ಅಕಾಲಿಕ ಮಳೆ ಹಾಗೂ ಅತಿವೃಷ್ಠಿಯಿಂದ ಬಹುತೇಕರು ಮನೆಗಳನ್ನು ಕಳೆದುಕೊಂಡಿದ್ದು, ವಾಸಿಸಲು ಸಾಧ್ಯವಾಗದಂತಹ ಸ್ಥಿತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಗ್ರಾಮ ಪಂಚಾಯತಿ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಡಿಎಸ್ಎಸ್ ಮುಖಂಡ ಸಂತೋಷ ಆರೋಪಿಸಿದರು.
ಹಾವೇರಿ ತಾಲೂಕಿನ ಕೋಳೂರು ಗ್ರಾಮದ ಖಾಲಿ ಇರುವ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ವಿಳಂಬದ ವಿರುದ್ಧ ಕೋಳೂರು ಗ್ರಾಮ ಪಂಚಾಯಿತಿ ಎದುರು ನಡೆದ ಬೃಹತ್ ಪ್ರತಿಭಟನೆ ವೇಳೆ ಪಿಡಿಒ ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಗ್ರಾಮ ಪಂಚಾಯತಿ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡದೆ ವಿಳಂಬ ಮಾಡುತ್ತಿದ್ದು, ಸ್ಥಳೀಯರನ್ನು ನಿತ್ಯವೂ ಅಲೆದಾಡಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಖಾಲಿ ನಿವೇಶನಗಳನ್ನು ಕೂಡಲೇ ಹಂಚಿಕೆ ಮಾಡಬೇಕು. ಈಗಲೂ ವಿಳಂಬ ದೋರಣೆ ಮುಂದುವರೆಸಿದರೆ, ಮುಂದಿನ ಪರಿಣಾಮ ಎದುರಿಸಲು ಸಿದ್ಧರಾಗಿ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಾನಸಿಕ ಆರೋಗ್ಯ ವಿಭಾಗದ ಪ್ರಗತಿ; ಡಬ್ಲ್ಯೂಎಚ್‍ಒ ತಂಡದಿಂದ ಪರಿಶೀಲನೆ
ಕೋಳೂರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈಶ್ವರಪ್ಪ ಮನವಿ ಸ್ವೀಕರಿಸಿದ್ದು, “ಸಂಬಂಧಪಟ್ಟ ಇಲಾಖೆಯ ಪೂರ್ವಾನುಮತಿ ಪಡೆಯಲು ತಿಳಿಸಿದೆ ಹಾಗೂ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.