ಕೇರಳ ಮೂಲದ ಅಶ್ರಫ್ ಗುಂಪು ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿರುವ ಪೊಲೀಸರು ನ್ಯಾಯಾಲಯಕ್ಕೆ ಜಾರ್ಟ್‌ಶೀಟ್ ಸಲ್ಲಿಸಿದ್ದಾರೆ. ಹತ್ಯೆಯಲ್ಲಿ ಬಿಜೆಪಿ ನಾಯಕ ರವೀಂದ್ರ ನಾಯಕ್ ಪಾತ್ರವಿದೆ ಎಂಬುದು ಖಚಿತವಾಗಿದೆ. ಮಾತ್ರವಲ್ಲದೆ, ಪ್ರಕರಣದಲ್ಲಿ ರವೀಂದ್ರ ಅವರ ಪಾತ್ರವನ್ನು ಮುಚ್ಚಿಹಾಕಲು ಪೊಲೀಸರು ನಡೆಸಿದ್ದ ಯತ್ನವೂ ಬಯಲಿಗೆ ಬಂದಿದೆ.
ಮಂಗಳೂರಿನ ಕುಡುಪುವಿನಲ್ಲಿ ಏಪ್ರಿಲ್ 27ರಂದು ಕ್ರಿಕೆಟ್ ಪಂದ್ಯಾವಳಿ ನಡೆಯುವಾಗ ಅಶ್ರಫ್ ಅವರು ‘ಪಾಕಿಸ್ತಾನ ಪರ’ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ, ಅವರನ್ನು ದುಷ್ಕರ್ಮಿಗಳ ಗುಂಪೊಂದು ಭೀಕರವಾಗಿ ಥಳಿಸಿ, ಬರ್ಬರವಾಗಿ ಕೊಲೆ ಮಾಡಿತ್ತು. ಇದೀಗ, ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಹೊಸ ವಿವರಗಳು ಬೆಳಕಿಗೆ ಬಂದಿವೆ.
ಚಾರ್ಜ್‌ಶೀಟ್‌ನಲ್ಲಿ, ಮಾಜಿ ಕಾರ್ಪೋರೇಟರ್ ಸಂಗೀತ ನಾಯಕ್ ಅವರ ಪತಿ, ಬಿಜೆಪಿ ನಾಯಕ ರವೀಂದ್ರ ನಾಯಕ್ ಪಾತ್ರವನ್ನೂ ಉಲ್ಲೇಖಿಸಲಾಗಿದೆ. ಏಪ್ರಿಲ್ 2ರಂದು ಪ್ರಕರಣದ ಎಲ್ಲ 21 ಆರೋಪಿಗಳನ್ನು ವಿಚಾರಣೆ ಒಳಪಡಿಸಲಾಗಿತ್ತು. ಆ ವೇಳೆ, ಈ ಕೃತ್ಯ ಎಸಗಲು ರವೀಂದ್ರ ನಾಯಕ್ ಅವರ ಪ್ರಚೋದನೆಯೇ ಕಾರಣವೆಂದು ಆರೋಪಿಗಳು ಹೇಳಿಕೆ ನೀಡಿದ್ದರು. ಹಲ್ಲೆ ನಡೆಯುವಾಗ ರವೀಂದ್ರ ನಾಯಕ್ ಸ್ಥಳದಲ್ಲಿದ್ದರು. ಹಲ್ಲೆಯನ್ನು ನಿಲ್ಲಿಸಲು ಯತ್ನಿಸಿದ ಕೆಲವು ಆಟಗಾರರನ್ನೂ ಅವರು ತಡೆದರು. ‘ಪಾಕಿಸ್ತಾನ ಪರ ಘೋಷಣೆ ಕೂಗಿದವನನ್ನು ಇಲ್ಲಿಯೇ ಹೊಡೆದು ಕೊಂದು ಹಾಕಿ’ ಎಂದು ಪ್ರಚೋದಿಸಿದ್ದರು ಎಂಬುದಾಗಿ ಆರೋಪಿಗಳು ಹೇಳಿಕೆ ನೀಡಿದ್ದರು.
ಆದರೆ, ಅಂದಿನ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ‘ರವೀಂದ್ರ ನಾಯಕ್ ವಿರುದ್ಧ ಯಾರೂ ದೂರು ನೀಡಿಲ್ಲ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಈಗ ಚಾರ್ಜ್‌ಶೀಟ್‌ನಲ್ಲಿ ಎಲ್ಲ ಆರೋಪಿಗಳು ರವೀಂದ್ರ ಬಗ್ಗೆ ವಿವರವಾಗಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಈಗ, ಪೊಲೀಸರ ಈ ನಡೆಯ ಬಗ್ಗೆ ಈಗ ಪ್ರಶ್ನೆಗಳು ಮುನ್ನೆಲೆ ಬಂದಿವೆ.
