- ರಾಯಣ್ಣ ಭಾವಚಿತ್ರ ಅಳವಡಿಸಲು ಕಾರ್ಮಿಕರ ಸೇವಕರು ಸಂಘಟನೆ ಆಗ್ರಹ
- ಶಹಾಪೂರ ತಾಲೂಕು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಕೆ
ಸರ್ಕಾರಿ, ಖಾಸಗಿ ಕಛೇರಿ ಸೇರಿದಂತೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಅಳವಡಿಸಲು ಕಾರ್ಮಿಕರ ಸೇವಕರು ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಪೂರ ತಹಸೀಲ್ದಾರ್‌ಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ್ದಾರೆ.
ಕಾರ್ಮಿಕರ ಸೇವಕರು ಸಂಘಟನೆ ಜಿಲ್ಲಾಧ್ಯಕ್ಷ ಮಾಳಪ್ಪ ಎಸ್. ಪೂಜಾರಿ ಮಾತನಾಡಿ, “ಅಪ್ರತಿಮ ವೀರರಾಗಿದ್ದ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರು ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸುವುದು ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಾಗಿದೆ. ದೇಶಪ್ರೇಮಿ ರಾಯಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಛೇರಿ, ಖಾಸಗಿ ಶಾಲಾ – ಕಾಲೇಜುಗಳಲ್ಲಿ ಅಳವಡಿಸಿ ಪ್ರತಿವರ್ಷ ಅವರ ಜನ್ಮ ದಿನಾಚರಣೆ ಹಾಗೂ ಹುತಾತ್ಮ ದಿನಾಚರಣೆಯನ್ನು ಆಚರಿಸುವಂತೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆದೇಶವನ್ನು ಪಾಲಿಸದೇ ಇರುವುದು ವಿಷಾದನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಕೂಡಲೇ ಜಾರಿಗೊಳಿಸಿ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಲ್ಲಿ ರಾಯಣ್ಣರವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸಬೇಕು. ಅಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಜನ್ಮದಿನವೂ ಆಚರಿಸಬೇಕು ಮತ್ತು ಜನವರಿ 26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮದೊಂದಿಗೆ ರಾಯಣ್ಣನವರ ಹುತಾತ್ಮ ದಿನಾಚರಣೆ ಆಚರಿಸಬೇಕು. ರಾಯಣ್ಣನವರ ಜೀವನ ಮತ್ತು ಹೋರಾಟದ ಕುರಿತು ಉಪನ್ಯಾಸ ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಬೇಕು” ಎಂದು ಅವರು ಆಗ್ರಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮಣಿಪುರದಿಂದ ’ಈ ದಿನ’ ವರದಿ- 5 | ಎಳೆಯ ಕೈಗಳಲ್ಲಿ ಬಂದೂಕು! ಬಂಕರ್‌ಗಳಲ್ಲಿ ಕಂಡ ದುರಂತ ಕಥನ
ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ಅಯ್ಯಪ್ಪ ಟನಿಕೆದಾರ, ಹಣಮಂತರಾಯ ಶರಣವರ, ಯಲ್ಲು ಶಹಾಪೂರ, ಖದಿರ್ ಬಾಷಾ ಇಬ್ರಾಹಿಂಪೂರ ಇದ್ದರು