ಆಗಸ್ಟ್ 9, 1942 ರ ‘ಭಾರತ ಬಿಟ್ಟು ತೊಲಗಿ’ ಚಳವಳಿಯ 83 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಸ್‌ಕೆಎಂ
ಹಾಗೂ ಕೇಂದ್ರೀಯ ಕಾರ್ಮಿಕ ಸಂಘಗಳು ಜಂಟಿ ಕರೆಯ ಮೇರೆಗೆ ನೀಡಿರುವ ಪ್ರಯುಕ್ತ ಸಂಯುಕ್ತ ಹೋರಾಟ ಕರ್ನಾಟಕ ಯಾದಗಿರಿ ಸಮಿತಿ ನೇತೃತ್ವದಲ್ಲಿ ‘ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ”, “ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ” ಘೋಷಣೆಯಡಿಯಲ್ಲಿ ಯಾದಗಿರಿ ಜಿಲ್ಲಾಧಿಕಾರಿಯವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಚನ್ನಪ್ಪ ಆನೇಗುಂದಿ ಮಾತನಾಡಿ, “ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಪೊರೇಟ್-ಕೋಮುವಾದಿ ಧೋರಣೆಗಳಿಂದಾಗಿ ದೇಶದ ದುಡಿಯುವ ಜನತೆ ಆಪಾರ ಪ್ರಮಾಣದ ಸಂಕಟವನ್ನು ಅನುಭವಿಸುವಂತಾಗಿದೆ. ನಮ್ಮ ಬದುಕಿನ ಪ್ರತಿಯೊಂದು ವಲಯದಲ್ಲೂ ದೇಶ ಹಾಗೂ ವಿದೇಶದ ಬಹುರಾಷ್ಟ್ರೀಯ ಹಾಗೂ ಗುತ್ತೇದಾರಿ ಕಂಪನಿಗಳ ಹಿಡಿತ ಬಲಗೊಳ್ಳುತ್ತಿದೆ ಎಂದರು.
“ಸಂವಿಧಾನ ಖಾತರಿ ಪಡಿಸಿರುವ ಪ್ರತಿಯೊಂದು ಹಕ್ಕಿಗೂ ಗಂಭೀರ ತೊಂದರೆ ಉಂಟು ಮಾಡುತ್ತಿದೆ. ದಿವಾಳಿಕೋರ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳು ರೈತರ, ಕಾರ್ಮಿಕರ, ದಲಿತರ, ಮಹಿಳೆಯರ, ವಿದ್ಯಾರ್ಥಿ ಯುವಜನರ ಬದುಕಿಗೆ ಎಷ್ಟೊಂದು ವಿನಾಶಕಾರಿಯಾಗಿವೆ ಎಂಬುದು ಈ ನೀತಿಗಳ ಮೂವತ್ತು ವರ್ಷಗಳ ಆಳ್ವಿಕೆಯಲ್ಲಿ ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿದೆ” ಎಂದರು.
“ಪರಿಸ್ಥಿತಿ ಹೀಗಿದ್ದರೂ ದೇಶದ ಕೃಷಿ ವಲಯವನ್ನು ಹಾಗೂ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿದೇಶಿ ದೈತ್ಯ ಬಹುರಾಷ್ಟ್ರೀಯ ಕಂಪನಿಗಳಿಗೆ ಸುಂಕ ರಹಿತವಾಗಿ ತೆರೆಯಲಾಗುತ್ತಿದೆ. ಸಂಸತ್ತಿನಲ್ಲಾಗಲಿ ಹಾಗೂ ರೈತರ, ಕಾರ್ಮಿಕರ ಜೊತೆಯಲ್ಲಾಗಲಿ ಯಾವುದೇ ರೀತಿ ಚರ್ಚೆ ನಡೆಸದೇ ದೇಶದ ಸ್ವಾವಲಂಬಿ ಹಾಗೂ ಸಾರ್ವಭೌಮಕ್ಕೆ ತೊಂದರೆ ಉಂಟು ಮಾಡುವ ಅಸಮಾನ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದಕ್ಕೆ ಬ್ರಿಟನ್ ಜೊತೆ ಭಾರತ ಸಹಿ ಮಾಡಿದೆ. ಇದೇ ರೀತಿಯ ಒಪ್ಪಂದಕ್ಕೆ ಅಮೇರಿಕಾ ಸಹಿ ಹಾಕುವಂತೆ ಭಾರತ ಒಂದು ಸಾರ್ವಭೌಮ ಹಾಗೂ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬುದನ್ನು ಮರೆತು ಬೆದರಿಕೆ ಹಾಗೂ ಒತ್ತಡ ಹಾಕುತ್ತಿದೆ’ ಎಂದು ಆರೋಪಿಸಿದರು.
