ಬಿಹಾರದಲ್ಲಿ ಎಸ್‌ಐಆರ್ ಸಾಕಷ್ಟು ಗೊಂದಲ, ವಿವಾದಗಳನ್ನು ಸೃಷ್ಟಿಸಿದೆ. ವಿರೋಧಕ್ಕೆ ಗುರಿಯಾಗಿದೆ. ಈ ಪ್ರಕ್ರಿಯೆ ಯಶಸ್ಸಿನ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಜೊತೆಗೆ, ಎಸ್‌ಐಆರ್ ಕಾನೂನುಬಾಹಿರವೆಂದು ಕಂಡುಬಂದರೆ, ಈ ಪ್ರಕ್ರಿಯೆನ್ನು ಸೆಪ್ಟೆಂಬರ್‌ನಲ್ಲಿಯೂ ರದ್ದು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಪ್ರಮುಖ ದಾಖಲೆಗಳು ಮತ್ತು ಮಾಹಿತಿಯನ್ನು ಚುನಾವಣಾ ಆಯೋಗ (ECI) ಬಚ್ಚಿಡುತ್ತಿದೆ. ಈ ನಡೆಯು ಆಯೋಗದ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾತ್ರವಲ್ಲದೆ, ಸಂಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುತ್ತಿದೆ.
ಬಿಹಾರದ SIR ಪ್ರಕ್ರಿಯೆಯಲ್ಲಿ ಅಲ್ಲಿನ ಎಂಟು ಕೋಟಿ ಮತದಾರರ ದೃಢೀಕರಣವನ್ನು ಪರಿಶೀಲಿಸಲಾಗಿದೆ. ಆದರೆ, ಈ ಬೃಹತ್ ಕಸರತ್ತಿನ ಕುರಿತಾದ ಪ್ರಮುಖ ಮಾಹಿತಿ ಮತ್ತು ದಾಖಲೆಗಳನ್ನು ಬಹಿರಂಗಪಡಿಸಲು ಆಯೋಗ ನಿರಾಕರಿಸುತ್ತಿದೆ. ಮತದಾರ ಪಟ್ಟಿಯ ಕರಡನ್ನು ಒಂದೇ ಪಟ್ಟಿಯಲ್ಲಿ ಪ್ರಕಟಿಸಲು ಹಿಂದೇಟು ಹಾಕಿದೆ. ಬದಲಾಗಿ, ಮತದಾರ ಚೀಟಿಯ ಸಂಖ್ಯೆಯನ್ನು ನಮೂದಿಸಿ, ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳುವಂತೆ ಹೇಳಿದೆ. ಇದು, ರಹಸ್ಯ ಮತದಾರರ ಪಟ್ಟಿಗಳು ಮತ್ತು ಬಚ್ಚಿಡಲಾದ ದಾಖಲೆಗಳ ಬಗ್ಗೆ ಸಾರ್ವಜನಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೊತೆಗೆ, ಮುಂದೆ ನಡೆಯುವ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳ ಚುನಾವಣಾ ಫಲಿತಾಂಶದ ಮೇಲೂ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದೆ.
ಎಸ್‌ಐಆರ್ ಪ್ರಕ್ರಿಯೆಯನ್ನು ಆಯೋಗದ ಅಧಿಕಾರಿಗಳು ಯಾವುದೇ ಸಾರ್ವಜನಿಕ ಮಾಹಿತಿ ಅಥವಾ ಜನರು ಅಥವಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ, ಏಕಪಕ್ಷೀಯವಾಗಿ, ರಹಸ್ಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮತದಾರರ ಪಟ್ಟಿಯ ಬೃಹತ್ ಪರಿಶೀಲನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಪೌರತ್ವ ಮತ್ತು ಮತದಾನದ ಅರ್ಹತೆಯನ್ನು ಸಾಬೀತುಪಡಿಸಬೇಕಾಗಿದೆ. ಆದರೆ, ಎಸ್‌ಐಆರ್‌ನಲ್ಲಿ ಬಂದ ಫಲಿತಾಂಶವೇನು ಎಂಬುದನ್ನು ಆಯೋಗ ಸಾರ್ವಜನಿಕವಾಗಿ ಎಲ್ಲರಿಗೂ ಲಭ್ಯವಾಗುವಂತೆ ಬಿಡುಗಡೆ ಮಾಡಿಲ್ಲ. ಬದಲಾಗಿ, ಒಟ್ಟಾರೆ ದತ್ತಾಂಶವನ್ನು ರಹಸ್ಯವಾಗಿ ಇಟ್ಟಿದೆ. ಆದಾಗ್ಯೂ, ಸುಮಾರು 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಆದರೆ, ಪಟ್ಟಿಯಿಂದ ಕೈಬಿಡಲಾದವರ ಮಾಹಿತಿಯನ್ನೂ ಆಯೋಗ ನೀಡಿಲ್ಲ. ಇದು, ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂಬ ಚರ್ಚೆಗೆ ಕಾರಣವಾಗಿದೆ.
