ಕೋಲಾರದ ವಿದ್ಯಾ ಜ್ಯೋತಿ ಖಾಸಗಿ ಕಾಲೇಜಿನ ವಸತಿ ನಿಲಯದ ವಿದ್ಯಾರ್ಥಿಗಳು ಈರುಳ್ಳಿ ದೋಸೆ ತಿಂದು ಅಸ್ವಸ್ಥರಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ರಾತ್ರಿ ಆನಿಯನ್ ದೋಸೆ ತಿಂದಿದ್ದ ವಿದ್ಯಾರ್ಥಿಗಳು ವಾಂತಿ ಭೇದಿಯಾಗಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೋಲಾರ ಜಿಲ್ಲಾಸ್ಪತ್ರೆಗೆ ತಹಶೀಲ್ದಾರ್ ನಯನ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು ಹಾಗೂ ಕೋಲಾರದ ಬಸವನತ್ತ ಬಳಿ ಇರುವ ವಿದ್ಯಾಜ್ಯೋತಿ ಖಾಸಗಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
“41 ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಗ್ಯ ಇಲಾಖೆ, ಆಹಾರ ಇಲಾಖೆ ಹಾಗೂ ಪೋಲಿಸರು ಪರಿಶೀಲನೆ ಮಾಡುತ್ತಿದೆ. ಎಲ್ಲಿ ಲೋಪ ಆಗಿದೆ ಎಂದು ತನಿಖೆ ಮಾಡುತ್ತಿದೆ. ಎಲ್ಲ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇವೆ” ಎಂದು ಕೋಲಾರ ತಾಲೂಕು ದಂಡಾಧಿಕಾರಿ ನಯನಾ ಮಾಹಿತಿ ನೀಡಿದರು.

ಕೋಲಾರ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಪ್ರತಿಕ್ರಿಯೆ ನೀಡಿದ್ದು, ವಿದ್ಯಾ ಜ್ಯೋತಿ ಖಾಸಗಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಬೆಳಗಿನ ಜಾವ ಹೊಟ್ಟೆ ನೋವು, ವಾಂತಿ ಭೇದಿ ಆದ ಹಿನ್ನೆಲೆಯಲ್ಲಿ 41 ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿದ್ದೇವೆ. ಎಲ್ಲಾ ಮಕ್ಕಳು ಚೇತರಿಕೆ ಆಗುತ್ತಿದ್ದಾರೆ. ರಾತ್ರಿ ದೋಸೆ, ಚಟ್ನಿ, ಆಲೂಗಡ್ಡೆ ಸಾಂಬಾರ್ ತಿಂದ ಹಿನ್ನೆಲೆ ಈ ರೀತಿ ಆಗಿದೆ ಎಂದು ತಿಳಿಸಿದರು.
ಅಸ್ವಸ್ಥರಾಗಿದ್ದ ಸುಮಾರು 41 ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ ಮಾಡಿದ ಬಳಿಕ ಈ ದಿನ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸೈಯದ್ ಆಫ್ರಿದ್, “ಈ ಘಟನೆಗೆ ಕಾರಣ ಆದವರಿಗೆ ಕೂಡಲೇ ಕಠಿಣ ಶಿಕ್ಷೆ ನೀಡಬೇಕು ಹಾಗೂ ಪರಿಶೀಲನೆ ಮಾಡಿ ಶಾಲಾ ಆಡಳಿತ ಮಂಡಳಿ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..? ಚುನಾವಣೆ ನೆಪದಲ್ಲಿ ಗಿಮಿಕ್ ಮಾಡಲು ಹೊರಟಿದ್ದಾರೆ: ವರ್ತೂರ್ ಪ್ರಕಾಶ್ ವಿರುದ್ಧ ಕೊತ್ತೂರು ಮಂಜುನಾಥ್ ವಾಗ್ದಾಳಿ
ಸುಮಾರು ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಆಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರ ಆರೋಗ್ಯ ವಿಚಾರಣೆ ಮಾಡಿದ್ದೇವೆ. ಈ ಘಟನೆ ಸಂಭವಿಸಲು ಯಾರು ಕಾರಣವೋ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡ ನವೀನ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭರತ್ ರಾಯ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಗೋರು, ತಾಲೂಕು ಅಧ್ಯಕ್ಷ ಸುಹೈಲ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಬಾಜ್ ಮುಂತಾದವರು ಉಪಸ್ಥಿತರಿದ್ದರು.
