ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಮೃತಪಟ್ಟಿದ್ದಾರೆ ಎಂದು ಘೋಷಿಸಲಾದ ಇಬ್ಬರನ್ನು ಚುನಾವಣಾ ವಿಶ್ಲೇಷಕ ಪ್ರೊ. ಯೋಗೇಂದ್ರ ಯಾದವ್ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಸ್ವತಃ ತಾವೇ ವಾದ ಮಂಡಿಸಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಲ್ಯ ಬಾಗ್ಚಿ ಅವರ ಪೀಠದ ಎದುರು ವಾದ ಮಂಡಿಸಿದ ಯೋಗೇಂದ್ರ ಯಾದವ್ ಅವರು, ಇಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಹಾಗಾಗಿ ಅವರ ಹೆಸರುಗಳನ್ನ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಆದರೆ ಅವರಿಬ್ಬರೂ ಜೀವಂತವಾಗಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಯೋಗೇಂದ್ರ ಯಾದವ್ ಅಂಕಣ | ಗೃಹ ಬಳಕೆ ವೆಚ್ಚ ಸಮೀಕ್ಷೆ; ಆಳುವ ವರ್ಗವು ಈ ತಪ್ಪು ಕಲ್ಪನೆಯಿಂದ ಎಂದು ಮುಕ್ತವಾಗುತ್ತದೆ?
“ದಯವಿಟ್ಟು ಇವರನ್ನು ನೋಡಿ. ಇವರು ಸತ್ತಿದ್ದಾರೆ ಎಂದು ಘೋಷಿಸಲಾಗಿದೆ. ಹಾಗಾಗಿ ಇವರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ. ಆದರೆ ಅವರು ಜೀವಂತವಾಗಿದ್ದಾರೆ. ಅವರನ್ನು ನೋಡಿ, ಇಲ್ಲೇ ಇದ್ದಾರೆ” ಎಂದು ವಿಚಾರಣೆಯ ವೇಳೆ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಭಾರತ ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಇದನ್ನು ‘ನಾಟಕ’ ಎಂದು ಕರೆದಿದ್ದಾರೆ. ಇದು ಅಜಾಗರೂಕ ದೋಷವಾಗಿರಬಹುದು ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು. “ಅಜಾಗರೂಕತೆಯಿಂದ ಆದ ತಪ್ಪಾಗಿರಬಹುದು, ಸರಿಪಡಿಸಬಹುದು. ಆದರೆ ನಿಮ್ಮ ವಾದವನ್ನು ನಾವು ಪರಿಗಣಿಸುತ್ತೇವೆ” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
“ಈಗಾಗಲೇ ಹಲವು ಮಂದಿಯನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. 65 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. 2003ರಲ್ಲಿ ವಿಶೇಷವೆಂದರೆ ‘ತೀವ್ರ’ ಪದವನ್ನು ಬಳಸುವುದನ್ನು ಹೊರತುಪಡಿಸಿ ಎಸ್‌ಐಆರ್ ಅನ್ನು ಮಾಡಲಾಗಿದೆ. ಶೂನ್ಯ ಸೇರ್ಪಡೆಯೊಂದಿಗೆ ಪರಿಷ್ಕರಣೆ ನಡೆದ ದೇಶದ ಇತಿಹಾಸದಲ್ಲಿ ನಡೆದ ಮೊದಲ ಪ್ರಕ್ರಿಯೆ ಇದಾಗಿದೆ” ಎಂದು ಹೇಳಿದರು.
Grateful to the Hon’ble Supreme Court for allowing me to present my arguments in the matter of the Special Intensive Revision (SIR) of electoral rolls. And that too beyond usual court hours.
— Yogendra Yadav (@_YogendraYadav) August 12, 2025
This is not about revision of voter list in one state but about diluting the… pic.twitter.com/EddMYVzWqX
“ಪುರುಷರಿಗಿಂತ ಅಧಿಕ ಮಹಿಳೆಯರ ಹೆಸರನ್ನು ಅಳಿಸಲಾಗಿದೆ. 31 ಲಕ್ಷ ಮಹಿಳೆಯ ಹೆಸರನ್ನು ತೆಗೆದುಹಾಕಲಾಗಿದೆ. 25 ಲಕ್ಷ ಪುರುಷರ ಹೆಸರನ್ನು ಅಳಿಸಲಾಗಿದೆ. ಈ ಸಂಖ್ಯೆ 1 ಕೋಟಿ ದಾಟುವುದು ಖಚಿತ. ಇದು ಪರಿಷ್ಕರಣೆಯ ವಿಷಯವಲ್ಲ. ಇವರನ್ನು ನೋಡಿ, ಇವರನ್ನು ಸತ್ತಿರುವುದಾಗಿ ಘೋಷಿಸಲಾಗಿದೆ. ಆದರೆ ಜೀವಂತವಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ನವೆಂಬರ್‌ನ ಒಳಗಾಗಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ತರಾತುರಿಯಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದೆ. 65 ಲಕ್ಷಕ್ಕೂ ಅಧಿಕ ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ಪೈಕಿ ಹಲವು ಮಂದಿ ಅರ್ಹರಾಗಿದ್ದರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತವೆ.
