ ಪ್ರವೇಶಿಸಿ, ಇದನ್ನು ಪ್ರತ್ಯೇಕ ಚರ್ಚೆಗೆ ಎತ್ತಿಕೊಳ್ಳಲಾಗುವುದು” ಎಂದು ತಿಳಿಸಿದರು.