ಜೋಳಿಗೆ | ʻಆಂದೋಲನʼದಲ್ಲಿ ನನ್ನ ʻತರಬೇತಿʼ ಭಾಗ 2- ಆಟೋ ಡ್ರೈವರ್‌ಗಳ ವಿರುದ್ಧ ಎಸ್ಪಿ ರೇವಣಸಿದ್ದಯ್ಯ ಅವರ ʻಸರ್ಪ ಯಾಗʼ!

Date:

Advertisements

ಎಲ್. ರೇವಣಸಿದ್ದಯ್ಯ ಅವರು 1980ರಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ(ಎಸ್ಪಿ)ಯಾಗಿದ್ದರು. ಅವರಿಗೆ ಬೆಳಗಿನ ಜಾವದಲ್ಲಿ ಕುದುರೆ ಸವಾರಿ ಮಾಡುವ ರೂಢಿಯಿತ್ತು. ಹಾಗೊಂದು ದಿನ ಬೆಳಗಿನ ಐದು ಗಂಟೆ ವೇಳೆ ಕುದುರೆ ಸವಾರಿ ಮಾಡುತ್ತಿದ್ದಾಗ, ಜಲಪುರಿ ಪೊಲೀಸ್ ಕ್ವಾರ್ಟರ್ಸ್ ಮತ್ತು ನಜರಬಾದ್ ನಡುವಿನ ಜಂಕ್ಷನ್ನಿನಲ್ಲಿ ಒಬ್ಬ ಆಟೋ ರಿಕ್ಷಾದವನು ಬಲಭಾಗದಿಂದ ಆಟೊ ಚಲಾಯಿಸಿದ್ದಾನೆ. ಅದನ್ನು ಕಂಡು ಎಸ್ಪಿ ಅವರು ರಿಕ್ಷಾ ನಿಲ್ಲಿಸುವಂತೆ ಅವನಿಗೆ ಕೂಗು ಹಾಕಿದಾರೆ. ಆತ ರಿಕ್ಷಾ ನಿಲ್ಲಿಸದೆ ಹೊರಟು ಹೋಗಿದಾನೆ. ಇದು ಎಸ್ಪಿ ಸಾಹೇಬರನ್ನು ಕೆರಳಿಸಿತ್ತು…

ಮಹಾ ಭಾರತದಲ್ಲಿ ಘೋರವಾದ ಸರ್ಪಯಾಗವೊಂದರ ಕತೆ ಬರುತ್ತದೆ. ಪಾಂಡವರ ಮೊಮ್ಮಗನಾದ ಪರೀಕ್ಷಿತ ರಾಜನನ್ನು ಋಷಿಯೊಬ್ಬರ ಶಾಪದ ಫಲವಾಗಿ ತಕ್ಷಕನೆಂಬ ಹಾವು ಕಚ್ಚಿ ಕೊಲ್ಲುತ್ತದೆ; ಇದಕ್ಕೆ ಪ್ರತೀಕಾರವಾಗಿ ಪರೀಕ್ಷಿತನ ಮಗನಾದ ಜನಮೇಜಯನು ಸರ್ಪಯಾಗವನ್ನು ಕೈಗೊಂಡು ಇಡೀ ನಾಗ ಸಂಕುಲವನ್ನೇ ನಾಶ ಮಾಡಲು ಹೊರಡುತ್ತಾನೆ. ಕೊನೆಗೆ ಆಸ್ತಿಕನೆಂಬ ಮುನಿಯ ಮನವಿಯಂತೆ ಯಾಗವನ್ನು ನಿಲ್ಲಿಸುತ್ತಾನೆ. ಈ ಪೌರಾಣಿಕ ಕತೆಯನ್ನೇ ಹೋಲುವಂತಹ ಕ್ರೂರ ಕಾರ್ಯಾಚರಣೆಯೊಂದನ್ನು ಮೈಸೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯೊಬ್ಬರು ಕೈಗೊಂಡು, ಕೊನೆಗೆ ನಮ್ಮ ಆಂದೋಲನ ಪತ್ರಿಕೆ ರೂಪಿಸಿದ ಸಾರ್ವಜನಿಕ ಅಭಿಪ್ರಾಯದ ಒತ್ತಡದ ಫಲವಾಗಿ ಅದನ್ನು ಕೈಬಿಟ್ಟ ಪ್ರಸಂಗ ನಾನು ಆಂದೋಲನದಲ್ಲಿದ್ದಾಗ ನಡೆಯಿತು.

