ಅವಧಿಪೂರ್ವ ಜನನ, ವಿವಿಧ ಕಾಯಿಲೆ ಕಾರಣದಿಂದ ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,254 ನವಜಾತ ಶಿಶುಗಳು ಹಾಗೂ 45 ತಾಯಂದಿರು ಮರಣ ಹೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮುಂಗಾರು ಅಧಿವೇಶನದಲ್ಲಿ ವಿಧಾನ ಪರಿಷತ್‌ನ ಪ್ರಶ್ನೋತರ ಅವಧಿಯಲ್ಲಿ ಸೋಮವಾರ ಎಂಎಲ್ಸಿ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಈ ಮೇಲಿನದು ಉತ್ತರಿಸಿದರು.
2022-23ನೇ ವರ್ಷದಲ್ಲಿ 446, 2023-24ರಲ್ಲಿ 491 ಹಾಗೂ 2024-25ನೇ ಸಾಲಿನಲ್ಲಿ 317 ಶಿಶು ಮರಣ ಪ್ರಕರಣ ವರದಿಯಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ 2023-24ನೇ ವರ್ಷದಲ್ಲಿ 1 ಶಿಶು ಮರಣ ಪ್ರಕರಣ ಹೊರತುಪಡಿಸಿದರೆ ಉಳಿದ ಎಲ್ಲ ಪ್ರಕರಣಗಳು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ವರದಿ ಆಗಿವೆ. ತಾಯಂದಿರು ಮತ್ತು ಶಿಶುಗಳ ಸಾವು ಪ್ರಕರಣ ನಡೆದಿರುವುದು ಸರ್ಕಾರ ಆಸ್ಪತ್ರೆಗಳಲ್ಲಿ ಎಂಬುದು ಅಘಾತಕಾರಿ ಸಂಗತಿಯಾಗಿದೆ.
3 ವರ್ಷದಲ್ಲಿ 45 ತಾಯಂದಿರು ಸಾವು :
ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ, ರಕ್ತಸ್ರಾವ ಸೇರಿದಂತೆ ವಿವಿಧ ಕಾರಣದಿಂದ ಕೊಪ್ಪಳ ಜಿಲ್ಲೆಯಲ್ಲಿ 2022-23 ರಿಂದ 2024-25ರ ಮೂರು ವರ್ಷ ಅವಧಿಯಲ್ಲಿ ಒಟ್ಟು 45 ತಾಯಂದಿರು ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ. ಒಂದು ಪ್ರಕರಣ ಬಿಟ್ಟರೆ ಉಳಿದ ಎಲ್ಲ ತಾಯಂದಿರು ಸಾವು ಆಗಿರುವುದು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ.
ತಾಯಿ, ಶಿಶುಗಳ ಸಾವಿಗೆ ಕಾರಣಗಳೇನು?
ಅವಧಿ ಪೂರ್ವ ಜನನ, ಜನನ ಸಮಯದಲ್ಲಿ ಉಂಟಾಗುವ ಉಸಿರುಗಟ್ಟುವಿಕೆ, ಕಡಿಮೆ ತೂಕದ ಜನನದಿಂದ ಉಂಟಾಗುವ ತೊಂದರೆಗಳು, ಶ್ವಾಸಕೋಶ ಸೋಂಕುಗಳು, ನ್ಯೂಮೋನಿಯಾ, ಸೆಪ್ಸಿಸ್, ನವಜಾತ ಶಿಶುಗಳಲ್ಲಿ ಕಾಮಾಲೆ ಮತ್ತು ಜನ್ಮಜಾತ ತೊಂದರೆ, ಹೃದಯ ಸಂಬಂಧಿತ ಹಾಗೂ ನರವ್ಯೂಹ ಸಂಬಂಧಿತ ದೋಷಗಳಿಂದ ಶಿಶು ಮರಣ ಆಗಬಹುದು.
ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಅಸ್ವಸ್ಥತೆಗಳು, ರಕ್ತಸ್ರಾವ, ಸೆಪ್ಸಿಸ್, ಹೃದಯ ಸಂಬಂಧಿತ ಕಾಯಿಲೆ, ಬಹು ಅಂಗಾಂಗ ವೈಫಲ್ಯ, ಗರ್ಭಪಾತ ಸೋಂಕುಗಳು ಸೇರಿದಂತೆ ಇನ್ನಿತರ ಕಾರಣದಿಂದ ತಾಯಿ ಮರಣ ಸಂಭವಿಸುತ್ತವೆ. ತಾಯಿ ಮರಣಗಳಿಗೆ ತಕ್ಷಣ ಪರಿಹಾರ ಒದಗಿಸುವ ನಿಖರವಾದ ನೀತಿಯು ಇರುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
11 ವೈದ್ಯರಿಗೆ ನೋಟಿಸ್ :
ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ತಾಯಿ ಮತ್ತು ಶಿಶು ಮರಣಗಳಿಗೆ ಸಂಬಂಧಿಸಿದಂತೆ ಕಲಬುರಗಿ (4), ರಾಮನಗರ (2) ಸೇರಿದಂತೆ ದಾವಣಗೇರೆ, ಯಾದಗಿರಿ,ತುಮಕೂರು, ಶಿವಮೊಗ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿವಿಧ ಸರ್ಕಾರಿ ಆಸ್ಪತ್ರೆಗಳ ಒಟ್ಟು 11 ವೈದ್ಯರ ವಿರುದ್ಧ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದ್ದು, ವೈದ್ಯರುಗಳು ಸಮಜಾಯಿಸಿ ನೀಡಿದ್ದು, ಕ್ರಮವಹಿಸಲಾಗುತ್ತಿದೆ. ಈ ರೀತಿಯ ದುರ್ಘಟನೆಗಳಿಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸುವ ವ್ಯವಸ್ಥೆಯಿದೆ. ರಾಜ್ಯಮಟ್ಟದ ತಾಯಿ ಮರಣ ವಿಶ್ಲೇಷಣೆ ಸಮಿತಿಯು ಕಳೆದ ವರ್ಷ 530 ತಾಯಿ ಮರಣಗಳ ವಿಶ್ಲೇಷಣೆಯನ್ನು ನಡೆಸಿದೆ ಎಂದು ಸಚಿವ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.
ಶಿಶು ಮರಣ ಪ್ರಮಾಣ ಇಳಿಕೆ :
ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಇಳಿಕೆಯಾಗುತ್ತಿದ್ದು, 2022ರ ಎಸ್‌ಆರ್‌ಎಸ್ ವರದಿ ಪ್ರಕಾರ ಶಿಶು ಮರಣ ಪ್ರಮಾಣವು 1,000 ಜೀವಂತ ಜನನಗಳಿಗೆ 19 ರಿಂದ 14ಕ್ಕೆ ಇಳಿದಿದೆ. ರಾಜ್ಯಾದ್ಯಂತ ಮಕ್ಕಳ ಮರಣಗಳನ್ನು ಗುರುತಿಸಿ, ಅವುಗಳ ಪರಿಶೀಲನೆ ನಡೆಸಿ ಮತ್ತು ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ, ಜಿಲ್ಲಾ ಮಟ್ಟದಲ್ಲಿ ಮಕ್ಕಳ ಮರಣ ಪರಿಶೀಲನಾ ಕಾರ್ಯವಿಧಾನವನ್ನು ಅನುಷ್ಠಾನಗೊಳಿಸಲಾಗಿದೆ.
ʼರಾಜ್ಯದಲ್ಲಿ 2023-24ನೇ ವರ್ಷದಲ್ಲಿ ಎಮ್‌ಪಿಸಿಡಿಎಸ್‌ಆರ್ ಜಾರಿಗೊಳಿಸಿ ಪರಿಶೀಲನಾ ಕಾರ್ಯವಿಧಾನಗಳನ್ನು ಬಲಪಡಿಸಲಾಗಿದೆ. ಈ ವ್ಯವಸ್ಥೆಯು ಮಕ್ಕಳ ಮರಣಕ್ಕೆ ಕಾರಣವಾಗಿರುವ ಆರೋಗ್ಯ ಸೇವಾ ಸುಧಾರಣೆಗಳನ್ನು ಗುರುತಿಸಿ, ಅವುಗಳಿಗೆ ತಾತ್ಕಾಲಿಕ ಮತ್ತು ದೀರ್ಘಕಾಲೀನ ಪರಿಹಾರ ಸೂಚನೆಗಳನ್ನು ನೀಡುವ ಮೂಲಕ ಆರೋಗ್ಯ ವ್ಯವಸ್ಥೆಯು ಸುಧಾರಣೆಯ ದಿಕ್ಕಿನಲ್ಲಿ ನಡೆಯುವಂತೆ ಮಾಡಲು ಸಹಕಾರಿಯಾಗುತ್ತದೆ.
