ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಅವರನ್ನು ಶಿಫಾರಸು ಮಾಡುವುದಾಗಿ ಘೋಷಿಸಿದೆ. ಅಂತೆಯೇ, ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಮೋದಿ ಅವರು ಶಿಫಾರಸು ಮಾಡಿದರೆ, ಟ್ರಂಪ್ ತೃಪ್ತರಾಗಬಹುದೇ?
ಭಾರತದ ಮೇಲೆ ಟ್ರಂಪ್ ಕೋಪಗೊಂಡಿದ್ದಾರೆ. ಅನಗತ್ಯ ದ್ವೇಷ ಸಾಧಿಸುತ್ತಿದ್ದಾರೆ. ಅಮೆರಿಕದ ನಿಲುವು ಮತ್ತು ಟ್ರಂಪ್ ಸುಂಕ ಹೇರಿಕೆ ಕಂಡ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್, ‘ಭಾರತದ ಪ್ರಧಾನಿ ಮೋದಿ ಅವರು ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿದರೆ ಎಲ್ಲವೂ ಸರಿಹೋಗುತ್ತದೆ. ಸುಂಕದ ಹೊರೆಯೂ ಇಳಿಯುತ್ತದೆ’ ಎಂದಿರುವುದು ವ್ಯಂಗ್ಯವಾದರೂ, ಕುತೂಹಲ ಕೆರಳಿಸಿದೆ.
”ಭಾರತದ ಮೇಲೆ ಹೇರಲಾಗಿರುವ ಭಾರೀ ಪ್ರಮಾಣದ (50%) ಸುಂಕವು ‘ದ್ವಿಪಕ್ಷೀಯ ಸಂಬಂಧ’ದಲ್ಲಿ ತಪ್ಪು ನಿರ್ಧಾರ. ರಷ್ಯಾದಿಂದ ತೈಲ ಖರೀದಿ ಮಾಡುವ ಕಾರಣಕ್ಕಾಗಿ ಭಾರತಕ್ಕೆ 25% ದಂಡ ವಿಧಿಸಲಾಗಿದೆ. ಇದು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ಹಾನಿಕಾರಕ” ಎಂದಿದ್ದಾರೆ.
“ರಷ್ಯಾದಿಂದ ಚೀನಾ ಕೂಡ ತೈಲ ಖರೀದಿಸುತ್ತಿದೆ. ಆದರೆ, ಚೀನಾ ಮೇಲೆ ಯಾವುದೇ ಹೆಚ್ಚು ಸುಂಕ ಅಥವಾ ದಂಡವನ್ನು ವಿಧಿಸಲಾಗಿಲ್ಲ. ಉಕ್ರೇನ್‌ನಲ್ಲಿ ಕದನ ವಿರಾಮ ಜಾರಿಗೊಳಿಸಲು ಟ್ರಂಪ್ ಮಾಡುತ್ತಿರುವ ಪ್ರಯತ್ನದಿಂದ ಬಳಲುತ್ತಿರುವ ಏಕೈಕ ರಾಷ್ಟ್ರ ಭಾರತ” ಎಂದು ಬೋಲ್ಟನ್ ಹೇಳಿದ್ದಾರೆ.
“ಸುಂಕ ಹೇರಿಕೆಯಿಂದ ಉಂಟಾದ ಪರಿಣಾಮವನ್ನು ನಿಭಾಯಿಸಲು ಮತ್ತು ಸರಿಪಡಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಕಳೆದ 30 ದಿನಗಳಲ್ಲಿ ಶ್ವೇತಭವನವು ಭಾರತವನ್ನು ನಡೆಸಿಕೊಂಡ ರೀತಿ ಸರಿಯಲ್ಲ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್ ಒತ್ತಡ
“ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಅವರನ್ನು ಶಿಫಾರಸು ಮಾಡುವುದಾಗಿ ಘೋಷಿಸಿದೆ. ಅಂತೆಯೇ, ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಮೋದಿ ಅವರು ಶಿಫಾರಸು ಮಾಡಿದರೆ, ಟ್ರಂಪ್ ತೃಪ್ತರಾಗುತ್ತಾರೆ. ಅವರ ದ್ವೇಷವು ಇಳಿಯುತ್ತದೆ. ಸುಂಕ ಹೇರಿಕೆಯೂ ತಗ್ಗುತ್ತದೆ” ಎಂದು ಬೋಲ್ಟನ್ ಹೇಳಿದ್ದಾರೆ.
ಭಾರತದ ಮೇಲೆ ಹೆಚ್ಚು ಸುಂಕ ವಿಧಿಸಿರುವ ತಮ್ಮ ಧೋರಣೆಯನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. “ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾಗೆ ಭಾರತ ಸಹಾಯ ಮಾಡುತ್ತಿದೆ. ಭಾರತವು ರಷ್ಯಾದಿಂದ ಬೃಹತ್ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿದೆ ಮತ್ತು ಹೆಚ್ಚಿನ ಲಾಭಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ” ಎಂದು ಟ್ರಂಪ್ ಆರೋಪಿಸಿದ್ದಾರೆ.