ಪ್ರತಿ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರುಗಳಿಗೆ ಆಗಸ್ಟ್ 15ರಂದು ಘೇರಾವ್ ಹಾಕುವುದಾಗಿ ಒಳಮೀಸಲಾತಿ ಹೋರಾಟಗಾರರು ಎಚ್ಚರಿಸಿದ್ದಾರೆ
“ಒಳಮೀಸಲಾತಿಯೊಳಗೆಯೇ ಒಳಮೀಸಲಾತಿ ಬಯಸಿದವರು ಮಾದಿಗರು. ಆ ಸಂಬಂಧ ಜಸ್ಟಿಸ್ ನಾಗಮೋಹನ ದಾಸ್ ಅವರಿಗೆ ಮನವಿಯನ್ನೂ ಸಲ್ಲಿಸಿದ್ದೆವು. ಅಂತಹ ತಾಯ್ತನ ಮಾದಿಗರದ್ದು” ಎಂದು ಒಳಮೀಸಲಾತಿ ಹೋರಾಟಗಾರ ಎಸ್.ಮಾರೆಪ್ಪ ಹೇಳಿದರು.
ಆಗಸ್ಟ್ 16ರಂದು ನಡೆಯಲಿರುವ ವಿಶೇಷ ಕ್ಯಾಬಿನೆಟ್‌ನಲ್ಲಿಯೇ ಒಳಮೀಸಲಾತಿ ಜಾರಿಗೆ ಒತ್ತಡ ತರಲು ಆಗಸ್ಟ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಘೇರಾವ್ ಹಮ್ಮಿಕೊಂಡಿರುವ ಸಂಬಂಧ ಇಂದು (ಮಂಗಳವಾರ) ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಸತ್ಯಾಗ್ರಹದ ಭಾಗವಾಗಿ ಮಾತನಾಡಿದ ಅವರು, ಅನೇಕ ವಿಚಾರಗಳನ್ನು ಹಂಚಿಕೊಂಡರು. ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ವರದಿಯ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದರು.
“ಕೊನೆ ಕ್ಷಣದಲ್ಲಿ ಆಯೋಗಕ್ಕೆ ಒಂದು ಮನವಿಯನ್ನು ನಾವು ಕೊಟ್ಟಿದ್ದೆವು. ಇಷ್ಟು ತಡವಾಗಿ ಬಂದು ಮನವಿ ಕೊಡುತ್ತಿದ್ದೀರಾ ಎಂದು ಜಸ್ಟಿಸ್ ದಾಸ್ ಕೊಂಚ ಸಿಟ್ಟಾದರೂ ನಮ್ಮ ಮನವಿ ಆಲಿಸಿದರು. ಮಾದಿಗ ಸಮುದಾಯಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಅಂಶಗಳನ್ನು ಸೇರಿಸಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ಮಾದಿಗರೊಳಗೆಯೇ ಅತ್ಯಂತ ಕೆಳಸ್ತರದಲ್ಲಿರುವ ಪೌರಕಾರ್ಮಿಕರಿಗೆ, ದೇವದಾಸಿ ಕುಟುಂಬದವರಿಗೆ, ವಿಧವೆಯರಿಗೆ ಆದ್ಯತೆ ಕೊಡಬೇಕೆಂಬುದು ನಮ್ಮ ಒತ್ತಾಯವಾಗಿತ್ತು. ಮಾದಿಗರೊಳಗೆಯೇ 1, 2, 3 ಎಂದು ವರ್ಗೀಕರಿಸಿ ಮೊದಲ ಪ್ರಾಶಸ್ತ್ಯ ಈ ಜನರಿಗೆ ಕೊಡಬೇಕು, ಯಾರೂ ಸಿಗದೆ ಹೋದರೆ ಮಾತ್ರ ಸಾಮಾನ್ಯ ಮಾದಿಗರಿಗೆ ನಂತರದಲ್ಲಿ ಅವಕಾಶ ನೀಡಬೇಕು ಎಂದು ತಿಳಿಸಿದೆವು. ಮಾದಿಗ ಸಮುದಾಯಕ್ಕೆ ಇರುವಂತಹ ಈ ತಾಯ್ತನ ಬೇರೆಯವರಿಗೆ ಇರಲಿಕ್ಕೆ ಸಾಧ್ಯವಿಲ್ಲ” ಎಂದರು.