ಬೆಂಗಳೂರು ಪೊಲೀಸ್ ಕಮೀಶನರ್ ಆಗಿ, ನಂತರ ಕರ್ನಾಟಕದ ಡಿಜಿ-ಐಜಿಪಿಯಾಗಿ ನಿವೃತ್ತರಾಗಿರುವ ಎಲ್. ರೇವಣಸಿದ್ದಯ್ಯ ಅವರು 1980ರಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ(ಎಸ್ಪಿ)ಯಾಗಿದ್ದರು. ಅವರಿಗೆ ಬೆಳಗಿನ ಜಾವದಲ್ಲಿ ಕುದುರೆ ಸವಾರಿ ಮಾಡುವ ರೂಢಿಯಿತ್ತು. ಹಾಗೊಂದು ದಿನ ಬೆಳಗಿನ ಐದು ಗಂಟೆ ವೇಳೆ ಕುದುರೆ ಸವಾರಿ ಮಾಡುತ್ತಿದ್ದಾಗ, ಜಲಪುರಿ ಪೊಲೀಸ್ ಕ್ವಾರ್ಟರ್ಸ್ ಮತ್ತು ನಜರಬಾದ್ ನಡುವಿನ (ಅಂದಿನ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯ ಎದುರಿರುವ) ಜಂಕ್ಷನ್ನಿನಲ್ಲಿ ಒಬ್ಬ ಆಟೋ ರಿಕ್ಷಾದವನು ಬಲಭಾಗದಿಂದ ಅಂದರೆ ರಾಂಗ್ ಸೈಡಿನಿಂದ ಆಟೊ ಚಲಾಯಿಸಿದ್ದಾನೆ. ಅದನ್ನು ಕಂಡು ಎಸ್ಪಿ ಅವರು ರಿಕ್ಷಾ ನಿಲ್ಲಿಸುವಂತೆ ಅವನಿಗೆ ಕೂಗು ಹಾಕಿದಾರೆ. ಅದು ಅವನಿಗೆ ಕೇಳಿಸಿತೋ ಇಲ್ಲವೋ, ಜನಸಂಚಾರವೇ ಇರದಿದ್ದ ಅಲ್ಲಿ ಯಾರೋ ಪೊಲೀಸ್ ಸುಮ್ಮನೆ ತೊಂದರೆ ಕೊಡ್ತಿದಾನೆ ಅಂದುಕೊಂಡನೋ ಏನೋ. ಅಂತೂ ಆತ ರಿಕ್ಷಾ ನಿಲ್ಲಿಸದೆ ಹೊರಟು ಹೋಗಿದಾನೆ. ಇದು ಎಸ್ಪಿ ಸಾಹೇಬರನ್ನು ಕೆಂಡಾಮಂಡಲ ಕೆರಳಿಸಿದೆ. ಬೆಳಿಗ್ಗೆ ಕಚೇರಿಗೆ ಹೋದವರೇ, ನಗರದಾದ್ಯಂತ ಆಟೋಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿ, ನಿರ್ದಯವಾಗಿ ಕೇಸು ಜಡಿಯಬೇಕೆಂದು ಎಲ್ಲಾ ಠಾಣೆಗಳಿಗೂ ಫರ್ಮಾನು ಹೊರಡಿಸಿಬಿಟ್ಟಿದಾರೆ. ದೊಡ್ಡ ಸಾಹೇಬರೇ ಸಿಕ್ಕಾಪಟ್ಟೆ ಗರಂ ಆಗಿದಾರೆ ಅಂದಮೇಲೆ ಸಣ್ಣ ಅಧಿಕಾರಿಗಳನ್ನು ಕೇಳಬೇಕಾ? ಬರೀ ಕೇಸು ಜಡಿಯುವುದಲ್ಲ, ಹೊಡಿ-ಬಡಿ ಕೂಡ ಸಾಕಷ್ಟು ನಡೆದಿದೆ. ಎರಡನೇ ದಿನವೂ ಈ ಧೀರ ಶೂರ ಕಾರ್ಯಾಚರಣೆ ಮುಂದುವರಿದಾಗ ನಗರದ ಆಟೋದವರಲ್ಲಿ ಹಾಹಾಕಾರ ಉಂಟಾಗಿ ಬಿಟ್ಟಿದೆ.

mysuru 2

ಇದು ಗೊತ್ತಾಗುತ್ತಿದ್ದಂತೆ ನಾನು ಕೋಟಿಯವರೊಂದಿಗೆ ಚರ್ಚಿಸಿದೆ. ಈ ಕಾರ್ಯಾಚರಣೆಯನ್ನು ವಿರೋಧಿಸಿ, ಅದರ ತಪ್ಪುಗಳನ್ನು ಎತ್ತಿಹೇಳಿ ವರದಿ ಮಾಡೋಣ ಎಂದು ಹೇಳಿ ಅದನ್ನು ನನಗೇ ವಹಿಸಿದರು. ಜನ-ವಾಹನ ಸಂಚಾರವೇ ಇರದಿದ್ದ ಹೊತ್ತಲ್ಲಿ ಮತ್ತು ಸ್ಥಳದಲ್ಲಿ ರಾಂಗ್ ಸೈಡು-ರೈಟ್ ಸೈಡು ಎಂದು ವಿನಾಕಾರಣ ರೂಲ್ಸಿಗೆ ಗಂಟು ಬೀಳುವುದು ಅನಗತ್ಯ; ಹಾಗೂ ಒಂದು ವೇಳೆ ಒಬ್ಬ ಆಟೋದವ ಏನಾದರೂ ತಪ್ಪು ಮಾಡಿದನೆಂದರೆ ಅದಕ್ಕೆ ಪ್ರತಿಯಾಗಿ ಎಲ್ಲಾ ಆಟೋದವರ ಮೇಲೆ ನಿರ್ದಯವಾಗಿ ಮುಗಿ ಬೀಳುವುದು ನ್ಯಾಯವಲ್ಲ; ಇಷ್ಟಕ್ಕೂ ಸರ್ಕಾರದ ಹಲವಾರು ಕಾಯ್ದೆ ಕಾನೂನುಗಳು ಎಷ್ಟು ಗೋಜಲು ಮತ್ತು ಅಸಂಬದ್ಧ ಆಗಿವೆಯೆಂದರೆ, ಯಾವ ವಾಹನದವರೂ ಎಲ್ಲಾ ರೂಲ್ಸುಗಳನ್ನೂ ನೂರಕ್ಕೆ ನೂರು ಪಾಲಿಸುವುದು ಸಾಧ್ಯವೇ ಇಲ್ಲದ್ದು, ಎಷ್ಟೇ ಎಲ್ಲಾ ನಿಬಂಧನೆಗಳನ್ನೂ ಪಾಲಿಸಿದರೂ, ಕೇಸು ಹಾಕಲೇಬೇಕು ಎಂದು ಹೊರಟ ಅಧಿಕಾರಿಗೆ ಒಂದಿಲ್ಲೊಂದು ನೆಪ ಅಥವಾ ʻಉಲ್ಲಂಘನೆʼ ಸಿಕ್ಕಿಯೇ ಸಿಗುತ್ತದೆ; ಹೀಗಿರುವಾಗ, ಸಾರ್ವಜನಿಕರಿಗೆ ತೊಂದರೆಯಾಗದಂತಹ ಸಣ್ಣಪುಟ್ಟ ಕಾರಣಗಳಿಗೆಲ್ಲ ಬಡಪಾಯಿ ಆಟೋದವರ ಮೇಲೆ ಹಿರಿಯ ಅಧಿಕಾರಿ ಬ್ರಹ್ಮಾಸ್ತ್ರ ಝಳಪಿಸುವುದು ಖಂಡಿತಾ ನ್ಯಾಯಸಮ್ಮತವಲ್ಲ – ಮುಂತಾಗಿ, ಪೊಲೀಸರ ಕಾರ್ಯಾಚರಣೆಯ ಅಸಂಗತತೆಯನ್ನು ಪಟ್ಟಿ ಮಾಡಿ ನಾನು ವಿವರವಾದ ವರದಿ ತಯಾರಿಸಿದೆ. ಅಲ್ಲದೆ, ಬಹುತೇಕ ಆಟೋ ಡ್ರೈವರ್‌ಗಳೆಲ್ಲ ಸಮಾಜದ ಹಿಂದುಳಿದ ಸಮುದಾಯಗಳಿಗೆ ಸೇರಿದವರೇ ಆಗಿರುತ್ತಾರೆ, ಅವರ ವಿದ್ಯಾಭ್ಯಾಸವೂ ಅಷ್ಟಕ್ಕಷ್ಟೇ ಇರುತ್ತದೆ; ಇದರ ಜೊತೆಗೆ ಅವರು ಬೆಳೆಯುವ ವಾತಾವರಣದ ಪರಿಣಾಮವೂ ಸೇರಿ ಅವರ ಮಾತು, ನಡವಳಿಕೆ ಒಂದಿಷ್ಟು ಒರಟಾಗಿರುವುದು ಸಹಜ, ಅಂದಮಾತ್ರಕ್ಕೆ ಆಟೋದವರೆಲ್ಲಾ ದುಷ್ಟರು, ಕ್ರಿಮಿನಲ್ಗಳು ಎಂಬಂತೆ ನೋಡುವುದು ಅಕ್ಷಮ್ಯ ಎಂದೂ ವಿಶ್ಲೇಷಣೆ ನೀಡಿದೆ.