ಈ ಉಪಕ್ರಮವು ಶಿಸ್ತು ಕ್ರಮ ಅಥವಾ ತನಿಖಾ ಪ್ರಕ್ರಿಯೆಯಾಗಿರದೇ ಮರಣದ ಹಿಂದೆ ಇರುವ ವ್ಯವಸ್ಥಾತ್ಮಕ ಕಾರಣಗಳನ್ನು ವಿಶ್ಲೇಷಿಸಿ ಮುಂದೆ ಇಂತಹ ಆಗದಂತೆ ತಡೆಯುವ ಪುನರಾವರ್ತಿ ಘಟನೆಗಳು ನಿಟ್ಟಿನಲ್ಲಿ ರೂಪಿಸಲಾಗಿರುವ ಮೌಲ್ಯಮಾಪನಾತ್ಮಕ ವಿಧಾನವಾಗಿದೆ.ಯಾವುದೇ ವೈದ್ಯಕೀಯ ಸಂಸ್ಥೆ ಅಥವಾ ವೈದ್ಯರ ನಿರ್ಲಕ್ಷ್ಯವನ್ನು ಗುರುತಿಸಿ ಶಿಸ್ತು ಕ್ರಮ ಜರುಗಿಸುವಂತಹ ಪ್ರಕರಣಗಳು ವರದಿಯಾಗಿರುವುದಿಲ್ಲʼ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ತಾಯಿ ಮರಣ ತಡೆಗಟ್ಟುವುದು ಹೇಗೆ?
ಮೊದಲ ತ್ರೈಮಾಸಿಕ ಸೇರಿದಂತೆ ಎಲ್ಲಾ ಗರ್ಭಿಣಿ ಭೇಟಿಯಲ್ಲಿ ಹೆಚ್ಚಿನ ಅಪಾಯಕಾರಿ ಅಂಶಗಳಿಗಾಗಿ ಪರೀಕ್ಷಿಸುವ ಮೂಲಕ ಪ್ರಸವಪೂರ್ವ ಆರೈಕೆಯ ಗುಣಮಟ್ಟವನ್ನು ಸುಧಾರಿಸುವುದು. ಗರ್ಭಿಣಿ ಮತ್ತು ಸಹಾಯಕರಿಂದ ಪ್ರಸ್ತುತ ಮತ್ತು ಹಿಂದಿನ ಪ್ರಸೂತಿ. ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿವರಗಳನ್ನು ಕೂಲಂಕುಷವಾಗಿ ಪಡೆಯುವುದು. ಪ್ರಸವ ಪೂರ್ವ ಮತ್ತು ಪ್ರಸವ ನಂತರ ಅವಧಿಗೆ ಐಎಫ್‌ಎ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಒದಗಿಸುವುದು. ರಕ್ತಹೀನತೆ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಗ್ಲೋಕೋಸ್‌ನ ಪತ್ತೆಹಚ್ಚುವಿಕೆಗೆ ಒತ್ತು ನೀಡಬೇಕು. ಗರ್ಭಾವಸ್ಥೆಯಲ್ಲಿ ಎಚ್‌ಐವಿ, ಕ್ಷಯ, ಹೆಪಟೈಟಿಸ್, ಸಿಫಿಲಿಸ್ ಮತ್ತು ಲಕ್ಷಣರಹಿತ ಬ್ಯಾಕ್ಟಿರಿಯೂರಿಯಾದಂತಹ ಸೋಂಕುಗಳ ಪತ್ತೆಹಚ್ಚುವುದು ಸೇರಿದಂತೆ 27 ಅಂಶಗಳ ಶಿಫಾರಸುಗಳ ಮಾಹಿತಿಯನ್ನು ಆರೋಗ್ಯ ಇಲಾಖೆ ಒದಗಿಸಿದೆ.
