ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಲಗಳಲ್ಲಿ ಈ ವರ್ಷ ಮಳೆಯಿಲ್ಲದೆ ಒಣಗಿರುವುದು ಕೇವಲ ಹೆಸರು ಕಾಳು ಅಲ್ಲ – ರೈತರ ಬದುಕು. 18735 ಹೆಕ್ಟೇರಿನಲ್ಲಿ ಬಿತ್ತನೆಗೊಂಡಿದ್ದ ಹೆಸರು ಮಳೆ ಬಾರದೇ ಒಣಗಿ, ಶೀರು ಮತ್ತು ಹಳದಿ ರೋಗಗಳ ಹೊಡೆತಕ್ಕೆ ಸಂಪೂರ್ಣ ನಾಶವಾಗಿದೆ. ರೈತರ ಶ್ರಮ, ಸಮಯ, ಹಣ ಎಲ್ಲವೂ ವ್ಯರ್ಥವಾಗಿದೆ. ರೈತರ ಜೀವನ ಇಂದು ಆರ್ಥಿಕ ಸಂಕಷ್ಟದ ಗುಂಡಿಯಲ್ಲಿ ಸಿಲುಕಿದೆ.
ರಾಜ್ಯದ ರಾಜಕಾರಣಿಗಳು ವಿಧಾನಸಭಾ ಮಳೆಗಾಲದ ಅಧಿವೇಶನದಲ್ಲಿ ವಾಗ್ವಾದ, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವಾಗ, ಹೊಲದಲ್ಲಿ ರೈತರ ಬದುಕು ಚೂರುಚೂರು ಆಗುತ್ತಿದೆ. ರೈತರ ಈ ನೋವನ್ನು ಪ್ರಸ್ತಾಪಿಸಲು ಸ್ಥಳೀಯ ಶಾಸಕ ಅಶೋಕ ಪಟ್ಟಣ ಮುಂದಾಗಬೇಕಿದೆ.
ಕರ್ನಾಟಕವು ಹೆಸರು ಕಾಳು ಉತ್ಪಾದನೆಯಲ್ಲಿ ದೇಶದ ಅಗ್ರ ರಾಜ್ಯಗಳಲ್ಲಿ ಒಂದಾದರೂ, ಬೆಳೆ ನಾಶವಾದಾಗ ರೈತರ ನೋವಿಗೆ ತಕ್ಷಣ ಪರಿಹಾರ ಒದಗಿಸುವ ವ್ಯವಸ್ಥೆ ಇಲ್ಲದಿರುವುದು ದುರಂತವಾಗಿದೆ. ಬಿತ್ತನೆ, ಗೊಬ್ಬರ, ಔಷಧಿ, ಟ್ರಾಕ್ಟರ್ ಬಾಡಿಗೆ ಸೇರಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಈಗ ಖರ್ಚು ಹಿಂದಿರುಗುವ ಸ್ಥಿತಿ ಇಲ್ಲ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಮುಂಗಾರು ಹಂಗಾಮಿನ ವೇಳೆ ಜೂನ್ ತಿಂಗಳಲ್ಲಿ ಹೆಸರು ಬಿತ್ತನೆ ಪ್ರಾರಂಭವಾಗುತ್ತದೆ. ಆದರೆ ಕೆಲವೊಮ್ಮೆ ಪೂರ್ವ ಮುಂಗಾರು ಮಳೆ ಉತ್ತಮವಾದರೆ, ಮೇ ತಿಂಗಳಲ್ಲಿಯೇ ಬಿತ್ತನೆ ನಡೆಯುತ್ತದೆ. ಈ ವರ್ಷ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಭರವಸೆಯಿಂದ ಹೆಸರು ಬಿತ್ತನೆ ನಡೆಸಿದ್ದರು.

ಆದರೆ, ಹೆಸರು ಬೆಳೆಯ ನಂತರದ ಹಂತದಲ್ಲಿ, ವಿಶೇಷವಾಗಿ ಮೂಳಕೆಯೊಡದು ಹೂವು ಬಿಡುವ ಸಂದರ್ಭದಲ್ಲಿ ಮಳೆಯಿಲ್ಲದೆ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಹಾಗೂ ಕೆಲವು ಪ್ರದೇಶಗಳಲ್ಲಿ ಬೆಳೆಗೆ ಶಿರು ಬಿದ್ದಿದ್ದು ಇನ್ನು ಕೆಲವು ಪ್ರದೇಶಗಳಲ್ಲಿ ಹೆಸರು ಬೆಳೆಗೆ ಹಳದಿ ರೋಗ ತಗುಲಿದೆ. ಹಳದಿ ರೋಗವು ಒಂದು ವೈರಸ್‌ನಿಂದ ಉಂಟಾಗುವ ರೋಗವಾಗಿದ್ದು, ‘ವೈಟ್ ಫ್ಲೈ’ (ಬಿಳಿನೊಣ) ಎಂಬ ಕೀಟ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಬಿಳಿನೊಣ ಗಿಡದಿಂದ ಗಿಡಕ್ಕೆ ಹಾರಿ ರಸ ಹೀರುವುದರಿಂದ ರೋಗದ ವೈರಸ್ ಹರಡುತ್ತದೆ. ಮತ್ತು ಕಿಡಿಗಳು ಬಿದ್ದು ಕಾಯಿ ಕೂಡ ಬಾರದೆ, ರೈತರ ಶ್ರಮ ಪೂರ್ಣವಾಗಿ ವ್ಯರ್ಥವಾಗಿದೆ.