ಅಷ್ಟಕ್ಕೇ ಬಿಡದೆ, ಆಟೋದವರ ಮಾನವೀಯ ನಡವಳಿಕೆ, ಕಷ್ಟಕಾಲದಲ್ಲಿ ನೆರವಾಗಿದ್ದು, ಕಳೆದುಕೊಂಡಿದ್ದನ್ನು ಮನೆವರೆಗೆ ತಂದು ತಲುಪಿಸಿದ್ದು, ಹೊತ್ತಲ್ಲದ ಹೊತ್ತಲ್ಲಿ ಬಸ್ಸು-ರೈಲಿನಲ್ಲಿ ಬಂದಿಳಿದ ಒಂಟಿ ಹೆಣ್ಮಕ್ಕಳನ್ನು ಜೋಪಾನವಾಗಿ ಮನೆ ತಲುಪಿಸಿ ಉಪಕಾರ ಮಾಡಿದ್ದು, ಅಪರಾತ್ರಿಯಲ್ಲೂ ಮೆಡಿಕಲ್ನಂತಹ ತುರ್ತು ಇದ್ದಾಗ ಹೋಗಿ ಕರೆದರೆ ತಡ ಮಾಡದೆ ಆಟೋ ತಂದು ಪ್ರಾಣ ಉಳಿಸಿದ್ದು, ಮುಂತಾಗಿ ನನಗೆ ಗೊತ್ತಿದ್ದ ಕೆಲವು ಪ್ರಕರಣಗಳನ್ನು ಸಂಬಂಧಪಟ್ಟವರಿಂದ ಅಂದೇ ಪತ್ರದ ರೂಪದಲ್ಲಿ ಬರೆಯಿಸಿ ಪ್ರಕಟಿಸಿದೆವು. ಇದಲ್ಲದೆ, ಇತರ ಕೆಲವು ಪತ್ರಿಕೆಗಳವರಿಗೂ ಈ ಬಗ್ಗೆ ಗಮನ ಹರಿಸುವಂತೆ ಕೋಟಿಯವರು ಸಲಹೆ ಮಾಡಿದ ಫಲವಾಗಿ ಇನ್ನೂ ಕೆಲವು ಪತ್ರಿಕೆಗಳಲ್ಲಿ ಪೊಲೀಸರ ಕ್ರಮದ ಕುರಿತು ಅಸಮ್ಮತಿಯ ಬರಹಗಳು ಪ್ರಕಟವಾದವು. ಬಹುಶಃ ರಾಜಕಾರಣಿಗಳಿಂದಲೂ ಫೋನುಗಳು ಹೋಗಿರಬಹುದು, ಅಂತೂ ಎರಡು ದಿನ ಕಳೆಯುವುದರೊಳಗೆ ಸಾಹೇಬರು ಬಹಳಷ್ಟು ತಣ್ಣಗಾಗಿದ್ದರು. ಅಲ್ಲಿಗೆ ಈ ಪೊಲೀಸ್ ಸರ್ಪಯಾಗ ಕೊನೆಗೊಂಡಿತು.

ನನ್ನ ಬರಹಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ದೇವನೂರ ಮಹಾದೇವ ಕೋಟಿಯವರು ಸಿಕ್ಕಾಗ, “ಇದ್ಯಾರ್ರಿ ಸಿರಿಮನೆ ನಾಗರಾಜ್ ಅನ್ನೋರು? ಬಹಳ ಸರಿಯಾಗಿ ಬರೆದಿದಾರಲ್ಲ?” ಎಂದು ವಿಚಾರಿಸಿದರಂತೆ.

