ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಹೈರಾಣಾಗುತ್ತಿದ್ದರೆ, ಇನ್ನೊಂದೆಡೆ ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆಗಳಿಲ್ಲದೆ ಆತಂಕದಲ್ಲಿ ದಿನದೂಡುತ್ತಿದ್ದಾರೆ.
ರಾಜ್ಯಾದ್ಯಂತ 2025ರಲ್ಲಿ ಭಾರೀ ಮಳೆಯಿಂದಾಗಿ ರೈತರ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ವಿಜಯಪುರ, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕಲಬುರಗಿ, ಧಾರವಾಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದ ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ಕಾಫಿ, ಅಡಿಕೆ, ಹೆಸರು, ಉದ್ದು, ತರಕಾರಿ ಮತ್ತು ಹೂವಿನ ಬೆಳೆಗಳು ನಾಶವಾಗಿವೆ. ಕೆಲವು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿದಿದ್ದು, ಜಮೀನುಗಳು ಜಲಾವೃತಗೊಂಡಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಿತ್ರದುರ್ಗದ ಕುರುಡಿಹಳ್ಳಿಯಲ್ಲಿ 9 ಎಕರೆ ಈರುಳ್ಳಿ ಮತ್ತು ಮೆಕ್ಕೆಜೋಳ ಬೆಳೆ ಹಾಗೂ ಸೂರ್ಯಕಾಂತಿ ಬೆಳೆ ನಾಶವಾಗಿದೆ. ಧಾರವಾಡದಲ್ಲಿ 34,303.85 ಹೆಕ್ಟೇರ್ ವಿವಿಧ ಬೆಳೆಗಳು ಹಾನಿಯಾಗಿವೆ. ಕಲಬುರಗಿಯಲ್ಲಿ ಹೆಸರು ಮತ್ತು ಉದ್ದಿನ ಬೆಳೆಗಳಿಗೆ ರೋಗ ತಗುಲಿದೆ. ಚಿಕ್ಕಮಗಳೂರು ಮತ್ತು ಹಾಸನ ಭಾಗದಲ್ಲಿ ಕಾಫಿ, ಅಡಕೆ ಮತ್ತು ಏಲಕ್ಕಿ ಬೆಳೆಗಳು ರೋಗಕ್ಕೆ ತುತ್ತಾಗುವ ಭೀತಿಯಿದೆ.
ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಹೈರಾಣಾಗುತ್ತಿದ್ದರೆ, ಇನ್ನೊಂದೆಡೆ ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆಗಳಿಲ್ಲದೆ ಆತಂಕದಲ್ಲಿ ದಿನದೂಡುತ್ತಿದ್ದಾರೆ.
ಹಾಸನ ತಾಲೂಕಿನ ಹಿರೀಕಡಲೂರು ಗ್ರಾಮದ ರೈತ ಪಾಂಡುರಂಗ ಎಚ್ ಜಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಆಲೂಗಡ್ಡೆ ಬಿತ್ತನೆ ಮಾಡಿದ್ದೇವೆ. ಈಗ ಮಳೆ ಅಧಿಕವಾಗಿರುವ ಕಾರಣ ಆಲೂಗಡ್ಡೆ ಎರಡೇ ತಿಂಗಳಿಗೆ ರೋಗಕ್ಕೆ ಬಲಿಯಾಗಿದೆ. ಎಷ್ಟೇ ಔಷಧಿ ಸಿಂಪಡಣೆ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಾಕಂದ್ರೆ ಮಳೆ ಬಿಡುವು ಕೊಡದೆ ನಿರಂತರವಾಗಿ ಸುರಿಯುತ್ತಿರುವುದರಿಂದ ಎಷ್ಟೇ ಔಷಧಿ ಸಿಂಪಡಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ನೆಲದಲ್ಲಿ ಶೀತ ಹೆಚ್ಚಾದಂತೆ ಆಲೂಗಡ್ಡೆಗೆ ಬಂದಿರುವ ಅಂಗಮಾರಿ ರೋಗ ಉಲ್ಬಣವಾಗುತ್ತ ಹೋಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಮಳೆ ಬರಬೇಕಾದ ಸಮಯದಲ್ಲಿ ಬರಲಿಲ್ಲ, ಆಗಲೆಲ್ಲ ನಾವು ಪಕ್ಕದವರ ಪಂಪ್‌ಸೆಟ್‌ನಿಂದ ನೀರು ಖರೀದಿಸಿ ಹಾಯಿಸಿದ್ದೆವು. ಈಗ ಮಳೆಯ ಅವಶ್ಯಕತೆ ಇಲ್ಲ, ಫಸಲು ಬಿಡುವ ಸಮಯ, ಮತ್ತೆ ರೋಗಕ್ಕೆ ತುತ್ತಾಗದಂತೆ ಔಷಧಿ ಸಿಂಪಡಿಸಬೇಕು. ಇಂತಹ ಸಂದರ್ಭದಲ್ಲಿ ಮಳೆಗಿಂತ ಹೆಚ್ಚಾಗಿ ಬಿಸಿಲಿನ ಅವಶ್ಯಕತೆಯಿದೆ. ಆದರೆ, ನಿರಂತರ ಸುರಿಯುತ್ತಿರುವ ಮಳೆಯಿಂದ ಏನೂ ಮಾಡಲಾಗದೆ ಕೈಮುರಿದು ಕೂರಿಸಿದಂತಾಗಿದೆ” ಎಂದು ಹೇಳಿದರು.