ಈ ಕುರಿತು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರೈತರಾದ ಲಕ್ಷ್ಮಣ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಪ್ರತಿ ವರ್ಷ ನಮ್ಮ ಹೊಲದಲ್ಲಿ 5 ರಿಂದ 6 ಚಿಲ ಹೆಸರು ಕಾಳು ಬೆಳೆಯುತ್ತಿದ್ದೆವು. ಆದರೆ ಈ ವರ್ಷ ಒಂದೂ ಚೀಲ ಹೆಸರು ಬೆಳೆದಿದ್ದರೂ ಸರಿಯಾಗಿ ಮಳೆ ಬರಲಿಲ್ಲ. ಶಿರ ರೋಗ ಬಂದು ಬೆಳೆ ನಾಶವಾಯಿತು. ಬಿತ್ತನೆ ಸಮಯದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ನಂತರ ಗೊಬ್ಬರ ಟ್ಯಾಕ್ಟರ್ ಬಾಡಿಗೆ ಸಾವಿರಾರು ರೂಪಾಯಿ ಖರ್ಚಾಗಿದೆ. ಬಿತ್ತಿದ ಎಲ್ಲ ಖರ್ಚು ನಮ್ಮ ಮೈ ಮೇಲೆಯೇ ಬಿದ್ದಿದೆ” ಎಂದು ತಮ್ಮ ನೋವು ಹಂಚಿಕೊಂಡರು.
“ಭೂಮಿಯಲ್ಲಿ ಎನೂ ಲಾಭವಿಲ್ಲ. ಬೆಳೆ ಕುಂಠಿತಗೊಂಡಿದ್ದರೂ ಕೃಷಿ ಕೂಲಿಕಾರರಿಗೆ 400 ರೂ 500 ರೂ ಕೊಡಬೇಕಿದೆ. ರೈತರ ಬದುಕು ಅವನತಿಯತ್ತ ಸಾಗಿದೆ. ಸರ್ಕಾರವು ರೈತರ ಮೇಲೆ ಕರುಣೆ ತೋರಬೇಕು. ರೈತರ ಜೀವನ ಕಷ್ಟವಾಗಿದೆ. ರೈತರು ಹೊರಗೆ ಹೋಗಿ ದುಡಿಯಲು ಆಗುತ್ತಿಲ್ಲ. ಶಾಸಕರಾಗಲೀ, ಅಧಿಕಾರಿಗಳಾಗಲೀ ನಮ್ಮ ಕಷ್ಟವನ್ನು ಕೇಳಲು ಬಂದಿಲ್ಲ. ಸರ್ಕಾರವು ರೈತರ ನೆರವಿಗೆ ಬರಬೇಕು. ಸರಿಯಾಗಿ ಬೆಳೆ ಬಂದರೆ ನಾವೇನೂ ಸರ್ಕಾರವನ್ನು ಪರಿಹಾರ ಕೇಳುವುದಿಲ್ಲ” ಎಂದು ರೈತರ ಕಷ್ಟವನ್ನು ಹೇಳಿಕೊಂಡರು.