ಹಾಗೊಮ್ಮೆ ಕೋಟಿಯವರು ಮತ್ತು ನಾನು ದೇಮ (ದೇವನೂರ ಮಹಾದೇವ) ಅವರ ಮನೆಗೆ ಹೋಗಿದ್ದಾಗ ಅವರು ಮೂರು-ಮೂರೂವರೆ ವರ್ಷದ ತಮ್ಮ ಮುದ್ದು ಮಗಳ ಮಾತನ್ನು ಟೇಪ್ ರೆಕಾರ್ಡರಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನ್ನು ಕೇಳಿಸಿದ್ದರು. ಆ ಮಗುವಿನ ಹೆಸರು ಶಿಲ್ಪಾ ಎಂದಿತ್ತು ಎಂದು ನನ್ನ ಖಚಿತವಾದ ನೆನಪು. ಯಾಕೆಂದರೆ ಆಗಿನ್ನೂ ಆ ಹೆಸರು ತೀರಾ ಹೊಸದು; ಅದನ್ನು ಅದೇ ಮೊದಲ ಸಲ ಕೇಳಿ ನಾನು ಮಾರುಹೋಗಿದ್ದೆ: ನಮ್ಮ ಮಗುವಿಗೂ ಶಿಲ್ಪಾ ಎಂದೇ ಹೆಸರಿಡಬೇಕು ಅಂತ ಅಂದೇ ತೀರ್ಮಾನವನ್ನೂ ಮಾಡಿಕೊಂಡಿದ್ದೆ. ಅವಳು ತನ್ನ ತಂಗಿ ಉಜ್ವಲಾಳನ್ನು ʻಉಜಿಯಾ ಉಜಿಯಾʼ ಅಂತ ಕರೀತಿದ್ದುದನ್ನು ರೆಕಾರ್ಡರಿನಲ್ಲಿ ಕೇಳಿಸಿದ್ದರು. ಆದರೆ ಈಗ ಅವರ ಮೊದಲ ಮಗಳ ಹೆಸರು ಮಿತಾ ದೇವನೂರು ಎಂದಾಗಿದೆ. ಶಿಲ್ಪಾ ಎಂಬ ಹೆಸರು ನಮ್ಮ ಮಗಳಿಗೆ ದಕ್ಕಲಿಲ್ಲ; ನಮಗಿಂತ ಮೊದಲೇ ನನ್ನ ಕಸಿನ್‌ಗೆ ಮಗಳು ಹುಟ್ಟಿದಾಗ ಶಿಲ್ಪಾ ಅಂತ ಹೆಸರಿಟ್ಟುಬಿಟ್ಟರು. ಕೊನೆಗೊಮ್ಮೆ ತಿಪಟೂರು ತಾಲೂಕಿನ ಈರಲಗೆರೆಯ ಆತ್ಮೀಯ ಗೆಳೆಯ (ಈಗಿಲ್ಲ) ಸಿದ್ರಾಮಪ್ಪನನ್ನು ಕಾಣಲು ಹೋಗಿದ್ದಾಗ, ದಾರಿಯಲ್ಲಿ ಬಣ್ಣಬಣ್ಣದ ಉದ್ದ ಲಂಗ ತೊಟ್ಟು, ಎರಡು ಚೋಟು ಜಡೆಗಳನ್ನು ಬಣ್ಣದ ʻಟೇಪುʼಗಳಲ್ಲಿ ಹೆಣೆಯಿಸಿ ತಲೆ ತುಂಬಾ ಹೂವು ಮುಡಿದು, ನೆಂಟರ ಮನೆಗೆ ಹೋಗುವ ಸಂಭ್ರಮದಲ್ಲಿ ತಾಯಿಯೊಂದಿಗೆ ಕುಣಿಕುಣಿದಾಡ್ತಾ ಬಸ್ಸಿಗೆ ಹೊರಟಿದ್ದ ನಾಲ್ಕೈದು ವರ್ಷದ ಮುದ್ದು ಮಗುವಿನ ಹೆಸರು ಮಲ್ಲಿಗೆ ಎಂದು ಕೇಳಿದಾಗ, ʻಆಹಾ ಎಂಥ ಹೆಸರು! ನಮ್ಮ ಮಗಳೂ ಮಲ್ಲಿಗೆಯೇʼ ಅಂತ ಅಲ್ಲೇ ತೀರ್ಮಾನಿಸಿಕೊಂಡಿದ್ದೆ. ಆ ಹೆಸರು ಹೇಮಾಗೂ ಇಷ್ಟವಾಯ್ತು. ಹಾಗಾಗಿ ನಮ್ಮ ಮಗಳ ಹೆಸರು ʻಇಂಪೋರ್ಟೆಡ್ʼ ಅಂತ ನಾನು ಕೊಚ್ಚಿಕೊಳ್ಳುವುದುಂಟು!

Advertisements
ರಾಜಶೇಖರ ಕೋಟಿ
ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ

ಇತ್ತ ಆಂದೋಲನಕ್ಕೆ ವಾಪಸ್ ಬರೋಣ. ಕೋಟಿಯವರು ಧಾರವಾಡ ವಿವಿಯಲ್ಲಿ ಚಿಕ್ಕ ವಾರಪತ್ರಿಕೆಯಾಗಿ ಆರಂಭಿಸಿದ್ದ ʻಆಂದೋಲನʼವನ್ನು ಮೈಸೂರಿಗೆ ಬಂದು ದಿನಪತ್ರಿಕೆಯಾಗಿ ಮುಂದುವರಿಸಿದ್ದರು. ಸರ್ಕಾರದ ಜಾಹೀರಾತುಗಳೂ ಸಿಗುತ್ತಿದ್ದುದರಿಂದ, ಮೊದಲು ಡೆಮಿ ಅರ್ಧ ಪುಟದಲ್ಲಿದ್ದುದನ್ನು ನಂತರ ಡೆಮಿ ಪೂರ್ಣ ಪುಟದ್ದಾಗಿ ಮಾಡಿದ್ದರು. ಆದರೆ ಅದಾಗಿ ಕೆಲವೇ ಸಮಯದಲ್ಲಿ ಸರ್ಕಾರದ ಜಾಹೀರಾತುಗಳನ್ನು ಗುಂಡೂರಾವ್ ಸರ್ಕಾರ ತಡೆಹಿಡಿಯಿತು. ಎಲ್ಲಾ ಪತ್ರಿಕೆಗಳ ಪ್ರಸಾರ ಸಂಖ್ಯೆ, ರಿಜಿಸ್ಟ್ರೇಶನ್ ಮತ್ತಿತರ ವಿವರಗಳನ್ನು ಆಮೂಲಾಗ್ರವಾಗಿ ಪರಿಶೀಲಿಸುವುದು ಇದರ ಉದ್ದೇಶ ಎನ್ನಲಾಗಿತ್ತು. ಆದರೆ ಹಾಗೆ ನಿಂತ ಜಾಹೀರಾತುಗಳು ಅಧಿಕಾರಶಾಹಿ ವಿಳಂಬದಿಂದಾಗಿ ಬಹಳ ಕಾಲ ಪುನಃ ಆರಂಭವಾಗದೆ ಹೋದಾಗ, ಇತರ ಕೆಲವು ಸ್ಥಳೀಯ ದಿನಪತ್ರಿಕೆಗಳ ರೀತಿಯಲ್ಲೇ ಆಂದೋಲನ ಕೂಡ ತೀವ್ರ ಹಣಕಾಸು ಮುಗ್ಗಟ್ಟಿಗೆ ಸಿಲುಕಿತು. ದಿನದಿನದ ಸಂಚಿಕೆಗೆ ಕನಿಷ್ಠ ಮುದ್ರಣ ಕಾಗದವನ್ನಾದರೂ (ನ್ಯೂಸ್ಪ್ರಿಂಟ್) ಒದಗಿಸುವುದೇ ಕೋಟಿಯವರಿಗೊಂದು ದೊಡ್ಡ ಕಾಯಕವಾಗಿಬಿಟ್ಟಿತು. ಖಾಸಗಿ ಜಾಹೀರಾತುಗಳಿಂದಲೇ ದಿನ ತಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ದಿನವೂ ಬಜಾರಿಗೆ ಹೋಗಿ ಜಾಹೀರಾತಿಗಾಗಿ ಸುತ್ತಾಡಿ, ಇಲ್ಲವಾದರೆ ಆತ್ಮೀಯರಿಂದ, ಹಿತೈಷಿಗಳಿಂದ ಸಾಲವಾದರೂ ಮಾಡಿ ಸಂಜೆಯ ಹೊತ್ತಿಗೆ ಅವತ್ತಿಗಾಗುವಷ್ಟು ನ್ಯೂಸ್ಪ್ರಿಂಟ್ ಹೊಂಚಿಕೊಂಡು ಬರುತ್ತಿದ್ದರು. ಬರಬರುತ್ತ ಇದರಿಂದಾಗಿ ಅವರ ಟೆನ್ಶನ್ ಎಷ್ಟು ಹೆಚ್ಚಿತೆಂದರೆ, ವೈದ್ಯರನ್ನು ಕಾಣುವುದು ಅನಿವಾರ್ಯವಾಯಿತು. ನಾನು ಕಚೇರಿಯಲ್ಲಿ ಸುದ್ದಿ ಬರವಣಿಗೆಯ ಪೂರ್ತಿ ಹೊಣೆ ಹೊತ್ತಿದ್ದು ಅವರಿಗೆ ಅಷ್ಟರಮಟ್ಟಿಗೆ ನೆರವಾಗಿತ್ತು.

