ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಿದ್ನಾಳ ಗ್ರಾಮದಲ್ಲಿ ಕುರಿ ಮೇಯಿಸಲು ಬಂದಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಗೋಕಾಕ ತಾಲ್ಲೂಕಿನ ಬೆನಚಿನಮರಡಿ ಗ್ರಾಮದ ಲಕ್ಷ್ಮೀ ಮಲ್ಲಿಕಾರ್ಜುನ ಗೌಡವ್ವಗೋಳ (24), ಹಾಲವ್ವ (3) ಹಾಗೂ ಹಾಲಪ್ಪ (1) ಎಂದು ಗುರುತಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಕಟಕೋಳ ಪೊಲೀಸರು ಸ್ಥಳಕ್ಕೆ ಧಾವಿಸಿ, ತಾಯಿ ಮತ್ತು ಒಂದು ಮಗುವಿನ ಶವಗಳನ್ನು ಹೊರತೆಗೆದರು. ಮತ್ತೊಂದು ಮಗುವಿನ ಶವಕ್ಕಾಗಿ ಬೆಳಗಾವಿಯಿಂದ ಸೋಕೊ ತಂಡ ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸಿತು.
ಆತ್ಮಹತ್ಯೆಯ ಕಾರಣ ಇನ್ನೂ ತಿಳಿದುಬಂದಿಲ್ಲ. ಗಂಡನ ಮನೆಯವರು ಮತ್ತು ತವರು ಮನೆಯವರು ಕುರಿ ಮೇಯಿಸುವ ಉದ್ಯೋಗದಲ್ಲಿದ್ದು, ಬೇರೆ ಬೇರೆ ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ಲಕ್ಷ್ಮೀ ಆರೋಗ್ಯ ಸಮಸ್ಯೆಯಿಂದ ತವರು ಊರಿಗೆ ತೆರಳಿದ್ದರೂ, ನಂತರ ಸಿದ್ನಾಳಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ವಿನಾಯಕ ಬಡಿಗೇರ ಹಾಗೂ ಪಿಎಸ್ಐ ಬಸವರಾಜ ಕೊಣ್ಣೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.