ರೈತ ರಮೇಶ್ ಮಾತನಾಡಿ, “ಹೆಸರು ಬಿತ್ತನೆ ಮಾಡುವುದಕ್ಕೆ, ಹರಗುವುದಕ್ಕೆ,ಕಸ ತೆಗೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಆದರೆ ಸರಿಯಾಗಿ ಮಳೆ ಆಗಲಿಲ್ಲ. ಇದರಿಂದ ಬೆಳೆಗೆ ಶಿರು ರೋಗ,ಹಳದಿ ರೋಗ ಬಂದು ಬೆಳೆ ನಾಶವಾಗಿದೆ. ನಾವು 10 ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೇವೆ. ಸರಿಯಾಗಿ ಮಳೆ ಆಗಿದ್ದಿದ್ದರೆ 25 ಚೀಲ ಹೆಸರು ಬೆಳೆ ಬರುತ್ತಿತ್ತು. ಆದರೆ ಈ ವರ್ಷ 3 ಚೀಲ ಹೆಸರು ಕಾಳು ಆಗುವುದಿಲ್ಲ. ಕೃಷಿ ಕೂಲಿಗಳಿಗೆ 400ರಿಂದ 600 ರೂ ಕೂಲಿ ಕೊಡಬೇಕು. ಇದರಿಂದ ರೈತರಿಗೆ ಆರ್ಥಿಕ ಹೊರೆಯಾಗಿದ್ದು, ಸರ್ಕಾರವು ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

ಮತ್ತೋರ್ವ ರೈತ ಉದಯ ಅವರು ಮಾತನಾಡಿ, ಹೆಸರು ಬೆಳೆಯಲು ಸಾಕಷ್ಟು ಖರ್ಚಾಗಿದೆ. ಆದರೆ ಬೆಳೆ ಸರಿಯಾಗಿ ಬಂದಿಲ್ಲ. ರೈತರು ಕಣ್ಣೀರು ಹಾಕುವುದಷ್ಟೇ ಉಳಿದಿದೆ. ಸರ್ಕಾರ ರೈತರಿಗೆ ಬೆಳೆ ಹಾನಿ ಬೆಳೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರೈತ ಸಂಘಟನೆಯ ಮುಖಂಡರಾದ ಮಲ್ಲಿಕಾರ್ಜುನ ರಾಮದುರ್ಗ ಮಾತನಾಡಿ ರೈತರು ಬೆಳೆದ ಹೆಸರು ಬೆಳೆಗೆ ಕಿಡಿಗಳು ಬಿದ್ದು ನಾಶವಾಗಿವೆ. ಅಧಿಕಾರಿಗಳು ಕ್ರಾಪ್ ಕಟಿಂಗ್ ಸರ್ವೇ ಮಾಡುತ್ತಿದ್ದಾರೆ. ಆದರೆ ಅವರು ಸರಿಯಾಗಿ ಮಾಡುತ್ತಿಲ್ಲ . ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ರಾಮದುರ್ಗ ತಾಲೂಕಿನ ಕೃಷಿ ಅಧಿಕಾರಿಗಳು ಈ ದಿನ.ಕಾಮ್ ಜತೆ ಮಾತನಾಡಿ ರೈತರಿಗೆ ಕಿಟನಾಶಕಗಳನ್ನು ನೀಡಲಾಗಿದೆ ಹಾಗೂ ಇವಾಗ ಕ್ರಾಪ್ ಕಟಿಂಗ್ ಸರ್ವೇ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾರುಕಟ್ಟೆಯಲ್ಲಿ ಹೆಸರು ಕಾಳು ಬೆಲೆಯು ಈ ವರ್ಷ ರೈತರ ಮನಸ್ಸಿಗೆ ಭರವಸೆ ಮೂಡಿಸಿದರೂ, ಬೆಳೆಯ ಕೊರತೆ ಅವರ ಬದುಕಿಗೆ ದೊಡ್ಡ ಹೊಡೆತ ನೀಡಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಸೇರಿದಂತೆ 18,735 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆ ಮಾಡಲಾಗಿದ್ದರೂ, ಮಳೆ ಅಭಾವ ಮತ್ತು ಕೀಟ ಬಾಧೆಯಿಂದ ಹೆಚ್ಚಿನ ಹೊಲಗಳಲ್ಲಿ ಬೆಳೆ ಕೈಕೊಟ್ಟಿದೆ.
ಫಸಲು ಸರಿಯಾಗಿ ಕೈಗೆ ಸಿಗದೇ, ಸಾಲದ ಬಾಧೆ ಹಾಗೂ ದಿನನಿತ್ಯದ ಖರ್ಚುಗಳ ನಡುವೆ ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ರೈತರ ನೆರವಿಗೆ ಬರಬೇಕು ಎಂಬುದು ರೈತರ ಮನವಿ. ಕ್ಷೇತ್ರದ ಶಾಸಕರು ಈ ಗಂಭೀರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ನೆರವು ಒದಗಿಸಲು ರೈತರು ಒತ್ತಾಯಿಸುತ್ತಿದ್ದಾರೆ.
ರೈತನ ಕೈಯಲ್ಲಿ ಈಗ ಉಳಿದಿರುವುದು ಕೇವಲ ಖಾಲಿ ಜೋಳಿಗೆಯೇ ಸರಿ, ಆದರೆ ಅವನ ಕಣ್ಣಲ್ಲಿ ಇನ್ನೂ ಒಂದು ಹನಿ ಪರಿಹಾರದ ಭರವಸೆಯ ಮಳೆ ಬಿದ್ದರೆ – ಅವನ ಬದುಕನ್ನು ಮತ್ತೆ ಹಸಿರುಗೊಳಿಸಬಹುದು. ಆ ಹನಿಯನ್ನು ನೀಡುವುದು ಸರ್ಕಾರ ಮತ್ತು ಶಾಸಕರ ಜವಾಬ್ದಾರಿಯಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು