ಅಧಿವೇಶನ | ಕಾಲ್ತುಳಿತ‌ ದುರಂತದಲ್ಲಿ ಸಿಎಂ, ಡಿಸಿಎಂ, ಗೃಹ ಸಚಿವರೇ ಎ1, ಎ2, ಎ3 ಆರೋಪಿಗಳು: ಆರ್‌ ಅಶೋಕ್

Date:

Advertisements

ಆರ್‌ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತ ದುರಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎ1, ಎ2, ಎ3 ಆರೋಪಿಗಳಾಗಿದ್ದಾರೆ. ಆದ್ದರಿಂದ ಎಲ್ಲರೂ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂವೇದನೆ ಇದ್ದರೆ, ರಾಜ್ಯದ ಜನರ ಕ್ಷಮೆ ಕೇಳಬೇಕು. ಇದರ ಸಂಪೂರ್ಣ ಹೊಣೆಯನ್ನು ಮೂವರೂ ವಹಿಸಿಕೊಳ್ಳಬೇಕು. ಜೊತೆಗೆ ರಾಜೀನಾಮೆ ನೀಡಬೇಕು ಹಾಗೂ ಸಿಬಿಐ ತನಿಖೆ ನಡೆಯಬೇಕು. ಇನ್ನು ಮುಂದಾದರೂ ಇಂತಹ ಘಟನೆ ನಡೆಯದೇ ಇರಲು ನಿಯಮ ರೂಪಿಸಬೇಕು ಹಾಗೂ ಸದನ ಸಮಿತಿ ನೇಮಕ ಮಾಡಬೇಕು. ನೋವಿನಲ್ಲಿ ಕೈ ತೊಳೆಯುತ್ತಿರುವ ತಂದೆ ತಾಯಿಗೆ ನ್ಯಾಯ ಸಿಗಬೇಕು” ಎಂದು ‌ಒತ್ತಾಯಿಸಿದರು.

“ಜೂನ್‌ 3ರಂದು ಆರ್‌ಸಿಬಿ ಕ್ರಿಕೆಟ್‌ ತಂಡ ಗೆದ್ದ ನಂತರ ಇಡೀ ರಾಜ್ಯದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಹೊಸ ವರ್ಷದ ಆಚರಣೆಗಿಂತಲೂ ಹೆಚ್ಚಿನ ಆಚರಣೆ ಆಗ ನಡೆದಿತ್ತು. ಅಭಿಮಾನಿಗಳು ಬೀದಿಗಿಳಿದು ಕುಣಿದಾಡಿದ್ದರು. ಪೊಲೀಸರು ರಸ್ತೆಗಳಲ್ಲಿ ನಿಂತು ಜನದಟ್ಟಣೆಯನ್ನು ನಿರ್ವಹಣೆ ಮಾಡಿದ್ದರು. ಮಧ್ಯರಾತ್ರಿ ಕಳೆದು ಮುಂಜಾನವೆರೆಗೆ ಸಂಭ್ರಮಾಚರಣೆ ನಡೆದು, ಪೊಲೀಸರಿಗೆ ಬಹಳ ಸುಸ್ತಾಗಿತ್ತು. ಇವೆಲ್ಲವೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಗೊತ್ತಿತ್ತು. ಈ ಸಂಭ್ರಮವನ್ನು ಕ್ರೆಡಿಟ್‌ ಆಗಿ ಸರ್ಕಾರಕ್ಕೆ ವರ್ಗಾವಣೆ ಮಾಡಿಕೊಳ್ಳಲು ʼಕ್ರೆಡಿಟ್‌ ವಾರ್‌ʼ ನಡೆಯಿತು” ಎಂದರು.

Advertisements

“ಸಂಭ್ರಮಾಚರಣೆ ಸಂಬಂಧ ಕ್ರಿಕೆಟ್‌ ಅಸೋಸಿಯೇಶನ್‌ನಿಂದ ಪೊಲೀಸರಿಗೆ ಅನುಮತಿ ಕೇಳಿ ಪೊಲೀಸ್‌ ಆಯುಕ್ತರು, ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ಪತ್ರ ಬರೆಯಲಾಗಿದೆ. ನಂತರ ಆಡಳಿತ ಮತ್ತು ಸಿಬ್ಬಂದಿ ತರಬೇತಿ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿ ಯಾವುದಾದರೂ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರೆ ಅದಕ್ಕೆ ಬಹಳ ಸಿದ್ಧತೆ ಮಾಡುತ್ತಾರೆ. ಆದರೆ ಕೇವಲ 24 ಗಂಟೆಯಲ್ಲೇ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ. ಇದೇ ವೇಳೆ ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಪರೇಡ್‌ ಬಗ್ಗೆ ಹಾಗೂ ವಿಧಾನಸೌಧದಲ್ಲಿನ ಆಚರಣೆ ಬಗ್ಗೆ ಮಾಹಿತಿ ಹಾಕಲಾಯಿತು. ಜೊತೆಗೆ ಸಿಎಂ ಕಚೇರಿಯಿಂದಲೇ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಲಾಗಿದೆ. ಇದು ಸರ್ಕಾರಿ ಆಚರಣೆಯಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಸರ್ಕಾರವೇ ತಮ್ಮನ್ನು ಆಹ್ವಾನಿಸಿದೆ ಎಂದು ಆರ್‌ಸಿಬಿ ಮತ್ತು ಕ್ರಿಕೆಟ್‌ ಅಸೋಸಿಯೇಶನ್‌ ಹೇಳಿದೆ. ಇದು ಕೋರ್ಟ್‌ಗೆ ನೀಡಿರುವ ಅಫಿಡವಿಟ್‌ನಲ್ಲೂ ಇದೆ” ಎಂದು ವಿವರಿಸಿದರು.

ಸಿಎಂ ಸಿದ್ದರಾಮಯ್ಯ ಪಾತ್ರ

“ಕಾವೇರಿ ನಿವಾಸದಲ್ಲಿ ಸಲಹೆಗಾರರಾದ ಎ.ಎಸ್‌.ಪೊನ್ನಣ್ಣ ಹಾಗೂ ಗೋವಿಂದರಾಜು ಸಭೆ ನಡೆಸಿದ್ದರು. ಅಲ್ಲಿಗೆ ಬಂದ ಸಿಎಂ ಸಿದ್ದರಾಮಯ್ಯ ವಿಕ್ಟರಿ ಪರೇಡ್‌ ಬೇಡ, ಉಳಿದ ಕಾರ್ಯಕ್ರಮ ಮಾಡಿ ಎಂದು ಸೂಚನೆ ನೀಡುತ್ತಾರೆ. ಅದೇ ವೇಳೆ ವಿಧಾನಸೌಧ ಮುಂಭಾಗ ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ರಾಜ್ಯಪಾಲರನ್ನು ಆಹ್ವಾನಿಸುತ್ತಾರೆ. ಆದರೆ ಕಾಲ್ತುಳಿತ ದುರಂತ ನಡೆದ ಬಳಿಕ ನಾನು ರಾಜ್ಯಪಾಲರನ್ನು ಆಹ್ವಾನಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಬಳಿಕ ನಾನೇ ಆಹ್ವಾನಿಸಿದೆ ಎಂದು ಹೇಳುತ್ತಾರೆ” ಎಂದು ಹೇಳಿದರು.

“ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಟ್ಟಣೆ ನಿಯಂತ್ರಿಸುವ ಬಗ್ಗೆ ಟ್ರಾಫಿಕ್‌ ಡಿಸಿಪಿಯಿಂದ ಒಂದು ಆದೇಶವನ್ನು ನೀಡಿ, ಪಾಸುಗಳು ಇದ್ದರೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಾವಕಾಶ ನೀಡಬೇಕೆಂದು ಸೂಚಿಸಲಾಗಿದೆ. ಇದು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುತ್ತದೆ” ಎಂದರು.

“ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಮಾನ ನಿಲ್ದಾಣಕ್ಕೆ ಹೋಗಿ ಆರ್‌ಸಿಬಿ ಆಟಗಾರರಿಗೆ ಶುಭಾಶಯ ಕೋರಿದ್ದರು. ನಂತರ ಕಾರ್‌ನಲ್ಲಿ ಕುಳಿತು ರಾಯಲ್‌ ಚಾಲೆಂಜರ್ಸ್‌ ವಿಸ್ಕಿ ಬಾವುಟ ಹಿಡಿದುಕೊಂಡು ವೀಡಿಯೋ ಮಾಡಿದ್ದರು. ಇದು ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ಘನತೆಗೆ ಶೋಭೆ ತರುವುದಿಲ್ಲ. ಉಪಮುಖ್ಯಮಂತ್ರಿಗೆ ಶಿಷ್ಟಾಚಾರ ಇರುವಾಗ ಒಂದು ಮದ್ಯದ ದೊರೆಯ ತಂಡದ ಬಾವುಟ ಹಿಡಿಯುವುದು ಸರಿಯಲ್ಲ” ಎಂದು ಹೇಳಿದರು.

“ನ್ಯಾ.ಡಿಕುನ್ಹಾ ಆಯೋಗದ ಪ್ರಕಾರ, 515 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ 194 ಮಂದಿ ಮಾತ್ರ ಬಂದೋಬಸ್ತ್‌ ರಿಜಿಸ್ಟರ್‌ನಲ್ಲಿ ಸಹಿ ಹಾಕಿದ್ದರು. ಹಿರಿಯ ಅಧಿಕಾರಿಗಳು ಸಾವಿನ ಬಗ್ಗೆ ಸಚಿವರ ಗಮನಕ್ಕೆ ತಂದರೂ ಕಾರ್ಯಕ್ರಮ ಸ್ಥಗಿತಗೊಳ್ಳುವುದಿಲ್ಲ. ಆರ್‌ಸಿಬಿ ತಂಡದವರು ಕಪ್‌ನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತಂದುಕೊಡುತ್ತಾರೆ. ಕಪ್‌ಗೆ ಮುತ್ತಿಕ್ಕುವುದು, ಕಪ್‌ ಎತ್ತಿ ಹಿಡಿದು ಪ್ರದರ್ಶನ ಮಾಡುವುದು ಬೇಕಿತ್ತಾ” ಎಂದು ಪ್ರಶ್ನಿಸಿದರು.

ಸರ್ಕಾರದ ವೈಫಲ್ಯ

“ಪಂದ್ಯ ಮುಗಿದು 15 ಗಂಟೆಯಾದ ಕೂಡಲೇ ಕಾರ್ಯಕ್ರಮ ಮಾಡಿದ್ದು ಯಾಕೆ? ಸುಸ್ತಾಗಿ ಹೈರಾಣಾಗಿದ್ದ ಪೊಲೀಸರಿಗೆ ವಿಶ್ರಾಂತಿಗೆ ಅವಕಾಶ ಕೊಡದೆ ಮತ್ತೆ ಕೆಲಸಕ್ಕೆ ನಿಯೋಜಿಸಿದ್ದು ಏಕೆ? ಇಷ್ಟೊಂದು ಅಭಿಮಾನಿಗಳು ಬರುತ್ತಾರೆಂದು ಗುಪ್ತಚರ ದಳದವರಿಗೆ ಗೊತ್ತಿರಲಿಲ್ಲವೇ? ಗುಪ್ತಚರ ದಳದವರು ಎಷ್ಟು ಜನರು ಬರುತ್ತಾರೆಂದು ಮೊದಲೇ ತಿಳಿಸಬೇಕಿತ್ತು. ಆದ್ದರಿಂದ ಇದು ಮುಖ್ಯಮಂತ್ರಿ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಗುಪ್ತಚರ ಸಂಸ್ಥೆಯ ಸಂಪೂರ್ಣ ವೈಫಲ್ಯವಾಗಿದೆ. ಇಷ್ಟೆಲ್ಲ ಅನಾಹುತವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಜೆ 5.45 ಗೆ ದುರಂತದ ಬಗ್ಗೆ ತಿಳಿಯುತ್ತದೆ. ಮುಖ್ಯಮಂತ್ರಿಗೆ ಎರಡು ಗಂಟೆಗಳ ನಂತರ ಈ ಮಾಹಿತಿ ಬರುತ್ತದೆ ಎಂಬುದೇ ಸರ್ಕಾರದ ದೊಡ್ಡ ವೈಫಲ್ಯ ಹಾಗೂ ಲೋಪ. ಈ ಲೋಪದಿಂದಾಗಿ 11 ಮಕ್ಕಳನ್ನು ಕಳೆದುಕೊಂಡಿದ್ದೇವೆ” ಎಂದರು.

