ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ ಮೋದಿ ಜೊತೆ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಅವರೂ ಕೂಡ, ರಷ್ಯಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುವಂತೆ ಒತ್ತಡ ಹಾಕಿದ್ದಾರೆ.
ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳ ಖರೀದಿಯನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಸರಕುಗಳ ಮೇಲೆ 25% ಆಮದು ಸುಂಕ ಮತ್ತು 25% ದಂಡ (ಒಟ್ಟು 50%) ತೆರಿಗೆ ವಿಧಿಸಿದ್ದಾರೆ. ಭಾರತವು ರಷ್ಯಾ ಜೊತೆಗಿನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಭಾರತ ಸರ್ಕಾರ ಈವರೆಗೆ ಯಾವುದೇ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿಲ್ಲ. ಈ ನಡುವೆ, ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ ಮೋದಿ ಜೊತೆ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಅವರೂ ಕೂಡ, ರಷ್ಯಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುವಂತೆ ಒತ್ತಡ ಹಾಕಿದ್ದಾರೆ ಎಂದು ವರದಿಯಾಗಿದೆ.
ಕಳೆದ ಮೂರು ವರ್ಷಗಳಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಿದೆ. ಅಮೆರಿಕ ನೇತೃತ್ವದ ‘ನ್ಯಾಟೋ’ ಸೇರುವ ನಿರ್ಧಾರದಿಂದ ಉಕ್ರೇನ್ ಹೊರಬರಬೇಕು ಎಂದು ಉಕ್ರೇನ್‌ಗೆ ರಷ್ಯಾ ಬೆದರಿಕೆ ಹಾಕಿದೆ. ಇದೇ ಕಾರಣಕ್ಕಾಗಿ ದಾಳಿ ನಡೆಸುತ್ತಿದೆ. ಸಂಘರ್ಷದಲ್ಲಿರುವ ರಷ್ಯಾ-ಉಕ್ರೇನ್ ನಡುವೆ ಕದನ ವಿರಾಮ ಘೋಷಿಸಲು ಕ್ರಮ ಕೈಗೊಳ್ಳುತ್ತೇವೆಂದು ಅಮೆರಿಕ ಹೇಳುತ್ತಿದ್ದರೂ, ಈವರೆಗೆ ಕದನ ವಿರಾಮ ಘೋಷಿಸಲು ಸಾಧ್ಯವಾಗಿಲ್ಲ. ಆದಾಗ್ಯೂ, ರಷ್ಯಾಗೆ ಹಲವು ರಾಷ್ಟ್ರಗಳು ವ್ಯಾಪಾರ ನಿರ್ಬಂಧ ವಿಧಿಸಿವೆ. ಆದರೆ, ಯುರೋಪಿಯನ್ ಒಕ್ಕೂಟ, ಚೀನಾ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ರಷ್ಯಾ ಜೊತೆ ತೈಲ ಖರೀದಿ ವ್ಯವಹಾರ ನಡೆಸುತ್ತಿವೆ.
ಉಕ್ರೇನ್ ಮೇಲಿನ ಆಕ್ರಮಣದ ನಂತರ, ಭಾರತವು ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಲ್ಲಿ ಒಂದಾಗಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ (CREA)ದ ಮಾಹಿತಿಯ ಪ್ರಕಾರ, 2022ರ ಡಿಸೆಂಬರ್‌ನಿಂದ 2025ರ ಜೂನ್‌ವರೆಗೆ ರಷ್ಯಾದಿಂದ ರಫ್ತಾಗಿರುವ ಇಂಧನದಲ್ಲಿ 38% ಇಂಧನ, 19% ಕಲ್ಲಿದ್ದಲನ್ನು ಭಾರತವು ಖರೀದಿಸಿದೆ.
ರಷ್ಯಾ ಜೊತೆ ವ್ಯಾಪಾರ ಸಂಬಂಧ ಹೊಂದಿರುವ ಕಾರಣಕ್ಕಾಗಿಯೇ ಭಾರತದ ಮೇಲೆ ಸುಂಕ-ದಂಡ ವಿಧಿಸುತ್ತಿರುವುದಾಗಿ ಆಗಸ್ಟ್ 6 ರಂದು ಘೋಷಿಸಿದ ಟ್ರಂಪ್, ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ 25% ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಹೀಗಾಗಿ, ಅಮೆರಿಕದಲ್ಲಿ ಆಮದಾಗುವ ಭಾರತೀಯ ಸರಕುಗಳ ಮೇಲೆ ಒಟ್ಟು 50% ಸುಂಕ ವಿಧಿಸಲಾಗುತ್ತಿದೆ. ಈ ಸುಂಕವನ್ನು ಭಾರತವು ‘ಅನ್ಯಾಯ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ’ ಎಂದು ಬಣ್ಣಿಸಿದೆ.
