“ಆಶಾ ಕಾರ್ಯಕರ್ತೆಯರು ಎತ್ತಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದೆ, ಸರ್ಕಾರ ಕೂಡಲೇ ಈ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಬಲಿಷ್ಠ ಹೋರಾಟವೊಂದೇ ದಾರಿ, ಹಾಗಾಗಿ ನಿಮ್ಮ ಈ ಮೂರು ದಿನಗಳ ಅಹೋ ರಾತ್ರಿ ಧರಣಿ ಸರಿಯಾಗಿದೆ. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಕೇವಲ ತಮ್ಮ ಸ್ವಾರ್ಥಗಳನ್ನ ಮಾತ್ರ ನೋಡಿಕೊಳ್ಳುತ್ತಾರೆ. ಜೊತೆಗೆ ಉಳ್ಳವರ ಪರವಾದ ನೀತಿಗಳ ತರುತ್ತಾರೆ. ದುಡಿಯುವ ವರ್ಗದ ಪರ ಬಗ್ಗೆ ನಯಾ ಪೈಸೆ ಕಾಳಜಿ ನಮ್ಮನ್ನಾಳುವ ಸರ್ಕಾರಕ್ಕೆ ಇಲ್ಲ ಹಾಗಾಗಿ ನೀವು ನಡೆಸುತ್ತಿರುವ ಈ ಹೋರಾಟ ಇನ್ನೂ ಒಗ್ಗಟ್ಟಿನಿಂದ ಬಲಿಷ್ಠವಾಗಿ ನಡೆಯಲಿ ಅದೊಂದೇ ನಿಮಗಿರುವ ದಾರಿ” ಎಂದು ದಾವಣಗೆರೆಯಲ್ಲಿ ಎಸ್ ಯು ಸಿ ಐ ರಾಜ್ಯ ಸೆಕ್ರೆಟರೇಟ್ ಸದಸ್ಯ ಡಾ. ಪಿ ಎಸ್ ಸುನಿತ್ ಕುಮಾರ್ ಕರೆ ನೀಡಿದರು.

ಗೌರವಧನ, ಇತರ ಬೇಡಿಕೆಗಳ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟ ವೇಳೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿ “ಆಶಾ ಕಾರ್ಯಕರ್ತರಿಗೆ ತಿಂಗಳಿಗೆ 10,000 ಕನಿಷ್ಠ ಗೌರವದನ ಗ್ಯಾರಂಟಿ, ನನ್ನನ್ನು ನಂಬಿ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಆಶಾ ಕಾರ್ಯಕರ್ತೆಯರಿಗೆ ಮತ್ತು ನಾಯಕರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ” ಎಂದು ಕಿಡಿಕಾರಿದರು.
ಆಶಾ ಹೋರಾಟವನ್ನು ಬೆಂಬಲಿಸಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ನಿವೃತ್ತ ಪ್ರಾಧ್ಯಾಪಕ, ಪ್ರೊ. ಎ ಬಿ ರಾಮಚಂದ್ರಪ್ಪ ಮಾತನಾಡಿ, “ಹೋರಾಟ ಪ್ರತಿಯೊಬ್ಬರ ಹಕ್ಕು. ಪ್ರಶ್ನೆ ಮಾಡುವುದು ನ್ಯಾಯ ಕೇಳುವುದು ಸಂವಿಧಾನ ನಮಗೆ ನೀಡಿರುವ ಹಕ್ಕು, ಹಾಗಾಗಿ ನಿಮ್ಮ ಹೋರಾಟ ನ್ಯಾಯಸಮತವಾಗಿದ್ದು, ಸರ್ಕಾರ ಕೂಡಲೇ ಇದಕ್ಕೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಈ ಹೋರಾಟವನ್ನು ತೀವ್ರಗೊಳಿಸುವುದಾಗಲಿ, ಕಾನೂನು ಉಲ್ಲಂಘಿಸುವುದಾಗಲಿ ಬಹುದೊಡ್ಡ ಕೆಲಸವೇನಲ್ಲ. ಆದರೆ ಸರ್ಕಾರ ಅದಕ್ಕೆ ಆಸ್ಪದ ಕೊಡದೆ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಕೂಡಲೇ ಈಡೇರಿಸಲಿ” ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಹೋರಾಟವನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ) ನಾಯಕರು ಬೆಂಬಲಿಸಿದರು. ಆಶಾ ಕಾರ್ಯಕರ್ತೆರ ಈ ಧರಣಿ ಸ್ಥಳಕ್ಕೆ ಆಗಮಿಸಿದ ಎಸ್ ಕೆ ಎಂ ನ ಹೊನ್ನೂರ್ ಮುನಿಯಪ್ಪ, ಆವರಗೆರೆ ಉಮೇಶ್, ಆವರ್ಗೆರೆ ರುದ್ರಮನಿ, ಬುಳ್ಳಾಪುರ ಹನುಮಂತಪ್ಪ, ಎಐಕೆಕೆ ಎಂಎಸ್ ನ ಬಸವರಾಜಪ್ಪ ನೀರ್ತಡಿ, ಶ್ರೀನಿವಾಸ್, ಆನಂದ್ ರಾಜ್ ಆಶಾ ಹೋರಾಟವನ್ನು ಬೆಂಬಲಿಸಿ ಮಾತನಾಡಿ “ಆಶಾ ಗಳ ಹೋರಾಟ ನ್ಯಾಯತವಾಗಿದ್ದು ನಿಮ್ಮ ಬೇಡಿಕೆಗಳು ಈಡೇರುವವರೆಗೂ ಈ ಚಳುವಳಿ ನಡೆಯಲಿ, ನಿಮ್ಮ ಪ್ರತಿ ಹೋರಾಟದಲ್ಲೂ ನಮ್ಮ ರೈತ ಸಂಘಟನೆಗಳು ನಿಮ್ಮ ಜೊತೆಗಿರುತ್ತವೆ ನಿಮ್ಮ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ” ಎಂದು ಬೆಂಬಲ ವ್ಯಕ್ತಪಡಿಸಿದರು.
ಮೆಡಿಕಲ್ ಸರ್ವಿಸ್ ಸೆಂಟರ್ ರಾಜ್ಯ ಕಾರ್ಯದರ್ಶಿ ಹಾಗೂ ನೇತ್ರತಜ್ಞರಾದ ಡಾ. ವಸುಧೇಂದ್ರ, ಕರ್ನಾಟಕ ಸ್ಟೇಟ್ ವಿಂಡ್ ಎನರ್ಜಿ ಎಂಪ್ಲಾಯಿಸ್ ಯೂನಿಯನ್ ರಾಜ್ಯ ಉಪಾಧ್ಯಕ್ಷರಾದ ಬೀರಲಿಂಗಪ್ಪ ನೀರ್ತಡಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತಿ, ಆಲ್ ಇಂಡಿಯಾ ಡೆಮೊಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸನ್ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಕರ್ನಾಟಕ ರಾಜ್ಯ ಸಂಯುಕ್ತ ಬೀದಿಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶ್ರೀಮತಿ ಮಂಜುಳಾ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಗೌರವಾಧ್ಯಕ್ಷ ಮಂಜುನಾಥ್ ಕುಕ್ಕುವಾಡ,
ಸೇರಿದಂತೆ ಹಲವರು ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಸರ್ಕಾರಿ ಶಾಲೆ ಮುಚ್ಚುವಿಕೆ ವಿರೋಧಿಸಿ ಎಐಡಿಎಸ್‍ಒ 50 ಲಕ್ಷ ಸಹಿ ಸಂಗ್ರಹ ; ಮುಖ್ಯಮಂತ್ರಿಗಳಿಗೆ ಸಲ್ಲಿಕೆ
ಎಐಯುಟಿಯುಸಿ ಸಂಯೋಜಿತ (AIUTUC) ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ರಾಜ್ಯಾದ್ಯಂತ ಕರೆ ನೀಡಿರುವ ಮುಷ್ಕರ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎಡೆಬಿಡದೇ ಸುರಿಯುವ ಮಳೆಯಲ್ಲಿಯೇ ಆಶಾ ಕಾರ್ಯಕರ್ತೆಯರು ಗೌರವಧನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
https://shorturl.fm/nIYVv