“ಅಶ್ರಫ್ ಮೇಲೆ ಮೊದಲ ಬಾರಿಗೆ ಹಲ್ಲೆ ನಡೆದಾಗಲೇ, ಕೊಂಗೂರು ಕ್ರಿಕೆಟ್ ತಂಡದ ದೀಪಕ್ ಸೇರಿದಂತೆ ಕೆಲವರು ಹಲ್ಲೆಯನ್ನು ತಡೆಯಲು ಯತ್ನಿಸಿದರು. ‘ಆತ ಹುಚ್ಚನಂತೆ ಕಾಣುತ್ತಿದ್ದಾನೆ. ಆತನಿಗೆ ಈಗಾಗಲೇ ಸಾಕಷ್ಟು ಪೆಟ್ಟು ಬಿದ್ದಿದೆ. ಅವರನ್ನು ಬಿಟ್ಟುಬಿಡಿ, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ’ ಎಂದು ದೀಪ್ಕ ಮನವಿ ಮಾಡದಿರು. ಆದರೆ, ಸ್ಥಳೀಯರು ರವಿ ಅಣ್ಣ ಎಂದು ಕರೆಯುವ ರವೀಂದ್ರ ನಾಯಕ್, ಮಂಜುನಾಥ್ ಹಾಗೂ ದೇವದಾಸ್ ಎಂಬವರು ಅವರ ಮಾತನ್ನು ತಳ್ಳಿಹಾಕಿದರು. ದೀಪಕ್ ಮತ್ತು ಇತರರನ್ನು ಅಲ್ಲಿಂದ ಹೋಗುವಂತೆ ಗದರಿದರು ಎಂಬುದಾಗಿ ಆರೋಪಿಗಳು ವಿವರಿಸಿದ್ದಾರೆ” ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
“ನಮ್ಮ ಏರಿಯಾಕ್ಕೆ ಬಂದು ಪಾಕಿಸ್ತಾನ್, ಪಾಕಿಸ್ತಾನ್ ಎಂದು ಬೊಬ್ಬೆ ಹೊಡೆದವನನ್ನು ಸುಮ್ಮನೆ ಬಿಟ್ಟರೆ, ನಾಳೆ ಎಲ್ಲರೂ ಬಂದು ಇದೇ ರೀತಿ ಮಾಡುತ್ತಾರೆ. ಇವನನ್ನು ನಾವೇ ಸರಿಯಾಗಿ ವಿಚಾರಿಸಬೇಕು. ಬಳಿಕ, ಪೊಲೀಸ್ ಸ್ಟೇಷನ್‌ಗೆ ಮಾಹಿತಿ ಕೊಡಿ. ಯಾರಿಗೂ ತೊಂದರೆಯಾಗದಂತೆ ಎಲ್ಲಯನ್ನು ನಾವು ವ್ಯವಸ್ಥೆ ಮಾಡುತ್ತೇವೆ ಎಂಬುದಾಗಿ ರವೀಂದ್ರ ನಾಯಕ್ ಹೇಳಿದ್ದರೆಂದು ಆರೋಪಿಗಳು ವಿವರಿಸಿದ್ದಾರೆ” ಎಂಬುದು ಹೇಳಿಕೆಗಳಲ್ಲಿ ದಾಖಲಾಗಿದೆ.
ನಾಯಕ್ ಅವರ ಈ ಮಾತುಗಳು ಆರೋಪಿಗಳ ಗುಂಪನ್ನು ಪ್ರಚೋದಿಸಿದ್ದಾಗಿ ಆರೋಪಿಗಳು ಹೇಳಕೆ ನೀಡಿದ್ದಾರೆ. ರವೀಂದ್ರನನ್ನು ಕಿಶೋರ್ ಕುಮಾರ್ ಮತ್ತು ಅನಿಲ್ ಕುಡುಪು ಸೇರಿದಂತೆ ಹಲವರು ಬೆಂಬಲಿಸಿ, ‘ಈ ಸೂ… ಮಗನನ್ನು ಬಿಡಬೇಡಿ. ಇಲ್ಲಿಯೇ ಹೊಡೆದು ಕೊಂದು ಹಾಕಿ’ ಎಂದು ಕೂಗಿದರು ಎಂಬುದಾಗಿ ಆರೋಪಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಕೊಲ್ಲಾಪುರ ಮಠದ ಆನೆ ವಿವಾದ: ಆನೆಗಾಗಿ ‘ಜಿಯೋ ಬಾಯ್‌ಕಾಟ್’ ಮಾಡಿ ಗೆದ್ದ ಜನ!
