ಅಹಿಂದ ನಾಯಕ, ಸಹಕಾರ ಕ್ಷೇತ್ರದ ಆಸ್ತಿ ಕೆ.ಎನ್.ರಾಜಣ್ಣ ಅವರು ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಇಂತಹ ದಲಿತ ನಾಯಕರನ್ನು ತುಳಿಯಲಿಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹುನ್ನಾರ ಮಾಡಿರುವುದು ಖಂಡನೀಯ. ಇದು ಕಾಂಗ್ರೆಸ್ ಪಕ್ಷದ ಅದೋಗತಿ ತಿಳಿಸುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.
ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಅವರ ಪಾಪದ ಕೂಸು ರಾಹುಲ್ ಗಾಂಧಿ ಅವರ ಮೂಲಕ ಮತಗಳ್ಳತನ ಎಂದು ಹೇಳಿಸಿದ್ದು ನೇರವಾಗಿ ಖಂಡಿಸಿ ನಮ್ಮ ತಪ್ಪಿದೆ ಎಂದು ಸತ್ಯ ಹೇಳಿದ್ದಕ್ಕೆ ರಾಜಣ್ಣ ಅವರಿಗೆ ವಜಾ ಮಾಡುವ ಶಿಕ್ಷೆ ನೀಡಿದೆ ಎಂದರೆ ಕಾಂಗ್ರೆಸ್ ಸರ್ಕಾರ ಯಾವ ಸ್ಥಿತಿಯಲ್ಲಿವೆ ಎಂದು ಜನರೇ ತಿಳಿಯಬೇಕಿದೆ ಎಂದು ಛೇಡಿಸಿದರು.
ಅಹಿಂದ ವರ್ಗದ ನಾಯಕರಿಗೆ ಕಾಂಗ್ರೆಸ್ ಪಕ್ಷದಲ್ಲಿ ಗೌರವ ಇಲ್ಲ ಎಂಬುದು ಈಗ ಸಾಬೀತಾಗಿದೆ. ಸಹಕಾರ ಕ್ಷೇತ್ರದಲ್ಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದ ರಾಜಣ್ಣ ವಿರುದ್ಧ ಎಲ್ಲರೂ ಮುಗಿಬಿದ್ದಿದ್ದಾರೆ. ನಾಲ್ಕು ದಶಕದ ಅನುಭವದ ರಾಜಣ್ಣ ಅವರು ಸಹಕಾರ ಚುನಾವಣೆ ಅಚ್ಚುಕಟ್ಟಾಗಿ ನಡೆಸಲಿದ್ದಾರೆ. ಆದರೆ ನಮ್ಮಲ್ಲಿ ಹಾಲು ಸಹಕಾರ ಕ್ಷೇತ್ರದ ಚುನಾವಣೆ ವಾಮಮಾರ್ಗದಲ್ಲಿ ನಡೆಸಲಾಗಿದೆ. ಈ ಬಗ್ಗೆ ಪ್ರಶ್ನಿಸಿ ಎಂ.ಎಚ್.ಪಟ್ಟಣ ಡೈರಿ ಕೋರ್ಟ್ ಮೆಟ್ಟಿಲೇರಿದೆ. ಕಾನೂನು ಗಾಳಿಗೆ ತೂರಿದ ನಿರ್ದೇಶಕರ ಆಯ್ಕೆ ನಡೆದಿದೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ ಎಂದ ಅವರು ಬಿಜೆಪಿಗೆ ರಾಜಣ್ಣ ಅವರು ಬರುವುದಾದರೆ ಸ್ವಾಗತ ಎಂದು ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ ವಾಮಮಾರ್ಗಕ್ಕೆ ಅವಕಾಶ ನೀಡಬಾರದು ಎಂದು ರಾಜಣ್ಣ ಅವರ ನಿಲುವು ಇದ್ದ ಕಾರಣ ಅವರನ್ನು ಕುತಂತ್ರಕ್ಕೆ ಸಿಲುಕಿಸಿದ್ದಾರೆ ಎಂದ ಅವರು ಎಂ.ಎಚ್.ಪಟ್ಟಣ ಹಾಲು ಸೊಸೈಟಿಯಲ್ಲಿ ಜನರಲ್ ಬಾಡಿ ಸದಸ್ಯರಾಗದೆ ಚುನಾವಣೆಗೆ ಸ್ಪರ್ಧಿಸಿದ್ದ ಬಗ್ಗೆ ಈಗ ನ್ಯಾಯಾಲಯದಲ್ಲಿ ಪ್ರಶ್ನೆಯಾಗಿದೆ. ಸರ್ಕಾರದ ಪ್ರೋತ್ಸಾಹ ಧನ ನೀಡಲು ಫ್ರೂಟ್ ಐಡಿ ಅಗತ್ಯವಿದೆ. ನೇರ ಖಾತೆಗೆ ಬರುವ ಬದಲು ಕೈ ಬರಹ ಮೂಲಕ ಹಣ ನೀಡಿರುವುದು ಕಾನೂನು ಗಾಳಿಗೆ ತೂರಿದಂತೆ ಎಂಬುದು ಜನರಲ್ಲಿ ಚರ್ಚೆ ನಡೆದಿದೆ. ಕೋರ್ಟ್ ಮೂಲಕ ನ್ಯಾಯ ಸಿಗಲಿದೆ. ನಿರ್ದೇಶಕ ಸ್ಥಾನ ಆಯ್ಕೆಯನ್ನು ರದ್ದು ಮಾಡುವ ಆದೇಶ ಬರಲಿದೆ ಎಂದು ತಿಳಿಸಿದರು.