ಗುಜರಾತ್ನ ಸೌರಾಷ್ಟ್ರ ಪ್ರದೇಶದಲ್ಲಿ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕೆಲಸದಲ್ಲಿ ತೊಡಗಿದ್ದ ಸುಮಾರು 1 ಲಕ್ಷ ಕಾರ್ಮಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಉದ್ಯೋಗ ನಷ್ಟಕ್ಕೆ ಭಾರತದ ಮೇಲೆ ಟ್ರಂಪ್ ಹೇರಿರುವ ಭಾರೀ ಸುಂಕವೇ ಪ್ರಧಾನ ಕಾರಣವಾಗಿದೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿ ಟ್ರಂಪ್ 2ನೇ ಬಾರಿಗೆ ಅಧಿಕಾರಕ್ಕೆ ಬರುವ ಮುನ್ನ ಭಾರತದ ಸರಕುಗಳ ಮೇಲೆ ಅಮೆರಿಕವು ಗರಿಷ್ಠ 10%ವರೆಗೆ ಸುಂಕವನ್ನು ವಿಧಿಸುತ್ತಿತ್ತು. ಆದರೆ, ಟ್ರಂಪ್ ಅಧ್ಯಕ್ಷರಾದ ಬಳಿಕ, ಭಾರತದ ಮೇಲೆ ಭಾರೀ ಸುಂಕ ಹೊರೆ ಹೇರಿದ್ದಾರೆ. ಏಪ್ರಿಲ್ 2ರಂದು ಮೊದಲ ಬಾರಿಗೆ ಸುಂಕ ಹೆಚ್ಚಿಸಿದ ಟ್ರಂಪ್, ಭಾರತದ ಮೇಲೆ 26% ಸುಂಕ ವಿಧಿಸಿದ್ದರು. ಬಳಿಕ, ಆಗಸ್ಟ್ 6ರಂದು 25% ಸುಂಕ ಮತ್ತು 25% ದಂಡವಾಗಿ ಒಟ್ಟು 50% ಸುಂಕವನ್ನು ನಿಗದಿ ಮಾಡಿದ್ದಾರೆ. ಇದು ಭಾರತದ ಹಲವಾರು ಉದ್ಯಮ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ವಜ್ರ ವ್ಯಾಪಾರದ ಮೇಲೂ ಪರಿಣಾಮ ಬೀರಿದ್ದು, ಸೌರಾಷ್ಟ್ರ ಪ್ರದೇಶದಲ್ಲಿಯೇ 1 ಲಕ್ಷ ವಜ್ರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.
ಅಮೆರಿಕವು ಸುಂಕವನ್ನು ಹೆಚ್ಚಿಸಿದ ಬಳಿಕ, ಅಮೆರಿಕದಿಂದ ವಜ್ರಕ್ಕಾಗಿನ ಬೇಡಿಕೆ ಸ್ಥಗಿತಗೊಂಡಿದೆ. ಅಮೆರಿಕದ ಕಂಪನಿಗಳು ವಜ್ರಕ್ಕೆ ಆರ್ಡರ್ ಕೊಡುತ್ತಿಲ್ಲ. ವಜ್ರ ಉದ್ಯಮದಲ್ಲಿ ತೊಡಗಿರುವ ಸೌರಾಷ್ಟ್ರದ ಭಾವನಗರ, ಅಮ್ರೇಲಿ ಮತ್ತು ಜುನಾಗಢದಲ್ಲಿರುವ ಸಣ್ಣ ಘಟಕಗಳು ಗಂಭೀರ ಸಮಸ್ಯೆಗೆ ಸಿಲುಕಿವೆ. ಹೀಗಾಗಿ, ಲಕ್ಷಾಂತರ ಮಂದಿ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಗುಜರಾತ್ನ ಡೈಮಂಡ್ ವರ್ಕರ್ಸ್ ಯೂನಿಯನ್ (ಡಿಡಬ್ಲ್ಯೂಯು) ಉಪಾಧ್ಯಕ್ಷ ಭವೇಶ್ ಟ್ಯಾಂಕ್ ಹೇಳಿದ್ದಾರೆ.
