ಚಿತ್ರದುರ್ಗದ ಹಿರಿಯ ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ ಮತ್ತು ಗೆಜ್ಜೆಹೆಜ್ಜೆ ರಂಗ ತಂಡದ ಕಲಾವಿದರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಸಂಗೀತ ಹಾಗೂ ನಾಟಕಕಾರ ಮೈಸೂರು ರಮಾನಂದರ ರಚನೆ ಮತ್ತು ನಿರ್ದೇಶನದ “ಎಂಡ್ ಇಲ್ಲದ ಬಂಡ್ ಅವತಾರ” ಎಂಬ ರಾಜಕೀಯ ವಿಡಂಬನಾತ್ಮಕ ಹಾಸ್ಯನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಇವರಿಗೆ ಗೆಜ್ಜೆಹೆಜ್ಜೆ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2025, ಆಗಸ್ಟ್ 12 ರಂದು ಸಂಜೆ 4-30ಕ್ಕೆ ಗೆಜ್ಜೆಹೆಜ್ಜೆ ರಂಗತಂಡದ ಐವತ್ತನೇ ವರ್ಷದ ಪಾದಾರ್ಪಣೆಯ ಸಂಭ್ರಮ ಹಾಗೂ ಆಶಾವಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ನಾಟಕ ಕೃತಿ ಲೋಕಾರ್ಪಣೆ, ರಂಗಸಂಗೀತ, ನಾಟಕ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಚಲನಚಿತ್ರ ಹಿರಿಯ ನಿರ್ದೇಶಕ ಓಂಸಾಯಿಪ್ರಕಾಶ್ “ಚಲನಚಿತ್ರ ಮತ್ತು ರಂಗಭೂಮಿ ಸಾಂಸ್ಕೃತಿಕ ಕ್ಷೇತ್ರದ ಜೀವನಾಡಿಗಳು. ಚಿತ್ರನಟ ನಾಟಕಕಾರ ಮೈಸೂರು ರಮಾನಂದರ ಸಾಧನೆ ಮೆಚ್ಚುವಂಥದ್ದು. ರಾಜ್ಯದ ಮೂಲೆಮೂಲೆಗಳಲ್ಲಿ ರಂಗ ಚಟುವಟಿಕೆಗಳ ಪ್ರದರ್ಶನಗಳನ್ನು ನೀಡಿದ ಸಾವಿರಕ್ಕೂ ಹೆಚ್ಚು ಪತ್ರಿಕಾ ತುಣುಕುಗಳು, ಭಾವಚಿತ್ರಗಳು ಹಾಗೂ ಕರಪತ್ರಗಳನ್ನು ದಾಖಲೆಯಾಗಿ ಸಂಗ್ರಹಿಸಿದ್ದಾರೆ. ನಾವು ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದರೂ ಸಹ ಅಷ್ಟೊಂದು ದಾಖಲೆಗಳನ್ನು ಕ್ರೂಢೀಕರಿಸಲು ಸಾಧ್ಯವಾಗಿಲ್ಲ. ಮೈಸೂರು ರಮಾನಂದ ಸಿನಿಮಾ ಮತ್ತು ನಾಟಕ ಕಲಾವಿದರ ಹಾಗೂ ತಂತ್ರಜ್ಞರ ಪ್ರೀತಿ ಸಂಪಾದಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಾಟಕ ಮತ್ತು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.
“ಮಹಾಲಕ್ಷ್ಮೀಪುರದಲ್ಲಿರುವ ಗೆಜ್ಜೆಹೆಜ್ಜೆ ರಂಗತಂಡದ ಕಛೇರಿಯ ಒಳಾಂಗಣದಲ್ಲಿ ಗೋಡೆಯೇ ಕಾಣಿಸದಷ್ಟು ನೆನಪಿನ ಕಾಣಿಕೆಗಳನ್ನು ಸಂಗ್ರಹಿಸಿದ್ದಾರೆ. ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಅನುಭವ ಕಾಶಿನಾಥ್, ರೆಬಲ್‍ಸ್ಟಾರ್ ಅಂಬರೀಷ್, ಡಾ.