“ಜಸ್ಟಿಸ್ ದಾಸ್ ಅವರ ಆಯೋಗದೊಂದಿಗೆ ಅಲೆಮಾರಿಗಳಾಗಲೀ, ಮಾದಿಗರಾಗಲಿ ಯಾವುದೇ ಸಂಪರ್ಕ ಹೊಂದಿರಲಿಲ್ಲ. ದಾಸ್ ಅವರ ಮೇಲೆ ಒತ್ತಡಗಳನ್ನು ತಂದಿದ್ದಾರೆಂದು ಪೂರ್ವಗ್ರಹ ಪೀಡಿತರಾಗಿ ಮಾತನಾಡಬಾರದು. ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಮಂತ್ರಿ, ಆ ಇಲಾಖೆಯ ಮುಖ್ಯ ಕಾರ್ಯದರ್ಶಿ, ಆಯುಕ್ತ ಎಲ್ಲರೂ ಹೊಲೆಯ ಸಹೋದರರು. ಆಯೋಗದಲ್ಲಿ ಸದಸ್ಯರಾಗಿ ಕೆಲಸ ಮಾಡಿದ ಚಂದ್ರಶೇಖರ್ ಎಂಬವರೂ ಹೊಲೆಯರು. ಇಷ್ಟು ಹಿಡಿತ ಇಟ್ಟುಕೊಂಡಿದ್ದವರು, ಆಯೋಗದ ವಿರುದ್ಧ ಆರೋಪಿಸುತ್ತಿದ್ದಾರೆ. ನೀವಾಗಿಯೇ ನಿಮ್ಮ ಸಂಖ್ಯೆಯನ್ನು ಹೆಚ್ಚಿನದಾಗಿ ಅಂದಾಜಿಸಿಕೊಂಡಿದ್ದು, ಸಂಖ್ಯೆ ಕಡಿಮೆಯಾದಾಗ ಆತಂಕಗೊಂಡಿದ್ದೀರಿ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿರಿ: ‘ನೆಪಗಳನ್ನಿಟ್ಟು ಒಳಮೀಸಲಾತಿ ಜಾರಿ ತಡಮಾಡದಿರಿ’; ಅನಿರ್ದಿಷ್ಟಾವಧಿ ಹೋರಾಟ ಆರಂಭ
“ನಾಗಮೋಹನ್ ದಾಸ್ ಆಯೋಗಕ್ಕೆ ನಾವು ಮನವಿ ಕೊಡುವಾಗಲೇ ಮಾದಿಗರು 40 ಲಕ್ಷಕ್ಕೂ ಹೆಚ್ಚಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದೆವು. ಮೈಸೂರು ಭಾಗದಲ್ಲಿ ಹೊಲೆಯ ಸಹೋದರರು ಹೆಚ್ಚಿದ್ದಾರೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಬೆಂಗಳೂರಿನಿಂದ ಹೊಸಪೇಟೆವರೆಗೂ ಸುಮಾರು ಎಂಟು ಜಿಲ್ಲೆಗಳಲ್ಲಿ ಆದಿಕರ್ನಾಟಕ ಎಂದರೆ ಮಾದಿಗರೇ ಆಗಿದ್ದಾರೆ. ಮಾದಿಗರು ಹೆಚ್ಚಿದ್ದಾರೆಂದು ಬಂದ ಕೂಡಲೇ ನೀವು ಆ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ” ಎಂದು ತಿಳಿಸಿದರು.
