ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ನಿಯಮಾವಳಿಯಂತೆ ಕೆಲವು ಪಂಚಾಯತಿಗಳಲ್ಲಿ ಸರಿಯಾಗಿ ಕೆಲಸ ಕೊಟ್ಟಿರುವುದಿಲ್ಲ. ಅಲ್ಲದೇ ನೂರು ದಿನಗಳ ಸಂಪೂರ್ಣ ಕೆಲಸ ನೀಡಿರುವುದಿಲ್ಲ. ಪಂಚಾಯಿತಿಗಳಲ್ಲಿ ವಿವಿಧ ಸಮಸ್ಯೆಗಳಲ್ಲಿದ್ದು ಕನಿಷ್ಠ ನೂರು ದಿನಗಳ ಕೆಲಸ ಮತ್ತು ಸಮರ್ಪಕ ಕೂಲಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ- ಗ್ರಾಕೂಸ್ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು “ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಕೆರೆಕಲ್ಲಟ್ಟಿ, ದೊಡ್ಡೇರಿ, ಸಿದ್ದೇಶ್ವರನ ದುರ್ಗಾ, ದೇವರ ಮರಿಕುಂಟೆ, ಜಾಜೂರು ಪಂಚಾಯಿತಿ ಸೇರಿದಂತೆ ಜೆಜೆ ಕಾಲೋನಿ, ಬಸವೇಶ್ವರ ಕಾಲೋನಿ, ಅಲ್ಲಾಪುರ, ಬೊಮ್ಮನ ಕುಂಟೆ, ಗ್ರಾಮ ಪಂಚಾಯತಿಗಳಲ್ಲಿ ನಿರಂತರವಾಗಿ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕೆಲಸ ಬೇಕಾಗಿದ್ದು, ನಿರಂತರ ಕೆಲಸಕ್ಕೆ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶಿಸಬೇಕು” ಎಂದು ಒತ್ತಾಯಿಸಿದರು.

“ಬೊಮ್ಮನ ಕುಂಟೆ ಗ್ರಾಮದ ಕೂಲಿಕಾರರ ಕೆಲಸಕ್ಕೆ ಎನ್ ಎಂ ಆರ್ (NMR) ತೆಗೆದಿದ್ದು ಉದ್ಯೋಗ ಖಾತ್ರಿಯ ಕೆರೆಯ ಕೆಲಸಕ್ಕೆ ಹೋಗಲು ದಾರಿ ಇಲ್ಲದ್ದರಿಂದ ಅಕ್ಕಪಕ್ಕದ ಜಮೀನಿನವರು ಹೋಗಲು ದಾರಿ ಕೊಡುತ್ತಿಲ್ಲ. ಕೆಲಸಕ್ಕೆ ಕಾರ್ಮಿಕರು ತೆರಳಲು ಸಾಧ್ಯವಾಗಿಲ್ಲದಿರುವುದರಿಂದ ದಾರಿ ಕುರಿತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಲ್ಲದೇ ಕಾಮಸಮುದ್ರ ನಾಗಗೊಂಡನಹಳ್ಳಿ ಗ್ರಾಮ ಪಂಚಾಯತಿಯ ಕೂಲಿಕಾರ್ಮಿಕರಿಗೆ ‘ಸಮಸ್ಯೆ ಇದ್ದು ಕೆಲಸಕ್ಕೆ ಹೋಗಬೇಡಿ’ ಎಂದು ಪಂಚಾಯಿತಿ ಸಿಬ್ಬಂದಿಯೇ ತಿಳಿಸಿದ್ದಾರೆ. ಅಲ್ಲದೆ ನಮೂನೆ ಆರು ವಿತರಿಸಿ, ಕೆಲಸ ಕೊಟ್ಟಿರುವುದಿಲ್ಲ. ಸಿದ್ದೇಶ್ವರನ ದುರ್ಗಾ ಪಂಚಾಯತಿಯಲ್ಲಿ 3 ವಾರದ ಉದ್ಯೋಗ ಖಾತ್ರಿಯ ಕೂಲಿ ಹಣ ಬಾಕಿ ಇದ್ದು ಇದುವರೆಗೂ ಪಾವತಿ ಆಗಿರುವುದಿಲ್ಲ. ಈ ಎಲ್ಲ ಸಮಸ್ಯೆಗಳ ಬಗೆಹರಿಸಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಸಾಕಷ್ಟು ಆರ್ಥಿಕ ನೆರವು, ಬಲ ತುಂಬ ಯೋಜನೆಯಾಗಿದ್ದು ಚಳ್ಳಕೆರೆ ತಾಲೂಕಿನಲ್ಲಿ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಗ್ರಾಕೂಸ್ ಸಂಘಟನೆಯು ಚಳ್ಳಕೆರೆ ತಾಲೂಕಿನಲ್ಲಿ ಹಲವು ಹಳ್ಳಿಗಳಲ್ಲಿ ಭೇಟಿ ಮಾಡಿ ಬಡ ಕಾರ್ಮಿಕರ ಗುಂಪುಗಳನ್ನು ಮಾಡಿಸಿದೆ. ಕಾರ್ಮಿಕರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದು, ಕಾರ್ಮಿಕರಿಗೆ ನಿರಂತರವಾಗಿ ಕೆಲಸ ಕೊಡಬೇಕೆಂದು” ವಿನಂತಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶ್ರಮಿಕ ಶಕ್ತಿ ಸಂಯೋಜಿತ ಕಾಯಕಜೀವಿ ಕಟ್ಟಡ ಕಾರ್ಮಿಕ ಸಂಘಟನೆ ಘಟಕ ಉದ್ಘಾಟನೆ
“ಅಲ್ಲದೆ ಕೂಲಿ ಕಾರ್ಮಿಕರ ಬೇಡಿಕೆಗಳಾದ ಕಡ್ಡಾಯ ನೂರು ದಿನಗಳ ಕೆಲಸ ಮತ್ತು ಜಾಬ್ ಕಾರ್ಡ್ಗಳನ್ನು ಅನುಮತಿ ಇಲ್ಲದೆ ಬೇರೆಯವರು ಬಳಕೆ ಮಾಡಿದರೆ ಕೂಡಲೇ ಕ್ರಮ ಜರುಗಿಸಬೇಕು, ಕಾರ್ಮಿಕರಿಗೆ ಮಾತ್ರ ಜಾಬ್ ಕಾರ್ಡ್ ನೀಡಬೇಕು. ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಕೊಡಬೇಕು ಹಾಗೂ ನಿರಂತರವಾಗಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಅಲ್ಲದೇ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಇಂಜಿನಿಯರ್ ಬಿ ಎಫ್ ಟಿಗಳಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಹಿರಿಯ ಅಧಿಕಾರಿಗಳು ಮತ್ತು ತಾವು ಕಾಲಕಾಲಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎನ್ನುವ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ವೇಳೆ ಚಳ್ಳಕೆರೆ ಗ್ರಾಕೂಸ್ ಸಂಘಟನಾ ಸಂಚಾಲಕರಾದ ಮಂಜಮ್ಮ ಪರಶುರಾಂಪುರ,
ಸಂಧ್ಯಾ ಎಂಆರ್ ಸಿದ್ದೇಶ್ವರನದುರ್ಗ,
ಪರಮೇಶ್ ಬಿ ಜುಂಜರಗುಂಟೆ,
ತಿಪ್ಪೇಸ್ವಾಮಿ ಸಿ ಉಪ್ಪಾರಟ್ಟಿ ಸೇರಿದಂತೆ ಗ್ರಾಕೂಸ್ ಸಂಘಟನೆಯು ಕಾರ್ಯಕರ್ತರು ಪಾಲ್ಗೊಂಡಿದ್ದರು.