“ಕೆಲವೇ ಕೆಲವು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಲಾಭದ ಹಿತರಕ್ಷಣೆಗಾಗಿ ಕೋಟ್ಯಂತರ ಭಾರತೀಯರ ಹಿತವನ್ನು ಬಲಿಗೊಡುವುದನ್ನು ಕೂಡಲೇ ಭಾರತ ಸರ್ಕಾರ ನಿಲ್ಲಿಸಬೇಕು. ಭಾರತದ ಒಟ್ಟಾರೆ ಹಿತಕ್ಕೆ ವಿರುದ್ಧವಾಗಿರುವ ಬ್ರಿಟನ್ ಜೊತೆಗಿನ ಒಪ್ಪಂದವನ್ನು ಅಮಾನುತು ಮಾಡಬೇಕು ಹಾಗೂ ಸಾಮ್ರಾಜ್ಯಶಾಹಿ ಆಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರವರ ಸುಂಕ ಹೇರಿಕೆ ಹಾಗೂ ದಂಡದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತ್ವವನ್ನು ಕಾಪಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು. ಪ್ರತಿಭಟನೆ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಆಸರೆಯಾಗಿದ್ದ ಮನೆಯೂ ಮಳೆಗೆ ಕುಸಿತ: ನೆರವಿನ ನಿರೀಕ್ಷೆಯಲ್ಲಿ ದೋರನಹಳ್ಳಿ ನಿವಾಸಿ ಅಮಲವ್ವ
ಈ ಸಂದರ್ಭದಲ್ಲಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಶರಣುಗೌಡ ಗೂಗಲ್, ಎಐಎಡ್ಬ್ಲೂ ಜಿಲ್ಲಾಧ್ಯಕ್ಷ ದೌವಲ್ ಸಾಬ್ ನಧಾಫ್, ಕೆಆರ್‌ಆರ್‌ಎಸ್ ತಾಲೂಕು ಕಾರ್ಯದರ್ಶಿ ಫಖೀರ್ ಅಹೆಮ್ಮದ್, ಕೆಆರ್‌ಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಮಲ್ಕಣ ಚಿಂತೆ, ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಭೀಮಣ್ಣ ಪಟ್ಟೇದಾರ್, ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಭೀಮರೆಡ್ಡಿ ಹೀರೆಭಾನರ್, ಕೆಪಿಆರ್‌ಎಸ್ ತಾಲೂಕು ಕಾರ್ಯದರ್ಶಿ ಭೀಮರಾಯ ಪೂಜಾರಿ, ಎಐಎಡ್ಬ್ಲೂ ಜಿಲ್ಲಾ ಕಾರ್ಯದರ್ಶಿ ಅಯ್ಯಣ್ಣ ಅನ್ಸೂರ್, ನವಕರ್ನಾಟಕ ರೈತ ಸಂಘ ರಾಜ್ಯ ಮುಖಂಡ ಚನ್ನರೆಡ್ಡಿ ಪಾಟೀಲ್, ಕೆಆರ್‌ಆರ್‌ಎಸ್ ಹಸಿರು ಸೇನೆ ಅಶೋಕ, ಕೆಆರ್‌ಆರ್‌ಎಸ್ ಹಸಿರು ಸೇನೆ ದೇವಿಂದ್ರಗೌಡ ಪಾಟೀಲ್, ಇನ್ನಿತರರು ಉಪಸ್ಥಿತರಿದ್ದರು.