“ಕಳೆದ 75 ವರ್ಷಗಳಲ್ಲಿ ಸಿಂಹಪಾಲನ್ನು ಪಡೆದದ್ದು ಯಾರೆಂಬುದನ್ನು ಈ ಆಯೋಗ ಸಾಬೀತು ಮಾಡಿದೆ. ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ, ಲಿಡ್ಕರ್ ಬಿಟ್ಟರೆ ಬೇರೆಲ್ಲೂ ಮಾದಿಗರು ಹೆಚ್ಚಿನ ಅನುದಾನಗಳನ್ನು ಪಡೆಯಲೇ ಇಲ್ಲ. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸಿಂಹಪಾಲು ಪಡೆದವರು ಬಲಗೈ ಸಹೋದರರು” ಎಂದು ವಿಶ್ಲೇಷಿಸಿದರು.
“ಜ್ಞಾನಪ್ರಕಾಶ್ ಸ್ವಾಮೀಜಿಯವರೇ ನೀವು ಸ್ವಾಮೀಜಿಯವರೇ ಆಗಿರಬಹುದು. ಆದರೆ ನಿಮಗೆ ಚಳವಳಿಯ ಅನುಭವ ಇಲ್ಲ ಎನ್ನುತ್ತೇನೆ. ನಿಮಗೆ ದಲಿತ ಚಳವಳಿಯ ಹಿನ್ನೆಲೆಯೂ ಇಲ್ಲ, ಒಳಮೀಸಲಾತಿ ಚಳವಳಿಯ ಹಿನ್ನೆಲೆಯೂ ಇಲ್ಲ. ಅಂಬೇಡ್ಕರ್ ಅವರ ಬಗ್ಗೆ ಓದಿಕೊಂಡಿದ್ದೀರಷ್ಟೇ, ಆದರೆ ಅನುಭವದಿಂದ ಮಾತನಾಡುತ್ತಿಲ್ಲ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
“1,60,000 ಜನ ಪರೆಯರನ್ನು ಮಾದಿಗರ ಗುಂಪಿನಲ್ಲಿ ಏಕೆ ಸೇರಿಸಲಾಗಿದೆ ಎಂಬುದನ್ನು ಗಮನಿಸಬೇಕು. ಪರೆಯರಲ್ಲಿ ಪೌರಕಾರ್ಮಿಕರು ಹೆಚ್ಚಿದ್ದಾರೆ. ಹೀಗಾಗಿ ಈ ಸಮುದಾಯವನ್ನು ಮಾದಿಗರೊಂದಿಗೆ ಗುರುತಿಸುವುದೇ ನ್ಯಾಯೋಚಿತ ಎಂದು ನಿನ್ನೆ ಪ್ರತಿಭಟನೆಗೆ ಬಂದಿದ್ದ ಹಿರಿಯರೊಬ್ಬರು ಹೇಳಿದರು. ಮುಂದುವರಿದು ಮೊಗೇರ ಸಮುದಾಯ ಹೊಲೆಯ ಗುಂಪೆಂದು ವಾದಿಸಲಾಗುತ್ತಿದೆ. ಆದರೆ ಮೊಗೇರರು ದಾಖಲೆಗಳ ಪ್ರಕಾರ ಸ್ಪೃಶ್ಯರಾಗಿದ್ದು ಅವರು ಹೊಲೆಯರೂ ಅಲ್ಲ, ಮಾದಿಗರೂ ಅಲ್ಲ. ಯಾವ ಗುಂಪಿನಲ್ಲಿ ಇರಬೇಕೆಂದು ಆಯಾ ಸಮುದಾಯಗಳೇ ನಿರ್ಧರಿಸಬೇಕು” ಎಂದು ಆಶಿಸಿದರು.
