ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮೂಹಿಕವಾಗಿ ಮೃತದೇಹಗಳನ್ನು ಹೂತಿರುವುದಾಗಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಮಂಗಳವಾರ ಜಿಪಿಆರ್ ಉಪಯೋಗಿಸಿ ಪರಿಶೀಲಿಸುವ ಕಾರ್ಯವನ್ನು ಎಸ್‌ಐಟಿ ಅಧಿಕಾರಿಗಳು ನಡೆಸಿದರು.
ಮಂಗಳವಾರ ಮಧ್ಯಾಹ್ನದಿಂದ ಪ್ರಾರಂಭವಾದ ಕಾರ್ಯಾಚರಣೆಯಲ್ಲಿ ಚಿಕ್ಕ ಹಿಟಾಚಿ ಬಳಸಿ ಭೂಮಿ ಅಗೆಯುವ ಕಾರ್ಯವನ್ನು ಪ್ರಾರಂಭಿಸಿ, ನಂತರ ದೊಡ್ಡ ಹಿಟಾಚಿಯ ಸಹಾಯದಿಂದ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಅಗೆಯವ ಕಾರ್ಯ ಮಾಡಲಾಗಿದೆ. ಈ ಸ್ಥಳದಿಂದ ಯಾವುದೇ ಕಳೇಬರಗಳು ಕುರುಹುಗಳು ಪತ್ತೆಯಾಗಿಲ್ಲವೆಂದು ಎಸ್‌ಐಟಿ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ದೂರುದಾರ ಹಾಗೂ ಇತರ ಅಧಿಕಾರಿಗಳೊಂದಿಗೆ ಆಗಮಿಸಿದ ಎಸ್‌ಐಟಿ ತಂಡ ಆರಂಭದಲ್ಲಿ ಜಿಪಿಆರ್ ತಂತ್ರಜ್ಞಾನವನ್ನು ಉಪಯೋಗಿಸಿ ಪರಿಶೀಲನೆ ಮಾಡಿತು. ದೂರುದಾರ ಗುರುತಿಸಿದ 13ನೇ ಪಾಯಿಂಟ್ ಸ್ಥಳದಲ್ಲಿ ನೇತ್ರಾವತಿ ಅಜಿಕುರಿ ರಸ್ತೆಬದಿಯಲ್ಲಿ ಸುಮಾರು ನೂರು ಮೀಟರ್ ದೂರದವರೆಗೂ ಜಿಪಿಆರ್ ಮೂಲಕ ಪರಿಶೀಲನೆ ನಡೆಸಲಾಯಿತು. ಆದರೆ ಪರಿಶೀಲನೆಯಿಂದ ಯಾವುದೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಿರುವುದಾಗಿ ತಿಳಿದುಬಂದಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಜಿಪಿಆರ್ ಉಪಯೋಗಿಸಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಎರಡು ಹಿಟಾಚಿ ಬಳಸಿ ಕಾರ್ಯಾಚರಣೆ
ಜಿಪಿಆರ್ ಮೂಲಕ ಮಣ್ಣಿನ ಅಡಿಯಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ಪೂರ್ಣಗೊಳಿಸಿದ ನಂತರ ಎಸ್‌ಐಟಿ ತಂಡ ಹಿಟಾಚಿಯನ್ನು ಉಪಯೋಗಿಸಿ ಅಗೆಯುವ ಕಾರ್ಯಕ್ಕೆ ಮುಂದಾದರು.

ನೇತ್ರಾವತಿ ನದಿಗೆ ಅಡ್ಡಲಾಗಿರುವ ಕಿಂಡಿ ಅಣೆಕಟ್ಟಿನ ಬದಿಯಲ್ಲಿರುವ ಈ 13ನೇ ಪಾಯಿಂಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿಸಿರುವ ಹಿನ್ನಲೆ ಈ ಜಾಗದಲ್ಲಿ ತುಂಬಾ ಆಳಕ್ಕೆ ಅಗೆದು ಪರಿಶೀಲನೆ ಮಾಡಲಾಯಿತು. ಈ ಸ್ಥಳದಲ್ಲಿ ಸುಮಾರು 20 ಅಡಿ ಅಗಲಕ್ಕೆ 30 ಅಡಿ ಉದ್ದಕ್ಕೆ ಅಗೆದು ಪರಿಶೀಲನೆ ನಡೆಸಲಾಯಿತು.