ಬಿಹಾರದಲ್ಲಿ ಎಸ್‌ಐಆರ್ ಸಾಕಷ್ಟು ಗೊಂದಲ, ವಿವಾದಗಳನ್ನು ಸೃಷ್ಟಿಸಿದೆ. ವಿರೋಧಕ್ಕೆ ಗುರಿಯಾಗಿದೆ. ಈ ಪ್ರಕ್ರಿಯೆ ಯಶಸ್ಸಿನ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಜೊತೆಗೆ, ಎಸ್‌ಐಆರ್ ಕಾನೂನುಬಾಹಿರವೆಂದು ಕಂಡುಬಂದರೆ, ಈ ಪ್ರಕ್ರಿಯೆನ್ನು ಸೆಪ್ಟೆಂಬರ್‌ನಲ್ಲಿಯೂ ರದ್ದು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೆಲ್ಲ ನಡೆಯುತ್ತಿರುವ ಸಮಯದಲ್ಲಿಯೂ, ಎಸ್‌ಐಆರ್ ಪ್ರಕ್ರಿಯೆಯನ್ನು ದೇಶಾದ್ಯಂತ ವಿಸ್ತರಿಸಲು ಆಯೋಗ ಆಲೋಚಿಸುತ್ತಿದೆ. ಆದರೆ, ಎಸ್‌ಐಆರ್‌ನ ದಾಖಲೆಗಳು ರಹಸ್ಯವಾಗಿದ್ದು, ಮತದಾರರ ಹಕ್ಕುಗಳು, ಚುನಾವಣಾ ಸಮಗ್ರತೆ, ಆಯೋಗದ ಮೇಲಿನ ವಿಶ್ವಾಸ ಹಾಗೂ ಭಾರತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಭವಿಷ್ಯದ ಬಗ್ಗೆ ಆತಂಕ, ಕಳವಳಗಳು ಕೇಳಿಬರುತ್ತಿವೆ.
”ಗೌಪ್ಯತೆ ಎಂಬ ಪರದೆಯ ಹಿಂದೆ ನಡೆಯುತ್ತಿರುವ ಈ ಮತದಾರರ ಪಟ್ಟಿ ಪರಿಷ್ಕರಣೆಯು ನಿಮ್ಮ ಮತದಾನದ ಹಕ್ಕು ಮತ್ತು ದೇಶದ ಚುನಾವಣೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈಗಲೇ ಆಯೋಗವು ಪಾರದರ್ಶಕವಾಗಿ ಕೆಲಸ ಮಾಡುವಂತೆ ಒತ್ತಾಯಿಸಬೇಕು” ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೇಳಿದ್ದಾರೆ.