“ಎಕೆ, ಎಡಿಯಲ್ಲಿನ 4,47,000 ಜನರನ್ನು ನಮಗೆ ಸೇರಿಸಿ ಎನ್ನುತ್ತೀರಿ. ಇದಕ್ಕಿಂತ ನಾಚಿಕೆಗೇಡಿತನ ಯಾವುದಿದೆ? ಇಷ್ಟು ಮಿತಿಮೀರಿದ ಭಂಡತನ ಇರಬಾರದು. ನಾಗಮೋಹನ್ ದಾಸ್ ಬಹಳ ಹೃದಯವಂತರು. ಹೀಗಾಗಿ ಅವರನ್ನು ಬೇರೊಂದು ಗುಂಪು ಮಾಡಿದ್ದಾರೆ. 4,47,000 ಜನರು ಹೊಲೆಯರೂ ಅಲ್ಲ, ಮಾದಿಗರೂ ಅಲ್ಲ. ಕ್ರಾಸ್ ಚೆಕ್ ಮಾಡಿ ಹೇಳುತ್ತಿದ್ದೇನೆ. 1,20,000 ಜನ ಬಿಬಿಎಂಪಿಯಲ್ಲಿ ಇದ್ದಾರೆಂದರೆ ಅವರು ಪೌರಕಾರ್ಮಿಕರು. ಜಾತಿಯನ್ನು ಹೇಳಿಕೊಳ್ಳಲಾಗದ ಸಮುದಾಯದ ಜನರವರು. ಉಡುಪಿ, ದಕ್ಷಿಣ ಕನ್ನಡದಲ್ಲಿ ಹೆಚ್ಚಿನದಾಗಿ ನಮೂದಾಗಿರುವ ಆದಿದ್ರಾವಿಡ ಜನರು ಹೊಲೆಯರೂ ಅಲ್ಲ, ಮಾದಿಗರೂ ಅಲ್ಲ. ಇವರನ್ನು ನಮ್ಮ ಗುಂಪಿಗೆ ಸೇರಿಸಿ ಎಂದು ಹೇಗೆ ಹೇಳುತ್ತೀರಿ. ಈ ವಿತಂಡವಾದ ಬೇಡ. ನಾಗಮೋಹನ ದಾಸ್ ಅವರ ವರದಿಯನ್ನು ಅವೈಜ್ಞಾನಿಕ ಎನ್ನುವುದಕ್ಕೆ ನಮ್ಮ ಆಕ್ಷೇಪಣೆ ಇದೆ” ಎಂದು ಎಚ್ಚರಿಸಿದರು.

“ಯಾವುದೇ ಆಯೋಗದ ವರದಿ ನೂರಕ್ಕೆ ನೂರರಷ್ಟು ಸರಿ ಇರಲು ಸಾಧ್ಯವಿಲ್ಲ. ಎ.ಜೆ. ಸದಾಶಿವ ಆಯೋಗದ ವರದಿಯಲ್ಲೂ ಶೇ.6ರಷ್ಟು ವ್ಯತ್ಯಾಸಗಳಿದ್ದವು. ಈ ವರದಿಯಲ್ಲಿನ ವ್ಯತ್ಯಾಸ ಕೇವಲ ಶೇ.6-7 ಮಾತ್ರವಾಗಿದೆ. ಕಾನೂನಿನ ಪ್ರಕಾರ ಶೇ.15ರಷ್ಟು ವ್ಯತ್ಯಾಸಕ್ಕೆ ಅವಕಾಶವಿದೆ” ಎಂದ ಅವರು, “ಬಿಬಿಎಂಪಿಯಲ್ಲಿ ಎಂಟು ಲಕ್ಷ ಜನ ಮಾದಿಗರು ದಾಖಲಾದರು. ಸಮುದಾಯದ ಮುಖಂಡರು, ಹಾಲಿ ಸಚಿವರು, ಮಾಜಿ ಸಚಿವರು, ಕಾರ್ಯಕರ್ತರು ನಿರಂತರ ತಿರುಗಾಡಿದ್ದರಿಂದ ಇದು ಸಾಧ್ಯವಾಯಿತು. ನಿಮ್ಮ ಪ್ರಯತ್ನ ಏನಿತ್ತು? ಈಗ ಸಂಖ್ಯೆ ಕಡಿಮೆಯಾದ ತಕ್ಷಣ, ಗೂಬೆ ಕೂರಿಸುವುದು ಸರಿಯೇ?” ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಎಚ್ಚರಿಸಿದ ಅವರು, “ನೀವು ಏನಾದರೂ ವರದಿಯನ್ನು ಈ ಅಧಿವೇಶನದಲ್ಲಿ ಜಾರಿಗೆ ತರದಿದ್ದರೆ ಚಳಿಗಾಲದ ಅಧಿವೇಶನದವರೆಗೂ ನಮ್ಮ ಹೋರಾಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ. ನಮಗೆ ಹೋರಾಟ ಹೊಸದೇನೂ ಅಲ್ಲ. ನೀವು ಬೇಗ ಮುಗಿಸಿದರೆ ಆ. 16ಕ್ಕೆ ಮುಗಿಯುತ್ತದೆ. ಬೇಡ ಎನ್ನುವುದಾದರೆ ನಾವು ಸಿದ್ದರಿದ್ದೇವೆ. ನಮ್ಮ ಹೋರಾಟವನ್ನು ಎದುರಿಸಲು ನೀವು ಸಿದ್ದರಾಗಿ. ಚಳವಳಿಯ ಭಾಗವಾಗಿ ಪ್ರತಿ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರುಗಳಿಗೆ ಆಗಸ್ಟ್ 15ರಂದು ಘೇರಾವ್ ಹಾಕುತ್ತೇವೆ. ವಿಶೇಷ ಸಚಿವ ಸಂಪುಟದಲ್ಲಿ ಮಾತನಾಡುವ ಭರವಸೆಯನ್ನು ಸಚಿವರುಗಳು ಕೊಟ್ಟು ಹೋಗಬೇಕಷ್ಟೇ” ಎಂದು ಆಗ್ರಹಿಸಿದರು.
ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “ನಾಗಮೋಹನ್ ದಾಸ್ ಅವರು ಒಂದು ರೂಪಾಯಿ ತೆಗೆದುಕೊಳ್ಳದೆ ಹೃದಯವಂತಿಕೆ ಮೆರೆದಿದ್ದಾರೆ. ಸಂವಿಧಾತ್ಮಕವಾದ ಘನತೆಯನ್ನು 101 ಜಾತಿಗಳಿಗೂ ಕೊಟ್ಟಿದ್ದಾರೆ. ಆ.16ಕ್ಕೆ ಅಂತಿಮ ನಿರ್ಧಾರ ಕೈಗೊಳ್ಳದಿದ್ದರೆ ರಾಜಧಾನಿಯಲ್ಲಿನ ಹೋರಾಟ ರಣಾಂಗಣವಾಗುತ್ತದೆ” ಎಂದು ಎಚ್ಚರಿಸಿದರು.
ಇದನ್ನೂ ಓದಿರಿ: ಆಶಾ ಕಾರ್ಯಕರ್ತರ ಅಹೋರಾತ್ರಿ ಧರಣಿ; ನುಡಿದಂತೆ ನಡೆಯುವುದೇ ಗ್ಯಾರೆಂಟಿ ಸರ್ಕಾರ
“ಪ್ರತಿಪಕ್ಷವಾಗಿರುವ ಬಿಜೆಪಿ ಮಾತನಾಡಬೇಕಾಗಿರುವುದು ಬೀದಿಯಲ್ಲಿ ಅಲ್ಲ. ಸದನದಲ್ಲಿ ದನಿ ಎತ್ತಬೇಕಿದೆ. ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಒಳಮೀಸಲಾತಿ ಪರ ಪ್ರಣಾಳಿಕೆ ರೂಪಿಸಿದ್ದವು. ಈಗ ಯಾರ ವಿರೋಧವೂ ಇಲ್ಲ. ಸರ್ಕಾರ ನಿಧಾನದ್ರೋಹವನ್ನು ಮಾಡಿದರೆ, ಒಳಮೀಸಲಾತಿಯ ಕಿಚ್ಚು ಕಾಂಗ್ರೆಸ್ ಪಕ್ಷವನ್ನು ಸುಡುತ್ತದೆ” ಎಂದರು.
ಮಾದಿಗ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ ಅಲೆಮಾರಿ ಮುಖಂಡ
‘ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟು ಒಕ್ಕೂಟ’ದ ಕಾರ್ಯಾಧ್ಯಕ್ಷ ಹಾಗೂ ಗೋಸಂಗಿ ಸಮುದಾಯದ ಚಾವಡಿ ಲೋಕೇಶ್ ಮಾತನಾಡಿ ಮಾದಿಗ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದರು.