ನದಿಯ ಹಾಗೂ ಕಿಂಡಿ ಅಣೆಕಟ್ಟಿನ ಬದಿಯಲ್ಲಿ ಈ ಜಾಗ ಇರುವ ಕಾರಣ ಅಗೆಯುವ ವೇಳೆ ಗುಂಡಿಯಲ್ಲಿ ನೀರು ತುಂಬಲು ಪ್ರಾರಂಭ ಹಿನ್ನೆಲೆ ಕೆಲಕಾಲ ಕಾರ್ಯಾಚರಣೆಗೆ ಅಡಿ ಉಂಟಾಗಿತ್ತು. ಬಳಿಕ ಡೀಸೆಲ್ ಪಂಪ್ ಬಳಸಿ ಗುಂಡಿಯಲ್ಲಿ ಇರುವ ನೀರನ್ನು ತೆಗೆದು ಅಗೆಯುವ ಕಾರ್ಯಾಚರಣೆ ಮುಂದುವರಿಸಲಾಯಿತು.

13ನೇ ಪಾಯಿಂಟ್ ತುಂಬಾ ವಿಸ್ತಾರವಾಗಿ ಇರುವ ಕಾರಣ ಅಧಿಕಾರಿಗಳು ಇಂದು ಅರ್ಧ ಭಾಗವನ್ನು ಮಾತ್ರ ಅಗೆದಿದ್ದು, ಇನ್ನೂ ಅರ್ಧ ಭಾಗವನ್ನು ನಾಳೆ ಅಗೆಯಲಿದ್ದಾರೆ. ಇಂದು ಅಗೆದ 13ನೇ ಪಾಯಿಂಟ್‌ನ ಅರ್ಧ ಭಾಗದಲ್ಲಿ ಯಾವುದೇ ಅಸ್ತಿಪಂಜರದ ಕುರುಹುಗಳು ಪತ್ತೆಯಾಗಿಲ್ಲ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿದೆ.
“ಅಧಿಕಾರಿಗಳು ಈ ಹಿಂದೆ ಉತ್ಖನನ ಜಾಗದಲ್ಲಿ ಗ್ರೀನ್ ನೆಟ್‌ಅನ್ನು ಮಾಧ್ಯಮದ ಕ್ಯಾಮೆರಾಗಳಿಗೆ ಅಡ್ಡಲಾಗಿ ಕಟ್ಟಿ, ಶೋಧ ಕಾರ್ಯ ಕ್ಯಾಮರಾಕ್ಕೆ ಕಾಣದಂತೆ ಶೋಧ ಕಾರ್ಯಾಚರಣೆವನ್ನು ಮಾಡುತ್ತಿದ್ದರು. ಆದರೆ ಇಂದು ಯಾವುದೇ ಮುಚ್ಚು ಮರೆಯಿಲ್ಲದೆ ಕಾರ್ಯಾಚರಣೆ ಜರುಗಿತು. ಇತ್ತ ಕಾರ್ಯಾಚರಣೆ ವೀಕ್ಷಿಸಲು ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸ್ಥಳಕ್ಕೆ ಬಂದು ಕುತೂಹಲದಿಂದ ಕಾರ್ಯಾಚರಣೆ ವೀಕ್ಷಿಸಿದರು. ದೂರುದಾರನು ತಾನು ಮುಂದೆ ನಿಂತು ಹಿಟಾಚಿ ಚಾಲಕನಿಗೆ ಸೂಚನೆಗಳನ್ನು ನೋಡುತ್ತ ಸ್ಥಳವನ್ನು ಅಗೆಸುತ್ತಿರುವುದು ಕಂಡುಬಂದಿತು.
ಕಾರ್ಯಾಚರಣೆಯಲ್ಲಿ ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ, ಸೈಮನೆ, ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್, ತಹಶೀಲ್ದಾರ್ ಪೃಥ್ಯ ಸಾನಿಕಮ್, ಅರಣ್ಯ ಕಂದಾಯ, ವಿಧಿವಿಜ್ಞಾನ ಪ್ರಯೋಗಾಲಯ ಸೇರಿದಂತೆ ಸುಮಾರು 50 ರಿಂದ 60ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ಸ್ಥಳದಲ್ಲಿ ಇದ್ದರು.