ಬಿಹಾರದ ಬೆಗುಸರಾಯದಲ್ಲಿ ಕಾಂಗ್ರೆಸ್‌ನ ಒಂದು ಕ್ಷೇತ್ರ ಸಮೀಕ್ಷೆಯು, ಆಯೋಗದ ಕರಡು ಮತದಾರ ಪಟ್ಟಿಯಲ್ಲಿ ಹಲವಾರು ಮತದಾರರನ್ನು ಕೈಬಿಡಲಾಗಿರುವ ಬಗ್ಗೆ ಗಂಭೀರ ಸಮಸ್ಯೆಗಳನ್ನು ಗುರುತಿಸಿದೆ. ತೇಘ್ರಾ, ಮತಿಹಾನಿ ಮತ್ತು ಬೆಗುಸರಾಯದ 19 ಮತಗಟ್ಟೆಗಳಲ್ಲಿ ಹೆಚ್ಚಿನ ಜನರನ್ನು ತಪ್ಪಾಗಿ ಪಟ್ಟಿಯಿಂದ ಬಿಡಲಾಗಿದೆ ಎಂಬುದನ್ನು ಕಾಂಗ್ರೆಸ್ ಗುರುತಿಸಿದೆ. ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ಅಭಯ್ ಕುಮಾರ್ ಸಿಂಗ್ ಅವರು ಬೆಗುಸರಾಯದ ಜಿಲ್ಲಾಧಿಕಾರಿ ತುಷಾರ್ ಸಿಂಗ್ಲಾ ಅವರಿಗೆ ಪತ್ರ ಬರೆದಿದ್ದು, ಕಾಂಗ್ರೆಸ್ ಗುರುತಿಸಿರುವ ದೋಷಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸರಿಪಡಿಸಲು ಒತ್ತಾಯಿಸಿದ್ದಾರೆ.
ಇನ್ನು, ಇಂಡಿಯಾ ಒಕ್ಕೂಟದ ಕಾಂಗ್ರೆಸ್, ಆರ್‌ಜೆಡಿ ಹಾಗೂ ಎಡಪಕ್ಷಗಳು ಆಯೋಗಕ್ಕೆ ಪತ್ರ ಬರೆದಿವೆ. ಮತದಾರ ಪಟ್ಟಿಯಲ್ಲಿ ಆಗಿರುವ ಎಡವಟ್ಟುಗಳ ಬಗ್ಗೆ ಗಮನ ಸೆಳೆದಿವೆ.
ಮೊದಲನೆಯದಾಗಿ, ಪಟ್ಟಿಯಿಂದ ಕೈಬಿಡಲಾದ ಮತದಾರರ ದೃಢೀಕರಣ ಪ್ರಕ್ರಿಯೆಯು ತೀರಾ ಕಷ್ಟಕರವಾಗಿದೆ. ಏಕೆಂದರೆ ಆಗಸ್ಟ್ 1ರಂದು ಆಯೋಗವು ಆನ್‌ಲೈನ್‌ನಲ್ಲಿ ಪ್ರಕಟಿಸಿದ ಕರಡು ಚುನಾವಣಾ ಪಟ್ಟಿಗಳಲ್ಲಿ, SIR ಆರಂಭವಾದ ಜೂನ್ 24ಕ್ಕೂ ಹಿಂದೆ ಇದ್ದ ಚುನಾವಣಾ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಹೆಸರುಗಳನ್ನು ಒದಗಿಸಿಲ್ಲ.
ಎರಡನೆಯದಾಗಿ, ಆಯೋಗವು ಪಟ್ಟಿಯಿಂದ ಹೊರಗಿಟ್ಟ ಮತದಾರರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿಲ್ಲ. ಇದರಿಂದ ದೃಢೀಕರಣ ಪ್ರಕ್ರಿಯೆಯು ಇನ್ನಷ್ಟು ಕಷ್ಟಕರವಾಗಿದೆ. ಆಯೋಗವು ಮತದಾರ ಪಟ್ಟಿಯಿಂದ ಸುಮಾರು 65 ಲಕ್ಷ ಹೆಸರುಗಳನ್ನು ತೆಗೆದುಹಾಕಿದೆ. ಆದರೆ, ಅವುಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿಲ್ಲ. ಹೀಗಾಗಿ, ಮತದಾರ ಪಟ್ಟಿಯಿಂದ ಹೊರಗುಳಿದವರ ಕುರಿತು ಕ್ರಾಸ್-ಚೆಕ್ ಮಾಡಲು ಸಾಧ್ಯವಾಗುತ್ತಿಲ್ಲ.
ಇದಲ್ಲದೆ, ಕಾಂಗ್ರೆಸ್‌ನ ಪ್ರಕಾರ, ರಾಜಕೀಯ ಪಕ್ಷಗಳಿಗೆ ನೀಡಲಾಗಿರುವ ತೆಗೆದುಹಾಕಲಾದ ಮತದಾರರ ಪಟ್ಟಿಯ ಪ್ರತಿಗಳಲ್ಲಿ EPIC [ಚುನಾವಣಾ ಫೋಟೋ ಗುರುತಿನ ಚೀಟಿ] ಸಂಖ್ಯೆಗಳು ಮತ್ತು ವಾಸದ ವಿಳಾಸಗಳನ್ನು ಒದಗಿಸಿಲ್ಲ. ಇದರಿಂದ, ಕೈಬಿಡಲಾದವರನ್ನು ಗುರುತಿಸುವ ಪ್ರಕ್ರಿಯೆಯು ಇನ್ನಷ್ಟು ಕಷ್ಟಕರವಾಗಿದೆ.
ಮೂರನೆಯದಾಗಿ, ಕಾಂಗ್ರೆಸ್‌ನ ಪ್ರಕಾರ, ”ಮತದಾರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದಕ್ಕೆ ‘ಗಣನಾ ಫಾರ್ಮ್ ಸಲ್ಲಿಸಲಾಗಿಲ್ಲ’ ಎಂಬ ಏಕೈಕ ಕಾರಣವನ್ನು ಪ್ರತಿ ಪುಟದ ಮೇಲ್ಭಾಗದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ನಿರ್ದಿಷ್ಟ ಕಾರಣ – ಅಂದರೆ, ಪಟ್ಟಿಯಿಂದ ಹೊರಗುಳಿದ ಮತದಾರರು ಮೃತರಾಗಿದ್ದಾರೆಯೇ, ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆಯೇ, ಕಾಣೆಯಾಗಿದ್ದಾರೆಯೇ ಅಥವಾ ಬಹು ನೋಂದಣಿಗಳನ್ನು ಹೊಂದಿದ್ದಾರೆಯೇ – ಎಂಬುದನ್ನು ಉಲ್ಲೇಖಿಸಿಲ್ಲ.”
ಇದರ ಜೊತೆಗೆ, ”ಬಿಎಲ್‌ಒಗಳು [ಬೂತ್-ಮಟ್ಟದ ಅಧಿಕಾರಿಗಳು] ನೀಡಿರುವ ಇಂತಹ ನಕಾರಾತ್ಮಕ ಶಿಫಾರಸಿಗೆ ನೀಡಿರುವ ಕಾರಣಗಳ ಬಗ್ಗೆ ನಿಖರತೆ ಮತ್ತು ಪಾರದರ್ಶಕತೆ ಕಂಡುಬಂದಿಲ್ಲ. ದೊಡ್ಡ ಸಂಖ್ಯೆಯ ಮತದಾರರನ್ನು ಯಾವುದೇ ನಿಖರ ಕಾರಣವನ್ನು ತಿಳಿಸದೆ ಹೊರಹಾಕಲಾಗಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.