“ಕಳೆದ 70 ವರ್ಷಗಳಿಂದಲೂ ದಿಕ್ಕಿಲ್ಲದೆ ಬದುಕುತ್ತಿರುವ ಅಲೆಮಾರಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೆಜ್ಜೆ ಹಾಕಿದವರು ಮಾದಿಗರು. ಒಳಮೀಸಲಾತಿ ಹೋರಾಟ ನಮಗೂ ನ್ಯಾಯ ದೊರಕಿಸಿ ಕೊಟ್ಟಿದೆ. ಮಾದಿಗ ಸಮುದಾಯವು ತಾಯ್ತನದಿಂದ ನಮ್ಮನ್ನು ಪೊರೆದಿದೆ. ಮಾದಿಗ ಸಹೋದರರು ನಮ್ಮನ್ನು (ಅಲೆಮಾರಿಗಳನ್ನು) ಅಪ್ಪಿಕೊಂಡಿದ್ದಾರೆ. ಸಂವಿಧಾನ ಜಾರಿಯಾಗಿ ಎಪ್ಪತ್ತು ವರ್ಷಗಳಾಯಿತು. ಇಷ್ಟು ಕಾಲ ಬೀದಿಯಲ್ಲಿ ಬಿದ್ದಿದ್ದ ನಮ್ಮನ್ನು ಕೈ ಹಿಡಿದು ನಡೆಸುವ ಕೆಲಸ ಮಾಡಿದ್ದು ಮಾದಿಗ ಸಹೋದರರು” ಎಂದು ಮಾರ್ಮಿಕವಾಗಿ ನುಡಿದರು.
“ನಾವು ಕಾಡಲ್ಲಿ ಇರಲಿಕ್ಕೂ ಬಿಡಲಿಲ್ಲ, ನಾಡಲ್ಲಿ ಇರಲಿಕ್ಕೂ ಬಿಡಲಿಲ್ಲ. ನಮ್ಮ ಮಕ್ಕಳ ಮೇಲೆ ಅತ್ಯಾಚಾರಗಳಾಗಿವೆ. ನಮ್ಮ ಮೇಲೆ ಕೇಸ್‌ಗಳನ್ನು ಹಾಕಿದ್ದಾರೆ. ಅಂತಹ ಅನಿಷ್ಟ ಜೀವನ ನಮ್ಮದು. ಹೀಗಿರುವಾಗ ಒಳಮೀಸಲಾತಿ ಚಳವಳಿಗಾರರು ನಮ್ಮನ್ನು ಮಡಿಲಿಗೆ ಹಾಕಿಕೊಂಡು ತಾಯಿ ರೀತಿಯಲ್ಲಿ ಪೋಷಣೆ ಮಾಡಿದ್ದಾರೆ. ನಮ್ಮ ಅನ್ನದ ತಟ್ಟೆಗಳು ಎಲ್ಲಿ ಕಳೆದು ಹೋಗಿವೆ ಎಂಬುದು ಗೊತ್ತಿತ್ತು. ಅವುಗಳನ್ನು ನ್ಯಾಯಬದ್ಧವಾಗಿ ವಾಪಸ್ ಪಡೆದು ನಮಗೆ ದೊರಕಿಸುವ ಕೆಲಸ ಮಾಡುತ್ತಿದ್ದಾರೆ. ಮಾದಿಗ ಸಮುದಾಯಕ್ಕೆ ಅಲೆಮಾರಿಗಳು ಆಭಾರಿಯಾಗಿರುತ್ತೇವೆ” ಎಂದು ವಂದಿಸಿದರು.
ಒಳಮೀಸಲಾತಿ ಹೋರಾಟಗಾರರಾದ ಬಸವರಾಜ್ ಕೌತಾಳ್, ಕರಿಯಪ್ಪ ಗುಡಿಮನಿ, ಶಿವರಾಯ ಅಕ್ಕರಕಿ ಮೊದಲಾದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