ಶಿವರಾಜ್‍ಕುಮಾರ್, ಉಪೇಂದ್ರ ಮುಂತಾದ ಸಿನಿಮಾ ದಿಗ್ಗಜರೊಂದಿಗೆ ಅಭಿನಯಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಸರ್ಕಾರದ ಹಲವು ಯೋಜನೆಗಳಿಗೆ ನಾಟಕರೂಪ ಮತ್ತು ಪ್ರದರ್ಶನ ನೀಡಿ ಜನಮನ್ನಣೆ ಪಡೆದಿದ್ದಾರೆ. ಐವತ್ತು ವರ್ಷಗಳಿಂದ ಸಾಧನೆ ಮಾಡಿದ ಗೆಜ್ಜೆಹೆಜ್ಜೆ ರಂಗ ತಂಡಕ್ಕೆ ಹಾಗೂ ಕಲಾವಿದರಿಗೆ ಸರ್ಕಾರ ಹಾಗೂ ಕಲಾಪೋಷಕರು ಪ್ರೋತ್ಸಾಹ ನೀಡಬೇಕು” ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಟೆಲಿಕಾಂ ಎಂಪ್ಲಾಯ್ಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಡಾ.ಎನ್.ನರಸಿಂಹಮೂರ್ತಿ ಮಾತನಾಡಿ “ಗಳಿಸಿದ ಹಣವನ್ನು ಜೀವನಕ್ಕೆ ಎಷ್ಟು ಬೇಕೋ ಅಷ್ಟು ಬಳಸಿ ಉಳಿದ ಹಣವನ್ನು ಬಡವರ ಮಕ್ಕಳಿಗೆ ನೀಡಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿರಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜ್ ರಂಗವಿನೋದ ರಂಗ ದ್ವಿಭಾಷಾ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ಬೆಂಗಳೂರು ಪೋಲೀಸ್ ಪ್ರಧಾನ ಕಛೇರಿಯ ಕಾನೂನು ಡಿವೈಎಸ್‍ಪಿ ಹಾಗೂ ಗ್ರಾಮ ಪುರೋಹಿತ ಡಾ.ಅನಿಲ್‍ಕುಮಾರ್ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಮಕ್ಕಳ ನಾಟಕ ಕೃತಿ ಬಿಡುಗಡೆಗೊಳಿಸಿದರು. ಐವತ್ತಕ್ಕೂ ಹೆಚ್ಚು ಮಕ್ಕಳು ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ದೇಶಭಕ್ತಿಗೀತೆಗಳಿಗೆ ಅಮೋಘ ನೃತ್ಯ ಪ್ರದರ್ಶನ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಇತಿಹಾಸದಲ್ಲಿ ಮೊದಲ ಬಾರಿಗೆ ಚಳ್ಳಕೆರೆಯಲ್ಲಿ ಯೂರಿಯಾ ಕೊರತೆ; ರೈತರ ಆತಂಕ
ಮುಖ್ಯ ಅತಿಥಿಗಳಾಗಿ ಆಕಾಶವಾಣಿ ದೂರದರ್ಶನ ವಿಶ್ರಾಂತ ನಿರ್ದೇಶಕ ಬಾನಂದೂರು ಕೆಂಪಯ್ಯ, ಚಲನಚಿತ್ರ ಹಿರಿಯ ನಿರ್ದೇಶಕ ಬಿ.ರಾಮಮೂರ್ತಿ, ಬಿಇಎಸ್ ಕಾಲೇಜ್ ಪ್ರಾಚಾರ್ಯ ಲಕ್ಷ್ಮೀನಾರಾಯಣ್, ಹಿರಿಯ ರಂಗಕರ್ಮಿ ಡಾ.ಪಾರ್ಶ್ವನಾಥ್, ಐಶ್ವರ್ಯ ಕಾಸ್ಟೂಮ್ ಸಂಸ್ಥಾಪಕ ಮಧುಸೂದನ್, ಮಾಜಿ ಸೈನಿಕ ರಘುರಾಂ ಕೆವಿ, ಹಾಸನ ಜಿಲ್ಲೆಯ ವಿಶೇಷ ಭೂಸ್ವಾಧೀನಾಧಿಕಾರಿ ಸಹಾಯಕ ಆಯುಕ್ತ ವಿ.ಮಂಜುನಾಥ್, ಸಮಾಜ ಸೇವಕರಾದ ಶ್ರೀನಿವಾಸ್ ರೆಡ್ಡಿ, ತೆಲುಗು ಚಲನಚಿತ್ರ ನಾಯಕಿ ಮಧುಬಾಲ, ಸ್ಯಾಂಡಲ್‍ವುಡ್ ಫಿಲಂ ಇನ್ಸಿಟ್ಯೂಟ್ ಆನಂದ್, ನಿರ್ಮಾಪಕ ಚಿನ್ನಸ್ವಾಮಿ ನಾಯ್ಡು, ಸಮಾಜಸೇವಕ ಶಶಿಕಾಂತ್, ಸಾಹಿತಿ ಹಲ್ಲಿಗೆರೆ ಕೃಷ್ಣಪ್ಪ, ರವಿ, ದೃಷ್ಟಿ, ಕನ್ನಡನ್ಯೂಸ್ ಶಿವಶಂಕರ್, ನಂಜನಗೂಡಿನ ಸರಸ್ವತಮ್ಮ, ಸಮಾಜ ಸೇವಕಿ ಎಚ್.ಪುಷ್ಪಲತ ಹಾಗೂ ಮೌರ್ಯ ಪೂಜಾರಿ ಸೇರಿದಂತೆ ಕಲಾಸಕ್ತರು ಉಪಸ್ಥಿತರಿದ್ದರು.