ಎಸ್‌ಐಟಿ ಮುಖ್ಯಸ್ಥ ಪ್ರಣವ್ ಕುಮಾರ್ ಮೊಹಾಂತಿ ಭೇಟಿ
ನೇತ್ರಾವತಿ ಸ್ನಾನಘಟ್ಟದ ಬಳಿಯ 13ನೇ ಪಾಯಿಂಟ್‌ನಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಯುವ ವೇಳೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಕುಮಾರ್ ಮೊಹಾಂತಿ ಅವರು ಭೇಟಿ ನೀಡಿ ಕಾರ್ಯಾಚರಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಬಳಿಕ ಈ ಪಾಯಿಂಟ್ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ಮಾರ್ಗದರ್ಶನ ನೀಡಿದರು. ಜಿಪಿಆರ್ ಶೋಧ ಕಾರ್ಯ ಮುಗಿಯುವ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ ಅವರು ಅಧಿಕಾರಿಗಳೊಂದಿಗೆ ಅಲ್ಲಿಯೇ ಒಂದು ಸುತ್ತು ಮಾತುಕತೆ ನಡೆಸಿ ಬಳಿಕ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಹಿಂತಿರುಗಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಭೇಟಿ
ನೇತ್ರಾವತಿ ನದಿ ಪಕ್ಕದ 13ನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡ ಭೇಟಿ ನೀಡಿ ಎಸ್‌ಐಟಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದು ತೆರಳಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಬಾಲಕಿಯರ ವಸತಿ ನಿಲಯದ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಭೂಮಿಪೂಜೆ
ನಾಳೆಯು ಕಾರ್ಯಾಚರಣೆ ಮುಂದುವರಿಕೆ
ದೂರುದಾರ ತಾನು ನೇತ್ರಾವತಿ ಸ್ನಾನಘಟ್ಟದ ಅಜಿಕುರಿ ರಸ್ತೆಯ ಬದಿಯಲ್ಲಿ ಗುರುತಿಸಿದ 13ನೇ ಪಾಯಿಂಟ್‌ನಲ್ಲಿ ಸಾಮೂಹಿಕವಾಗಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ತಿಳಿಸಿದ್ದಾನೆ. ಇಲ್ಲಿ ಅತ್ಯಂತ ವಿಸ್ತಾರವಾದ ಜಾಗವನ್ನು ಆತ ಗುರುತಿಸಿದ್ದ. ಇಂದು ಪರಿಶೀಲನೆಯನ್ನು ಅತ್ಯಂತ ವಿಸ್ತಾರವಾದ ಜಾಗದಲ್ಲಿ ನಡೆಸಲಾಗಿತ್ತು. ಈ ಹಿನ್ನೆಲೆ ದೂರುದಾರ ಗುರುತಿಸಿದ 13ನೇ ಪಾಯಿಂಟ್ ಸೇರಿದಂತೆ ಇತರ ಭಾಗಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಇಂದು ಅಗೆದು ಪರಿಶೀಲಿಲನೆ ನಡೆಸಲಿದ್ದಾರೆ.
ಬೀಗಿ ಖಾಕಿ ಬಂದೋಬಸ್ತ್
ಎಸ್‌ಐಟಿ ಕಾರ್ಯಾಚರಣೆಯ ನಡುವೆಯೇ ಯುಟ್ಯೂಬರ್‌ಗಳ ಮೇಲೆ ಹಲ್ಲೆ ಹಾಗೂ ಬಳಿಕ ನಡೆದ ಘರ್ಷಣೆಗಳ ಹಿನ್ನೆಲೆಯಲ್ಲಿ 13ನೇ ಪಾಯಿಂಟ್ ಅಗೆಯುವ ಕಾರ್ಯ ನಡೆಯುವ ವೇಳೆ ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಾಂಗಳ ತಿರುವು ಹಾಗೂ ಕಾರ್ಯಾಚರಣೆ ನಡೆಯುವ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.