ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ನೂರಾರು ಅಸಹಜ ಸಾವಿನ ತನಿಖೆ ವಿಚಾರ ಕುರಿತು ನಿಯಮ 69ರಡಿ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟರು.
ನಿಲುವಳಿ ಸೂಚಿಸಿದ್ದ ಬಿಜೆಪಿ ಸದಸ್ಯ ವಿ ಸುನಿಲ್ ಕುಮಾರ್ ಮಾತನಾಡಿ, “ಧರ್ಮಸ್ಥಳ ಹಿಂದೂ ಧಾರ್ಮಿಕ ಕ್ಷೇತ್ರ. ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಒಂದು ಗುಂಪು ವ್ಯವಸ್ಥಿತ ಪಿತೂರಿ ಮಾಡುತ್ತಿದೆ. ಪ್ರತಿ ದಿನ ಒಂದಿಷ್ಟು ಜನರು ಬರುತ್ತಾರೆ, ಸಾಕ್ಷಿ ಹೇಳುತ್ತೇವೆ ಎನ್ನುತ್ತಾರೆ. ಯಾರೋ ಅನಾಮಿಕ ವ್ಯಕ್ತಿ ತೆಗೆದುಕೊಂಡ ಬಂದ ಬುರುಡೆ ಬಗ್ಗೆ ತನಿಖೆಯಾಗಲೇ ಇಲ್ಲ” ಎಂದರು.
“ಎಸ್‌ಐಟಿ ರಚನೆ ಬಗ್ಗೆ ನಮಗೆ ತಕರಾರು ಇಲ್ಲ. ಆದರೆ ಅನಾಮಿಕ ವ್ಯಕ್ತಿ ಹೇಳಿದ 13 ಜಾಗಗಳನ್ನು ಅಗೆದರೂ ಒಂದು ಜಾಗದಲ್ಲಿ ಏನು ಸಿಕ್ಕಿದೆ ಅಂತ ಗೃಹ ಸಚಿವರು ಹೇಳಬೇಕು. ಗುಂಡಿಗಳನ್ನು ಎಷ್ಟು ಅಗೆಯುತ್ತೀರಾ? 13ನೇ ಗುಂಡಿಯಲ್ಲಿ ಏನೋ ಇದೆ ಎನ್ನುವ ಬಗ್ಗೆ ಕುತೂಹಲ ಸೃಷ್ಟಿಸಲಾಯಿತು. ಆದರೆ 13ನೇ ಗುಂಡಿಯಲ್ಲಿ ಏನೂ ಸಿಕ್ಕಿಲ್ಲ ಎನ್ನುವ ವರದಿಯಾಗಿದೆ. ನಮಗೆ ಎಸ್‌ಐಟಿ ತನಿಖೆಯ ಬಗ್ಗೆ ಮಧ್ಯಂತರ ವರದಿ ಬೇಕು” ಎಂದು ಆಗ್ರಹಿಸಿದರು.
“ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಎಷ್ಟು ಗೌರವವಿದೆ. ಆದರೆ ಅವರೆಲ್ಲರ ವಿರುದ್ಧ ಅಪಪ್ರಚಾರ ನಡೆದಿದೆ. ಬಗ್ಗೆ ಎಫ್‌ಐಆರ್ ದಾಖಲು ಆಗಿಲ್ಲ. ಸುಳ್ಳು ಸುದ್ದಿಗೆ ಕಡಿವಾಣ ಯಾವಾಗ? ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಅವಹೇಳನ ಮಾಡಿರುವ ಬಗ್ಗೆ ಕ್ರಮ ಏನು? ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವಲ್ಲಿ ಒಂದು ಗ್ಯಾಂಗ್ ನಿರತವಾಗಿದೆ. ಕಾಡಲ್ಲಿ ಇರುವ ನಕ್ಸಲರು ನಗರಕ್ಕೆ ಬಂದಿದ್ದಾರೆ. ಅವರೇ ಈ ಪ್ರಕರಣದ ಹಿಂದಿದ್ದಾರೆ. ಸರ್ಕಾರದ ಮಂತ್ರಿಮಂಡಲ ಧರ್ಮಸ್ಥಳಕ್ಕೆ ಹೋಗಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, “ಧರ್ಮಸ್ಥಳ ಪ್ರಕರಣವನ್ನು ರಾಜಕೀಯವಾಗಿ ನೋಡಬೇಡಿ. ಬಿಜೆಪಿಗಿಂತ ನಮಗೆ ಧರ್ಮಸ್ಥಳ ಬಗ್ಗೆ ಗೌರವವಿದೆ. ಅನಾಮಿಕ ವ್ಯಕ್ತಿಯೊಬ್ಬರು ನ್ಯಾಯಾಧೀಶರ ಮುಂದೆ 164ಅಡಿ ಹೇಳಿಕೆ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಮಾಡಿದ್ದೇವೆ. ತನಿಖೆ ನಡೆಯುತ್ತಿದೆ. ನಾವು ಧರ್ಮಸ್ಥಳದ ಭಾವನೆಗೆ ಅಗೌರವ ತೋರಿಲ್ಲ” ಎಂದು ಹೇಳಿದರು.
ಆರ್ ಅಶೋಕ್ ಮಾತನಾಡಿ, “164 ಪ್ರಕಾರ ಹೇಳಿಕೆ ದಾಖಲೆ ಮಾಡಿದ್ರೆ ಎಸ್‌ಐಟಿ ಮಾಡಲು ಕೋರ್ಟ್ ಹೇಳಿತ್ತಾ? ಮೊಹಂತಿ ಅವರನ್ನೇ ನೇಮಿಸಲು ಕೋರ್ಟ್ ನಿರ್ದೇಶನ ನೀಡಿತ್ತಾ? ಎಸ್‌ಐಟಿ ರಚನೆ ಹಿಂದಿರುವ ಗ್ಯಾಂಗ್ ಯಾವುದು? ಮುಖ್ಯಮಂತ್ರಿಗಳನ್ನು ಸುತ್ತುವರಿದಿರುವ ಆ ಗ್ಯಾಂಗ್ ಬಗ್ಗೆ ರಾಜ್ಯಕ್ಕೆ ಗೊತ್ತಾಗಬೇಕು? ಬೋಗಸ್ ಬುರುಡೆ ಸಿಕ್ಕಿದೆ, ಗುಂಡಿಯಲ್ಲಿ ಒಂದು ಇಲಿಯೂ ಸಿಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಾಸ್ಕ್ ಮ್ಯಾನ್ ಯಾರು? ಭೀಮ್ ಎಂದು ಅವರೇ ಇಟ್ಟಿರುವ ಹೆಸರು. ಜನ ಹೇಳುತ್ತಾರೆ ಚಿನ್ನಯ್ಯ ಅಂತ. ಕ್ರೈಸ್ತ್ ಧರ್ಮಕ್ಕೆ ಮತಾಂತರ ಆಗಿದ್ದಾನೆ. ಅವನಿಗೆ ಎಷ್ಟು ಭದ್ರತೆ ಒದಗಿಸಲಾಗುತ್ತಿದೆ. ಆ ಭದ್ರತೆ ನಮಗೂ ಇಲ್ಲ. ಅವನು ಬಿರಿಯಾನಿ ಊಟ ಮಾಡುತ್ತ ಎಂಜಾಯ್ ಮಾಡುತ್ತಿದ್ದಾನೆ. ಎಸ್‌ಐಟಿ ತನಿಖೆ ಮುಂದುವರಿಯಲಿ. ಈಗ ಅಗೆದಿರುವ ಗುಂಡಿಗಳನ್ನು ಕೃಷಿ ಹೊಂಡ ಮಾಡಿ ಬಿಡಿ” ಎಂದು ಲೇವಡಿ ಮಾಡಿದರು.
(ಚರ್ಚೆ ಮುಂದುವರಿದಿದೆ..)