ಕಾಂಗ್ರೆಸ್ ವಿರೋಧ ಹೇಳಿಕೆ ನೀಡಿದ ಬೆನ್ನಲ್ಲೇ ಸಹಕಾರ ಸಚಿವ ಸ್ಥಾನದಿಂದ ಕೆ ಎನ್ ರಾಜಣ್ಣ ಅವರನ್ನು ವಜಾಗೊಳಿಸಲಾಗಿದೆ. ರಾಜಣ್ಣ ವಜಾ ವಿರುದ್ಧ ಅವರ ಮಧುಗಿರಿಯಲ್ಲಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ವೇಳೆ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇತ್ತೀಚೆಗೆ ಮತ ಕಳವು ವಿಚಾರದಲ್ಲಿ ಹೇಳಿಕೆ ನೀಡಿದ್ದ ರಾಜಣ್ಣ ಅವರು ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮತ ಕಳ್ಳತನವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಹೈಕಮಾಂಡ್ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಬಳಿಕ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಕೆ ಎನ್ ರಾಜಣ್ಣ ವಜಾ ನನಗೂ ನೋವಾಗಿದೆ, ಇದು ಪಕ್ಷದ ತೀರ್ಮಾನ: ಡಿಸಿಎಂ ಡಿ ಕೆ ಶಿವಕುಮಾರ್
ಈ ವಿಚಾರದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕೆ ಎನ್ ರಾಜಣ್ಣ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಣ್ಣ ಫೋಟೋ ಹಿಡಿದು ಪ್ರತಿಭಟನೆ ನಡೆಸಿರುವ ಬೆಂಬಲಿಗರು ಬಸ್‌ಗಳನ್ನೂ ತಡೆದಿದ್ದಾರೆ.
ಇನ್ನು ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜಣ್ಣ ಬೆಂಬಲಿಗರು, ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಬಟ್ಟೆಯಂಗಡಿಯ ಹೊರಗಿರುವ ಬಟ್ಟೆಗಳನ್ನು ಎಳೆದೆಸೆದಿದ್ದಾರೆ. ಈ ಸಂದರ್ಭದಲ್ಲೇ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ತಡೆಯಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
