- ‘ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ನಡೆಸದೆ ಬಿಲ್ ಪಡೆದ ಆರೋಪವಿದೆ’
- ಬಿಜೆಪಿಯವರಿಗೆ ಗುತ್ತಿಗೆದಾರರ ಪರ ನಿಲ್ಲುವ ಯಾವ ನೈತಿಕತೆಯಿದೆ: ಪ್ರಶ್ನೆ
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ನಡೆಸದೆ ಬಿಲ್ ಪಡೆದ ಆರೋಪವಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ. ಇದರ ತನಿಖಾ ವರದಿ ಬಂದ ಬಳಿಕ ಬಿಲ್ ಪಾವತಿಸುತ್ತೇವೆ. ಆದರೆ, ಈ ತನಿಖೆಯಿಂದ ಬಿಜೆಪಿಯವರ ಕರ್ಮಕಾಂಡವೂ ಬಯಲಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ನಾವು ಬಿಜೆಪಿಯವರಂತೆ ಗುತ್ತಿಗೆದಾರರ ಬಳಿ ಒಂದೇ ಒಂದು ಪರ್ಸೆಂಟ್ ಕಮಿಷನ್ ಕೇಳಿಲ್ಲ. ಕಾಂಟ್ರ್ಯಾಕ್ಟರ್ ಅಸೋಸಿಯೇಶನ್ ಕೂಡ ನಮ್ಮ ಮೇಲೆ ಕಮಿಷನ್ ಆರೋಪ ಹೊರಿಸಿಲ್ಲ” ಎಂದಿದ್ದಾರೆ.
“ಗುತ್ತಿಗೆ ಹಗರಣದ ತನಿಖೆಯಾಗಿ ಅದರ ವರದಿ ಬರುವವರೆಗೂ ಬಿಲ್ ಹಣ ತಡೆ ಹಿಡಿಯುವುದು ಅನಿವಾರ್ಯ. ನಿಯಮಾನುಸಾರ ಕಾಮಗಾರಿ ಮಾಡಿದ ಯಾವ ಗುತ್ತಿಗೆದಾರರು ಭಯ ಬೀಳುವ ಅವಶ್ಯಕತೆಯಿಲ್ಲ. ಅವರ ಹಣ ಬಿಡುಗಡೆಯಾಗಲಿದೆ. ಆದರೆ ಯಾರು ಅಕ್ರಮವೆಸಗಿದ್ದಾರೋ ಅಂತಹವರ ವಿರುದ್ಧವಷ್ಟೇ ನಮ್ಮ ಕ್ರಮ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಧಿಕೃತ ಶಾಲೆಗಳಿಗೆ ಬೀಗಮುದ್ರೆ ಶಿಕ್ಷೆ; ಭ್ರಷ್ಟ ಅಧಿಕಾರಿಗಳಿಗೆ ಯಾಕೆ ರಕ್ಷೆ?
“ಹಿಂದಿನ ಬಿಜೆಪಿ ಸರ್ಕಾರ ಖಜಾನೆ ಲೂಟಿ ಮಾಡಿದ ಕಾರಣಕ್ಕಾಗಿಯೇ ಅಲ್ಲವೇ ಗುತ್ತಿಗೆದಾರರ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದು? ಈಗ ಶುದ್ಧ ಸಚ್ಛಾರಿತ್ರ್ಯರಂತೆ ಪೋಸ್ ಕೊಡುವ ಬಿಜೆಪಿಯವರಿಗೆ ಗುತ್ತಿಗೆದಾರರ ಪರ ನಿಲ್ಲುವ ಯಾವ ನೈತಿಕತೆಯಿದೆ” ಎಂದು ಪ್ರಶ್ನಿಸಿದ್ದಾರೆ.
“ಗುತ್ತಿಗೆದಾರರ ಬಿಲ್ ಬಾಕಿ ಸಂಬಂಧ ಬಿಜೆಪಿಯವರು ಬೀದಿ ನಾಟಕ ಮಾಡುತ್ತಿದ್ದಾರೆ. ಆದರೆ ಬಿಜಿಪಿಯವರು ತಮ್ಮ ಅವಧಿಯಲ್ಲೇ ನಡೆದಿದ್ದ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ಯಾಕೆ ಎಂದು ಉತ್ತರಿಸುತ್ತಿಲ್ಲ. ಅಂದು 40% ಕಮಿಷನ್‌ಗಾಗಿ ಬಿಲ್ ತಡೆ ಹಿಡಿದಿದ್ದರೆ? ಹಿಂದಿನ ಬಿಜೆಪಿ ಸರ್ಕಾರ ಯಾವ ಕಾರಣಕ್ಕಾಗಿ ಗುತ್ತಿಗೆದಾರರ ಬಿಲ್ ತಡೆ ಹಿಡಿದಿತ್ತು?” ಎಂದು ವಾಗ್ದಾಳಿ ನಡೆಸಿದ್ದಾರೆ.