ಕೋಮುವಾದಿ ಗುಂಪೊಂದು 21 ವರ್ಷದ ಯುವಕನನ್ನು ಭೀಕರವಾಗಿ ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಜಾಮನೇರ್ ಪ್ರದೇಶದಲ್ಲಿ ನಡೆದಿದೆ. ಅದೂ, ಘಟನೆಯು ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ ಕೃತ್ಯ ನಡೆದಿದ್ದು, ಕಾನೂನು-ಸುವ್ಯವಸ್ಥೆಯ ಬಗ್ಗೆ ಗಂಭೀರ ಕಳವಳ ಹುಟ್ಟುಹಾಕಿದೆ.
ಜಾಮನೇರ್ ತಾಲೂಕಿನ ಛೋಟಿ ಬೆಟವಾಡ್ ಗ್ರಾಮದ ನಿವಾಸಿ ಸುಲೇಮಾನ್ ರಹೀಮ್ ಖಾನ್ ಎಂಬ ಯುವಕನನ್ನು ಜಾಮನೇರ್ ಪೊಲೀಸ್ ಠಾಣೆಯ ಬಳಿ, ಕೋಮುವಾದಿ ಗುಂಪು ಬರ್ಬರವಾಗಿ ಹತ್ಯೆಗೈದಿದೆ ಎಂದು ‘ಮಖ್ತೂಬ್ ಮೀಡಿಯಾ’ ವರದಿ ಮಾಡಿದೆ.
“ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿನ ಕೆಫೆಯಲ್ಲಿ ಸುಲೇಮಾನ್ ಮತ್ತು ಓರ್ವ ಯುವತಿ ಕುಳಿದಿದ್ದರು. ಅಲ್ಲಿಗೆ ಬಂದ, 10-15 ಮಂದಿಯ ಕೋಮುವಾದಿ ಗುಂಪು, ಸುಲೇಮಾನ್ ಅವರನ್ನು ವಾಹನದಲ್ಲಿ ಅಪಹರಿಸಿತು. ವಿವಿಧ ಸ್ಥಳಗಳಿಗೆ ಕರೆದೊಯ್ದು, ಹಲ್ಲೆ ನಡೆಸಿದೆ. ಬಳಿಕ, ಆತನ ಮನೆಯ ಎದುರು ಬಿಸಾಡಿ ಹೋಗಿದೆ” ಎಂದು ವರದಿಯಾಗಿದೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಸುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆತನ ಕುಟುಂಬಸ್ಥರು ಮುಂದಾಗಿದ್ದಾರೆ. ಆದರೆ, ಅವರ ಮೇಲೂ ದುರುಳರ ಗುಂಪು ಹಲ್ಲೆ ನಡೆಸಿದೆ. ಸುಲೇಮಾನ್ ಅವರ ತಂದೆ, ತಾಯಿ ಮತ್ತು ಸಹೋದರಿಗೂ ಗಾಯಗಳಾಗಿವೆ. ಆದಾಗ್ಯೂ, ಸುಲೇಮಾನ್ ಅವರನ್ನು ಜಲಗಾಂವ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ದಾರಿ ಮಧ್ಯೆಯೇ ಅತ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್ ಒತ್ತಡ
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸುಲೇಮಾನ್ ಮೇಲೆ ಕಬ್ಬಣದ ರಾಡ್‌ಗಳಿಂದ ಹಲ್ಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
“ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ, ಆರೋಪಿಗಳ ಬಂಧನಕ್ಕೆ ಹುಟುಕಾಟ ನಡೆಯುತ್ತಿದೆ. ದಾಳಿಗೆ ನಿಖರವಾದ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧೀಕ್ಷಕ ಮಹೇಶ್ವರ ರೆಡ್ಡಿ ಮಾಹಿತಿ ನೀಡಿದ್ದಾರೆ.
12ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಸುಲೇಮಾನ್, ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರಲು ಬಯಸಿದ್ದರು. ಅದಕ್ಕಾಗಿ, ಸಿದ್ದತೆ ನಡೆಸುತ್ತಿದ್ದರು. ಅವರ ಮೇಲೆ ದಾಳಿ ನಡೆದ ದಿನ, ಆತನ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಜಾಮನೇರ್‌ಗೆ ಹೋಗಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.