ರತ್ನಗಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿಯ (GJEPC) ದತ್ತಾಂಶದ ಪ್ರಕಾರ, 2024ರಲ್ಲಿ ಅಮೆರಿಕದ ಒಟ್ಟು ವಜ್ರ ಆಮದಿನಲ್ಲಿ 68% ಮತ್ತು ಮೌಲ್ಯದಲ್ಲಿ 42%ರಷ್ಟು ($5.79 ಶತಕೋಟಿ) ಪಾಲು ಭಾರತದ್ದಾಗಿತ್ತು. ಆದರೆ, ಈ ವರ್ಷ ಅಮೆರಿಕದ ಆಮದು ಪಾಲಿನಲ್ಲಿ ಭಾರತದ ಕೊಡುಗೆ ತೀವ್ರವಾಗಿ ಕುಸಿಯುತ್ತಿದೆ. 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ $3671.33 ಮಿಲಿಯನ್ ಕತ್ತರಿಸಿದ ಮತ್ತು ಹೊಳಪು ಮಾಡಿದ ವಜ್ರಗಳನ್ನು ಅಮೆರಿಕಗೆ ರಫ್ತು ಮಾಡಲಾಗಿದೆ. ಇದು, ಹಿಂದಿನ ವರ್ಷದ ತ್ರೈಮಾಸಿಕಕ್ಕೆ ($2837.29 ಮಿಲಿಯನ್) ಹೋಲಿಸಿದರೆ 22.72%ನಷ್ಟು ಕುಸಿತವಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ
ಒಟ್ಟು ರಫ್ತಿನಲ್ಲಿ 22%ಕ್ಕಿಂತ ಹೆಚ್ಚು ಕುಸಿತವು ವಜ್ರ ಉದ್ಯಮದ ಮೇಲೆ ಪರಿಣಾಮ ಬೀರಿದೆ. ವಜ್ರವನ್ನು ಕತ್ತರಿಸುವುದು ಮತ್ತು ಹೊಳಪು ನೀಡುವ ಕೆಲಸಗಳು ಇಲ್ಲದಂತಾಗಿವೆ. ಈ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಾಸಿಕ 15,000ದಿಂದ 20,000 ರೂ. ವೇತನ ಪಡೆಯುತ್ತಿದ್ದರು. ಆದರೆ, ಈಗ ಅವರು ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಅವರ ಭವಿಷ್ಯ ಅನಿಶ್ಚಿತವಾಗಿದೆ.
“ಯುಎಸ್ ನಮ್ಮ ಏಕೈಕ ಅತಿದೊಡ್ಡ ವಜ್ರದ ಮಾರುಕಟ್ಟೆಯಾಗಿದೆ. ರಫ್ತುಗಳಲ್ಲಿ $10 ಬಿಲಿಯನ್ಗಿಂತಲೂ ಹೆಚ್ಚು ಪಾಲನ್ನು ಹೊಂದಿದೆ. ಇದು ನಮ್ಮ ಉದ್ಯಮದ ಒಟ್ಟು ಜಾಗತಿಕ ವ್ಯಾಪಾರದಲ್ಲಿ ಸುಮಾರು 30% ಆಗಿದೆ. ಈಗ ಅಮೆರಿಕದ ಭಾರೀ ಸುಂಕವು ವಜ್ರ ಉದ್ಯಮಕ್ಕೆ ತೀವ್ರ ವಿನಾಶಕಾರಿಯಾಗಿ ಪರಿಣಮಿಸಿದೆ” ಎಂದು GEJPC ಅಧ್ಯಕ್ಷ ಕಿರಿತ್ ಬನ್ಸಾಲಿ ಹೇಳಿದ್ದಾರೆ.