ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕೊಪ್ಪಳದ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಫರೀದಾ ಬೇಗಂ ತಂಬಾಕದಾರ್ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಕಲಬುರಗಿ, ಬೆಳಗಾವಿ, ಚಿಕ್ಕಮಂಗಳೂರು, ಕೊಡಗು, ತುಮಕೂರು, ದಕ್ಷಿಣ ಕನ್ನಡ ಹಾಗೂ ಕೊಪ್ಪಳ ಜಿಲ್ಲೆಯ ಸೇರಿ ಒಟ್ಟು ಎಂಟು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ವಿವಿಧ ಮಾನದಂಡಗಳಡಿ ವಿಶೇಷ ಅತಿಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಎರಡು ಗ್ರಾಮ ಪಂಚಾಯತಿ ಆಧ್ಯಕ್ಷರು ಆಯ್ಕೆಯಾಗಿದ್ದು, ಇದರಲ್ಲಿ ಕುದುರಿಮೋತಿಯ ಫರೀದಾ ಬೇಗಂ ಒಬ್ಬರು. ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯ ಅಧಿಕೃತ ಮಾಹಿತಿ ನೀಡಿದೆ.
ಈ ಎಂಟು ಜನರಿಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಯ್ಕೆಯಾದ ಸದಸ್ಯರು ತಮ್ಮೊಂದಿಗೆ ಪತಿ ಅಥವಾ ಪತ್ನಿಯನ್ನು ಕರೆದೊಯ್ಯಲು ಅವಕಾಶವಿದ್ದು, ರೈಲು ಪ್ರಯಾಣ ಹಾಗೂ ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳುವ ವಸತಿ, ಊಟ, ಉಪಹಾರದ ವೆಚ್ಚವನ್ನು ಪಂಚಾಯತ್ ನಿಧಿಯಿಂದ ಭರಿಸುವಂತೆ ಸೂಚಿಸಲಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ಫರೀದಾ ಬೇಗಂ ಮಾತನಾಡಿ, “ಕೊಪ್ಪಳ ಜಿಲ್ಲೆಯಲ್ಲಿಯೇ ಕುದರಿಮೋತಿ ಗ್ರಾಮ ಪಂಚಾಯತಿಯಿಂದ ಆಗಸ್ಟ್ 15ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರೋತ್ಸವದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ನನ್ನನ್ನು ವಿಶೇಷ ಅತಿಥಿಯಾಗಿ ಆಯ್ಕೆ ಮಾಡಿದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು ಹೇಳುತ್ತೇನೆ. ಕುದರಿಮೋತಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನ ಪರಿಗಣಣಿಸಿ ನಮ್ಮ ಗ್ರಾಮ ಆಯ್ಕೆ ಮಾಡಿದ್ದಾರೆ. ಇದು ಗ್ರಾಮದ ಪ್ರಗತಿಗೆ ಹಾಗೂ ಮತ್ತಷ್ಟು ಸಕ್ರಿಯವಾಗಿ ಅಭಿವೃದ್ಧಿ ಕೆಲಸ ಮಾಡಲು ಪ್ರೋತ್ಸಾಹ ನೀಡಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವು
ಗ್ರಾಮ ಪಂಚಾಯತಿ ಪಿಡಿಒ ಮಾತನಾಡಿ, “ಕೇಂದ್ರ ಸರಕಾರ ಕುದರಿಮೋತಿ ಗ್ರಾಮ ಪಂಚಾಯತ್ ಅಭಿವೃದ್ಧಿ ಕೆಲಸವನ್ನು ಪರಿಗಣಿಸಿ ನಮ್ಮ ಆಯ್ಕೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಅತಿಯಾಗಿ ಆಯ್ಕೆ ಮಾಡಿದೆ. ಇದು ನಮ್ಮ ಗ್ರಾಮಕ್ಕೆ ಹೆಮ್ಮೆ” ಎಂದರು.
ಅಧ್ಯಕ್ಷೆ ಫರೀದಾ ಬೇಗಂ ಹುಸೇನಸಾಬ್ ತಂಬಾಕದಾರ್ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.