ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮ, ತಾಲೂಕು ಕೇಂದ್ರದಿಂದ ಕೇವಲ 6 ಕಿಮೀ ಮತ್ತು ರಾಜ್ಯ ಹೆದ್ದಾರಿಯಿಂದ 1.5 ಕಿಮೀ ದೂರದಲ್ಲಿದ್ದರೂ, ರಸ್ತೆಗಳ ದುರವಸ್ಥೆ ಹೇಳತೀರದು. 6,000ಕ್ಕಿಂತಲೂ ಅಧಿಕ ಜನಸಂಖ್ಯೆಯ ಪೈಕಿ 4,000ಕ್ಕೂ ಅಧಿಕ ಮತದಾರರು, ಪದವಿ ಪೂರ್ವ ಕಾಲೇಜು, ಶಾಲೆ, ಬ್ಯಾಂಕ್ ಮತ್ತು ಗ್ರಾಮ ಪಂಚಾಯಿತಿ ಕೇಂದ್ರವಿರುವ ಈ ಗ್ರಾಮದ ಸಂಪರ್ಕ ರಸ್ತೆಗಳು ಕೆಸರು ಗದ್ದೆಯಂತಿವೆ. ವಾಹನ ಸವಾರರು, ಎತ್ತಿನಗಾಡಿಗಳು ಮತ್ತು ರೈತರು ರಸ್ತೆ ಗುಂಡಿಗಳಿಂದ ತೊಡಕು ಅನುಭವಿಸುತ್ತಿದ್ದಾರೆ.
ಮಾಜಿ ಶಾಸಕ ಡಾ. ಕೆ ಅನ್ನದಾನಿ ಕಾಲಾವಧಿಯಲ್ಲಿ ರಸ್ತೆಗಳಿಗೆ ಯಾವುದೇ ಅಭಿವೃದ್ಧಿ ಕಾಣದಿರುವುದರಿಂದ ಗ್ರಾಮಸ್ಥರು 2023ರ ಚುನಾವಣೆಯಲ್ಲಿ ಹಾಲಿ ಶಾಸಕ ಪಿ. ನರೇಂದ್ರಸ್ವಾಮಿಯವರಿಗೆ 600 ಮತಗಳ ಲೀಡ್ ನೀಡಿ ಗೆಲ್ಲಿಸಿದರು. ಆದರೆ, ಎರಡು ವರ್ಷಗಳಾದರೂ ರಸ್ತೆಗಳ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ. ಕಾಗೇಪುರ-ತಳಗವಾದಿ-ದೇವಿಪುರ ರಸ್ತೆಗೆ ಗುದ್ದಲಿ ಪೂಜೆ ನಡೆದರೂ ಕಾಮಗಾರಿ ಆರಂಭವಾಗಿಲ್ಲ. ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳಿನಿಂದ ಗ್ರಾಮಸ್ಥರಿಗೆ ಕರಾಳತೆ ಎದುರಾಗಿದೆ.

“ಹೊಸ ರೋಡು, ಕಾಗೇಪುರ, ದುಗ್ಗನಹಳ್ಳಿ, ಮಾದಹಳ್ಳಿ ಮತ್ತು ದೇವಿಪುರ ಮಾರ್ಗದ ರಸ್ತೆಗಳೆಲ್ಲವೂ ಶೋಚನೀಯ ಸ್ಥಿತಿಯಲ್ಲಿವೆ. ಧೂಳಿನಿಂದ ಬೆಳೆಗಳಿಗೆ ಹಾನಿಯಾಗುತ್ತಿದ್ದು, ರೇಷ್ಮೆ ಬೆಳೆಗಾರರು ಕಣ್ಣೀರಿನ ಜತೆಗೆ ಹಣಕಾಸು ನಷ್ಟವನ್ನು ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳ ರಾಜಕೀಯ ದೊಂಬರಾಟ ಮತ್ತು ನಿರ್ಲಕ್ಷ್ಯದಿಂದ ಏಳಿಗೆ ಕುಂಠಿತವಾಗಿದೆ” ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಗುದ್ದಲಿ ಪೂಜೆಯಾಗಿ ವರ್ಷ ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ: ಸ್ಥಳೀಯರ ಆಕ್ರೋಶ
“ಗ್ರಾಮಸ್ಥರು ಜನಪ್ರತಿನಿಧಿಗಳನ್ನು ತಮ್ಮ ಸೇವಕರಾಗಿ ಆಯ್ಕೆ ಮಾಡಿಕೊಂಡಿರುವುದು, ರಾಜ-ಮಹಾರಾಜರಂತೆ ವರ್ತಿಸಲು ಅಲ್ಲ ಎಂಬುದ ಪ್ರಶ್ನಿಸುವ ಧೈರ್ಯ ತೋರಬೇಕಿದೆ. ರಾಜಕೀಯ ವೈಮನಸ್ಸಿಗೆ ಗ್ರಾಮದ ಏಳಿಗೆಯನ್ನು ಬಲಿಕೊಡದಂತೆ ಜನಪ್ರತಿನಿಧಿಗಳಿಗೆ” ಜನರ ಒತ್ತಾಯವಿದೆ.