“ನಮ್ಮ ಭಾಗಗಳಲ್ಲಿ ಆಲೂಗಡ್ಡೆ ಒಂದೇ ಆರ್ಥಿಕ ಬೆಳೆ. ₹2700ರಂತೆ 10 ಚೀಲ ಹಿಮಾಲಿನಿ ತಳಿಯ ಆಲೂಗಡ್ಡೆಯನ್ನು ಬಿತ್ತನೆ ಮಾಡಿದ್ದೇನೆ. ಆದರೆ ರೋಗಕ್ಕೆ ತುತ್ತಾಗಿದೆ. ಇಳುವರಿ ಹೇಗೆ ಬರುತ್ತದೆ ಎಂಬುವ ಆತಂಕವೂ ಎದುರಾಗಿದೆ. ರೈತರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ನಮ್ಮಂತಹ ಸಣ್ಣ ಪುಟ್ಟ ಇಡುವಳಿದಾರರಿಂದ ಯಾವುದೇ ಲಾಭ ಕಾಣಲು ಸಾಧ್ಯವೇ ಇಲ್ಲ. ಕೊನೆಪಕ್ಷ ಬಂದ ಬೆಳೆಗಾದರೂ ಸರ್ಕಾರ ಬೆಂಬಲ ಬೆಲೆ ಘೋಷಿಸುವುದು, ಬೆಳೆ ಪರಿಹಾರ ನೀಡುವುದು ಹಾಗೂ ಸಹಾಯಧನ ನೀಡುವಂತಹ ಕ್ರಮಗಳನ್ನಾದರೂ ಕೈಗೊಂಡರೆ ರೈತರಿಗೆ ಅನುಕೂಲವಾಗುತ್ತದೆ” ಎಂದು ಮನವಿ ಮಾಡಿದರು.
ಜೋಳದ ಬೆಳೆಯಂತೂ ಈ ವರ್ಷ ಹೇಳಿಕೊಳ್ಳುವಂತಿಲ್ಲ. ಬಿತ್ತನೆ ಮಾಡಿದ ಬಳಿಕ ಒಂದಡಿ ಎತ್ತರಕ್ಕೆ ಬಂದ ಕೂಡಲೇ ಬಿಳಿಸುಳಿ ರೋಗ ಕಾಣಿಸಿಕೊಂಡಿದೆ, ಅದರಲ್ಲಿ ಹುಳುಗಳ ಕಾಟ ಬೇರೆ. ಔಷಧಿ ಸಿಂಪಡಿಸಿ ಹೇಗಾದರೂ ಸರಿ ಬೆಳೆಯನ್ನು ಉಳಿಸಿಕೊಳ್ಳೋಣವೆಂದರೆ, ತೆನೆ ಹೊಡೆಯುವುದೇ ಕಷ್ಟವಾಗಿದೆ. ನಾವೂ ಕೂಡ ಯಾವುದೇ ಕಂಪೆನಿಯ ಬಿತ್ತನೆ ಬೀಜಗಳನ್ನು ತಂದು ಹಾಕಿದರೂ ಕೂಡ ಕಂಪೆನಿಯವರು ಗ್ಯಾರಂಟಿ ನೀಡುತ್ತಿಲ್ಲ. ತುಂಡು ಭೂಮಿಗಳನ್ನು ಇಟ್ಟುಕೊಂಡು ಅದರಲ್ಲಿಯೇ ಅಲ್ಪಸ್ವಲ್ಪ ಬೆಳೆ ಬೆಳೆಯುವುದಕ್ಕೆ ಈ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿದೆ, ಸಾಲಗಳನ್ನು ಮಾಡಿಕೊಂಡು ಭೂಮಿ ಮೇಲೆ ಬಂಡವಾಳ ಹಾಕಿದ್ದೇವೆ. ಆದರೆ. ಬಿತ್ತನೆ ಬೀಜ, ಗೊಬ್ಬರ, ಕೂಲಿ, ಔಷಧಿ ಸೇರಿದಂತೆ ಇತ್ಯಾದಿ ಖರ್ಚುಗಳನ್ನೂ ಭರಿಸಲು ಅಸಾಧ್ಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಒಟ್ಟಾರೆಯಾಗಿ ರೈತರು ನೆಮ್ಮದಿಯಿಂದ ಬದುಕುವುದು ಅಸಾಧ್ಯವಾಗಿದೆ. ವರ್ಷ ಪೂರ್ತಿ ಕಷ್ಟಪಟ್ಟು ಭೂಮಿಯನ್ನು ಹಸನು ಮಾಡಿ, ಬೆಳೆ ಬಿತ್ತನೆ ಮಾಡಿ ಪೋಷಿಸಿ ಫಲದ ನಿರೀಕ್ಷೆಯಲ್ಲಿರುವ ಸಮಯಕ್ಕೆ ಬೆಳೆಗಳು ಅಕಾಲಿಕ ಮಳೆಗೆ ತತ್ತರಿಸುತ್ತವೆ, ಇಲ್ಲವೇ ಉತ್ತಮ ಬೆಲೆ ಇಲ್ಲದೆ ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯುವಂತಾಗುತ್ತದೆ. ಸದ್ಯ ರೈತರು ಇಂತಹ ದುಃಸ್ಥಿತಿಯನ್ನು ಎದುರಿಸುವಂತಾಗಿದೆ” ಆತಂಕ ವ್ಯಕ್ತಪಡಿಸಿದರು.
