ಜೆಡಿಎಸ್ ಮುಖಂಡ ಹಾಗೂ ಮಾಜಿ ರೌಡಿಶೀಟರ್ ಅಪ್ಪು ಪಿ. ಗೌಡ ಎಂಬಾತನ ಮೇಲೆ ಆರು ಮಂದಿ ದುಷ್ಕರ್ಮಿಗಳು ಮಾರಣಾಂತಿಕ ದಾಳಿ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ.
ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ 9ರ ಸುಮಾರಿಗೆ ಭೇಟಿ ನೀಡಿದ್ದ ವೇಳೆ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಆರು ಮಂದಿ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಭುಜ ಹಾಗೂ ಬೆನ್ನಿಗೆ ಗಾಯಗೊಳಿಸಿದ್ದಾರೆ.
ಪ್ರತಿ ಶನಿವಾರ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದ ಅಪ್ಪುಗೌಡ ಇಂದೂ ಕೂಡ ದೇವಸ್ಥಾನಕ್ಕೆ ತೆರಳಿದ್ದರು. ಆತನ ಬರುವಿಕೆಯನ್ನು ತಿಳಿದಿದ್ದ ದುಷ್ಕರ್ಮಿಗಳು, ಹೊಂಚು ಹಾಕಿ ಕುಳಿತಿದ್ದರು. ದೇವಸ್ಥಾನಕ್ಕೆ ಪ್ರವೇಶಿಸಿ, ಕೈ ಮುಗಿಯುತ್ತಿದ್ದ ವೇಳೆ ಹಿಂದಿನಿಂದ ದಾಳಿ ಮಾಡಿದ್ದಾರೆ.
ದೇಗುಲದಲ್ಲಿದ್ದ ಭಕ್ತರು ಕೂಡಲೇ ಕೂಗಿಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಅಪ್ಪು ಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿದ್ದ ಅವರನ್ನು ಕೂಡಲೇ ಮದ್ದೂರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ವ್ಯಸನಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ: ಡಾ. ಶಶಿ ಪಾಟೀಲ
ಮಾರಣಾಂತಿಕ ದಾಳಿ ನಡೆಸಿ ಟಾಟಾ ಸುಮೋದಲ್ಲಿ ಪರಾರಿಯಾಗುತ್ತಿದ್ದ ಆರು ಮಂದಿ ದುರ್ಷರ್ಮಿಗಳ ಬೆನ್ನು ಹತ್ತಿದ ಪೋಲಿಸರು, ಮಳವಳ್ಳಿಯ ಹಲಗೂರು ಬಳಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.