ಹುಲಸೂರ ತಾಲೂಕಿನ ಗಡಿ ಅಂಚಿನಲ್ಲಿರುವ ವಾಂಜರವಾಡಿ ಎಂಬ ಕುಗ್ರಾಮದಲ್ಲಿ ಶಾಂತಾ ತ್ರಿಮುಖ (36) ಹಾಗೂ ಚಂದ್ರಕಲಾ ತ್ರಿಮುಖ (43) ಎಂಬ ಅಂಗವಿಕಲ ಸಹೋದರಿಯರಿದ್ದಾರೆ. ಇಬ್ಬರು ಅಂಗವಿಕಲ ಮಾಸಾಶನ ಸೇರಿದಂತೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
‘ಏನ್ ಮಾಡ್ಬೇಕ್, ದೇವ್ರು ಬಡವರ ಹೊಟ್ಯಾಗ್ ಇಂಥ ಮಕ್ಕಳಿಗಿ ಹುಟ್ಟಿಸ್ಯಾನ. ಹುಟ್ಟಿನಿಂದ ಚನ್ನಾಗಿ ಪಾಲನೆ ಪೋಷಣೆ ಮಾಡಿಕೊಂಡು ಬಂದಿದ್ದೇವೆ. ಕೂಲಿಯೇ ನಮ್ಮ ಮನೀಗಿ ಆಧಾರ. ಇಬ್ಬರು ಮಕ್ಕಳು ಅಂಗವೈಕಲ್ಯ ಅವರಿಗಂತೂ ಯಾವುದೇ ಕೆಲಸ ಕಾರ್ಯ ಮಾಡಲು ಬರಲ್ಲ. ಹೀಗಾಗಿ ನಾವೇ ಕೂಲಿ ನಾಲಿ ಮಾಡ್ಕೊಂಡು ಜಿಂದಗಿ ನಡ್ಸಲಾತಿದೇವು. ಸರ್ಕಾರ ನಮಗೇನೂ ಸವಲತ್ತು ಕೊಟ್ಟಿಲ್ಲ. ಇಬ್ಬರು ಅಂಗವಿಕಲ ಮಕ್ಕಳಲ್ಲಿ ಒಬ್ಬರಿಗೆ ಮಾಶಾಸನ ಬರುತ್ತಿತ್ತು, ಈಗ ಒಂದು ವರ್ಷದಿಂದ ಅದೂ ಬರ್ತಿಲ್ಲ, ಇನೊಬ್ಬ ಮಗಳಿಗೆ ಮಾಶಾಸನ ಬರುವುದಿಲ್ಲ. ಯಾವುದೇ ಅಧಿಕಾರಿಗಳು ನಮ್ಮ ಮನೆಗೆ ಬರಲ್ಲ, ನಮಗೆ ಕಚೇರಿ ತಿರುಗಾಡಿ ಸೌಲಭ್ಯ ಪಡೆಯಲು ಏನೂ ತಿಳಿಯುವುದಿಲ್ಲʼ ಎಂದು ಸಹೋದರಿಯರ ವೃದ್ಧ ತಂದೆ ತ್ರಿಮುಖ ಅವರು ಕಣ್ಣೀರು ಹಾಕುತ್ತಾರೆ.
ಸರಕಾರಿ ಸೌಲಭ್ಯ ಅನರ್ಹರ ಪಾಲಾಗುವುದನ್ನು ತಪ್ಪಿಸಲು ಹಲವು ಕ್ರಮ ಕೈಗೊಳ್ಳುವ ಆಡಳಿತ ವ್ಯವಸ್ಥೆ, ಅರ್ಹರನ್ನು ಗುರುತಿಸಿ ಅಂಥವರ ನೆರವಿಗೆ ಮುಂದಾಗಬೇಕಾದರೆ ಇಚ್ಛಾಶಕ್ತಿ ಅಗತ್ಯವಿದೆ. ಆದರೆ, ಈ ಬಡ ಕುಟುಂಬಸ್ಥರ ಅಳಲು ಕೇಳಿದರೆ ‘ನಿಮ್ಮ ಮನೆ ಬಾಗಿಲಿಗೆ ಸೇವೆ’ ಎಂಬ ಸರ್ಕಾರದ ಹೇಳಿಕೆ ಕೇವಲ ನಾಮ್ ಕೇ ವಾಸ್ತೆ ಎಂಬುದು ಖರೇ ಅನ್ಸುತೆ!
ಇವರದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಕುಟುಂಬ. ಅಲ್ಪ ಜಮೀನಿದ್ದರೂ ತಂದೆ-ತಾಯಿ ಕೂಲಿ ಮಾಡಿಯೇ ಮನೆ ನಡೆಸಬೇಕಾದ ಅನಿವಾರ್ಯತೆ. ಇಂಥ ದುಸ್ಥಿತಿಯಲ್ಲಿರುವ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಮಕ್ಕಳಿಬ್ಬರೂ ಪೂರ್ಣ ಪ್ರಮಾಣದ ಅಂಗವೈಕಲ್ಯ ಉಳ್ಳವರಾಗಿದ್ದು, ತೀರಾ ಸಂಕಷ್ಟದಲ್ಲಿರುವ ಈ ಬಡ ಕುಟುಂಬ ಸರ್ಕಾರಿ ಸೌಲಭ್ಯಕ್ಕಾಗಿ ಅಲೆದು ನಿರಾಶವಾಗಿ, ಉಪಜೀವನ ನಡೆಸಲು ತೊಂದರೆ ಅನುಭವಿಸುವಂತಾಗಿದೆ.
