ಆಗಸ್ಟ್ 5ರಂದು ಉತ್ತರಪ್ರದೇಶದ ಉತ್ತರಕಾಶಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾದ 43 ಮಂದಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ ಎಂದು ಉತ್ತರಾಖಂಡ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ. 43 ಮಂದಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿನಯಶಂಕರ ಪಾಂಡೆ “ಧಾರಾಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಅವಶೇಷಗಳ ಅಡಿ ಸಿಲುಕಿರುವವರ ಪತ್ತೆ ಮಾಡುವುದು ಜಿಲ್ಲಾಡಳಿತದ ಮೊದಲ ಆದ್ಯತೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ, ಇಂಡೋ ಟಿಬೆಟಿಯನ್ ಗಡಿ ಪೊಲೀಸ್, ಭೂಗರ್ಭಶಾಸ್ತ್ರಜ್ಞರ ತಂಡಗಳು ಜಂಟಿಯಾಗಿ ವಿಪತ್ತು ಪ್ರದೇಶದಲ್ಲಿ ಶೋಧ ಕಾರ್ಯ ನಿರ್ವಹಿಸುತ್ತಿವೆ” ಎಂದರು.
ಇದನ್ನು ಓದಿದ್ದೀರಾ? ಉತ್ತರಕಾಶಿಯಲ್ಲಿ ಪ್ರವಾಹ: 100ಕ್ಕೂ ಹೆಚ್ಚು ಮಂದಿ ನಾಪತ್ತೆ
“ಕಾಣೆಯಾಗಿರುವ 43 ಮಂದಿಯಲ್ಲಿ ಒಂಬತ್ತು ಸೇನಾ ಸಿಬ್ಬಂದಿ, ಎಂಟು ಮಂದಿ ಧಾರಾಲಿ ಸ್ಥಳೀಯರು, ಐದು ಮಂದಿ ನೆರೆಯ ಗ್ರಾಮಸ್ಥರು ಹಾಗೂ ತೆಹ್ರಿ, ಬಿಹಾರ, ಉತ್ತರಪ್ರದೇಶ ಮತ್ತು ನೇಪಾಳದ ಜನರೂ ಸೇರಿದ್ದಾರೆ” ಎಂದು ಹೇಳಿದ್ದಾರೆ.
“29 ಮಂದಿ ನೇಪಾಳಿ ಕಾರ್ಮಿಕರ ಪೈಕಿ ಐವರ ಸಂಪರ್ಕ ಸಾಧ್ಯವಾಗಿದೆ. ಆದರೆ ಉಳಿದವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಇಬ್ಬರ ಮೃತ ದೇಹವನ್ನು ಮಾತ್ರ ಹೊರತೆಗೆಯಲಾಗಿದೆ. ರಸ್ತೆಗಳಲ್ಲಿ ಬಿರುಕು ಮತ್ತು ಭೂ ಕುಸಿತ ಉಂಟಾಗಿರುವ ಪರಿಣಾಮವಾಗಿ ಕಾರ್ಯಾಚರಣೆ ನಡೆಸುವುದು ಸವಾಲಾಗಿದೆ” ಎಂದು ತಿಳಿಸಿದ್ದಾರೆ.
“ನಿರಾಶ್ರಿತರ ಪರಿಹಾರ ವಾಹನಗಳ ನಿಯಮಿತ ಸಂಚಾರ ಮತ್ತು 300 ಮಂದಿ ಮಾತ್ರವೇ ಧಾರಾಲಿಯಲ್ಲಿ ಉಳಿದಿದ್ದಾರೆ. ಉಳಿದ ಕುಟುಂಬಗಳನ್ನು ಉತ್ತರಕಾಶಿ ಮತ್ತು ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ. ಈವರೆಗೆ ಒಟ್ಟು 1,278 ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ಅದರಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಸೇರಿದ್ದಾರೆ” ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