ಆದರೂ ಎಷ್ಟು ದಿನ ಅಂತ ಸಾಲಸೋಲದಲ್ಲೇ ಪತ್ರಿಕೆ ನಡೆದೀತು? ಪತ್ರಿಕೆಯನ್ನು ಕಡೇ ಪಕ್ಷ ಸರ್ಕಾರಿ ಜಾಹೀರಾತು ಪುನರಾರಂಭವಾಗುವವರೆಗಾದರೂ ನಿಲ್ಲಿಸಿಬಿಡುವ ಮಾತು ದೇಮ, ಪ್ರೊ. ಬಿ.ರಾಮದಾಸ್, ಪ.ಮಲ್ಲೇಶ್ ಮುಂತಾದ ಹಿತೈಷಿಗಳೊಂದಿಗೆ ಪದೇಪದೇ ಬಂದಿತ್ತು. ಆದರೆ ಅಷ್ಟರಲ್ಲಿ ಪತ್ರಿಕೆ ಅಪಾರ ಜನಮನ್ನಣೆ ಗಳಿಸಿತ್ತು. ಟಿವಿ ಇನ್ನೂ ಬಂದಿಲ್ಲದ ಆ ದಿನಗಳಲ್ಲಿ ದಿನಪತ್ರಿಕೆಗಳು ಮತ್ತು ರೇಡಿಯೋ ಮಾತ್ರವೇ ಹೊರಜಗತ್ತಿನೊಂದಿಗೆ ಸಂಪರ್ಕಕ್ಕೆ ಇದ್ದ ಸಾಧನಗಳಾಗಿದ್ದವು. ಆಂದೋಲನವಂತೂ ಪ್ರತಿಯೊಂದು ಪ್ರಜ್ಞಾವಂತರ ಮನೆಯ ಬೆಳಗಿನ ಅನಿವಾರ್ಯತೆಯಂತಾಗಿತ್ತು. ಅಷ್ಟೇ ಅಲ್ಲದೆ, ಆ ದಿನಗಳಲ್ಲಿ ಭೋರ್ಗರೆಯುತ್ತಿದ್ದ ರೈತ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ, ಸಮಾಜವಾದಿ, ಕಮ್ಯೂನಿಸ್ಟ್ ಮತ್ತಿತರ ಎಲ್ಲಾ ರೀತಿಯ ಜನಪರ ಚಳವಳಿ-ಹೋರಾಟಗಳ ಪಾಲಿಗೆ ಆಂದೋಲನವೇ ಅವುಗಳ ವಿಚಾರವನ್ನು, ಸಮಸ್ಯೆಗಳನ್ನು, ಹಕ್ಕೊತ್ತಾಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಧಾನ ವಾಹಕವೂ ಆಗಿತ್ತು. ಅದನ್ನು ಯಾವ ಕಾರಣಕ್ಕೂ ನಿಲ್ಲಿಸಬಾರದೆಂದು ಏನೆಲ್ಲ ಪ್ರಯತ್ನ ಮಾಡಿದರೂ ಸಾಧ್ಯವಾಗದೆ ಕೈ ಸೋತು, ಕೊನೆಗೊಮ್ಮೆ ದೇಮ ಅವರ ಮನೆಯಲ್ಲಿ ನಡೆದ ಹಿತೈಷಿಗಳ ಅನೌಪಚಾರಿಕ ಸಭೆಯಲ್ಲಿ ಪತ್ರಿಕೆಯನ್ನು ನಿಲ್ಲಿಸಿಯೇ ಬಿಡುವ ನಿರ್ಧಾರ ಕೈಗೊಳ್ಳಲಾಯಿತು.