ಆದರೆ, ನ್ಯಾಟೋ ಜೊತೆಗಿರುವ ಅನೇಕ ರಾಷ್ಟ್ರಗಳು ಕೂಡ ರಷ್ಯಾ ಜೊತೆ ವಹಿವಾಟು ನಡೆಸುತ್ತಿದ್ದರೂ, ಅವುಗಳ ಮೇಲೆ ನ್ಯಾಟೋ ಆಗಲೀ, ಅಮೆರಿಕ ಆಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ಭಾರತವು ಕೂಡ ಯಾರ ಮೇಲೂ ಇಲ್ಲದ ಸುಂಕ ಹೇರಿಕೆ, ನಮ್ಮ ಮೇಲೇಯೇ ಎಂದು ಪ್ರಶ್ನಿಸುತ್ತಿದೆ.
ಈ ನಡುವೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಮೋದಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ, ಯುದ್ಧ ಪೀಡಿತ ಜಪೋರಿಝಿಯಾದಲ್ಲಿನ ಬಸ್ ನಿಲ್ದಾಣ ಸೇರಿದಂತೆ ಉಕ್ರೇನ್‌ನ ಹಲವು ನಗರಗಳ ಮೇಲೆ ಇತ್ತೀಚೆಗೆ ರಷ್ಯಾ ದಾಳಿ ಮಾಡಿದೆ. ಹಲವರು ಸಾವನ್ನಪ್ಪಿರುವ ಕುರಿತು ಮೋದಿ ಅವರ ಗಮನಕ್ಕೆ ತಂದಿರುವುದಾಗಿ ಝೆಲೆನ್ಸ್ಕಿ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ
“ಈ ಯುದ್ಧದ ಮುಂದುವರಿಕೆಗೆ ತೈಲ ಮಾರಾಟದಿಂದ ರಷ್ಯಾಗೆ ಹಣಕಾಸು ದೊರೆಯುತ್ತಿದೆ. ಅದರ ಸಾಮರ್ಥ್ಯವನ್ನು ಕಡಿಮೆ ಮಾಡಲು ರಷ್ಯಾದ ಇಂಧನ, ವಿಶೇಷವಾಗಿ ತೈಲದ ರಫ್ತನ್ನು ಮಿತಿಗೊಳಿಸುವುದು ಅವಶ್ಯಕ. ಹೀಗಾಗಿ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸುವಂತೆ ಕೇಳಲಾಗಿದೆ” ಎಂದು ಝೆಲೆನ್ಸ್ಕಿ ಹೇಳಿಕೊಂಡಿದ್ದಾರೆ.
ಅಂದಹಾಗೆ, ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ರಷ್ಯಾ-ಅಮೆರಿಕ ಸಂಬಂಧಗಳ ಕುರಿತಾಗಿ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವೆ ಸಭೆ ನಡೆಯಲಿದೆ. ಆ ಸಭೆಗೂ ಮುನ್ನ ಝೆಲೆನ್ಸ್ಕಿ ಅವರು ಮೋದಿ ಜೊತೆ ಮಾತನಾಡಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧವು ಉದ್ವಿಗ್ನಗೊಂಡಿರುವ ಕಾರಣದಿಂದಾಗಿ, ಈ ಕರೆ ಬಂದಿದೆ ಎಂದು ಹೇಳಲಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ನೆರವಾಗುವುದಾಗಿ ಭಾರತ ಭರವಸೆ ನೀಡಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ಮೋದಿ ಅವರು ಉಕ್ರೇನ್-ರಷ್ಯಾ ನಡುವಿನ ಸಂಘರ್ಷದ ಶಾಂತಿಯುತ ಇತ್ಯರ್ಥಕ್ಕಾಗಿ ಭಾರತದ ದೃಢ ಮತ್ತು ಸ್ಥಿರವಾದ ನಿಲುವನ್ನು ಪುನರುಚ್ಚರಿಸಿದ್ದಾರೆ. ಕದನ ವಿರಾಮದ ವಿಷಯದಲ್ಲಿ ಎಲ್ಲ ಸಂಭಾವ್ಯ ಬೆಂಬಲವನ್ನು ನೀಡುವುದಾಗಿ ಸೂಚಿಸಿದ್ದಾರೆ.