ನಾಲ್ಕನೆಯದಾಗಿ, ಆಯೋಗವು ಸುಮಾರು 77,000 ಮತಗಟ್ಟೆಗಳಲ್ಲಿ SIR ಪ್ರಕ್ರಿಯೆ ಆರಂಭಿಸಿತು. ಆದರೆ, ಪ್ರಕ್ರಿಯೆಯ ಸಮಯದಲ್ಲಿ ಹೊಸ ಮತಗಟ್ಟೆಗಳನ್ನು ರಚಿಸಿತು. ಈಗ ಬಿಹಾರದಲ್ಲಿ ಮತಗಟ್ಟೆಗಳ ಸಂಖ್ಯೆ ಬರೋಬ್ಬರಿ 90,000ಕ್ಕೆ ಏರಿಕೆಯಾಗಿದೆ. ಆದರೆ, ಹೊಸ ಮತಗಟ್ಟೆಗಳಿಗೆ ಮಾತ್ರ ಪ್ರತ್ಯೇಕ ಸಂಖ್ಯೆಗಳನ್ನು ನೀಡದೆ, ಆಯೋಗವು ಎಲ್ಲ 90,000 ಮತಗಟ್ಟೆಗಳಿಗೆ ಹೊಸ ಸಂಖ್ಯೆಗಳನ್ನು ನೀಡಿದೆ. ಇದರಿಂದಾಗಿ, ಮತದಾರರು ತಮ್ಮ ಮತಗಟ್ಟೆಗಳನ್ನು ಗುರುತಿಸಲು ಬಳಸುತ್ತಿದ್ದ ಹಳೆಯ ಮತಗಟ್ಟೆ ಸಂಖ್ಯೆಗಳನ್ನು ಬಿಟ್ಟು, ಹೊಸ ಸಂಖ್ಯೆಗಳನ್ನು ಹುಡುಕಿಕೊಂಡು, ತಮ್ಮ ಮತಗಟ್ಟೆಯನ್ನು ಕಂಡುಕೊಳ್ಳಬೇಕಾಗಿದೆ. ಕಾಂಗ್ರೆಸ್‌ನ ಪ್ರಕಾರ, ಇದು ದೃಢೀಕರಣ ಪ್ರಕ್ರಿಯೆಯನ್ನು ಅತ್ಯಂತ ಕ್ಲಿಷ್ಟಗೊಳಿಸಿದೆ. ಜೊತೆಗೆ, ಹೊಸ ಮತಗಟ್ಟೆ ಸಂಖ್ಯೆಗಳಿಗೆ ಅನುಗುಣವಾಗಿ ಬಿಎಲ್‌ಒಗಳನ್ನು ಮರುನಿಯೋಜಿಸಿದ್ದು, ಸಮನ್ವಯದ ಕೊರತೆ ಇನ್ನಷ್ಟು ಹೆಚ್ಚಾಗಿಸಿದೆ.
ಐದನೆಯದಾಗಿ – ಕಾಂಗ್ರೆಸ್‌ನ ದೂರಿನ ಅತ್ಯಂತ ಮುಖ್ಯ ಭಾಗ – ತಪ್ಪಾಗಿ ಹಲವರನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಕಾಂಗ್ರೆಸ್ ನಡೆಸಿದ ಸಮೀಕ್ಷೆಯು ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ನಾನಾ ರೀತಿಯ ಅಸಂಗತತೆಗಳನ್ನು ಕಂಡುಹಿಡಿದಿದೆ. ಉದಾಹರಣೆಗೆ, ತೇಘ್ರಾ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ (ಹಳೆಯ ಸಂಖ್ಯೆ 274, ಹೊಸ ಸಂಖ್ಯೆ 237), ಎಂಟು ಮಂದಿ ಮತದಾರರು ಮಾನ್ಯ EPIC ಸಂಖ್ಯೆಗಳನ್ನು ಹೊಂದಿದ್ದಾರೆ. ಆದರೆ, ಕರಡು ಪಟ್ಟಿಯಿಂದ ಅವರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅದೇ ಮತಗಟ್ಟೆಯಲ್ಲಿ, ಈಗಾಗಲೇ ಸಾವನ್ನಪ್ಪಿರುವ 37 ಮಂದಿಯ ಹೆಸರನ್ನು ಮತದಾರ ಪಟ್ಟಿಯು ಒಳಗೊಂಡಿದೆ.
ಅಂದರೆ, ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ತೆಗೆದುಹಾಕಬೇಕಿದ್ದ ಹೆಸರುಗಳನ್ನು ಉಳಿಸಿಕೊಳ್ಳಲಾಗಿದೆ. ಆದರೆ, ಜೀವಂತವಾಗಿರುವ, ಮತದಾನದ ಅರ್ಹತೆ ಹೊಂದಿರುವ ಮತದಾರರನ್ನು ಹೊರಹಾಕಲಾಗಿದೆ.