“ಜಮೀನಿನಲ್ಲೆ ಬೆಳೆನಷ್ಟದಿಂದ ಎಷ್ಟೇ ಬಾರಿ ಸೋತರೂ ಕೂಡ, ಇದು ಒಂದಪ ನೋಡೋಣ ಅಂತ ಆಲೂಗಡ್ಡೆ ಹಾಕಿದೆ. ಜೋಳ ಹಾಕಿದೆ. ಈ ಬಾರಿಯೂ ಹೀಗಾಯ್ತು. ಇನ್ನೇನು, ಮಾಡೋದು ಭೂಮಿ ತಾಯಿ ಏನು ಬಂಜೆಯಾ? ಯಾವಾಗಾದರೊಮ್ಮೆ ಕೊಡ್ತಳೆ ಅಂತ ಕಾಯ್ತಿದ್ದೀವಿ” ಎಂದರು.
ಇನ್ನೋರ್ವ ರೈತ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಬಾರಿ ಶುಂಠಿ ಬೆಳೆಯಲ್ಲಿ ಕೊಳವೆ ರೋಗ ಅಧಿಕವಾಗಿ ಕಂಡುಬರುತ್ತಿದೆ. ಪ್ರಾರಂಭದಲ್ಲಿ ಬೆಂಕಿರೋಗ ಬಾಧಿಸುತ್ತಿತ್ತು. ಇದರಿಂದ ಬೆಳೆಯ ಪ್ರಾರಂಭಿಕ ಹಂತದಲ್ಲಿಯೇ ಶುಂಠಿ ಬೆಳೆಗೆ ರೋಗ ಆವರಿಸಿ ರೈತರನ್ನು ಕಂಗಾಲು ಮಾಡಿದೆ. ಮಳೆ ಅಧಿಕವಾಗಿರುವ ಕಾರಣ ಯಾವುದೇ ಕೀಟನಾಶಕಗಳನ್ನು ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಬೆಂಕಿರೋಗಕ್ಕೆ ತುತ್ತಾದ ಬೆಳಯನ್ನು ಹೇಗೋ ಉಳಿಸಿಕೊಳ್ಳಬಹುದಿತ್ತು. ಆದರೆ ಈಗ ಕೊಳವೆ ರೋಗದಿಂದ ಶುಂಠಿ ಬೆಳೆ ತೀವ್ರವಾಗಿ ಹದಗೆಡುತ್ತಿದೆ. ಶುಂಠಿಗೆ ಬೆಂಕಿ ರೋಗ ಬಂದು ರೈತನ ಕೈ ಮತ್ತು ಜೇಬು ಸುಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕಳೆದ ಕೆಲ ವರ್ಷಗಳಿಂದ ಶುಂಠಿ ಕೃಷಿಯಲ್ಲಿ ಹೊಸ ರೋಗಾಣುಗಳು ಕಾಣಿಸಿಕೊಂಡು ರೈತರನ್ನು ಹೈರಾಣಾಗಿಸುತ್ತಿದೆ. ಕಳೆದ ವರ್ಷ ರೋಗಾಣುಗಳು ಗೆಡ್ಡೆಗಳು ಬಲಿತ ಮೇಲೆ ಬಾಧಿಸಿದ್ದರಿಂದ ಗಿಡಗಳು ಮಾತ್ರ ಒಣಗಿದ್ದವು. ಹಾಗಾಗಿ, ಗೆಡ್ಡೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಿರಲಿಲ್ಲ. ಆದರೀಗ ಶುಂಠಿ ಬೆಳೆಯು ಪ್ರಾರಂಭದ ಹಂತದಲ್ಲಿಯೇ ಹೊಸ ರೋಗಾಣುಗಳ ತೀವ್ರತೆಗೆ ತುತ್ತಾಗಿ ಗಿಡಗಳು ಒಣಗಿ, ಗೆಡ್ಡೆ ಬೆಳವಣಿಗೆಯು ಕುಂಠಿತವಾಗಿದೆ” ಎಂದರು.
