ಹರಿಯಾಣದ ಗ್ರಾಮ ಪಂಚಾಯತ್ ಒಂದರ ಚುನಾವಣೆಯ ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂಗಳು) ಮತ್ತು ಇತರ ದಾಖಲೆಗಳನ್ನು ತರಿಸಿ ಸುಪ್ರೀಂ ಕೋರ್ಟ್ ಮರು ಎಣಿಕೆ ನಡೆಸಿದೆ. ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲಖು ಗ್ರಾಮದ ಗ್ರಾಮ ಪಂಚಾಯತ್‌ನ ಅಧ್ಯಕ್ಷರ ಆಯ್ಕೆಯ ಬಗ್ಗೆ ವಿವಾದ ಉದ್ಭವಿಸಿದ ನಂತರ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಅವರು ಎರಡೂ ಪಕ್ಷಗಳ ಸಮ್ಮುಖದಲ್ಲಿ ಮರುಎಣಿಕೆಯನ್ನು ನಡೆಸಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗಿದೆ. 2022ರ ನವೆಂಬರ್ 2ರಂದು ಬುವಾನಾ ಲಖು ಗ್ರಾಮದ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಸಲಾಗಿದ್ದು ಕುಲದೀಪ್ ಸಿಂಗ್ ಅವರನ್ನು ಅಧ್ಯಕ್ಷ ಎಂದು ಘೋಷಿಸಲಾಗಿದೆ.
ಇದನ್ನು ಓದಿದ್ದೀರಾ? ಸುಪ್ರೀಂ ಕೋರ್ಟ್ | ಬ್ಯಾಲೆಟ್ ಪೇಪರ್ ಮತದಾನ ಮರುಜಾರಿ ಕೋರಿದ್ದ ಅರ್ಜಿ ವಜಾ
ಆದರೆ ಫಲಿತಾಂಶಗಳನ್ನು ಪ್ರಶ್ನಿಸಿ ಕುಲದೀಪ್ ಅವರ ಪ್ರತಿಸ್ಪರ್ಧಿ ಮೋಹಿತ್ ಕುಮಾರ್ ಮೇಲ್ಮನವಿ ಸಲ್ಲಿಸಿದ್ದಾರೆ. ಏಪ್ರಿಲ್ 22ರಂದು ಚುನಾವಣಾ ನ್ಯಾಯಮಂಡಳಿಯು ಮತಗಟ್ಟೆ ಸಂಖ್ಯೆ 69 ರ ಮತಗಳ ಮರು ಎಣಿಕೆಗೆ ಆದೇಶಿಸಿತ್ತು. ಈ ಹಿನ್ನೆಲೆ ಮೇ 7ರಂದು ಮತಗಳ ಮರು ಎಣಿಕೆ ಮಾಡಲು ನಿರ್ದೆಶಿಸಲಾಗಿದೆ.
ಆದರೆ ಚುನಾವಣಾ ನ್ಯಾಯಮಂಡಳಿಯ ಈ ಆದೇಶವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದುಗೊಳಿಸಿತು. ಅದಾದ ಬಳಿಕ ಮೋಹಿತ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಎಂಗಳು ಮತ್ತು ಇತರ ದಾಖಲೆಗಳನ್ನು ಹಾಜರುಪಡಿಸುವಂತೆ ನಿರ್ದೇಶಿಸಿತು. ಹಾಗೆಯೇ ಕೇವಲ ಒಂದು ಮತಗಟ್ಟೆಯ ಬದಲು ಎಲ್ಲಾ ಮತಗಟ್ಟೆಗಳ ಮತಗಳ ಮರು ಎಣಿಕೆಗೆ ಆದೇಶಿಸಿತು.
ಆದೇಶದ ಪ್ರಕಾರವಾಗಿ ಆಗಸ್ಟ್ 6ರಂದು ಪ್ರತಿನಿಧಿಗಳು ಮತ್ತು ಸಹಾಯಕ ವಕೀಲರ ಸಮ್ಮುಖದಲ್ಲಿ ಮರು ಎಣಿಕೆ ನಡೆದಿದೆ. 65ರಿಂದ 70 ಮತಗಟ್ಟೆಗಳನ್ನು ಮರುಎಣಿಕೆ ಮಾಡಲಾಗಿದ್ದು, ಮೇಲ್ಮನವಿದಾರ ಮೋಹಿತ್ ಕುಮಾರ್ 1,051 ಮತಗಳನ್ನು ಪಡೆದಿದ್ದಾರೆ ಮತ್ತು ಪ್ರತಿವಾದಿ ಕುಲದೀಪ್ ಸಿಂಗ್ 1,000 ಮತ ಪಡೆದಿದ್ದಾರೆ ಎಂಬುದು ಖಚಿತವಾಗಿದೆ. ಆ ಕುರಿತು ರಿಜಿಸ್ಟ್ರಾರ್ ಅವರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ.
ಇದಾದ ಬಳಿಕ ನ್ಯಾಯಪೀಠವು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿತು ಮತ್ತು ಮೋಹಿತ್ ಕುಮಾರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಲು ಅರ್ಹರು ಎಂದು ಘೋಷಿಸಿತು.
