ಮೂತ್ರ ವಿಸರ್ಜನೆಗೆ ತರಳಿದ್ದ ಯುವಕ ಕಾಲು ಜಾರಿ 30 ಅಡಿ ಪ್ರಪಾತಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.
ಗಂಭೀರಗೊಂಡ ಯುವಕ ಮುಜಾಮಿಲ್ (21), ಬಣಕಲ್ ಸಮೀಪದ ಚಕಮಕ್ಕಿ ಗ್ರಾಮದವರು. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆಗೆ ಹೋದಾಗ ಈ ಘಟನೆ ಸಂಭವಿಸಿದೆ. ತಕ್ಷಣ ಸ್ಥಳೀಯರು ಮತ್ತು ಸ್ನೇಹಿತರು ಸಹಾಯಕ್ಕೆ ಧಾವಿಸಿ, ಯುವಕನನ್ನು ಮೇಲಕ್ಕೆತ್ತಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ಹಾವಳಿ: ಸಾರ್ವಜನಿಕರಿಗೆ ಧ್ವನಿವರ್ಧಕ ಮೂಲಕ ಜಾಗೃತಿ
ಘಾಟ್ ವ್ಯಾಪ್ತಿಯಲ್ಲಿ ಈ ಬಾರಿ ಧಾರಕಾರ ಮಳೆಯಾಗಿರುವುದರಿಂದ ರಸ್ತೆ ಹಾಗೂ ಪ್ರಪಾತದ ಅಂಚು ಪಾಚಿಗಟ್ಟಿ ಜಾರುತ್ತಿವೆ. 2019ರಲ್ಲೂ ಇದೆ ಘಾಟ್ ಪ್ರದೇಶದ ಪ್ರಪಾತದ ಅಂಚಿನಲ್ಲಿ ಸೆಲ್ಪಿ ಕ್ಲಿಕ್ಕಿಸಲು ಹೋಗಿದ್ದ ಯುವಕನೋರ್ವ ನೂರು ಅಡಿ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದ. ಇದಾದ ಬಳಿಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಘಾಟ್ ವ್ಯಾಪ್ತಿಯಲ್ಲಿ ಹುಚ್ಚಾಟ ಮೆರೆಯುತ್ತಿದ್ದವರ ಮೇಲೆ ಲಘು ಪ್ರಕರಣಗಳನ್ನು ದಾಖಲಿಸಿ ಎಚ್ಚರಿಕೆಯನ್ನು ನೀಡುತ್ತಿದ್ದರು, ಜೊತೆಗೆ ಸೂಚನಾ ಫಲಕಗಳನ್ನು ಅಳವಡಿಸಿ ಪೋಲಿಸ್ ಬೀಟ್ ಗಳನ್ನು ಹೆಚ್ಚಿಸಲಾಗಿದೆ. ಆದರೂ ಇಂತಹ ಘಟನೆ ಮತ್ತೆ ಮರುಕಳಿಸಿದೆ. ಪ್ರವಾಸಿಗರು ಹಾಗೂ ಸ್ಥಳೀಯ ವಾಸಿಗಳು ಜಾಗರುಕತೆ ವಹಿಸಬೇಕಾಗಿದೆ.