“ಪೊಲೀಸ್‌ ಕಾಯ್ದೆ ಪ್ರಕಾರ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು. ಆದರೆ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಕೋರ್ಟ್‌ಗೆ ಆರ್‌ಸಿಬಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, ನಾವು ಸಂಭ್ರಮಾಚರಣೆ ಮಾಡಲು ಕೇಳಿಲ್ಲ, ಭದ್ರತೆ ಕೊಡುವುದು ಸರ್ಕಾರದ ಕೆಲಸ ಎಂದು ಹೇಳಿದೆ. ಇಷ್ಟೊಂದು ಸಾವಿಗೆ ಹೊಣೆ ಯಾರು” ಎಂದು ಕೇಳಿದರು.

ಕಾಲ್ತುಳಿತ | ಆರ್ ಅಶೋ‌ಕ್‌ಗೆ ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು

ಆರ್‌ಸಿಬಿ ವಿಜಯೋತ್ಸವದ ವೇಳೆ ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡದ ಗೃಹ ಸಚಿವರ ನಡೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದು ನಿಮ್ಮದೇ ಪಕ್ಷವಲ್ಲವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೇಲೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆ ನಡೆಸುತ್ತಿರುವಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಧ್ಯ ಪ್ರವೇಶಿಸಿ ಛೇಡಿಸಿದರು.

ಆ‌ರ್‌ಸಿಬಿ ಕೇವಲ ದುಡ್ಡು ಮಾಡುವ ಉದ್ದೇಶ ಹೊಂದಿದೆಯೇ ಹೊರತು ಅವರಿಂದ ಯಾವುದೇ ಉತ್ತಮ ಕೆಲಸವಾಗಿಲ್ಲ. ಸರ್ಕಾರ ಜನರ ಸಂಭ್ರಮಾಚರಣೆ ವೇಳೆ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿ ಈ ಕಾರ್ಯಕ್ರಮ ಆಯೋಜಿಸಿತು. ತಾರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಈ ಕಾಲ್ತುಳಿತ ಪ್ರಕರಣ ಸಂಭವಿಸಿದ್ದು, ಇದಕ್ಕೆ ಸರ್ಕಾರವೇ ಹೊಣೆ ಎಂದು ಆರ್. ಅಶೋಕ್ ಅವರು ಆರೋಪ ಮಾಡಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಡಿಸಿಎಂ ಅವರು, “ಅಭಿಮಾನಿಗಳ ವಿಜಯೋತ್ಸವದ ವೇಳೆ ಮೆರವಣಿಗೆಗೆ ಸರ್ಕಾರ ನಿರಾಕರಿಸಿದಾಗ ನಿಮ್ಮ ಪಕ್ಷದ ವತಿಯಿಂದ ಬಂದ ಟ್ವೀಟ್ ಬಗ್ಗೆಯೂ ಮಾತನಾಡಿ. ಅದನ್ನು ಯಾಕೆ ಹಾಗೇ ಬಿಡುತ್ತೀರಿ? ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು ಆರ್ ಸಿಬಿ ಈ ವರ್ಷ ನನಸು ಮಾಡಿದೆ. ಆದರೆ ತೆರೆದ ಬಸ್ ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ ಪರಮೇಶ್ವರ್ ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೇಶ್ವರ್’ ಎಂದು ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿತ್ತು. ಆ ಬಗ್ಗೆಯೂ ನೀವು ಹೇಳಬೇಕಲ್ಲವೇ” ಎಂದು ಕಾಲೇಳೆದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X