ಮನೆ, ಮಕ್ಕಳು, ಸಂಸಾರ ಜವಾಬ್ದಾರಿಯನ್ನು ಬದುಗೊತ್ತಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ಬಿಡಿಗಾಸಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾಗಳ ಧ್ವನಿಗೆ ಕಿವಿಗೊಡಬೇಕು ಎಂದು ಎಐಎಂಎಸ್‌ಎಸ್ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗುಳಿ ಹೇಳಿದರು.
ಮಾಸಿಕ ಕನಿಷ್ಠ 10,000 ರೂಪಾಯಿ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಯಕರ್ತರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆಸುತ್ತಿರುವ ಎರಡನೇ ದಿನದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ವಿಜಯಪುರದ ಹಿರಿಯ ಪತ್ರಕರ್ತ ಅನಿಲ್ ಹೊಸಮನಿ ಮಾತನಾಡಿ, “ಜನಪರ, ಮಹಿಳಾ ಪರ ಎಂದು ಹೇಳುವ ಸರ್ಕಾರಗಳು ಹೆಣ್ಣು ಮಕ್ಕಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಕೂಡ ಒಂದೇ ಒಂದು ಮನವಿ ಸ್ವೀಕರಿಸಲು ಬರುವಷ್ಟು ಸೌಜನ್ಯ ಇಲ್ಲ. ದುಬಾರಿ ಶಿಕ್ಷಣ ಬೆಲೆ ಏರಿಕೆ ಸಂದರ್ಭದಲ್ಲಿ ಕಳೆದ ಎರಡರಿಂದ ಮೂರು ತಿಂಗಳದಿಂದ ಪ್ರೋತ್ಸಾಹಧನ ನೀಡದಿರುವುದು ದರದೃಷ್ಟಕರ” ಎಂದರು.

ದಲಿತ ಸಂಘಟನೆಯ ಚನ್ನು ಕಟ್ಟಿಮನಿ ಮಾತನಾಡಿ, “ಆಶಾ ಕಾರ್ಯಕರ್ತೆಯರು ತಮ್ಮ ಹಕ್ಕುಗಳು ಮತ್ತು ಸಮಸ್ಯೆಗಳನ್ನು ನಿರಂತರವಾಗಿ ಹೋರಾಟದ ಮೂಲಕ ಪಡೆದುಕೊಂಡು ಬಂದಿದ್ದಾರೆ. ತಮ್ಮ ಶ್ರಮಕ್ಕೆ ಪ್ರತಿಫಲ ಕೇಳುತ್ತಿದ್ದಾರೆ. ಸರ್ಕಾರ ಕಣ್ಣೊರೆಸುವ ತಂತ್ರ ಬಿಟ್ಟು ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಸಾಲುಮರದ ತಿಮ್ಮಕ್ಕ ನೆಟ್ಟಿದ್ದ ಗಿಡಗಳ ನಾಶ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಉಮೇಶ್ ಆಗ್ರಹ
ಈ ಧರಣಿಯಲ್ಲಿ ರಾಜ್ಯ ಉಪಾಧ್ಯಕ್ಷ ವೀರೇಶ್ ಎನ್, ಎಐಎಂಎಸ್ ಗೀತಾ ಎಚ್, ಯುವಜನ ಸಂಘಟನೆ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಬಾಗೇವಾಡಿ, ದಲಿತ ಸಂಘರ್ಷ ಸಮಿತಿಯ ವಿದ್ಯಾರ್ಥಿ ಘಟಕದ ನಾಗೇಶ ಕಟ್ಟಿಮನಿ, ಮಹಿಳಾ ಸಂಘಟನೆ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವರಂಜನಿ ಹಾಗೂ ಮಹಾದೇವಿ ಧರ್ಮಶೆಟ್ಟಿ ಸೇರಿದಂತೆ ವಿವಿಧ ರೈತ, ಪ್ರಗತಿಪರ, ದಲಿತ ಸಂಘಟನೆಯ ಮುಖಂಡರು ಧರಣಿಯಲ್ಲಿ ಭಾಗವಹಿಸಿ ಬೆಂಬಲ ನೀಡಿದರು.