ʼಇಬ್ಬರು ಸಹೋದರಿಯರು ಶೇ 100ರಷ್ಟು ಅಂಗವೈಕಲ್ಯ ಇದ್ದಾರೆ, ಅಂಗವಿಕಲರ ಮಾಸಿಕ ವೇತನ ಪಡೆಯಲು ಆಧಾರ, ರೇಷನ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಯಿದ್ದು, ಸೌಲಭ್ಯಕ್ಕೆ ಪಡೆಯಲು ಎಲ್ಲ ಅರ್ಹತೆ ಹೊಂದಿದ್ದರೂ, ಒಬ್ಬರಿಗೆ ಶೇ.45 ರಷ್ಟು ಮಾತ್ರ ಅಂಗವಿಕಲ ಎಂದು ಪರಿಗಣಿಸಿ ₹800 ಮಾತ್ರ ಮಾಶಾಸನ ಮಂಜೂರು ಮಾಡಿದ್ದರು, ಈಗ ಅದು ಸ್ಥಗಿತವಾಗಿದೆ. ಪೂರ್ಣ ಪ್ರಮಾಣದ ದೈಹಿಕ ಅಂಗವೈಕಲ್ಯವಾಗಿದ್ದರೂ ಈವರೆಗೂ ಇಬ್ಬರಿಗೂ ಮಾಸಿಕ ₹1,400 ವೇತನ ಸಿಗುತ್ತಿಲ್ಲ. ಯಾವ ಅಧಿಕಾರಿಗಳೂ ನಮ್ಮ ಗೋಳು ಕೇಳುತ್ತಿಲ್ಲʼ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣದಿಂದ ವಂಚಿತ :
ಸಂಪೂರ್ಣ ಅಂಗವಿಕಲತೆ ಹೊಂದಿರುವ ಈ ಸಹೋದರಿಯರು ಗುಣಮಟ್ಟದ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಹಿಡಿಯಬೇಕೆಂಬ ಕನಸು ನುಚ್ಚುನೂರಾಗಿದೆ. ಕಲಿಕೆಗೆ ಸೂಕ್ತ ಸೌಲಭ್ಯ, ಬಡತನ ಸೇರಿ ನಾನಾ ಕಾರಣದಿಂದ ಶಿಕ್ಷಣ ಮುಂದುವರೆಸಲು ಸಾಧ್ಯವಾಗದೆ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಇಬ್ಬರು ಸಹೋದರಿಯರ ಎತ್ತರ ಎರಡರಿಂದ ಮೂರು ಅಡಿ ಮಾತ್ರ. ಎಲ್ಲರಂತೆ ಕೈ, ಕಾಲು ಹಾಗೂ ಮುಖವಿದ್ದು, ಚನ್ನಾಗಿ ಮಾತಾಡುತ್ತಾರೆ. ಆದರೆ, ಎತ್ತರ ಇಲ್ಲದಿರುವುದೇ ಇವರ ಬದುಕಿಗೆ ಮುಳುವಾಗಿದೆ. ಹೀಗಾಗಿ ದುಡಿದು ತಿನ್ನುವುದು ದೂರದ ಮಾತು. ತಮ್ಮ ಶರೀರ ತಮಗೆ ಭಾರವಾಗಿದೆ. ಮನೆಯಲ್ಲೇ ಓಡಾಡಲು, ಶೌಚಾಲಯಕ್ಕೆ ತೆರಳುವುದು ಕಷ್ಟ. ಹೀಗಾಗಿ ಶಾಂತಾ ಎಂಬುವವರು ಎಸ್‌ಎಸ್‌ಎಲ್‌ಸಿ ಪೂರೈಸಿದ್ದಾರೆ, ಇನ್ನು ಹಿರಿಯ ಸಹೋದರಿ ಚಂದ್ರಕಲಾ ಎಂಬುವವರು 5ನೇ ತರಗತಿವರೆಗೆ ಓದಿ ಶಾಲೆ ಬಿಟ್ಟಿದ್ದಾರೆ. ಇಬ್ಬರು ಮನೆಯ ಸಣ್ಣಪುಟ್ಟ ಕೆಲಸಗಳಿಗೆ ಪೋಷಕರಿಗೆ ನೆರವಾಗುತ್ತಾರೆ.