devanurumahadeva

ಈ ನಿರ್ಧಾರ ಕೈಗೊಂಡು ತೀರಾ ಭಾರವಾದ ಮನಸ್ಸಿನಿಂದ ಕೋಟಿಯವರು ಪ್ರೆಸ್ಸಿಗೆ ಹಿಂದಿರುಗುವ ದಾರಿಯಲ್ಲಿ ಪ್ರೊ. ರಾಮಲಿಂಗಂ ಭೇಟಿಯಾದರು. ಪತ್ರಿಕೆ ನಿಲ್ಲಿಸುವ ನಿರ್ಧಾರವನ್ನು ಕೇಳಿ ಅವರು ಹೌಹಾರಿದರು. ಅದೃಷ್ಟವೋ ಎಂಬಂತೆ, ಅದೇ ಸಮಯಕ್ಕೆ ರಾಮಲಿಂಗಂ ಅವರ ಮಡದಿಯ ಕುಟುಂಬದ ಕಡೆಯಿಂದ ಅವರ ಪಾಲಿನ ಆಸ್ತಿಯ ಭಾಗವಾಗಿ ಇಪ್ಪತ್ತೈದು ಸಾವಿರವೋ ಎಷ್ಟೋ, ಅಂದಿಗೆ ದೊಡ್ಡದಾಗಿದ್ದ ಮೊತ್ತದ ಹಣ ಬಂದಿತ್ತು. ಕೂಡಲೇ ರಾಮಲಿಂಗಂ ಅವರು ಅದನ್ನು ಬಹುಶಃ ಬಡ್ಡಿರಹಿತವಾಗಿ ಇರಬಹುದು, ಕೋಟಿಯವರಿಗೆ ನೀಡಲು ಮುಂದೆ ಬಂದರು. “ಪತ್ರಿಕೆಯನ್ನು ಖಂಡಿತಾ ನಿಲ್ಲಿಸಬೇಡಿ, ಈ ಹಣದಿಂದ ನಡೆಸಿ. ಪತ್ರಿಕೆಯ ಹಣಕಾಸಿನ ಸ್ಥಿತಿ ಸುಧಾರಿಸಿದ ನಂತರ ವಾಪಸ್ ನೀಡಿದರೆ ಸಾಕು. ನಾನು ಪತ್ರಿಕೆಯ ಯಾವ ವಿಚಾರದಲ್ಲೂ ಮೂಗು ತೂರಿಸುವುದಿಲ್ಲ. ಆದರೆ ಒಂದೇ ಒಂದು ವಿಚಾರದಲ್ಲಿ ನಿಮ್ಮಿಂದ ಒಂದು ಖಾತ್ರಿ ಕೇಳ್ತೀನಿ: ಅದೇನೆಂದರೆ, ಎಂಥ ಸಂದರ್ಭದಲ್ಲೂ ಈ ಯಾವುದೇ ಜನಸಾಮಾನ್ಯರ ಹೋರಾಟಗಳಿಗೆ ವಿರುದ್ಧವಾಗಿ ಪತ್ರಿಕೆ ನಿಲುವು ತಾಳದಿರಲಿ, ಅವುಗಳ ವಿರುದ್ಧವಾಗಿ ಬರೆಯದಿರಲಿ. ಅಷ್ಟು ಸಾಕು…” ಎಂದು ರಾಮಲಿಂಗಂ ಕೋಟಿಯವರಿಂದ ಆಶ್ವಾಸನೆ ಪಡೆದು ಹಣ ನೀಡಿದರು. ಕೋಟಿಯವರು ಆಗ ಮಾತ್ರವಲ್ಲ, ಕೊನೆಯವರೆಗೂ ಪತ್ರಿಕೆಯನ್ನು ಅದೇ ನಿಲುವಿನಲ್ಲೇ ನಡೆಸಿದರು. ಈ ಹಂತದವರೆಗೆ, ಅಂದರೆ 1981ರ ಜೂನ್ ಕೊನೆವರೆಗೆ ನಾನು ಆಂದೋಲನದಲ್ಲಿ ಕೆಲಸ ಮಾಡಿದೆ.

1981ರ ಜೂನ್ ಕೊನೆಯಲ್ಲಿ ಹೇಮಾ ಅವರ ತಾಯಿ ತೀರಿಕೊಂಡರು. ನಂತರ ನಾನು, ಹೇಮಾ ನಮ್ಮ ʻಯೋಜನೆʼಯನ್ನು ಮುಂದುವರಿಸಲೆಂದು 1981ರ ಜುಲೈ ಮೊದಲ ವಾರದಲ್ಲಿ ಮೈಸೂರಿಗೆ ಶಾಶ್ವತವಾಗಿ ವಿದಾಯ ಹೇಳಿದೆವು. ಶೃಂಗೇರಿಯಲ್ಲಿ ಅದಾಗಲೇ ಒಂದು ಸ್ಥಳೀಯ ಪತ್ರಿಕೆ ಇದ್ದುದರಿಂದ, ಹೆಚ್ಚೂಕಮ್ಮಿ ನಮ್ಮ ʻಯೋಜನಾ ಪ್ರದೇಶʼದ ಕೇಂದ್ರದಲ್ಲಿದ್ದ ಕೊಪ್ಪದಲ್ಲಿ (ಚಿಕ್ಕಮಗಳೂರು ಜಿಲ್ಲೆ) ನೆಲೆಸುವುದೆಂದು ಆ ವೇಳೆಗೆ ತೀರ್ಮಾನ ತೆಗೆದುಕೊಂಡಿದ್ದೆವು. ಸಾಮಾನು ಸರಂಜಾಮುಗಳನ್ನು ಲಾರಿಯಲ್ಲಿ ಬುಕ್ ಮಾಡಿ, 1981ರ ಜುಲೈ 6ರ ರಾತ್ರಿ ಕೊಪ್ಪಕ್ಕೆ ಸರ್ಕಾರಿ ಬಸ್ಸನ್ನೇರಿದೆವು.