2 ವರ್ಷದಲ್ಲಿ 1,419 ಬಾಲ್ಯವಿವಾಹ :
ರಾಜ್ಯದಲ್ಲಿ 2023-24 ಹಾಗೂ 2024-25ನೇ ಸಾಲಿನಲ್ಲಿ ಒಟ್ಟು 1,419 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿರುವುದು ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವರದಿ ನೀಡಿದೆ. 2023-24ರಲ್ಲಿ 719 ಪ್ರಕರಣ ಹಾಗೂ 2024-25ನೇ ವರ್ಷದಲ್ಲಿ 700 ಪ್ರಕರಣಗಳು ದಾಖಲಾಗಿವೆ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2025ರ ಎಪ್ರಿಲ್ ತಿಂಗಳಿಂದ ಜೂನ್ ವರೆಗೆ ಮೂರು ತಿಂಗಳಲ್ಲಿ 211 ಬಾಲ್ಯವಿವಾಹ ಪ್ರಕರಣ ದಾಖಲಾಗಿವೆ.
ಕಳೆದ ಎರಡು ವರ್ಷದಲ್ಲಿ ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಾಲ್ಯವಿವಾಹ ನಡೆದಿದ್ದು, ಎರಡು ಜಿಲ್ಲೆಗಳಲ್ಲಿ 158 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. ಇನ್ನು ಅತಿ ಕಡಿಮೆ ಬಾಲ್ಯವಿವಾಹ ನಡೆದಿರುವ ಜಿಲ್ಲೆಗಳ ಸಾಲಿನಲ್ಲಿ ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿದ್ದು, ತಲಾ 3 ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ʼಈದಿನ.ಕಾಮ್ʼ ಜೊತೆ ಮಾತನಾಡಿ, ʼಬಾಲ್ಯವಿವಾಹ, ಮಕ್ಕಳು ಅಪೌಷ್ಟಿಕತೆ, ತಾಯಂದಿರು ರಕ್ತಹೀನತೆ ಸಮಸ್ಯೆ ಗಂಭೀರವಾದದ್ದು. ಆರೋಗ್ಯ ಇಲಾಖೆ ಇದರ ಕಡೆಗೆ ಹೆಚ್ಚು ಒತ್ತು ಕೊಡಬೇಕು. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಭೇಟಿ ನೀಡಿ ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಔಷಧೋಪಚಾರ ಮಾಡುವುದು ಮತ್ತು ಅದರ ಮೇಲುಸ್ತುವಾರಿ ಮಾಡಬೇಕು. ಬಾಲ್ಯವಿವಾಹ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹದಿಂದ ಅಪೌಷ್ಟಿಕತೆ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದ ಶಿಶು ಹಾಗೂ ತಾಯಿಮರಣ ಆಗುವ ಸಾಧ್ಯತೆ ಇರುತ್ತದೆ. ಇದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕುʼ ಎಂದು ತಿಳಿಸಿದ್ದಾರೆ.
ʼಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದಿರುವುದಕ್ಕೆ ಅನಾಹುತಗಳು ಸಂಭವಿಸುತ್ತಿವೆ. ಹೆರಿಗೆ ತಜ್ಞರಿಲ್ಲದ ಕಾರಣ ಸೂಕ್ತ ಸಮಯಕ್ಕೆ ಗರ್ಭಿಣಿ, ಬಾಣಂತಿಯರು ನರಳಾಡಬೇಕಾದ ಸ್ಥಿತಿ ಅನೇಕ ಕಡೆಗಳಲ್ಲಿ ಇದೆ. ಪ್ರಾಥಮಿಕ, ಸಮುದಾಯ ಸೇರಿದಂತೆ ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಬೇಕು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಕಾಳಜಿ ಕುರಿತು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮಗಳು ಆಯೋಜಿಸುವುದು ಅಗತ್ಯʼ ಎಂದು ಕೊಪ್ಪಳದ ಶಂಕರ ಸುರಾಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತ!
ವರದಿ ಮಾಹಿತಿ : ಕೇಶವ್ ಕಟ್ಟಿಮನಿ, ʼಈದಿನʼ ಕೊಪ್ಪಳ

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.