ಇಬ್ಬರು ವಾಲ್ಮೀಕಿ ಸಮುದಾಯದವರನ್ನೇ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ. ಹೀಗಾಗಿ, ವಾಲ್ಮೀಕಿ ಸಮುದಾಯದ ನಾಯಕರಿಗೆ ಮರಳಿ ಸಚಿವ ಸ್ಥಾನ ನೀಡಬೇಕು ಎಂದು ಕೇಳಲು ನಾವು ದೆಹಲಿಗೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣರನ್ನು ವಜಾಗೊಳಿಸಿದ ಬೆನ್ನಲ್ಲೇ ಅಸಮಾಧಾನಗೊಂಡಿರುವ ವಾಲ್ಮೀಕಿ ಸಮುದಾಯದ ಶಾಸಕರು ಸಭೆ ಸೇರಿ ಬುಧವಾರ ಚರ್ಚಿಸಿದರು. ಸಭೆಯ ಬಳಿಕ ಸತೀಶ್ ಜಾರಕಿಹೊಳಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
“ತೆರವಾದ ಸಚಿವ ಸ್ಥಾನವನ್ನು ಅದೇ ವಾಲ್ಮೀಕಿ ಸಮುದಾಯದವರಿಗೇ ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಲು ಸಮುದಾಯದ ನಿಯೋಗ ಸಿದ್ಧವಾಗಿದೆ. ಕೆ.ಎನ್. ರಾಜಣ್ಣ ದಿಲ್ಲಿಗೆ ಹೋಗುವುದು ಬೇರೆ, ನಾವು ನಿಯೋಗ ಹೋಗುವುದು ಬೇರೆ. ಅದೇ ರೀತಿ, ಪಕ್ಷದ ಹೋರಾಟವೇ ಬೇರೆ ಸಮುದಾಯದ ಹೋರಾಟವೇ ಬೇರೆ” ಎಂದರು.
ಷಡ್ಯಂತ್ರದ ಬಗ್ಗೆ ಸಮಯ ಬಂದಾಗ ಹೇಳುವುದಾಗಿ ರಾಜಣ್ಣ ಹೇಳಿದ್ದಾರಲ್ಲಾ ಎಂದು ಪ್ರಶ್ನಿಸಿದಾಗ, “ಯಾವಾಗ ಹೇಳುತ್ತಾರೆ ಎಂಬುದನ್ನು ಕಾದು ನೋಡೋಣ. ಈಗ ರಾಜಣ್ಣ ಅಧಿಕಾರದಲ್ಲಿಲ್ಲ. ಅವರಿಗೆ ಧೈರ್ಯ ಹೇಳಿದ್ದೇವೆ. ಅವರಿಗೆ ಬೇಸರ ಏನಿಲ್ಲ. ದೆಹಲಿಗೆ ಹೋಗುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.
ವಾಲ್ಮೀಕಿ ಸಮುದಾಯದವರು ಸೇರಿದ ಸಭೆಯಲ್ಲಿ ಸ್ವತಃ ಕೆ.ಎನ್. ರಾಜಣ್ಣ ಸೇರಿದಂತೆ ಚಳ್ಳಕೆರೆ ಶಾಸಕ ರಘುಮೂರ್ತಿ, ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ, ಮಸ್ಕಿಯ ಬಸನಗೌಡ ತುರುವೀಹಾಳ, ಎಚ್.ಡಿ. ಕೋಟೆಯ ಅನಿಲ್ ಚಿಕ್ಕಮಾದು, ಮಾಯಕೊಂಡದ ಬಸವಂತಪ್ಪ, ಗುಂಡ್ಲುಪೇಟೆಯ ಗಣೇಶ್ ಪ್ರಸಾದ್, ಪಾವಗಡದ ವೆಂಕಟೇಶ್, ಕೆ.ಆರ್. ನಗರದ ರವಿಶಂಕರ್, ಚಾಮರಾಜದ ಹರೀಶಗೌಡ, ಮಾಜಿ ಸಚಿವ ವೆಂಕಟರಮಣಪ್ಪ ಮತ್ತಿತರರು ಭಾಗವಹಿಸಿದ್ದರು.
https://shorturl.fm/tJGlx