ಹಾಗೆ ಅಂದು ಉಳಿದುಕೊಂಡ ಆಂದೋಲನ ಪತ್ರಿಕೆ, ಮುಂದೆ ಕೆಲವೇ ಸಮಯದಲ್ಲಿ ಸರ್ಕಾರಿ ಜಾಹೀರಾತು ಕೂಡ ಪುನಃ ಆರಂಭವಾದುದರೊಂದಿಗೆ ಪೂರ್ಣವಾಗಿ ಚೇತರಿಸಿಕೊಂಡು ಅಗಾಧವಾಗಿ ಬೆಳೆಯಿತು. ಅಂದಿನ ಅವಿಭಜಿತ ಮೈಸೂರು ಜಿಲ್ಲೆ ಮಾತ್ರವಲ್ಲದೆ ಕೊಡಗು, ಮಂಡ್ಯ ಜಿಲ್ಲೆಗಳಿಗೂ, ಸ್ವಲ್ಪ ಕಾಲ ಹಾಸನ ಜಿಲ್ಲೆಗೂ ವಿಸ್ತರಿಸಿತು. ಇಂಗ್ಲಿಷ್ ಸಂಜೆ ದಿನಪತ್ರಿಕೆಯೂ ಆರಂಭವಾಯಿತು. ಐವತ್ತು ಸಾವಿರ ಪ್ರಸಾರ ಸಂಖ್ಯೆಯನ್ನು ದಾಖಲಿಸಿ, ಇಡೀ ಏಷ್ಯಾದಲ್ಲೇ ಅತಿ ಹೆಚ್ಚು ಪ್ರಸಾರದ ಸ್ಥಳೀಯ ದಿನಪತ್ರಿಕೆ ಎಂಬ ಗರಿಮೆಗೂ ಪಾತ್ರವಾಯಿತು. ಸ್ವಂತ ಅತ್ಯಾಧುನಿಕ ಪ್ರೆಸ್ಸು, ಸ್ವಂತ ಕಟ್ಟಡ ಎಲ್ಲವೂ ಆಯಿತು. ಕೋಟಿ ದಂಪತಿಗಳಿಗೆ ರವಿ, ರಶ್ಮಿ ಎಂಬ ಮಕ್ಕಳೂ ಆದರು. ಕೋಟಿಯವರು ಇದ್ದಾಗಲೇ ಪತ್ರಿಕೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದ ಅವರ ಮಗ ರವಿ ಕೋಟಿ, ತಂದೆಯ ಅಕಾಲಿಕ ನಿಧನದ ಬಳಿಕ ಪತ್ರಿಕೆಯನ್ನು ಮುಂದುವರಿಸಿದ್ದಾರೆ.

ನಾನು ಕಂಡಂತೆ ಕೋಟಿಯವರು ಬಹಳ ನೇರ ನಡೆನುಡಿಯ ಸರಳ ವ್ಯಕ್ತಿಯಾಗಿದ್ದರು. ನಾನು ಈ ಹಿಂದಿನ ಒಂದು ಕಂತಿನಲ್ಲಿ ಪ್ರಸ್ತಾಪಿಸಿದ ಎಂ.ವಿ.ಶ್ರೀಧರ ಎಂಬ ನನ್ನ ಮ್ಯಾಥಮ್ಯಾಟಿಕ್ಸ್ ಪ್ರೊಫೆಸರರಂತೆಯೇ ಇವರೂ ಸಹ – ಮದುವೆಯಾಗುವವರೆಗೂ – ಸದಾ ಬಿಳಿಯ ಖಾದಿ ತೊಡುಗೆಯಲ್ಲೇ ಇರುತ್ತಿದ್ದರು. ಆ ನಂತರವೂ ಆಡಂಬರದ ಬದುಕಿಗೆ ಮನ ಸೋತವರಲ್ಲ. ನಮ್ಮ ವಿಚಾರಧಾರೆ ಏನೇ ಆಗಿದ್ದರೂ, ಸುದ್ದಿಗಳ ವಿಚಾರಕ್ಕೆ ಬಂದಾಗ, ಯಾವುದೇ ಕಾರಣಕ್ಕೂ ನಮ್ಮ ವಿಚಾರಗಳಿಗೆ ವಿರುದ್ಧವಾದ ವಿಚಾರ ಧಾರೆಯವರ ಸುದ್ದಿಗಳನ್ನು ಮಾತ್ರ ಕೊಲ್ಲಬಾರದು ಎಂಬ ಕಟ್ಟುನಿಟ್ಟಾದ ನಿಲುವು ಹೊಂದಿದ್ದರು. ಸುದ್ದಿ ಕೇವಲ ಸುದ್ದಿಯಾಗಷ್ಟೇ ಇರಬೇಕು. ಅದರೊಳಗೆ ನಮ್ಮ ವಿಚಾರಗಳನ್ನು, ಇಷ್ಟಾನಿಷ್ಟಗಳನ್ನು ತೂರಿಸಬಾರದು. ಅದನ್ನೆಲ್ಲ ಹೇಳಬೇಕಿದ್ದರೆ ಪ್ರತ್ಯೇಕವಾದ ಲೇಖನ, ಸಂಪಾದಕೀಯಗಳ ಮೂಲಕ ಹೇಳಬೇಕು. ನಮ್ಮ ವಿಚಾರಗಳಿಗೆ ಭಾಗಶಃ ಆದರೂ ಸರಿ, ಒಗ್ಗದ ವಿಚಾರಗಳನ್ನುಳ್ಳ ಬರಹಗಳನ್ನು ಯಾರಾದರೂ ಕಳಿಸಿದರೆ ಅವನ್ನು ಪ್ರಕಟಿಸದಿದ್ದರೂ ಪರವಾಗಿಲ್ಲ, ಆದರೆ ಇತರರ ಅಂತಹ ಬರಹಗಳನ್ನು ನಮ್ಮ ವಿಚಾರಗಳ ನೇರಕ್ಕೆ ತಿದ್ದಿ ಪ್ರಕಟಿಸಬಾರದು ಎಂಬಂತಹ ನಿಲುವು ಅವರದಾಗಿತ್ತು. ನಾನೂ ಸಹ ನನ್ನ ಪತ್ರಿಕೆಯಲ್ಲಿ ಈ ನಿಲುವಿಗೆ ಬಹುತೇಕ ಬದ್ಧನಾಗಿ ನಡೆದುಕೊಂಡಿದೀನಿ.

