ಸಮಾಜವಾದಿ ಪಕ್ಷ (ಎಸ್‌ಪಿ) ಗುರುವಾರ ತನ್ನ ಶಾಸಕಿ ಪೂಜಾ ಪಾಲ್ ಅವರನ್ನು ಪಕ್ಷವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತಿನ ಕಾರಣದಿಂದ ಉಚ್ಚಾಟಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶೂನ್ಯ ಸಹಿಷ್ಣುತೆ ನೀತಿಯನ್ನು ಶ್ಲಾಘಿಸಿದ ಬೆನ್ನಿಗೇ ಈ ಕ್ರಮ ಕೈಗೊಳ್ಳಲಾಗಿದೆ.
ಪೂಜಾ ಪಾಲ್, ತಮ್ಮ ಪತಿ ರಾಜು ಪಾಲ್ ಅವರ ಕೊಲೆಗೆ ಸಂಬಂಧಿಸಿದಂತೆ ನ್ಯಾಯ ಒದಗಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದರು. ಪೂಜಾ ಪಾಲ್ ಅವರ ಪತಿ ರಾಜು ಪಾಲ್ 2005 ರಲ್ಲಿ ಗುಂಡಿಕ್ಕಿ ಕೊಲೆಯಾಗಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಷ್ರಫ್ ಅವರನ್ನು 2023 ರಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಘಟನೆಯ ಬಳಿಕ ಪಾಲ್, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗೆ ಕಾರಣವಾದ ಸರಕಾರದ ಕ್ರಮಗಳನ್ನು ಬಹಿರಂಗವಾಗಿ ಕೊಂಡಾಡಿದ್ದರು.
‘ವಿಝನ್ ಡಾಕ್ಯುಮೆಂಟ್ 2047’ ಕುರಿತ ವಿಧಾನಸಭೆಯ ಚರ್ಚೆಯ ಸಂದರ್ಭದಲ್ಲಿ ಪಾಲ್, “ನನ್ನ ಪತಿಯ ಕೊಲೆಗೆ ಕಾರಣರಾದವರು ಎಲ್ಲರಿಗೂ ಗೊತ್ತು. ನನ್ನ ಕಷ್ಟಕ್ಕೆ ಕಿವಿಗೊಟ್ಟು ನ್ಯಾಯ ಒದಗಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಅತೀಕ್ ಅಹ್ಮದ್‌ನಂತಹ ಕ್ರಿಮಿನಲ್‌ಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯಿಂದ ಪ್ರಯಾಗರಾಜ್‌ನ ಅನೇಕ ಮಹಿಳೆಯರಿಗೆ ನ್ಯಾಯ ಸಿಕ್ಕಿದೆ,” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?
ಈ ಉಚ್ಚಾಟನೆಯಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಎಸ್‌ಪಿಯ ಈ ಕ್ರಮವು ದಲಿತ ವಿರೋಧಿ ಮನೋಭಾವವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
“ಅಪರಾಧ ನಿಗ್ರಹಕ್ಕಾಗಿ ರಾಜ್ಯ ಸರಕಾರದ ಕ್ರಮಗಳನ್ನು ಶ್ಲಾಘಿಸಿದ್ದಕ್ಕಾಗಿ ಪೂಜಾ ಪಾಲ್ ಅವರನ್ನು ಉಚ್ಚಾಟಿಸಲಾಗಿದೆ. ಎಸ್‌ಪಿ ಕ್ರಿಮಿನಲ್‌ಗಳನ್ನು ವೋಟ್ ಬ್ಯಾಂಕ್ ಆಗಿ ಪರಿಗಣಿಸುತ್ತಿದೆ,” ಎಂದು ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪೂಜಾ ಪಾಲ್ ಅವರಿಗೆ ಇನ್ನು ಮುಂದೆ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.