ಬೆಂಗಳೂರಿನಲ್ಲಿ ಈ ಬಾರಿಯ ಮುಂಗಾರು ಮಳೆಯಿಂದಾಗಿ 878 ರಸ್ತೆಗಳು ಹಾನಿಗೊಳಗಾಗಿವೆ. ಅವುಗಳಲ್ಲಿ ಒಟ್ಟು 343.41 ಕಿ.ಮೀ. ಉದ್ದದ ರಸ್ತೆಗಳು ಭಾರೀ ಅನಾಹುತಕಾರಿಯಾಗಿ ಮಾರ್ಪಟ್ಟಿವೆ. ಅಲ್ಲದೆ, 1,114 ಮನೆಗಳು ಹಾನಿಗೊಳಗಾಗಿವೆ. ಮರಗಳು ಉರುಳಿ ಮೂರು ಮಂದಿ ಸಾವನ್ನಪ್ಪಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಮಳೆಯಿಂದಾಗಿ ಮರ ಬಿದ್ದು ಸಾವನ್ನಪ್ಪಿದವರ ಕುಟುಂಬಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರಿಹಾರ ನೀಡಿದೆ ಎಂದು ಹೇಳಿದ್ದಾರೆ.
ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುವುದನ್ನು ತಡೆಗಟ್ಟುವ ಉದ್ದೇಶದಿಂದ ‘ಮಳೆನೀರು ಚರಂಡಿ’ಗಳಿಗೆ ತಡೆಗೋಡೆಗಳನ್ನು ನಿರ್ಮಿಸಲು ಮತ್ತು ಇತರ ಅಗತ್ಯ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಬಿಬಿಎಂಪಿ 218 ಪ್ರವಾಹ ಪೀಡಿತ ಸ್ಥಳಗಳನ್ನು ಗುರುತಿಸಿದೆ. ಜುಲೈ ಅಂತ್ಯದ ವೇಳೆಗೆ 169 ಸ್ಥಳಗಳಲ್ಲಿ ಕೆಲವು ಅಗತ್ಯ ಕೆಲಸಗಳನ್ನು ಮುಗಿಸಿದೆ. ಉಳಿದ 49 ಸ್ಥಳಗಳನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಬೆಂಗಳೂರು ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ಸುಮಾರು 150 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿವೆ. ಆದಾಗ್ಯೂ, ಮನೆಗಳಿಗೆ ನೀರು ನುಗ್ಗಿದ ಘಟನೆಗಳು ಬೆಂಗಳೂರು ದಕ್ಷಿಣ ಮತ್ತು ಪೂರ್ವ ವಲಯದಿಂದ ಹೆಚ್ಚಾಗಿ ಸಂಭವಿಸಿವೆ.
ಹಾನಿಗೊಳಗಾಗಿರುವ ರಸ್ತೆಗಳು ಮತ್ತು ರಸ್ತೆಗುಂಡಿಗಳ ಬಗ್ಗೆ ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. “ಬೆಂಗಳೂರಿನಲ್ಲಿ ಗುಂಡಿಗಳಿಲ್ಲದ ಒಂದೇ ಒಂದು ರಸ್ತೆಯೂ ಇಲ್ಲ. ಪ್ರತಿದಿನ, ವಿಶೇಷವಾಗಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವುದು ಕಷ್ಟಕರವಾಗಿದೆ. ಇಂತಹ ಕಳಪೆ ರಸ್ತೆಗಳಿಂದಾಗಿ ನಮ್ಮಲ್ಲಿ ಅನೇಕರು ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯಲು ಹೆದರುತ್ತೇವೆ” ಎಂದು ಮಲ್ಲೇಶ್ವರಂ ಮತ್ತು ದೊಮ್ಮಲೂರು ನಡುವೆ ಪ್ರತಿದಿನ ಪ್ರಯಾಣಿಸುವ ಕಾವ್ಯಾ ಕೆ ಅವರು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ನಗರದಲ್ಲಿ ಭಾರೀ ಮಳೆ ಸುರಿಯುವುದಕ್ಕೂ (ಮಳೆಗಾಲ ಆರಂಭವಾಗುವುದಕ್ಕೂ) ಮೊದಲು ಮುನ್ನೆಚ್ಚರಿಕೆ ವಹಿಸುವಂತೆ ಹಲವರು ಬಿಬಿಎಂಪಿಯನ್ನು ಒತ್ತಾಯಿಸಿದರು. “ಕಳಪೆ ರಸ್ತೆಗಳು ಮತ್ತು ರಸ್ತೆಗುಂಡಿಗಳು ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿಲ್ಲವೇ? ಮಳೆಯಿಂದ ಹಾಳಾಗದ ರೀತಿಯಲ್ಲಿ ದೀರ್ಘಾವಧಿಗೆ ಬಾಳಿಕೆ ಬರುವಂತೆ ರಸ್ತೆಗಳನ್ನು ನಿರ್ಮಿಸಲು ಬಿಬಿಎಂಪಿ ಕ್ರಮ ಮತ್ತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು” ಎಂದು ತಂತ್ರಜ್ಞ ಸುಮಂತ್ ಎಂ ಒತ್ತಾಯಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್ ಒತ್ತಡ
ಆದಾಗ್ಯೂ, ಹಿರಿಯ ಬಿಬಿಎಂಪಿ ಅಧಿಕಾರಿಗಳು ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿ ಮಾಡುತ್ತಿದ್ದೇವೆ. ಯಾವುದೇ ಸಮಸ್ಯಾತ್ಮಕ ಪ್ರದೇಶಗಳನ್ನು ಗುರುತಿಸಲು ಬೆಂಗಳೂರು ಸಂಚಾರ ಪೊಲೀಸರ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
“ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ. ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಆದಾಗ್ಯೂ, ಮಳೆಗಾಲದಲ್ಲಿ ನಾವು ಯಾವುದೇ ಪ್ರಮುಖ ಕೆಲಸವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಸಮಸ್ಯೆಗಳನ್ನು ತಕ್ಷಣ ಗುರುತಿಸಲು ಮತ್ತು ಸರಿಪಡಿಸಲು ನಾವು ಸಂಚಾರ ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿಯಲ್ಲಿ ತಿಳಿಸಿದೆ.