ʼಪೋಷಕರ ದುಡಿಮೆ, ಪಡಿತರ ಅಕ್ಕಿಯೇ ಬದುಕಿಗೆ ಮೂಲ ಆಧಾರ. ಅದನ್ನು ಬಿಟ್ಟು ನಮಗೆ ಬೇರೆ ಯಾವುದೇ ಸಹಾಯ ಇಲ್ಲ. ಈ ಹಿಂದೆ ತಂದೆ-ತಾಯಿ ದುಡಿದ ಹಣದಿಂದ ಎರಡು ಸಣ್ಣ ಕೋಣೆ ಕಟ್ಟಿಸಿದ್ದಾರೆ. ನಮ್ಮ ಅಂಗವಿಕಲ ಮಾಸಾಶನ ಮಂಜೂರು ಹಾಗೂ ಮಾಶಾಸನ ಹೆಚ್ಚಿಸಲು ನಮ್ಮ ಪರವಾಗಿ ಕೇಳುವವರು ಯಾರೂ ಇಲ್ಲ. ಹೀಗಾಗಿ ಇರುವುದರಲ್ಲೇ ಹೇಗೋ ಜೀವನ ಮಾಡುತ್ತಿದ್ದೇವೆ. ನಮ್ಮಂಥವರಿಗೆ ದೇವರು ಹುಟ್ಟಿಸಬಾರದಿತ್ತುʼ ಎಂದು ಸಹೋದರಿಯರು ಕಣ್ಣೀರು ಹಾಕಿದರು.
ಮಾಶಾಸನದಿಂದ ವಂಚನೆ :
ʼಇಬ್ಬರು ಅಂಗವಿಕಲ ಸಹೋದರಿಯರ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಬೇಕು. ಪೂರ್ಣ ಪ್ರಮಾಣದ ಅಂಗವಿಕಲರಿದ್ದರೂ ಮಾಶಾಸನದಿಂದ ವಂಚಿಸಲಾಗಿದೆ. ಯಾವುದೇ ಕೆಲಸ ಮಾಡದ ಸ್ಥಿತಿಯಲ್ಲಿರುವ ಅವರ ಸಂಕಷ್ಟಕ್ಕೆ ಅಂಗವಿಕಲರ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಾನವೀಯತೆ ತೋರಿ ಮುತುವರ್ಜಿ ವಹಿಸಿ, ಕೂಡಲೇ ಮಾಶಾಸನ ಸೇರಿದಂತೆ ಇತರೆ ಸೌಲಭ್ಯ ಒದಗಿಸಿ, ಅವರ ಕುಟುಂಬಕ್ಕೆ ನೆರವಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ʼನಮ್ಮಇಬ್ಬರೂ ಅಕ್ಕತಂಗಿಯರಿಗೆ ತಿಂಗಳಿಗೆ ₹1,400 ರೂಪಾಯಿ ಬಂದ್ರೆ ಬದುಕಿಗೆ ಆಸರೆ ಆಗುತ್ತೆ. ಮಹಾರಾಷ್ಟ್ರದ ಗಡಿಯೊಂದಿಗೆ ಹಂಚಿಕೊಂಡಿರುವ ಈ ಪುಟ್ಟ ಗ್ರಾಮದಲ್ಲಿ ಬಹುತೇಕರು ಮರಾಠಿ ಭಾಷಿಕರು. ಹೀಗಾಗಿ ಎಲ್ಲಾದರೂ ಹೊರಗಡೆ ಹೋದ್ರೆ ಭಾಷೆ ಸಮಸ್ಯೆ ಕೂಡ ಕಾಡುತ್ತಿರುವ ಬಗ್ಗೆ ತಿಳಿಸಿದ ಅವರು, ನಮಗೆ ತ್ರಿಚಕ್ರ ವಾಹನ, ಏನಾದರೂ ಉದ್ಯೋಗ ಕೊಟ್ರೆ ನಾವು ಸ್ವಾವಲಂಬಿಯಾಗಿ ಜೀವನ ನಡೆಸಲು ಅನುಕೂಲವಾಗುತ್ತದೆʼ ಎಂದು ಅಂಗವಿಕಲ ಸಹೋದರಿಯರ ಪೈಕಿ ಕಿರಿಯವರಾದ ಶಾಂತ ಮನವಿ ಮಾಡುತ್ತಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ
ಈ ಬಗ್ಗೆ ಹುಲಸೂರ ತಾಲೂಕು ತಹಸೀಲ್ದಾರ್ ಶಿವಾನಂದ ಮೇತ್ರೆ ʼಈದಿನʼ ಜೊತೆ ಮಾತನಾಡಿ, ʼವಾಂಜರವಾಡಿ ಗ್ರಾಮದ ಸಹೋದರಿಯರಿಬ್ಬರು ಪೂರ್ಣ ಪ್ರಮಾಣದ ಅಂಗವೈಕಲ್ಯ ಇರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕುಟುಂಬಕ್ಕೆ ಭೇಟಿ ನೀಡುತ್ತೇವೆ. ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಅವರಿಗೆ ವೈದ್ಯಕೀಯ ಪ್ರಮಾಣ ಪತ್ರ ಕೊಡಿಸಿ, ಮಾಸಿಕ ವೇತನ ₹1,400 ಮಂಜೂರಾತಿ ಸೇರಿ ಇತರೆ ಸರ್ಕಾರಿ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇವೆʼ ಎಂದು ತಿಳಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.