ಮುಂಡಗೋಡ ಪಟ್ಟಣ ವ್ಯಾಪ್ತಿಯ ಕಾಳಗನಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಭಾರತಿ ನಾಯ್ಕ್ ಅವರ ಅಮಾನತು ಆದೇಶವನ್ನು ಹಿಂಪಡೆದು, ಅದೇ ಶಾಲೆಗೆ ಪುನರ್‌ನೇಮಕ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಭಾರತಿ ನಾಯ್ಕ ಅವರು, ಕಾಳಗನಕೊಪ್ಪ ಶಾಲೆಯ 2ನೇ ತರಗತಿ ವಿದ್ಯಾರ್ಥಿಗೆ “ಬಾಸುಂಡೆ ಬರುವಂತೆ ಹೊಡೆದಿದ್ದಾರೆ” ಎಂಬ ಆರೋಪ ಕೇಳಿಬಂದ ಹಿನ್ನೆಲೆ ಇಲಾಖೆಯು ತುರ್ತು ಕ್ರಮ ಕೈಗೊಂಡು ಅವರನ್ನು ಅಮಾನತು ಮಾಡಿದೆ. ಆದರೆ, ಈ ಕ್ರಮದ ವಿರುದ್ಧ ಗ್ರಾಮಸ್ಥರು, ಎಸ್‌ಡಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರು, ವಿದ್ಯಾರ್ಥಿಯ ತಾಯಿ ಹಾಗೂ ಹಳ್ಳಿಯ ಮಹಿಳೆಯರು, ಪುರುಷರು ಎಲ್ಲರೂ ಈ ಕ್ರಮವನ್ನು ಖಂಡಿಸಿ ಶಿಕ್ಷಕಿಯನ್ನು ಮತ್ತೆ ಇದೇ ಶಾಲೆಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಶಾಲಾ ಶಿಕ್ಷಕಿ ಕಳೆದ 2 ವರ್ಷಗಳಿಂದ ಆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಬಂದ ಮೇಲೆಯೇ ಮಕ್ಕಳ ಓದು-ಬರಹದಲ್ಲಿ ಹಾಗೂ ಶಿಸ್ತು-ಸಂಸ್ಕಾರಗಳಲ್ಲಿ ಗಮನಾರ್ಹ ಬದಲಾವಣೆ ಆಗಿದೆ. “ಅವಳು ಕೇವಲ ಶಿಕ್ಷಕಿ ಮಾತ್ರವಲ್ಲ, ನಮ್ಮ ಮಕ್ಕಳಿಗೆ ತಾಯಿ ಸಮಾನ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತನ್ನ ಮಗುವಿನಂತೆ ನೋಡಿಕೊಳ್ಳುತ್ತಾಳೆ. ಶಾಲೆಗೆ ಬಂದ ಮೇಲೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಪಾರ ಪ್ರಗತಿ ಕಂಡಿದ್ದೇವೆ” ಎನ್ನುತ್ತಾರೆ ಪೋಷಕರು.

ಆರೋಪದ ದಿನ ನಡೆದ ಘಟನೆ ಕುರಿತು ಗ್ರಾಮಸ್ಥರು, “ಮಕ್ಕಳು ಓದದೆ ಇದ್ದಾಗ ಅವರು ಒಂದು ಏಟು ಬೆನ್ನಿನ ಮೇಲೆ ಹೊಡೆದಿದ್ದಾರೆ ಅಷ್ಟೇ. ಓದದೆ ಇದ್ದಾಗ ಮತ್ತು ಅವರು ಹೇಳಿದ್ದನ್ನು ಕೇಳದೆ ಇದ್ದಾಗ ಶಿಕ್ಷಕರಾದವರು ಗದರುವುದು, ಹೊಡೆಯುವುದು ಸಾಮಾನ್ಯ. ಎಷ್ಟೋ ಸಲ ನಾವೇ ಅವರಿಗೆ ಹೇಳಿರುತ್ತೇವೆ. ಶಾಲೆಯಿಂದ ಸಂಜೆ ಮನೆಗೆ ಹೋದ ಮಗು ತನ್ನ ಅಜ್ಜಿ ಬೆನ್ನಿನ ಮೇಲೆ ಝಂಡು ಬಾಮ್ ಹಚ್ಚಿದಾಗ ಅದರ ಉರಿ ತಾಳಲಾರದೆ ಬೆನ್ನನ್ನು ಗೋಡೆಗೆ ಉಜ್ಜಿದರಿಂದ ಬೆನ್ನು ಕೆಂಪಾಗಿದೆ ಅಷ್ಟೇ. ಬೆಳಿಗ್ಗೆ 11.30ಕ್ಕೆ ಶಿಕ್ಷಕಿ ಹೊಡೆದಿದ್ದು ಅಲ್ಲಿಂದ ಮಗು ಶಾಲೆಯಲ್ಲಿ ಓದಿ ಬರೆದು ಊಟ ಮಾಡಿ ಸಂಜೆ ಮೇಲೆ ಈ ವಿಷಯ ಗೊತ್ತಾಗಿದೆ. ಆದ್ದರಿಂದ ಇದು ಶಿಕ್ಷಕಿ ಹೊಡೆತದಿಂದ ಆಗಿದ್ದಲ್ಲ ಎಂಬುದು ಸ್ಪಷ್ಟ. ವಿನಾಃ ಕಾರಣ ಅವರ ಮೇಲೆ ಅಪಾದನೆ ಹಾಕಲಾಗುತ್ತಿದೆ ಎಂದು ಪಾಲಕರು ಹೇಳಿದರು. ಇದನ್ನು ಹೊಡೆದ ಪರಿಣಾಮ ಎಂದು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ” ಎಂದು ಗ್ರಾಮಸ್ಥರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾಗಿ ಪಿ ಶ್ರವಣ್ ಕುಮಾರ್ ನೇಮಕ
ಈ ಸಂದರ್ಭದಲ್ಲಿ ಗ್ರಾಮಸ್ಥರು, “ಶಾಲೆಯಲ್ಲಿ ಶೌಚಾಲಯ, ಅಡುಗೆಮನೆ, ಕಾಂಪೌಂಡ್ ವಾಲ್ ಸೇರಿ ಹಲವು ಮೂಲಸೌಕರ್ಯಗಳು ಇಲ್ಲ. ಇಷ್ಟು ಸಮಸ್ಯೆಗಳಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಆದರೆ, ಇಂಥಾ ಸಣ್ಣ ವಿಚಾರಕ್ಕೆ ಶಿಕ್ಷಕಿಯನ್ನು ಅಮಾನತು ಮಾಡಿರುವುದು ದೊಡ್ಡ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಯ ತಾಯಿಯೂ ಕೂಡ ಶಿಕ್ಷಕಿಯ ಪರ ನಿಂತು, “ನನಗೆ ಈ ಶಿಕ್ಷಕಿಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ನನ್ನ ಮಗುವನ್ನು ಯಾವಾಗಲೂ ಕಾಳಜಿಯಿಂದ ನೋಡಿಕೊಂಡಿದ್ದಾರೆ. ತಕ್ಷಣ ಅಮಾನತು ಹಿಂಪಡೆದು ನಮ್ಮ ಶಾಲೆಗೆ ಅವರನ್ನು ಹಿಂತಿರುಗಿಸಬೇಕು” ಎಂದು ಮನವಿ ಮಾಡಿದರು.