ಇದನ್ನೂ ಓದಿ ಜೋಳಿಗೆ | ʻಆಂದೋಲನʼದಲ್ಲಿ ನನ್ನ ತರಬೇತಿ- ಭಾಗ 1

ಕೊನೆಯಲ್ಲಿ, ಆಂದೋಲನದಲ್ಲಿದ್ದಾಗ ನಾನು ಓದಿದ್ದ, ಇಂದಿಗೂ ಬಹುಮಟ್ಟಿಗೆ ನೆನಪಿನಲ್ಲಿರುವ ಒಂದು ಕವನವನ್ನು ನೀಡಿ ಈ ಬರಹವನ್ನು ಮುಗಿಸ್ತೀನಿ. ಸಹಜವಾಗಿಯೇ ಆಂದೋಲನಕ್ಕೆ ರಾಜ್ಯದಾದ್ಯಂತದಿಂದ ಅನೇಕ ಸಮಾನ ಮನಸ್ಕ ಚಿಂತಕರ, ಪ್ರಗತಿಪರರ ಪತ್ರಿಕೆಗಳು ಬರುತ್ತಿದ್ದವು. ಅಂಥದ್ದೊಂದರಲ್ಲಿ (ಬಹುಶಃ ಕೋಲಾರ ಪತ್ರಿಕೆ ಅಂತ ನೆನಪು) ಇದು ಪ್ರಕಟವಾಗಿತ್ತು. ಅದು ʻದೇವರನ್ನುʼ ಸಂಬೋಧಿಸಿ ಮಾತಾಡುತ್ತದೆ. ಅದರಲ್ಲಿ ಮೊದಲಿನ ಒಂದೆರಡು ಸಾಲುಗಳು ನೆನಪಿಲ್ಲ. ಬರೆದವರ ಹೆಸರೂ ನೆನಪಿಲ್ಲ.

ಪಳೆಯುಳಿಕೆ
ಬಂಜೆಗೊಂದು ಮಗನ ಇತ್ತುದಕಾಗಿ
ನಿನಗೊಂದು ಅಭಿಷೇಕ
ಹೆಚ್ಚು ಮಕ್ಕಳ ಕಾಟ ತಪ್ಪಿಸಿದುದಕಾಗಿ
ವಿಶೇಷ ಪೂಜೆ
ತನ್ನ ಸಹಜೀವಿಗಳ
ಕತ್ತೆ ನಾಯಿಗಳಂತೆ ಕಾಣುವಾ ಈ ಮನುಜ
ಮಂತ್ರಿಯಾದರೂ ನಿನ್ನ ದಾಸಾನುದಾಸ
ಒಡವೆ ವಸ್ತ್ರಕೆ ನಿನಗೆ ಕೊರತೆಯುಂಟೇನು?
ಛೆ, ಹೊರಲಾರದೆ ನಿನ್ನ ಬೆನ್ನು ಬಾಗಿರಬಹುದು.

ಎಲೆ ದೇವ,
ನಿನಗೊಂದು ಎಚ್ಚರಿಕೆ:
ಈ ಗುಡಿ ಈ ಮಡಿಯೆಲ್ಲ
ಪುರೋಹಿತ ವರ್ಗ
ಕಟ್ಟಿಕೊಂಡಿಹ ಸ್ವರ್ಗ
ಇದರಿಂದ ಹೊರಬಂದು
ಪಾಪಿ ಜನಗಳ ಕೇಳು ಅವರ ಕುಂದೇನೆಂದು
ಇಲ್ಲದಿದ್ದರೆ ನೋಡು
ಮುಂದೊಂದು ದಿನ
ರೊಚ್ಚಿಗೆದ್ದ ಜನ
ಈ ಭೂಸಾಳರ ಬೊಜ್ಜು ಹೊಟ್ಟೆಯ ಮೇಲೆ
ಕಾಳು ಮೆಣಸನು ಅರೆದು
ಮೆತ್ತುವರು ನಿನ್ನ ಬಕ್ಕ ತಲೆಗೆ
ಮುಂದೆ?
ಮುಂದೇನು, ಹಾಳೂರ ಕೊಂಪೆಯಲಿ
ನೀನೊಂದು ಪಳೆಯುಳಿಕೆ!

ಇದು ಅಂದು ನನಗೆ ಬಹಳ ಇಷ್ಟವಾಗಿದ್ದ ಒಂದು ಕವನ. ಇದನ್ನು ನನ್ನ ಅಣ್ಣನಿಗೆ ಹೇಳಿದಾಗ ಅವರು ತಕರಾರು ತೆಗೆದರು: ದೇವರಿಲ್ಲ ಅನ್ನುತ್ತಲೇ, ದೇವರನ್ನು ಕುರಿತೇ ಮಾತಾಡ್ತಿದೆಯಲ್ಲ, ಇದು ವಿಪರ್ಯಾಸವಲ್ಲವೆ? ಅಂತ. ಅದಕ್ಕೆ ಅಂದು ನಾನು ಅವರಿಗೆ ನೀಡಿದ್ದ ಸಮಜಾಯಿಶಿ – ಇದು ದೇವರನ್ನು ಉದ್ದೇಶಿಸಿ ಹೇಳುವಂತೆ ಇದ್ದರೂ, ಇಲ್ಲಿ ದೇವರು ಎನ್ನುವುದೊಂದು ಅಮೂರ್ತ ಕಲ್ಪನೆ ಮತ್ತು ನೆಪ ಮಾತ್ರ. ಕವನ ನಿಜವಾಗಿ ಉದ್ದೇಶಿಸಿರುವುದು ದೇವರ ಹೆಸರಿನಲ್ಲಿ ಜನರನ್ನು ಅಜ್ಞಾನದಲ್ಲಿ ಇಟ್ಟು ಹೊಟ್ಟೆ ಹೊರೆಯುತ್ತಿರುವ ʻಭೂಸಾಳʼರನ್ನು. ದೇವರಿಗೆ ಎಚ್ಚರಿಕೆ ನೀಡುವ ನೆಪದಲ್ಲಿ ಇದು ಜಾತಿ, ಮೇಲುಕೀಳು, ತಾರತಮ್ಯಗಳನ್ನು ಹುಟ್ಟುಹಾಕಿರುವ ವರ್ಗಕ್ಕೆ ಎಚ್ಚರಿಕೆ ನೀಡುತ್ತಿದೆ. ಹಾಗೆಯೇ ಮುಂದೆ ಇಂಥ ಮೌಢ್ಯಗಳೆಲ್ಲ ನಡೆಯುವುದಿಲ್ಲ ಅಂತಲೂ ಭವಿಷ್ಯದ ಕನಸು ಕಾಣುತ್ತಿದೆ ಅಂತ.

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್‌
+ posts

ಲೇಖಕ, ಸಾಮಾಜಿಕ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್‌
ಸಿರಿಮನೆ ನಾಗರಾಜ್‌
ಲೇಖಕ, ಸಾಮಾಜಿಕ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X