ಈ ಲೇಖನ ಓದಿದ್ದೀರಾ?: ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್ ಒತ್ತಡ
ಆರನೆಯದಾಗಿ, ಜಿಲ್ಲಾಡಳಿತವು ತಮ್ಮ ಯಡವಟ್ಟಿನಿಂದ ಹೊರಗುಳಿದ ಮತದಾರರು ದೂರು ಸಲ್ಲಿಸಿದಾಗ, ಅವರಿಗೆ ಫಾರ್ಮ್ 6ಅನ್ನು ಭರ್ತಿ ಮಾಡುವಂತೆ ಸೂಚಿಸುತ್ತಿದೆ. ಆದರೆ, ಈ ಅರ್ಜಿಯು ಹೊಸ ಮತದಾರರ ನೋಂದಣಿಗಾಗಿ ಬಳಸುವ ಫಾರ್ಮ್ ಆಗಿದೆಯೇ ಹೊರತು, ಕೈಬಿಟ್ಟವರನ್ನು ಮರು ಸೇರಿಸಲು ಬಳಸುವ ಅರ್ಜಿಯಲ್ಲ. ದೋಷದಿಂದ ಹೊರಗುಳಿದವರನ್ನು ಮರು ಸೇರಿಸಲು ಫಾರ್ಮ್ 7 ಮತ್ತು 8ಅನ್ನು ಬಳಸಬೇಕು. ಆದರೆ, ಅದನ್ನು ಬಳಸಲಾಗುತ್ತಿಲ್ಲ.
ಆರ್ಥಿಕ ತಜ್ಞ ಮತ್ತು ಕಾರ್ಯಕರ್ತ ಪ್ರಸೆನ್‌ಜಿತ್ ಬೋಸ್ ಹೇಳುವಂತೆ, ”ಪಟ್ಟಿಯಿಂದ ಹೊರಹಾಕಲಾದ ಮತದಾರರು ಫಾರ್ಮ್ 6 ಭರ್ತಿಮಾಡಿ ಮರುನೋಂದಣಿ ಮಾಡಿಕೊಳ್ಳುವಂತೆ ಒತ್ತಾಯಿಸುವುದು ಆಯೋಗವು ತನ್ನ ತಪ್ಪನ್ನು ಮರೆಮಾಚಲು ಯತ್ನಿಸಿದೆ ಎಂಬುದನ್ನು ಸ್ಪಷ್ಟವಾಗಿ ತೋರುತ್ತದೆ. ಆಯೋಗವು ಉದ್ದೇಶಪೂರ್ವಕವಾಗಿ ಫಾರ್ಮ್ 7 ಮತ್ತು 8ರ ಬಳಕೆಗೆ ಹಿಂದೇಟು ಹಾಕಿದೆ. ಇದರ ಹಿಂದೆ, ಆಯೋಗದ ಯಡವಟ್ಟಿನಿಂದ ಹೊರಹಾಕಲಾದ ಮತದಾರರ ದೂರುಗಳು ಶೂನ್ಯವೆಂದು ತೋರಿಸುವ ಹುನ್ನಾರವಿದೆ.”
”ಫಾರ್ಮ್ 6ಅನ್ನು ಏಕೈಕ ಪರಿಹಾರವಾಗಿ ಬಳಸುತ್ತಿರುವುದು, ಅನಗತ್ಯವಾಗಿ ಹೆಚ್ಚಿನ ಸಂಖ್ಯೆಯ ಮತದಾರರಿಗೆ ಹೊಸ EPICಗಳನ್ನು ರಚಿಸುತ್ತದೆ. ಪಟ್ಟಿಯಿಂದ ಹೊರಹಾಕಲ್ಪಟ್ಟವರು ಬಹುಪಾಲು ಬಡವರು ಮತ್ತು ಕಡಿಮೆ ಶಿಕ್ಷಣ ಹೊಂದಿರುವವರು. ಆದ್ದರಿಂದ, ಅವರು ಹೊಸ EPIC ಕಾರ್ಡ್‌ಗಳನ್ನು ಪಡೆಯಲು ಒಂದು ಕಡೆಯಿಂದ ಇನ್ನೊಂದಕ್ಕೆ ಓಡಾಡಬೇಕಾಗುತ್ತದೆ. ಇದು ಮತದಾರರಿಗೆ ಮತ್ತಷ್ಟು ತೊಂದರೆ ಕೊಡುತ್ತದೆ” ಎಂದು ಅವರು ಹೇಳಿದ್ದಾರೆ.