ಕಲಬುರಗಿ ಜಿಲ್ಲೆಯ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶರಣಬಸಪ್ಪ ಮುಮಶೆಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಲವೆಡೆ ಅಧಿಕ ಮಳೆಯಿಂದಾಗಿ ತೊಗರಿ ಬೆಳೆ ಹಾನಿಯಾಗಿದೆ. ಬಿತ್ತನೆಯಾದ ಒಟ್ಟಾರೆ ಪ್ರದೇಶದಲ್ಲಿ ಶೇ.50 ರಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ತೊಗರಿ ಕಣಜ ಎಂದೇ ಕರೆಯಲ್ಪಡುವ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ತೊಗರಿ ಇಳುವರಿ ಕಡಿಮೆಯಾಗುವ ಸಾಧ್ಯತೆಗಳಿವೆ. ಅಲ್ಲದೆ ಈಗಾಗಲೇ ಕಟಾವಿಗೆ ಬಂದಿರುವ ಹೆಸರು ಬೆಳೆ ಕಬ್ಬಿಣದ ರೋಗಕ್ಕೆ ತುತ್ತಾಗಿದೆ” ಎಂದರು.

“ಅಧಿಕ ಮಳೆಯಾಗುತ್ತಿರುವ ಕಾರಣ ಹೆಸರು ಕಾಯಿಗಳು ಗಿಡದಲ್ಲಿಯೇ ಕಪ್ಪುಬಣ್ಣಕ್ಕೆ ತಿರುಗಲು ಆರಂಭಿಸಿವೆ, ಗಿಡವನ್ನು ಕಿತ್ತು ಒಣಗಿಸಿಕೊಳ್ಳಲು ಮಳೆ ಬಿಡುವು ನೀಡುತ್ತಿಲ್ಲ. ಇಂತಹ ದುಃಸ್ಥಿತಿಯಲ್ಲಿ ರೈತರು ಕಣ್ಣು ಕಣ್ಣು ಬಿಡುವಂತಾಗಿದೆ. ಬೆಳೆ ಹಾನಿಯಾದ ಪ್ರದೇಶಗಳಿಗೆ ಕೃಷಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು” ಎಂದು ಆಗ್ರಹಿಸಿದರು.
“ಹಾವೇರಿ ಜಿಲ್ಲೆಯ ಭಾಗದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಸುರಿದ ಮಳೆಗೆ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಸಿಗದೇ ಇದ್ದುದ್ದರಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲಾಗದೇ ಸಂಪೂರ್ಣ ಜವುಳು ಹತ್ತಿ ಬೆಳವಣಿಗೆಯಾಗದೇ ಕುಂಠಿತಗೊಂಡಿವೆ. ಎರಡೆರಡು ಬಾರಿ ಬಿತ್ತನೆ ಮಾಡಿದ್ದರೂ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆದಾಗ್ಯೂ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಪ್ರದೇಶವನ್ನು ಸಮೀಕ್ಷೆ ಮಾಡದೆ ಜಿಲ್ಲಾಡಳಿತ ಕೈಚೆಲ್ಲಿ ಕುಳಿತಿದೆ. ಈ ಕೂಡಲೇ ಬೆಳೆ ಹಾನಿ ಪ್ರದೇಶ ಸಮೀಕ್ಷೆ ಮಾಡಿ, ರೈತರಿಗೆ ಬೆಳೆಹಾನಿ ಪರಿಹಾರ ಕೊಡಬೇಕು” ಎಂದು ರೈತ ಮುಖಂಡ ಶಿವಯೋಗಿ ಹೊಸಗೌಡ್ರ ಒತ್ತಾಯಿಸಿದ್ದಾರೆ.

