ಕನಿಷ್ಠ 10 ಸಾವಿರ ರೂ. ಗೌರವಧನ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ವಿಜಯಪುರದಲ್ಲಿ ಧರಣಿ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಧರಣಿಯಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.
ಎಐಕೆಕೆಎಂಎಸ್ ಸಂಘಟನೆ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಮಾತನಾಡಿ, “ಕಳೆದ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಹೋರಾಟ ನಡೆಸಿದಾಗ ಕನಿಷ್ಠ 10 ಸಾವಿರ ರೂ.ಗೌರವದ ಗ್ಯಾರಂಟಿ ಕೊಡುತ್ತೇವೆ. ಬಜೆಟ್‌ನಲ್ಲೂ ಘೋಷಣೆ ಮಾಡುವುದಾಗಿ ಸರಕಾರ ಭರವಸೆ ನೀಡಿತ್ತು. ಈವರೆಗೂ ಈಡೇರಿಸಿಲ್ಲ.” ಎಂದು ದೂರಿದರು. “ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯಲ್ಲಿರುವ ಆಶಾ ಕಾರ್ಯ ಕರ್ತೆಯರಿಗೆ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮುಖಂಡ ಭರತ್ ಕುಮಾರ್ ಎಚ್ ಟಿ ಮಾತನಾಡಿ, “ರಾಜ್ಯ ಹಾಗೂ ಕೇಂದ್ರ ಸರಕಾರಗಳು ‘ದುಡಿಯುವ ವರ್ಗದ ಹಿತಾಸಕ್ತಿ ಕಾಪಾಡುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ನ್ಯಾಯಯುತವಾಗಿ 10 ಸಾವಿರ ರೂ. ಕನಿಷ್ಠ ವೇತನ ಕೂಡಲೇ ಜಾರಿಗೊಳಿಸಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಶಿಥಿಲಗೊಂಡಿರುವ ಬಂಗಾರ ಗುಂಡಿಯ ಸರ್ಕಾರಿ ಶಾಲೆ: ಜೀವ ಭಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು!
ಜಿ ಜಿ ಗಾಂಧಿ ಮಾತನಾಡಿ, “ಒಂದು ಕುಟುಂಬ ಜೀವನ ನಿರ್ವಹಿಸಲು ಕನಿಷ್ಠ 25,000 ರೂ. ಅವಶ್ಯ ಇದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ವೈದ್ಯರಂತೆ ಪ್ರಥಮ ಚಿಕಿತ್ಸೆ ಮಾಡುತ್ತ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಪ್ರೋತ್ಸಾಹ ಧನ ಕೊಡುತ್ತಿಲ್ಲ. ಹೆಚ್ಚು ಕೆಲಸ ತೆಗೆದುಕೊಂಡು ಕನಿಷ್ಠ ವೇತನ ನೀಡದ ಸರಕಾರದ ಕ್ರಮ ಖಂಡನೀಯ” ಎಂದರು.
ಧರಣಿಯಲ್ಲಿ ಯುವಜನ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಬಾಗೇವಾಡಿ, ಶಿವಬಾಳಮ್ಮ ಕೊಂಡಗುಳಿ, ಶಿವರಂಜಿನಿ, ಆಶಾ ಕಾರ್ಯಕರ್ತೆಯರಾದ ನಿರ್ಮಲಾ, ಜಯಶ್ರೀ ಕುಂಬಾರ, ಮೆಹರುನ್ನಿಸಾ ಜಬನೂರು, ಮಲ್ಲಮ್ಮ, ರೇಣುಕಾ ಕಲಗುಟಕರ, ಲಕ್ಷ್ಮೀ ಸೀಮೆಕೇರಿ ಇತರರು ಇದ್ದರು.