ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರ ಆಸ್ತಿಯನ್ನು ಮಾರಾಟ ದಂಧೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮುಹಮ್ಮದ್ ಜಾವೀದ್, ಅಕ್ಷಯ ಕುಮಾರ ಭಂಡಾರಿ, ನೀಲಕಂಠ ಮೇಟಿ, ಅಂಜಿನೆಯ ಹಾಗೂ ಉಪೇಂದ್ರ ಕುಮಾರ ಬಂಧಿತ ಆರೋಪಿಗಳು.
ಈ ಬಗ್ಗೆ ಸುದ್ದಿಗೋಷ್ಠಿ ಉದ್ದೇಶಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ಮಾತನಾಡಿ, ‘ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ದಿನಗಳಿಂದ ಖಾಲಿ ಇರುವ ಖಾಲಿ ನಿವೇಶನ ಮತ್ತು ಕೃಷಿಯೇತರ ಪಾಳು ಜಮೀನುಗಳನ್ನು ಗುರುತಿಸಿ ಅಂತಹ ಜಮೀನು ಮತ್ತು ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಹೆಸರಿಗೆ ನೋಂದಾಯಿಸಿಕೊಂಡು ಮಾರಾಟ ಮಾಡುತ್ತಿದ್ದರು’ ಎಂದು ಮಾಹಿತಿ ನೀಡಿದರು.
‘ಇಂತಹ ಒಟ್ಟು ಆರು ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿ 20 ಲಕ್ಷ ರೂಪಾಯಿ ಹಾಗೂ ಒಂದು ಕಾರು ಜಪ್ತಿ ಮಾಡಲಾಗಿದೆ. ಜಮೀನು ಮತ್ತು ನಿವೇಶನಗಳ ಸಂಬಂಧಿಸಿದ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡಗಳನ್ನು ನಕಲಿಯಾಗಿ ಸೃಷ್ಟಿಸಿ ಬೇರೊಬ್ಬ ವ್ಯಕ್ತಿಯನ್ನು ಆಸ್ತಿಯ ಮಾಲೀಕ ಎಂದು ವಂಚಿಸಿ ನಂತರ ಆಸ್ತಿಗಳನ್ನು ಬೇರೆಯವರ ಹೆಸರಿಗೆ ನೊಂದಾಯಿಸಿಕೊಂಡು ನಂತರ ಬೇರೆ ಜನರಿಗೆ ಮಾರಾಟ ಮಾಡಿ ನಂತರ ಅವರಿಂದ ಭಾರಿ ಮೊತ್ತದ ಹಣ ಪಡೆದುಕೊಂಡು ವಂಚಿಸುತ್ತಿದ್ದರು’ ಎಂದು ತಿಳಿಸಿದರು.
‘ಈ ಬಗ್ಗೆ ಆಸ್ತಿಗಳ ಮೂಲ ಮಾಲಿಕರು ನೀಡಿದ ದೂರಿನ ಮೇರೆಗೆ ಪತ್ತೆ ಹಚ್ಚಿ ಬಂಧಿಸಲಾಗಿದೆ. ರಾಯಚೂರು ನಗರದ ಪಶ್ಚಿಮ ಪೊಲೀಸ್ ಠಾಣೆ ಹಾಗೂ ಸಿರವಾರ ಪೊಲೀಸ್ ಠಾಣೆಯಲ್ಲಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ’ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅತ್ಯಾಚಾರ ಪ್ರಕರಣ : ಅಪರಾಧಿಗೆ ಜೀವಾವಧಿ ಶಿಕ್ಷೆ
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದರು.
