ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗಳ ಲಾಭ ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ಯೋಜನೆ ಕಾರ್ಯನಿರ್ವಹಿ ಸಿದ್ಧಪಡಿಸಿಕೊಂಡು ಬಳಸಬೇಕು ಎಂದು ವಿಜಯಪುರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚಿಸಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಜುಲೈ-2025ರ ಅಂತ್ಯಕ್ಕೆ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕು. ಈ ಅನುದಾನ ಉಳಿಕೆಯಾಗದಂತೆ ನೋಡಿಕೊಂಡು ಸಮರ್ಪಕವಾಗಿ ಬಳಕೆ ಮಾಡಬೇಕು. ವಿವಿಧ ನಿಮಗಮಗಳಿಂದ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ, ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬ ಒದಗಿಸುವುದು, ಅವಶ್ಯ ಇರುವ ಕಾಲೋನಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ವಹಿಸಬೇಕು. ಎಲ್ಲ ಇಲಾಖೆಗಳು ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿಯ ನಿಗದಿತ ಗುರಿಯನ್ನು ಕಾಲಮಿತಿಯೊಳಗೆ ಸಾಧಿಸುವಂತೆ ಸರ್ಕಾರಿ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸಬೇಕು” ಎಂದು ಅಧಿಕಾರಿಗಳಿಗೆ ತಿಳಿಸಿದರು.
“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕ ನಿರ್ಮೂಲನೆಗೆ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳಿವಳಿಕೆ ಮೂಡಿಸಬೇಕು. ಆಯೂಷ್ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಮಹತ್ವದ ಕುರಿತು ತಿಳಿ ಹೇಳುವ ಹಾಗೂ ಕಾಲಕಾಲಕ್ಕೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಮೀನುಗಾರಿಕೆ ವೃತ್ತಿಯಲ್ಲಿ ನೂರಾರು ಕುಟುಂಬಗಳು ತೊಡಗಿಸಿಕೊಂಡಿಸಿವೆ. ಇಂತಹ ಅರ್ಹ ಫಲಾನುಭವಿಗಳಿಗೆ ಅಗತ್ಯ ಪೂರಕ ಪರಿಕರಗಳನ್ನು ಒದಗಿಸಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು” ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಅಧಿಕೃತ ಕಟ್ಟಡ ಕಾರ್ಮಿಕರಿಗೆ ಸರರ್ಕಾರದ ಸೌಲಭ್ಯಗಳು ಸಿಗಬೇಕು: ಕರವೇ ಸ್ವಾಭಿಮಾನಿ ಬಣ
“ಪ್ರವಾಸೋದ್ಯಮ ಇಲಾಖೆಯ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ವಸತಿ ಶಾಲೆ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡುವ ಮೂಲಕ ಅವರೂ ಕೂಡ ಓದಿನೊಂದಿಗೆ ರಾಜ್ಯದ ಪರಂಪರೆ, ಇತಿಹಾಸ, ಐತಿಹಾಸಿಕ ತಾಣಗಳನ್ನು ವೀಕ್ಷಣೆ ಮಾಡುವುದರಿಂದ ಜ್ಞಾನಾರ್ಜನೆ ಹೆಚ್ಚುತ್ತದೆ. ಜಿಲ್ಲೆಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಗಾಗ ಕಲಾ ತರಬೇತಿ, ಕಮ್ಮಟ ಆಯೋಜಿಸಬೇಕು. ತಾಲೂಕು ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಗಳನ್ನು ಕಾಲ ಕಾಲಕ್ಕೆ ನಡೆಸಬೇಕು” ಎಂದು ಹೇಳಿದರು.