ಒಡಿಶಾ ಸರ್ಕಾರವು ತನ್ನ ಎಲ್ಲ ಇಲಾಖೆಗಳು, ಸಾರ್ವಜನಿಕ ಮತ್ತು ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸಂವಹನಗಳಲ್ಲಿ ‘ಹರಿಜನ’ ಎಂಬ ಪದ ಬಳಕೆಯನ್ನು ನಿಷೇಧಿಸಿದೆ. ಇನ್ನು ಮುಂದೆ ಯಾವುದೇ ಸಂದರ್ಭದಲ್ಲೂ ‘ಹರಿಜನ’ ಎಂಬ ಪದವನ್ನು ಬಳಸದಂತೆ ಸರ್ಕಾರ ಸೂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
‘ಹರಿಜನ’ ಪದದ ಬಳಕೆಯನ್ನು ನಿಷೇಧಿಸಿ ಒಡಿಶಾ ಮಾನವ ಹಕ್ಕುಗಳ ಆಯೋಗ (OHRC) ಹೊರಡಿಸಿದ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಎಸ್‌ಟಿ ಮತ್ತು ಎಸ್‌ಸಿ ಅಭಿವೃದ್ಧಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ-ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯಲ್ಲಿ, “ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಸೂಚಿಸಲಾದ ‘ಪರಿಶಿಷ್ಟ ಜಾತಿ’ಗಳಿಗೆ ಸೇರಿದವರನ್ನು ಸೂಚಿಸಲು ಇಂಗ್ಲಿಷ್‌ನಲ್ಲಿ ‘ಶೆಡ್ಯೂಲ್ ಕ್ಯಾಸ್ಟ್’ ಮತ್ತು ಒಡಿಯಾ ಅಥವಾ ಇತರ ರಾಷ್ಟ್ರೀಯ ಭಾಷೆಗಳಲ್ಲಿ ‘ಅನುಸುಚಿತ ಜಾತಿ’ ಎಂಬ ಪದಗಳನ್ನು ಬಳಸಬೇಕೆಂದು ಸರ್ಕಾರ ಸೂಚಿಸಿದೆ” ಎಂದು ತಿಳಿಸಿದ್ದಾರೆ.
ಈ ಸುತ್ತೋಲೆಯನ್ನು ಎಲ್ಲ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತ-ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಜಾತಿ ಪ್ರಮಾಣಪತ್ರಗಳಲ್ಲಿ ಮಾತ್ರವಲ್ಲದೆ ಅಧಿಕೃತ ಸಂವಹನಗಳಲ್ಲಿಯೂ ‘ಹರಿಜನ’ ಪದವನ್ನು ಬಳಸದಂತೆ ನೋಡಿಕೊಳ್ಳಲು ನಿರ್ದೇಶಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಯಾವುದೇ ಅಧಿಕೃತ ಸಂವಹನ, ದಾಖಲೆಗಳು, ವಹಿವಾಟುಗಳು, ಜಾತಿ ಪ್ರಮಾಣಪತ್ರಗಳು, ಪ್ರಕಟಣೆಗಳು, ಇಲಾಖಾ ಹೆಸರುಗಳು ಅಥವಾ ಯಾವುದೇ ಇತರ ರೀತಿಯ ಬಳಕೆಯಲ್ಲಿ ‘ಹರಿಜನ’ ಪದವು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲು ಜವಾಬ್ದಾರಿ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸರ್ಕಾರ ಹೇಳಿದೆ.
ಈ ಕುರಿತು ಅಧಿಕಾರಿಗಳು ತಮ್ಮ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ಅವರಲ್ಲಿ ಅರಿವು ಮೂಡಿಸಬೇಕು. ಅಸ್ತಿತ್ವದಲ್ಲಿರುವ ಎಲ್ಲ ಕಡತಗಳು ಮತ್ತು ದಾಖಲೆಗಳನ್ನು ಹೊಸ ನಿರ್ದೇಶನಕ್ಕೆ ಅನುಗುಣವಾಗಿ ಬದಲಾವಣೆ ಮಾಢಬೇಕು ಎಂದು ಸೂಚಿಸಿದೆ
1982ರಲ್ಲಿಯೇ, ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳು ದಲಿತರನ್ನು ಉಲ್ಲೇಖಿಸಲು ‘ಹರಿಜನ’ ಪದವನ್ನು ಬಳಸದಂತೆ ಕೇಳಿಕೊಂಡಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸಿದ್ಧಪಡಿಸಿದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಿ, 2013ರಲ್ಲಿ ಎಲ್ಲ ರಾಜ್ಯಗಳಿಗೆ ಇದೇ ರೀತಿಯ ಆದೇಶವನ್ನು ಹೊರಡಿಸಲಾಗಿತ್ತು.