ಘಟನೆ ನಡೆದ ನಂತರ, ರವೀಂದ್ರ ನಾಯಕ್ ಮತ್ತು ಮತ್ತೊಬ್ಬ ಆರೋಪಿ ದೇವದಾಸ್, ‘ಆಗಿದ್ದು ಆಗಿದೆ. ಈಗ ನಾವೆಲ್ಲ ಏನೂ ಗೊತ್ತಿಲ್ಲದ್ದಂತೆ ಇದ್ದುಬಿಡೋಣ. ಘಟನೆ ಬಗ್ಗೆ ಯಾರಿಗೂ ಹೇಳುವುದು ಬೇಡ. ಪೊಲೀಸರು ಕೇಳಿದರೆ, ನಮಗೇನು ಗೊತ್ತಿಲ್ಲವೆಂದು ಹೇಳಬೇಕು. ಯಾರೇ ಒಬ್ಬರು ಬಾಯಿಬಿಟ್ಟರೆ ಎಲ್ಲರಿಗೂ ತೊಂದರೆಯಾಗುತ್ತದೆ. ಪೊಲೀಸರು ತನಿಖೆಗೆ ಕರೆದರೆ, ನಮಗೆ ತಿಳಿಸಿ. ಎಲ್ಲರೂ ಒಟ್ಟಿಗೆ ಹೋಗೋಣ. ಘಟನೆ ಬಗ್ಗೆ ಯಾರೂ ಬಾಯಿ ಬಿಡದೇ ಇದ್ದರೆ, ಪೊಲೀಸರು ಸಿ ರಿಪೋರ್ಟ್ ಹಾಕಿ ಕೇಸನ್ನು ಮುಗಿಸುತ್ತಾರೆ’ ಎಂದು ಹೇಳಿದ್ದಾಗಿ ಆರೋಪಿಗಳು ವಿವಿರಿಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.
ಹಾಗೆ ನೋಡಿದರೆ, ರವೀಂದ್ರ ಹೇಳಿದಂತೆಯೇ ಪೊಲೀಸರು ಆಶ್ರಫ್ ಸಾವು ‘ಅಸಹಜ ಸಾವು’. ಆತ ಕುಡಿದುಬಿದ್ದು, ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದರು. ಆದರೆ, ಸಾರ್ವಜನಿಕರ ಆಕ್ರೋಶ, ಮಾಧ್ಯಮಗಳಲ್ಲಿ ನಿರಂತರವಾಗಿ ಚರ್ಚೆ ಹಾಗೂ ಮಾನವ ಹಕ್ಕುಗಳ ಸಂಘಟನೆಗಳ ಒತ್ತಡ ಹೆಚ್ಚಾದ ಬಳಿಕ, ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ಜುಲೈ 25ರಂದು ಅಶ್ರಫ್‌ನ ಮರಣೋತ್ತರ ಪರೀಕ್ಷೆ ಬಹಿರಂಗವಾಗಿತ್ತು. ವರದಿಯಲ್ಲಿ, ಅಶ್ರಫ್ ದೇಹದ ಮೇಲೆ 35 ಬಾಹ್ಯ ಗಾಯಗಳು ಇವೆ. ಆತನನ್ನು ಕ್ರೂರವಾಗಿ ಹಲ್ಲೆಗೈದು ಕೊಲ್ಲಲಾಗಿದೆ. ಮೆದುಳಿನಲ್ಲಿ ರಕ್ತಸ್ರಾವ ಮತ್ತು ಮೂತ್ರಪಿಂಡಕ್ಕೆ ಆಗಿದ್ದ ಗಾಯದಿಂದಾಗಿ ಅಶ್ರಫ್ ಸಾವನ್ನಪ್ಪಿದ್ದಾನೆ ಎಂಬುದು ವರದಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿತ್ತು.
ಎಲ್ಲ ಆರೋಪಿಗಳು ರವೀಂದ್ರ ನಾಯಕ್ ವಿರುದ್ಧ ಹೇಳಿಕೆ ನೀಡಿದ್ದರೂ, ಅಂದಿನ ಪೊಲೀಸ್ ಕಮಿಷನರ್ ಅಗರ್ವಾಲ್ ಅವರು ಪ್ರಕರಣದಲ್ಲಿ ರವೀಂದ್ರ ನಾಯಕ್ ಪಾತ್ರವನ್ನು ನಿರಾಕರಿಸಿದ್ದರು. ಅವರ ಈ ನಡೆಗೆ ರಾಜಕೀಯ ಪ್ರಭಾವೇ ಕಾರಣ ಇರಬಹುದೆಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗ, ರವೀಂದ್ರ ನಾಯಕ್ ತಲೆಮರೆಸಿದ್ದು, ಆತ ಈವರೆಗೆ ಪತ್ತೆಯಾಗಿಲ್ಲ. ಇನ್ನು, ಅಗ್ರವಾಲ್‌ನನ್ನು ವರ್ಗಾವಣೆ ಮಾಡಲಾಗಿದೆ. ಸುಧೀರ್ ಕುಮಾರ್ ರೆಡ್ಡಿ ಅವರನ್ನು ಹೊಸ ಕಮಿಷನರ್ ಆಗಿ, ನೇಮಿಸಲಾಗಿದೆ.
.