ಶಿವಮೊಗ್ಗ, ಇಂದು 156ನೇ ವಿಧಾನ ಮಂಡಲ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಮಾನ್ಯ ವಿಧಾನ ಪರಿಷತ್ ಶಾಸಕರು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ರವರು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮ್ಮ ಹೋರಾಟದ ಫಲವಾಗಿ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ನವೀಕರಣವನ್ನು 5 ವರ್ಷಕ್ಕೊಮ್ಮೆ ಮಾಡುವಂತೆ ಮಹತ್ವದ ತಿದ್ದುಪಡಿ ತರಲಾಗಿತ್ತು.
ಇದರಿಂದ ಸಾವಿರಾರು ವ್ಯಾಪಾರಿಗಳಿಗೆ ಮರು ನವೀಕರಣದ ಹೊರೆ ಕಡಿಮೆಯಾದಿತ್ತು. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಈ ತಿದ್ದುಪಡಿಯನ್ನು ಜಾರಿಗೊಳಿಸದೇ, ವ್ಯಾಪಾರಿಗಳಿಗೆ ಮತ್ತೆ ಹಳೆಯ ತೊಂದರೆಗಳನ್ನು ಎದುರಿಸುವ ಪರಿಸ್ಥಿತಿ ಉಂಟುಮಾಡಿದೆ ಎಂದು ನಗರ ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ್ ರವರ ಬಳಿ ವಿಷಯ ಪ್ರಸ್ತಾಪಿಸಿದರು.
ಮುಂದುವರೆದು ಶಾಸಕರು ತಮ್ಮ ಹಿಂದಿನ ಅಧಿವೇಶನದ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರದಲ್ಲಿ ವ್ಯಾಪಾರ ಪರವಾನಗಿ ಶುಲ್ಕವನ್ನು ಆನ್‌ಲೈನ್ ಮೂಲಕ ವಸೂಲು ಮಾಡುವ ಭರವಸೆ ನೀಡಲಾಗಿತ್ತು. ಸಚಿವರು ಸ್ವತಃ ಈ ಪ್ರಕ್ರಿಯೆಯನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಆದರೆ ಇಂದಿಗೂ ಭರವಸೆ ಖಾಲಿ ಮಾತಾಗಿ ಉಳಿದಿದೆ ಎಂದು ಆರೋಪಿಸಿದರು.
ಪ್ರಸ್ತುತ, ವ್ಯಾಪಾರ ಪರವಾನಗಿ ನೀಡುವಲ್ಲಿ ಭ್ರಷ್ಟಾಚಾರ ದಿನೇದಿನೇ ಹೆಚ್ಚುತ್ತಿರುವುದರ ಜೊತೆಗೆ ಅತಿಯಾದ ವಿಳಂಬದಿಂದ ರಾಜ್ಯದ ಉದ್ಯಮಿಗಳು ಮತ್ತು ವ್ಯಾಪಾರಿಗಳು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ. ಲೈಸೆನ್ಸ್ ಶುಲ್ಕದಲ್ಲಿ ಪ್ರದೇಶಾನುಸಾರ ಇರುವ ಅಸಮತೆ ಬಗ್ಗೆ ಡಿ. ಎಸ್.ಅರುಣ್ ಅವರು ಸಚಿವರನ್ನು ಪ್ರಶ್ನಿಸಿದಾಗ, ಸ್ಥಳೀಯತೆಯನ್ನು ಪರಿಗಣಿಸಿ ವ್ಯಾಪಾರಿಗಳಿಗೆ ಹೆಚ್ಚುವರಿ ಭಾರವಾಗದಂತೆ ಶೀಘ್ರದಲ್ಲೇ ತಿದ್ದುಪಡಿ ತರಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.
ವ್ಯಾಪಾರಿಗಳ ಜೀವನ ಸುಗಮಗೊಳಿಸಲು, ಭ್ರಷ್ಟಾಚಾರ ಮತ್ತು ವಿಳಂಬದ ಜಾಲದಿಂದ ಅವರನ್ನು ಬಿಡಿಸಲು ವ್ಯಾಪಾರ ಪರವಾನಗಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸುವುದೇ ಏಕೈಕ ಪರಿಹಾರ ಎಂದು ಶಾಸಕರಾದ ಡಿ.ಎಸ್.ಅರುಣ್ ರವರು ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದ್ದಾರೆ.