“2025-26ನೇ ಸಾಲಿನಲ್ಲಿ ಸಾಕಷ್ಟು ರೈತರು ಬೆಳೆವಿಮೆ ತುಂಬಿದ್ದಾರೆ. ಬೆಳೆವಿಮೆ ತುಂಬಿದ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರ ಜಮೀನುಗಳನ್ನು ಸಮೀಕ್ಷೆ ಮಾಡಿ ನಿಯಮಾನುಸಾರ ಶೇ.25ರಷ್ಟು ಮಧ್ಯಂತರ ಬೆಳೆವಿಮೆ ಪರಿಹಾರ ಕೂಡಲೇ ಬಿಡುಗಡೆಗೊಳಿಸಬೇಕು. 2024-25ರಲ್ಲಿ ಹವಾಮಾನ ಆಧರಿತ ಬೆಳೆವಿಮೆ ತುಂಬಿದ ರೈತರಿಗೆ ವಿಮಾ ಕಂಪನಿಯವರು ಈವರೆಗೂ ಬಿಡಿಗಾಸು ಕೊಟ್ಟಿಲ್ಲ. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು” ಎಂದು ಹಾವೇರಿ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ ಆಗ್ರಹಿಸಿದರು.
ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?
ಶಿಗ್ಗಾವಿ ತಾಲೂಕಿನ ಹಲವು ಕಡೆಗಳಲ್ಲಿ ಚೆಂಡು ಹೂವು ಬೆಳೆದಿರುವ ರೈತರು ಒಂದೆಡೆ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದರೆ, ಮತ್ತೊಂಡೆಡೆ ಮಳೆಗೆ ಸಿಲುಕಿ ಹೂವಿನ ದಳಗಳು ಉದುರುವ ಆತಂಕದಲ್ಲಿದ್ದಾರೆ.
ಮಳೆಯ ಅಬ್ಬರಕ್ಕೆ ಚಿತ್ರದುರ್ಗ ಜಿಲ್ಲೆಯ ಕೆಳಗಳಟ್ಟಿ, ಜೋಡಿಚಿಕ್ಕೇನಳ್ಳಿ ಗ್ರಾಮದಲ್ಲಿ ಈರುಳ್ಳಿ, ಸೂರ್ಯಕಾಂತಿ ಬೆಳೆ ಜಲಾವೃತಗೊಂಡರೆ, ಹಲವು ರೈತರ ಈರುಳ್ಳಿ ಬೆಳೆ ಮಳೆಯಿಂದಾಗಿ ನಾಶವಾಗಿದೆ.
ಚಿತ್ರದುರ್ಗ ತಾಲೂಕಿನಲ್ಲಿ ಎರಡೂವರೆ ತಿಂಗಳಿಂದ ಸೊಂಪಾಗಿ ಬೆಳೆದಿದ್ದ ಈರುಳ್ಳಿ, ಸೂರ್ಯಕಾಂತಿ ಬೆಳೆಯು ಇನ್ನೇನು ಫಸಲು ಕೈಗೆ ಸಿಗುತ್ತದೆ ಎನ್ನುವಷ್ಟರಲ್ಲಿಯೇ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ನೀರು ಪಾಲಾಗಿದೆ. ಈರುಳ್ಳಿ, ಸೂರ್ಯಕಾಂತಿ ಇನ್ನು ಒಂದು ತಿಂಗಳಲ್ಲೇ ಕಟಾವಿಗೆ ಬರಬೇಕಿತ್ತು, ಆದ್ರೆ ರೈತರು ಇದೀಗ ಮಳೆಯಿಂದ ಜಮೀನು ಜಲಾವೃತವಾಗಿರುವ ಪರಿಣಾಮ ಬೆಳೆ ಕೊಳೆತು ಹೋಗಲಿದೆ ಎನ್ನುವ ಆತಂಕದಲ್ಲಿದ್ದಾರೆ.